ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಭೀರ ಕಥೆಗೆ ಹಾಸ್ಯದ ಸಿಂಚನ

ತುಳು ಚಿತ್ರ ವಿಮರ್ಶೆ
Last Updated 19 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಚಿತ್ರ: ಗೋಲ್‌ಮಾಲ್‌

‌ನಿರ್ದೇಶನ: ರಮಾನಂದ ನಾಯಕ್‌

ತಾರಾಗಣ: ಸಾಯಿಕುಮಾರ್‌, ಪೃಥ್ವಿ ಅಂಬರ್‌, ಶ್ರೇಯಾ ಅಂಚನ್‌, ನವೀನ್ ಡಿ. ಪಡೀಲ್‌

ನಿರ್ಮಾಪಕರು: ಮಂಜುನಾಥ ನಾಯಕ್ ಕಾರ್ಕಳ, ಅಕ್ಷಯ ಪ್ರಭು ಅಜೆಕಾರ್

ಡೈಲಾಗ್‌ ಕಿಂಗ್‌ ಸಾಯಿಕುಮಾರ್‌ ಅವರ ಪಂಚಿಂಗ್‌ ಡೈಲಾಗ್‌, ನಾಯಕ ಪೃಥ್ವಿ ಅಂಬರ್‌, ನಾಯಕಿ ಶ್ರೇಯಾ ಅಂಚನ್ ಅವರ ಲವಲವಿಕೆಯ ಅಭಿನಯ, ನವೀನ್‌ ಡಿ. ಪಡೀಲ್‌, ಭೋಜರಾಜ ವಾಮಂಜೂರು, ಅರವಿಂದ ಬೋಳಾರ್‌ ಅವರ ಹಾಸ್ಯದ ರಸದೌತಣ, ಸುನಾದ್ ಗೌತಮ್ ಕ್ಯಾಮೆರಾ ಕೈಚಕ, ಅದ್ಭುತವಾದ ಫೈಟಿಂಗ್‌ ಇವು ಶುಕ್ರವಾರ ತೆರೆಕಂಡ ‘ಗೋಲ್‌ಮಾಲ್‌’ ಚಿತ್ರದ ಧನಾತ್ಮಕ ಅಂಶಗಳು.

ಕಾಮಿಡಿ, ಲವ್‌, ಸೆಂಟಿಮೆಂಟ್‌, ಫೈಟ್‌ ಸೇರಿದಂತೆ ಮನರಂಜನೆಯ ಅಂಶಗಳನ್ನು ಅಳವಡಿಸಿಕೊಂಡ ನಿರ್ಮಾಣಗೊಂಡ ಮಾಸ್‌ ಚಿತ್ರ ಗೋಲ್‌ಮಾಲ್‌. ಮಕ್ಕಳ ಕಳ್ಳಸಾಗಣೆ, ಮನೋವಿಜ್ಞಾನ, ಮಾಟ– ಮಂತ್ರದ ಸುತ್ತ ಚಿತ್ರಕಥೆಯನ್ನು ಹೆಣೆಯಲಾಗಿದೆ. ರಮಾನಂದ ನಾಯಕ್ ಅವರು ನಿರ್ದೇಶನದ ಜತೆಗೆ ಚಿತ್ರದಲ್ಲಿ ಪ್ರಮುಖ ಖಳನಾಯಕನ ಪಾತ್ರಕ್ಕೆ ಬಣ್ಣಹೆಚ್ಚಿದ್ದಾರೆ.

ಮುತ್ತುಪಾಡಿ ಎಂಬ ಊರಲ್ಲಿ ಅಮಾವಾಸ್ಯೆಯಂದು ಮಗು ಕಳವಾಗುತ್ತಿರುತ್ತದೆ. ಈ ಜಾಲವನ್ನು ಭೇದಿಸಲು ಹೋದ ಪೊಲೀಸ್‌ ಅಧಿಕಾರಿಯೂ ಕೊಲೆಯಾಗುತ್ತಾನೆ. ಇದನ್ನೆಲ್ಲ ಯಾರು, ಯಾತಕ್ಕಾಗಿ ಮಾಡುತ್ತಿದ್ದಾರೆ ಎಂಬುದೇ ಯಕ್ಷಪ್ರಶ್ನೆಯಾಗಿರುತ್ತದೆ. ಇದು ಸರ್ಕಾರಕ್ಕೆ ಹಾಗೂ ಪೊಲೀಸ್‌ ಇಲಾಖೆಗೆ ದೊಡ್ಡ ಸವಾಲಾಗುತ್ತದೆ. ಈ ಸಂದರ್ಭದಲ್ಲೇ ವಿಶೇಷ ತನಿಖಾ ಅಧಿಕಾರಿಯಾಗಿ ಬರುವವನೇ ಪೃಥ್ವಿ. ಗೂಢಚಾರಿಯಾಗಿ ತನಿಖೆಗೆ ಮುಂದಾಗುವ ಪೃಥ್ವಿ, ಅಲ್ಲಲ್ಲಿ ಸಿಗುವ ಸುಳಿವುಗಳನ್ನು ಪಡೆದು ಕಳ್ಳರ ಬೇಟೆಗೆ ಮುಂದಾಗುತ್ತಾನೆ.

ಈ ಮಧ್ಯೆ ಶಿಕ್ಷಕಿಯಾಗಿರುವ ನಿಖಿತಾಳ ಮೊದಲ ನೋಟಕ್ಕೆ ಮರುಳಾಗುವ ನಾಯಕ ಪೃಥ್ವಿ, ಆಕೆ ಅಪಹರಣಕ್ಕೆ ಒಳಗಾದಾಗ ರಕ್ಷಿಸಿ ಮತ್ತಷ್ಟು ಹತ್ತಿರವಾಗುತ್ತಾನೆ. ಇಬ್ಬರ ನಡುವೆ ಪ್ರೇಮಾಂಕುರವಾಗುತ್ತದೆ. ಹೀಗಿರುವಾಗ ಮತ್ತೊಂದು ಅಮಾವಾಸ್ಯೆಯಂದು ನಿಖಿತಾಳ ಶಿಷ್ಯೆ ಅದಿತಿ ಅಪಹರಣವಾಗುತ್ತಾಳೆ. ಈ ಕುರಿತು ತನಿಖೆಗೆ ಮುಂದಾಗುವ ಪೃಥ್ವಿಗೆ ಆಘಾತಕಾರಿ ಮಾಹಿತಿಯೊಂದು ಲಭಿಸುತ್ತದೆ. ತನ್ನ ಪ್ರೇಯಸಿಯೇ ಅದಿತಿಯನ್ನು ಅಪರಹಣ ಮಾಡುವ ಸಿಸಿಟಿವಿ ವಿಡಿಯೋ ಲಭಿಸುತ್ತದೆ. ತನಿಖೆ ಮುಂದೆ ಸಾಗಿದಾಗ ಈ ಬೆಳವಣಿಗೆಯ ಹಿಂದೆ ಮಂತ್ರವಾದಿಯೊಬ್ಬರ ಕೈಚಳಕ ಇರುವುದು ಗೊತ್ತಾಗುತ್ತದೆ. ಆತ ನಿಧಿಯ ಆಸೆಗಾಗಿ ಮುಂಬೈ ಡಾನ್‌ ರಾಮ್‌ನಾಯಕ್‌ ಹೇಳಿದಂತೆ ಕುಣಿಯುತ್ತಿರುತ್ತಾನೆ. ಕಳ್ಳಸಾಗಣೆಯ ಜಾಲಕ್ಕೆ ಸಿಲುಕಿದ ಮಕ್ಕಳು ಏನಾಗುತ್ತಾರೆ, ಅವರನ್ನು ಯಾಕಾಗಿ ಅಪಹರಣ ಮಾಡಲಾಗುತ್ತಿದೆ, ಪೃಥ್ವಿ ಈ ಪ್ರಕರಣವನ್ನು ಭೇದಿಸುತ್ತಾನಾ? ಎಂಬ ಪ್ರಶ್ನೆಗೆ ಚಿತ್ರದ ನೋಡಿಯೇ ಉತ್ತರ ಪಡೆಯಬೇಕು.

ಪೊಲೀಸ್‌ ಮಹಾನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಾಯಿಕುಮಾರ್‌ ಅವರ ಖದರ್‌, ಡೈಲಾಗ್‌, ಹಾವಭಾವ ಚಿತ್ರದ ತೂಕವನ್ನು ಹೆಚ್ಚಿಸಿದೆ. ಪೃಥ್ವಿ ಅಂಬರ್‌ ಚಿತ್ರಕ್ಕಾಗಿ ಸಾಕಷ್ಟು ಕಸರತ್ತು ಮಾಡಿರುವುದು ತೆರೆಯಲ್ಲಿ ಕಾಣಬಹುದು. ನವೀನ್‌ ಡಿ. ಪಡೀಲ್‌ ಎಂಎಲ್‌ಎ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹಾಸ್ಯದ ಜತೆಗೆ ಗಂಭೀರ ಅಭಿನಯದ ಮೂಲಕ ಮನ ಸೆಳೆಯುತ್ತಾರೆ. ಭೋಜರಾಜ್‌ ವಾಮಂಜೂರು, ಅರವಿಂದ ಬೋಳಾರ್‌ ಪಾತ್ರ ಕೇವಲ ನಗುವಿಗೆ ಸೀಮಿತವಾಗಿದೆ. ಮುಂಬೈ ಡಾನ್‌ ಗತ್ತಿನಲ್ಲಿ ರಮಾನಂದ ನಾಯಕ್‌ ಗಮನ ಸೆಳೆಯುತ್ತಾರೆ. ಸುನೀಲ್‌ ನೆಲ್ಲಿಗುಡ್ಡೆ ಮಂತ್ರವಾದಿ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಚಿತ್ರದಲ್ಲಿ ಎರಡು ಫೈಟ್‌ ದೃಶ್ಯಗಳಿಂದ ಅದ್ಭುತವಾಗಿ ಮೂಡಿಬಂದಿದೆ. ಇತರ ಭಾಷೆಯ ಚಿತ್ರಗಳಿಗೆ ಕಡಿಮೆ ಇಲ್ಲದಂತೆ ಸಾಹಸ ನಿರ್ದೇಶನ ಮಾಡಿರುವುದು ವಿಶೇಷ. ‘ದಿನಲಾ ಒ ನಿನ್ನನೆ’ ಹಾಡು ನೆನಪಿನಲ್ಲಿ ಉಳಿಯುತ್ತದೆ. ಆದರೆ, ಚಿತ್ರವು ನಿರೂಪಣೆಯಲ್ಲಿ ಇನ್ನಷ್ಟು ಲವಲವಿಕೆ ಬಯಸುತ್ತಿತ್ತು. ಗಂಭೀರವಾಗಿ ಸಾಗುವ ಚಿತ್ರಕಥೆಗೆ ಅನಗತ್ಯ ಹಾಸ್ಯ ಸನ್ನಿವೇಶಗಳನ್ನು ತುರುಕಿಸಿರುವುದು ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುವಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT