ಸೋಮವಾರ, ಡಿಸೆಂಬರ್ 9, 2019
17 °C

ರೆಟ್ರೊ ಸ್ಟೈಲ್‌ನಲ್ಲಿ ‘ವೆಂಕಿ ಮಾಮಾ’ ರಾಕಿಂಗ್‌!

Published:
Updated:
Prajavani

ವಿಕ್ಟರಿ ವೆಂಕಟೇಶ್ ಮತ್ತು ಅವರ ಸಹೋದರಿಯ ಮಗ, ನಟ ನಾಗ ಚೈತನ್ಯನ ಒಟ್ಟಿಗೆ ನಟಿಸಿರುವ ‘ವೆಂಕಿ ಮಾಮಾ’ ಚಿತ್ರ ತಂಡ ಮತ್ತೊಂದು ಪೋಸ್ಟರ್‌ ಬಿಡುಗಡೆ ಮಾಡಿದೆ. ದಗ್ಗುಬಾಟಿ ವೆಂಕಟೇಶ್‌ ಮತ್ತು ಪಾಯಲ್‌ ರಜಪೂತ್‌ ರೆಟ್ರೊ ಸ್ಟೈಲ್‌ನಲ್ಲಿ ಮಿಂಚುತ್ತಿದ್ದಾರೆ. 70ರ ದಶಕದ ಬೆಲ್‌ಬಾಟಂ ಪ್ಯಾಂಟ್‌, ಸೂಟ್ ಮತ್ತು ಅಂಗೈ ಅಗಲದ ಬೆಲ್ಟ್‌ನಲ್ಲಿ ವೆಂಕಿ ಮತ್ತು ಮೈಗೆ ಅಂಟಿಕೊಂಡ ಬಣ್ಣದ ಮಿಡ್ಡಿಯಲ್ಲಿ  ಪಾಯಲ್‌ ಗಮನ ಸೆಳೆಯುತ್ತಾರೆ. ಹಾಡಿಗೆ ಹಾಕಲಾದ ಸೆಟ್‌, ನಾಯಕ, ನಾಯಕಿ ಧರಿಸಿದ ಬಟ್ಟೆ, ಬಳಸಿದ ರೆಟ್ರೊ ಬಣ್ಣಗಳು ಪ್ರೇಕ್ಷಕರನ್ನು ಹಳೆಯ ಜಮಾನದ ಸಿನಿಮಾ ಲೋಕಕ್ಕೆ ಕೊಂಡೊಯ್ಯುವುದರಲ್ಲಿ ಸಂಶಯವಿಲ್ಲ. 

ಈಚೆಗೆ ಬಿಡುಗಡೆಯಾದ ‘ವೆಂಕಿ ಮಾಮಾ’ ಟೈಟಲ್‌ ಸಾಂಗ್‌ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ. ಈ ಹಾಡು ಕ್ಲಾಸ್‌ ಮತ್ತು ಮಾಸ್‌ ಎರಡೂ ವರ್ಗಗಳನ್ನೂ ಸೆಳೆಯುತ್ತಿದೆ. ಈಗ ಬಿಡುಗಡೆಯಾಗುತ್ತಿರುವ ಎರಡನೇ ‘ಎನ್ನಾಲ್ಲಾಕೋ...’ ಎಂಬ ಹಾಡು ಕೂಡ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. 1970ರ ದಶಕದ ಹಾಡುಗಳ ನಾಯಕ, ನಾಯಕಿಯಂತೆ ವೆಂಕಟೇಶ್, ಪಾಯಲ್‌ ಕುಣಿದಿದ್ದಾರೆ. 

ನಾಗ ಚೈತನ್ಯ ಜತೆ ರಾಶಿ ಖನ್ನಾ ನಟಿಸುತ್ತಿದ್ದಾರೆ.  ರಾಶಿ ಬಿಕಿನಿಯಲ್ಲಿ ಬೋಲ್ಡ್‌ ಆಗಿ ಕಾಣಿಸಲಿದ್ದು, ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಬಾಬ್ಬಿ ಆ್ಯಕ್ಷನ್ ಕಟ್‌ ಹೇಳುತ್ತಿದ್ದು, ಸ್ಟಾರ್‌ ಸಂಗೀತ ನಿರ್ದೇಶಕ ಎಸ್‌.ಎಸ್‌. ಥಮನ್‌ ಸಂಗೀತ ನೀಡಿದ್ದಾರೆ.ಚಿತ್ರ ಬಿಡುಗಡೆ ದಿನಾಂಕ ಇನ್ನೂ ಅಂತಿಮವಾಗಿಲ್ಲ. ಡಿಸೆಂಬರ್ ಅಥವಾ ಜನವರಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.

ಫ್ಯಾಮಿಲಿ ಸೆಂಟಿಮೆಂಟಿ ಚಿತ್ರಗಳ ಮೂಲಕ ಮಹಿಳಾ ಸಿನಿ ಪ್ರೇಕ್ಷಕರ ಮನ ಗೆದ್ದಿರುವ ಈ ಸುಂದರ ನಟನನ್ನು ಹೆಂಗಳೆಯರು ಪ್ರೀತಿಯಿಂದ ‘ವೆಂಕಿ ಮಾಮಾ’ ಎಂದು ಕರೆಯುತ್ತಾರೆ. ಅದೇ ಹೆಸರನ್ನು ಚಿತ್ರಕ್ಕೆ ಉಳಿಸಿಕೊಳ್ಳಲಾಗಿದೆ.

58ನೇ ವಯಸ್ಸಿನಲ್ಲೂ 20ರ ಯುವಕನಂತೆ ಮಿಂಚುತ್ತಿರುವ ವಿಕ್ಟರಿ ವೆಂಕಟೇಶ್ ಸದ್ಯಕ್ಕೆ ‘ವೆಂಕಿ ಮಾಮಾ’ ಮೇಲೆ ಸಂಪೂರ್ಣ ಗಮನ ಹರಿಸಿದ್ದಾರೆ. ಆ ಸಿನಿಮಾದ ನಂತರ ಧನುಷ್‌ ಅಭಿಯನದ ‘ಅಸುರನ್’ ಸಿನಿಮಾದ ತೆಲುಗು ರಿಮೇಕ್‌ನಲ್ಲೂ ವೆಂಕಿ ನಟಿಸಲಿದ್ದಾರೆ. ಈ ನಡುವೆ ವೆಂಕಟೇಶ್‌ ಅವರ 75ನೇ ಚಿತ್ರ ಯಾವುದಾಗಲಿದೆ ಎಂಬ ಚರ್ಚೆ ಟಾಲಿವುಡ್‌ನಲ್ಲಿ ಶುರುವಾಗಿದೆ. ವೆಂಕಟೇಶ್ ಸಹೋದರ ಸುರೇಶ್ ಬಾಬು ವಿಕ್ಟರಿ ಅವರ 75ನೇ ಚಿತ್ರಕ್ಕೆ ಬೇರೊಂದು ಯೋಜನೆಯನ್ನು ರೂಪಿಸುತ್ತಿದ್ದಾರೆ ಎಂಬುದು ಸದ್ಯದ ಸುದ್ದಿ.

ಪ್ರತಿಕ್ರಿಯಿಸಿ (+)