ಭಾನುವಾರ, ಸೆಪ್ಟೆಂಬರ್ 19, 2021
23 °C

ವಿಜಯ ಸಂಕೇಶ್ವರ ಜೀವನಕಥೆ ಆಧರಿಸಿದ ‘ವಿಜಯಾನಂದ’ ಸಿನಿಮಾದ ಫಸ್ಟ್‌ಲುಕ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾರಿಗೆ ಕ್ಷೇತ್ರ ಹಾಗೂ ಮಾಧ್ಯಮ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಉದ್ಯಮಿ, ವಿಆರ್‌ಎಲ್‌ ಸಮೂಹ ಸಂಸ್ಥೆಯ ಮುಖ್ಯಸ್ಥ ವಿಜಯ ಸಂಕೇಶ್ವರ ಅವರ ಜೀವನಕಥೆ ಚಲನಚಿತ್ರವಾಗಿ ತೆರೆ ಮೇಲೆ ಬರುತ್ತಿದೆ. ‘ವಿಜಯಾನಂದ’ ಹೆಸರಿನ ಈ ಚಿತ್ರದ ಫಸ್ಟ್‌ಲುಕ್ ಸೋಮವಾರ ಬಿಡುಗಡೆಯಾಗಿದ್ದು, ವಿಜಯ ಸಂಕೇಶ್ವರ ಅವರ ಪಾತ್ರಕ್ಕೆ ನಟ ನಿಹಾಲ್‌ ಬಣ್ಣಹಚ್ಚಿದ್ದಾರೆ.

ವಿಜಯ ಸಂಕೇಶ್ವರ ಅವರ ಪುತ್ರ ಆನಂದ ಸಂಕೇಶ್ವರ ಅವರು ವಿಆರ್‌ಎಲ್ ಮೀಡಿಯಾ ಸಂಸ್ಥೆಯಡಿ ವಿಆರ್‌ಎಲ್ ಫಿಲಂ ಪ್ರೊಡಕ್ಷನ್ಸ್‌’ ಹೆಸರಿನ ಸ್ವಂತ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಈ ನಿರ್ಮಾಣ ಸಂಸ್ಥೆಯ ಚೊಚ್ಚಲ ಕನ್ನಡ ಸಿನಿಮಾವಾಗಿ ‘ವಿಜಯಾನಂದ’ ತೆರೆಕಾಣಲಿದೆ. ‘1976ರಲ್ಲಿ ಒಂದು ಟ್ರಕ್‌ನಿಂದ ಆರಂಭಿಸಿ, ಇಂದು ಭಾರತದ ಅತಿದೊಡ್ಡ ಫ್ಲೀಟ್ ಮಾಲೀಕರಾಗಿ ಜೊತೆಗೆ ಮಾಧ್ಯಮ ರಂಗದಲ್ಲಿ ನಡೆದು ಬಂದ ವಿಜಯ ಸಂಕೇಶ್ವರರ ಜೀವನಕಥೆ ಆಧರಿಸಿ ಮೂಡಿಬರಲಿರುವ ಕನ್ನಡ ಚಿತ್ರರಂಗದ ಮೊದಲ ಬಯೋಪಿಕ್‌ ಇದಾಗಲಿದೆ’ ಎನ್ನುತ್ತಾರೆ ನಿರ್ದೇಶಕಿ ರಿಷಿಕಾ ಶರ್ಮ.

ಕನ್ನಡ ಚಿತ್ರರಂಗದಲ್ಲಿ ಸತತ 8 ವರ್ಷಗಳಿಂದ ಸಹಾಯಕ ನಿರ್ದೇಶಕಿಯಾಗಿ, ಸಿನಿಮಾ ಹಾಗು ಧಾರಾವಾಹಿ ನಟನೆ, ಕಲಾ ವಿನ್ಯಾಸ, ವಸ್ತ್ರ ವಿನ್ಯಾಸ ಹೀಗೆ ಹಲವಾರು ವಿಭಾಗಗಳಲ್ಲಿ ಅನುಭವವನ್ನು ಹೊಂದಿರುವ ರಿಷಿಕಾ, ಈ ಹಿಂದೆ ‘ಟ್ರಂಕ್’ ಎಂಬ ಹಾರರ್ ಚಿತ್ರವನ್ನು ನಿರ್ದೇಶಿಸಿದ್ದರು. ಇದೇ ಸಿನಿಮಾದಲ್ಲಿ ನಿಹಾಲ್‌ ಕೂಡಾ ಅಭಿನಯಿಸಿದ್ದರು. ರಂಗಭೂಮಿ ಹಿನ್ನೆಲೆಯುಳ್ಳ ನಿಹಾಲ್‌, ‘ಚೌಕ’ ಸಿನಿಮಾದಲ್ಲಿಯೂ ನಟಿಸಿದ್ದರು.

‘ಚಿತ್ರತಂಡ ಸುಮಾರು ಎರಡು ವರ್ಷಗಳಿಂದ ಸತತವಾಗಿ ಈ ಚಿತ್ರಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ತೆಲುಗು ಮತ್ತು ಮಲಯಾಳಂ ಚಿತ್ರರಂಗದ ಸಂಗೀತ ನಿರ್ದೇಶಕ ಗೋಪಿ ಸುಂದರ್ ‘ವಿಜಯಾನಂದ’ ಚಿತ್ರಕ್ಕೆ ಹಿನ್ನಲೆ ಸಂಗೀತ ಮತ್ತು ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ರಿಷಿಕಾ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು