ಸೋಮವಾರ, ಡಿಸೆಂಬರ್ 9, 2019
25 °C

’ವಿರಾಜ‘ಮಾನ

Published:
Updated:
Deccan Herald

‌ಸಾಮಾನ್ಯವಾಗಿ ಚಿತ್ರ ಬಿಡುಗಡೆಯ ಪತ್ರಿಕಾಗೋಷ್ಠಿ ಎಂದರೆ ಸಂಭ್ರಮ ಸಂತಸ ಮನೆಮಾಡಿರುತ್ತದೆ. ಚಿತ್ರತಂಡವೆಲ್ಲ ಆ ಸಂಭ್ರಮದ ಭಾಗವಾಗಿರುತ್ತದೆ. ಆದರೆ ‘ವಿರಾಜ್‌‘ ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ಪರಿಸ್ಥಿತಿ ಹಾಗಿರಲಿಲ್ಲ. ನಾಯಕ ವಿದ್ಯಾಭರಣ ಮತ್ತು ವಿತರಕ ವಿಜಯ್‌ ಬಿಟ್ಟರೆ ಮತ್ಯಾರೂ ಹಾಜರಿರಲೇ ಇಲ್ಲ. 

ವಿದ್ಯಾಭರಣ ಕೂಡ ಕೊಂಚ ಅವಸರದಲ್ಲಿಯೇ ಇದ್ದರು. ’ಮನೆಯವರೆಲ್ಲರೂ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಚಿತ್ರದ ಪ್ರಚಾರಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಪತ್ರಿಕಾಗೋಷ್ಠಿಗೆ ಬರಲು ಸಾಧ್ಯವಾಗಿಲ್ಲ. ನಿರ್ದೇಶಕರು ಹೈದರಾಬಾದ್‌ನಲ್ಲಿ ಸಿನಿಮಾ ಕೆಲಸದಲ್ಲಿಯೇ ಇದ್ದಾರೆ‘ ಎಂಬ ಸ್ಪಷ್ಟನೆಯ ಜತೆಗೇ ಮಾತು ಆರಂಭಿಸಿದರು ವಿದ್ಯಾಭರಣ. ನಾಯಕಿ ಶಿರೀನ್‌ ತಮಿಳು ಸಿನಿಮಾದಲ್ಲಿ ಬ್ಯುಸಿ ಇರುವುದರಿಂದ ಪ್ರಚಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲವಂತೆ. ನಾಗೇಶ್ ನಾರದಾಸಿ ಈ ಚಿತ್ರದ ನಿರ್ದೇಶಕರು.

’ವಿರಾಜ್‌‘ ಕಂಪ್ಲೀಟ್ ಫ್ಯಾಮಿಲಿ ಎಂಟರ್‌ಟೈನಿಂಗ್‌ ಸಿನಿಮಾ ಎನ್ನುವುದು ಅವರ ವಿವರಣೆ. ’ಪ್ರೀತಿ ಮತ್ತು ಫ್ಯಾಮಿಲಿ ಮಧ್ಯ ಸಿಕ್ಕಿಹಾಕಿಕೊಂಡ ಹುಡುಗನ ಕಥೆ. ಈ ಚಿತ್ರ ನೋಡಿದವರು ತಮ್ಮ ಕುಟುಂಬದವರನ್ನು ಒಪ್ಪಿಸಿ ಪ್ರೀತಿಸಿದವರನ್ನೇ ಮದುವೆ ಆಗ್ತಾರೆ. ಕುಟುಂಬದ ಖುಷಿಯ ಜತೆಗೆ ತನ್ನನ್ನು ಪ್ರೀತಿಸಿದವರನ್ನೂ ಚೆನ್ನಾಗಿಟ್ಟಿರುತ್ತಾರೆ‘ ಎಂದು ಅವರು ಹೇಳಿದರು.

’ಎಲ್ಲರಿಗೂ ಗೌರವ ಕೊಡಿ‘ ಎನ್ನುವ ಸಂದೇಶವನ್ನು ಈ ಚಿತ್ರದ ಮೂಲಕ ಹೇಳಹೊರಟಿದ್ದಾರಂತೆ. ’ಒಂದು ವರ್ಷದ ಮಗುವಿನಿಂದ ಹಿಡಿದು ವಯೋವೃದ್ಧರವರೆಗೂ ಒಂದು ಸಂದೇಶ ಇದೆ‘ ಎಂದೂ ವಿದ್ಯಾಭರಣ ಹೇಳಿದರು.  125 ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯನ್ನು ತಂಡ ಹಾಕಿಕೊಂಡಿದೆ.

ಪ್ರತಿಕ್ರಿಯಿಸಿ (+)