ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದೇ ಬಿಟ್ಟಳು ವರ್ಜಿನಿಯಾ

Last Updated 8 ನವೆಂಬರ್ 2018, 19:30 IST
ಅಕ್ಷರ ಗಾತ್ರ

ರಂಗಭೂಮಿಯಲ್ಲಿ ಎರಡು ದಶಕಗಳಿಗೂ ಹೆಚ್ಚಿನ ಅವಧಿಯಿಂದ ಕೆಲಸ ಮಾಡುತ್ತಿದ್ದಾರೆ ವರ್ಜಿನಿಯಾ ರಾಡ್ರಿಗಸ್. ಮಂಗಳೂರು ಮೂಲದ ಇವರು ತೆರೆಯ ಮೇಲೆ ಕಾಣಿಸಿಕೊಂಡಿದ್ದು ಮಲಯಾಳ ಸಿನಿಮಾಗಳಲ್ಲಿಯೇ ಹೆಚ್ಚು. ಜೊತೆಗೆ, ಇಂಗ್ಲಿಷ್‌ ಹಾಗೂ ಹಿಂದಿ ಕಿರುಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದಾರೆ.

ಮಹೇಶ್ ಗೌಡ ನಿರ್ದೇಶನದ ‘ಮಹಿರ’ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ಕನ್ನಡ ಸಿನಿಲೋಕ ಪ್ರವೇಶಿಸಿದ್ದಾರೆ. ತೆರೆಯ ಮೇಲೆ ಹೀರೊಯಿಕ್‌ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗಿನ ಮಾತುಕತೆಯ ಆಯ್ದ ಭಾಗ ಇಲ್ಲಿದೆ:

* ‘ಮಹಿರ’ ಸಿನಿಮಾ ಒಂದು ಮೈಲಿಗಲ್ಲು ಎಂದು ಹೇಳಿಕೊಂಡಿದ್ದೀರಿ. ನಿಮಗೆ ಹಾಗೆ ಅನಿಸಿದ್ದು ಏಕೆ?

ನಾನು ಸಿನಿಮಾ ಪ್ರವೇಶಿಸಿದ್ದು ಅನಿರೀಕ್ಷಿತವಾಗಿ. ಸಿನಿಮಾಗಳಲ್ಲಿ ಅಭಿನಯಿಸಬೇಕು ಎಂದು ನಾನು ಆಲೋಚನೆ ಕೂಡ ಮಾಡಿರಲಿಲ್ಲ. ಈ ಕಾರಣದಿಂದ, ಸಿನಿಮಾ ಲೋಕ ಪ್ರವೇಶಿಸಿದ್ದೇ ಒಂದು ಮೈಲಿಗಲ್ಲು. ನಾನು ಮೊದಲು ಮಲಯಾಳ ಸಿನಿಮಾ ಮಾಡಿದಾಗ, ಕನ್ನಡಿಗಳಾಗಿ ಕನ್ನಡ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದರೆ ಚೆನ್ನ ಎಂದು ಭಾವಿಸಿದ್ದೆ. ಆದರೆ, ಹಲವು ಕಾಲ ನನಗೆ ಸವಾಲು ಅನಿಸುವಂಥ ಸ್ಕ್ರಿಪ್ಟ್‌ ಸಿಕ್ಕಿರಲಿಲ್ಲ. ಬೇರೆ ಬೇರೆಯವರು ಕನ್ನಡ ಸಿನಿಮಾದಲ್ಲಿ ನಟಿಸುವಂತೆ ಕೋರಿ ನನ್ನ ಬಳಿ ಬಂದಿದ್ದರು. ನಾನು ಆಸಕ್ತಿ ತೋರಿಸಲಿಲ್ಲ. ಅವರು ಹೇಳಿದ ಪಾತ್ರಗಳನ್ನು ನಾನೇ ಮಾಡಬೇಕು ಎಂದೇನೂ ಇರಲಿಲ್ಲ.

ನಾನು ನನ್ನ ಅಭಿನಯ ಲೋಕದಲ್ಲಿ ವೃತ್ತಿ ಆರಂಭಿಸುವ ಹಂತದಲ್ಲಿ ಇಲ್ಲ. ಅಭಿನಯ ಆರಂಭಿಸಿ ಎರಡಕ್ಕೂ ಹೆಚ್ಚು ದಶಕ ಆಗಿಬಿಟ್ಟಿದೆ. ಈ ಹಂತದಲ್ಲಿ ಈ ಕನ್ನಡ ಸಿನಿಮಾ ಸಿಕ್ಕಿದ್ದು ನನಗೆ ಮಹತ್ವದ್ದು. ಇದರಲ್ಲಿನ ಪಾತ್ರ ನನಗೆ ಸವಾಲಿನದ್ದಾಗಿತ್ತು.

* ಇದನ್ನು ಕನ್ನಡದ ಮೊದಲ ಸಿನಿಮಾ ಆಗಿ ಒಪ್ಪಿಕೊಳ್ಳಲು ಕಾರಣ?

ಇದಕ್ಕೆ ಕೆಲವು ಕಾರಣಗಳಿವೆ. ಈ ಪಾತ್ರ ನನಗೆ ಒಡ್ಡಿದ ಸವಾಲುಗಳು ಹಲವು. ನಾನು ಮಾಡಬೇಕಿದ್ದ ಪಾತ್ರದ ಬಗ್ಗೆ ‘ಮಹಿರ’ ತಂಡ ಹಲವರ ಬಳಿ ಮಾತುಕತೆ ನಡೆಸಿತ್ತು. ಸ್ನೇಹಿತರೊಬ್ಬರು ನನ್ನ ಹೆಸರನ್ನು ಅವರಲ್ಲಿ ಹೇಳಿದ್ದರು. ಆ ಮೂಲಕ ನನಗೆ ಈ ಸಿನಿಮಾ ಅವಕಾಶ ಸಿಕ್ಕಿತು. ‘ಮಹಿರ’ ತಂಡದಿಂದ ಪಾತ್ರದ ಬಗ್ಗೆ ವಿವರ ಪಡೆದೆ. ತಾಯಿ– ಮಗಳ ಬಗ್ಗೆ ಈ ಸಿನಿಮಾ ಎಂದು ಕೇಳಿದೆ. ಇದರಲ್ಲಿ ಕೆಲವು ಸ್ಟಂಟ್‌ಗಳನ್ನು ನಾನು ನಿಭಾಯಿಸಬೇಕು ಎಂದು ಹೇಳಿದರು. ಸ್ಟಂಟ್‌ಗಳನ್ನು ನಾನೇ ಖುದ್ದಾಗಿ ಮಾಡಬೇಕು ಎಂದೂ ಹೇಳಿದರು. ನನಗೆ ಇದು ಬಹುಮುಖ್ಯ ಅನಿಸಿತು. ಸ್ಟಂಟ್‌ಗಳನ್ನು ಮಾಡುವುದು ಸುಲಭವಲ್ಲ. ಇಂತಹ ಅವಕಾಶ ಒಬ್ಬರಿಗೆ ಸಿಗುವುದು ಒಮ್ಮೆ ಮಾತ್ರ. ಎಷ್ಟೇ ಕಷ್ಟವಾದರೂ ಸ್ಟಂಟ್‌ಗಳನ್ನು ಮಾಡುತ್ತೇನೆ ಎಂದು ಹೇಳಿ ಒಪ್ಪಿಕೊಂಡೆ.

* ಸಹ ಕಲಾವಿದರ ಸಹಕಾರದ ಬಗ್ಗೆ ಏನು ಹೇಳುತ್ತೀರಿ?

ಈ ಪ್ರಶ್ನೆಗೆ ಉತ್ತರವಾಗಿ ರಾಜ್‌ ಬಿ. ಶೆಟ್ಟಿ ಅವರ ಬಗ್ಗೆ ಹೇಳಬೇಕು. ಅವರು ‘ಏಂಜೆಲ್‌’ ಇದ್ದಂತೆ. ಬಾಲಾಜಿ ಕೂಡ ಅವರಂತೆಯೇ. ಇದು ನನಗೆ ಕನ್ನಡದಲ್ಲಿ ಮೊದಲ ಸಿನಿಮಾ ಆಗಿರುವ ಕಾರಣ, ಒಂದಿಷ್ಟು ಹೊಸತನ್ನು ಕಲಿಯಬೇಕಿತ್ತು. ಕಲಿತಿದ್ದ ಕೆಲವನ್ನು ಮರೆಯಬೇಕಿತ್ತು! ಸಹ ಕಲಾವಿದರು ಸಹಕಾರ ನೀಡಿದ ಕಾರಣ, ಎಲ್ಲ ಕೆಲಸಗಳೂ ಸುಲಭವಾದವು.

ಮಳೆಯಲ್ಲಿ ಕೆಲವು ದೃಶ್ಯಗಳನ್ನು ಇಡೀ ರಾತ್ರಿ ಚಿತ್ರೀಕರಿಸಬೇಕಿತ್ತು. ನಾವು ಮಳೆ ನೀರು, ಮಣ್ಣಿನಲ್ಲಿ ತೋಯ್ದುಹೋಗಿದ್ದೆವು.

ದೃಶ್ಯಗಳು ಕೂಡ ಸವಾಲಿನವೇ ಆಗಿದ್ದವು. ಪ್ರತಿ ದೃಶ್ಯದ ಚಿತ್ರೀಕರಣ ಮುಗಿದ ನಂತರ, ರಾಜ್ ಮತ್ತು ಬಾಲಾಜಿ ನನ್ನ ಬಳಿ ಬಂದು ಬ್ಲ್ಯಾಂಕೆಟ್‌ ನೀಡಿ, ನಾನು ಚಳಿಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತಿದ್ದರು. ಚಿಕ್ಕ ಅವಧಿಯಲ್ಲಿ ಬಹುದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿಯೂ, ಸರಳತೆ ಕಾಪಾಡಿಕೊಂಡು ಬಂದಿರುವ ರಾಜ್‌ ಮುಂದೆ ಬಹಳ ದೊಡ್ಡ ಸ್ಥಾನಕ್ಕೆ ಏರುತ್ತಾರೆ.

ಸಹ ಕಲಾವಿದ ಶೌಕತ್ ಆಲಿ ಬಗ್ಗೆಯೂ ಒಂದೆರಡು ಮಾತು ಹೇಳಬೇಕು. ಅವರನ್ನು ನಾನು ಸಿನಿಮಾದ ಕೆಲವು ದೃಶ್ಯಗಳಲ್ಲಿ ಹೊಡೆಯಬೇಕಿತ್ತು. ‘ಹೊಡಿರಿ, ಹೊಡಿರಿ’ ಎಂದು ಅವರೇ ಹೇಳುತ್ತಿದ್ದರು. ಅವರಿಗೆ ಕೂಡ ಇದು ಮೊದಲ ಸಿನಿಮಾ. ಫೈಟ್‌ನ ದೃಶ್ಯಗಳಿಗೆ ಅವರು ಸಾಕಷ್ಟು ಕಷ್ಟಪಟ್ಟಿದ್ದಾರೆ. ನಾನು ಹೀರೊಯಿಕ್ ಆಗಿ ಇದರಲ್ಲಿ ಕಾಣಿಸಿಕೊಂಡಿದ್ದರೆ, ಹಾಗೆ ಕಾಣಿಸಿಕೊಳ್ಳುವುದನ್ನು ಶೌಕತ್ ಸಾಧ್ಯವಾಗಿಸಿದ್ದಾರೆ.

* ಮುಂದೆ ಯಾವ ರೀತಿಯ ಸಿನಿಮಾಗಳನ್ನು ಕನ್ನಡದಲ್ಲಿ ಮಾಡುತ್ತೀರಿ?

ಒಂದೇ ರೀತಿಯ ಸಿನಿಮಾಗಳನ್ನು, ಪಾತ್ರಗಳನ್ನು ಮಾಡಲು ಮನಸ್ಸಿಲ್ಲ. ಮತ್ತೊಂದು ಆ್ಯಕ್ಷನ್‌ ಸಿನಿಮಾ ಬಂದರೆ ‘ಓಕೆ’ ಎನ್ನಬಹುದು. ಆದರೆ ನನಗೆ ಇನ್ನಷ್ಟು ಸವಾಲಿನ, ಬೇರೆ ಬೇರೆ ಬಗೆಯ ಪಾತ್ರಗಳು ಬೇಕು. ಸಂಕೀರ್ಣವಾದ ಪಾತ್ರಗಳನ್ನು ನಾನು ಬಯಸುತ್ತೇನೆ. ಒಂದೇ ರೀತಿಯ ಪಾತ್ರಗಳನ್ನು, ನಮ್ಮ ವ್ಯಕ್ತಿತ್ವದಂತೆಯೇ ಇರುವ ಪಾತ್ರಗಳನ್ನು ಮಾಡುವುದು ಸುಲಭದ ಕೆಲಸ ಆಗಿಬಿಡುತ್ತದೆ. ನನ್ನ ವ್ಯಕ್ತಿತ್ವದಂತೆ ಅಲ್ಲದ ಪಾತ್ರಗಳನ್ನು ಮಾಡುವುದು ನನಗೆ ಇಷ್ಟ.

ಇಪ್ಪತ್ತು ವರ್ಷಗಳ ಹಿಂದೆ ಹೀರೊಯಿನ್ ಆಧರಿಸಿದ, ಈ ಬಗೆಯ ಸಿನಿಮಾ ಬಗ್ಗೆ ಆಲೋಚಿಸಲೂ ಸಾಧ್ಯವಿರಲಿಲ್ಲ. ಆಗಲೂ ಹೀರೊಯಿನ್ ಆಧಾರಿತ ಸಿನಿಮಾ ಇತ್ತು. ಆದರೆ, ಈ ರೀತಿಯ ಸಿನಿಮಾ ಇರಲಿಲ್ಲ. ಈ ಸಿನಿಮಾದಲ್ಲಿ ನಾವು ಮಹಿಳೆಯನ್ನು ಸ್ವಾವಲಂಬಿಯನ್ನಾಗಿ ಮಾಡುವುದೋ ಅಥವಾ ಇನ್ನೇನೋ ಮಾಡುವುದರ ಬಗ್ಗೆಯೋ ಸಂದೇಶ ನೀಡುತ್ತಿಲ್ಲ. ಇದು ಸಂದೇಶ ನೀಡುವ ಸಿನಿಮಾ ಅಲ್ಲ. ಇಂದು ಜನ ಬುದ್ಧಿವಂತರಾಗಿದ್ದಾರೆ. ಅವರಿಗೆ ತಾವೇನು ಮಾಡಬೇಕು ಎಂಬುದು ಗೊತ್ತಿದೆ.

* ಕನ್ನಡದಲ್ಲಿ ಸದ್ಯ ಬೇರೆ ಯಾವುದಾದರೂ ಸಿನಿಮಾ?

ಕೆಲವರು ನನ್ನ ಬಳಿ ಬಂದಿದ್ದರು. ಆದರೆ, ಒಂದು ಸಿನಿಮಾಕ್ಕೆ ಒಪ್ಪಿಗೆ ನೀಡಿದ್ದೇನೆ. ಅದರ ಬಗ್ಗೆ ಹೆಚ್ಚಿನ ಮಾಹಿತಿ ಈಗ ನೀಡಲಾರೆ. ಅದರಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಇರುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT