ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯದ ಮೇಲೆ ನಂಬಿಕೆ ಇಲ್ಲ : ‘ಯಜಮಾನ’ ದರ್ಶನ್‌ ಮನದ ಮಾತು

ಗಲ್ಲಾಪೆಟ್ಟಿಗೆಯಲ್ಲಿ ಯಜಮಾನ
Last Updated 14 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

‘ನನಗೆ ಭವಿಷ್ಯದ ಮೇಲೆ ನಂಬಿಕೆ ಇಲ್ಲ. ಈಗ ಏನಿದೆಯೋ ಅದೇ ಸತ್ಯ...’

–ನಟ ದರ್ಶನ್‌ ಖಚಿತ ಧ್ವನಿಯಲ್ಲಿ ಹೇಳಿದರು. ಗಾಂಧಿನಗರದ ಗಲ್ಲಾಪೆಟ್ಟಿಗೆಯ ಯಜಮಾನನ ಈ ಮಾತು ಅನಿರೀಕ್ಷಿತವೆಂಬಂತೆ ಇತ್ತು.

ಅದು ಬೆಂಗಳೂರು ಹೊರವಲಯದಲ್ಲಿ ಇರುವ ಹೆಸರಘಟ್ಟ. ನೃತ್ಯಗ್ರಾಮಕ್ಕೆ ಹೊಂದಿಕೊಂಡಿರುವ ಪಶುಪಾಲನಾ ಇಲಾಖೆಗೆ ಸೇರಿದ ನೂರಾರು ಎಕರೆ ಜಮೀನು. ಅಲ್ಲಿ ನಡೆಯುತ್ತಿದೆ ‘ಒಡೆಯ’ ಚಿತ್ರದ ಶೂಟಿಂಗ್‌.

ಬಯಲಿನ ಅಲ್ಲಲ್ಲಿ ಕೃತಕ ಕಂಬಗಳು ಮೈದಾಳಿದ್ದವು. ಕೃತಕ ಮಂಪಟವೊಂದರ ಕೊಂಚ ದೂರದಲ್ಲಿ ನಿಂತಿದ್ದರು ದರ್ಶನ್‌. ಹದವಾಗಿ ಬೀಸುತ್ತಿದ್ದ ಗಾಳಿ ವಿದ್ಯುತ್‌ಚಾಲಿತ ಗಾಳಿಯಂತ್ರಕ್ಕೆ ಸಿಲುಕಿ ಒಮ್ಮೆಲೆ ಸುರಳಿ ಸುತ್ತುತ್ತಾ ಸುಂಟರಗಾಳಿಯ ರೂಪ ಪಡೆಯಿತು. ದೂಳುಮಿಶ್ರಿತ ಗಾಳಿಯಲ್ಲಿ ತರಗಲೆಗಳು ತೇಲತೊಡಗಿದವು. ದರ್ಶನ್‌ ಶಾಟ್‌ ಮುಗಿಸಿದ ತಕ್ಷಣ ‘ಕಟ್‌’ ಎಂಬ ಧ್ವನಿ ಕೇಳಿಸಿತು. ಒಮ್ಮೆಲೆ ಬಿರುಗಾಳಿಯೂ ತಣ್ಣಗಾಯಿತು. ಮುಗುಳುನಗೆ ಹೊತ್ತು ನೆರಳಿನ ಟೆಂಟ್‌ ಬಳಿಗೆ ಬಂದ ದರ್ಶನ್‌‌ ಚಿತ್ರೀಕರಣದ ಗಡಿಬಿಡಿಯ ನಡುವೆಯೇ ಮಾತಿಗೆ ಕುಳಿತರು.

‘ಯಾರೊಬ್ಬರೂ ಅಂಬರೀಷ್‌ ಅವರ ಸ್ಥಾನ ತುಂಬಲು ಆಗುವುದಿಲ್ಲ. ಅದನ್ನು ಮುಟ್ಟುವುದಕ್ಕೂ ಸಾಧ್ಯವಿಲ್ಲ’ ಎನ್ನುವುದು ದರ್ಶನ್‌ ಅವರ ಖಡಕ್‌ ಉತ್ತರ.

‘ನಾಳೆ ಏನಾಗುತ್ತದೆ ಎಂದು ನನಗೆ ಗೊತ್ತಿಲ್ಲ. ಇಂದಿನ ದಿನವನ್ನಷ್ಟೇ ನಾನು ಬದುಕುತ್ತೇನೆ’ ಎನ್ನುವ ಮಾತಿನ ಮೂಲಕ ದರ್ಶನ್‌ ಬದುಕಿನ ಫಿಲಾಸಫಿಯೊಂದನ್ನು ತೆರೆದಿಟ್ಟರು.

* ನೀವು ಚಿತ್ರರಂಗಕ್ಕೆ ಬಂದು ಒಂದೂವರೆ ದಶಕ ಉರುಳಿದೆ. ಒಮ್ಮೆ ಹಿಂದಿರುಗಿ ನೋಡಿದರೆ ಏನನಿಸುತ್ತದೆ?
ನನಗೆ ಏನೂ ಅನಿಸುತ್ತಿಲ್ಲ. ಇನ್ನೂ ಖಾಲಿಯಾಗಿಯೇ ಇದ್ದೇನೆ. ನನ್ನ ಕೆಲಸ ಮಾಡುತ್ತಿದ್ದೇನೆ ಅಷ್ಟೇ. ಈ ಕಾಯಕದಲ್ಲಿ ಖುಷಿ ಇದೆ. ಹಾಗೆಂದು ನನ್ನ ಸ್ಪೀಡ್‌ ಹಾಗೆಯೇ ಇದೆ. ಲೆಕ್ಕ ತೆಗೆದುಕೊಂಡರೆ ನಾನು ವರ್ಷಕ್ಕೊಂದು ಸಿನಿಮಾ ಮಾಡಿಲ್ಲ. ‘ಸಂಗೊಳ್ಳಿ ರಾಯಣ್ಣ’ ಚಿತ್ರ ಮಾಡುವಾಗ ‘ಚಿಂಗಾರಿ’ ಸಿನಿಮಾ ಮಾಡುತ್ತಿದ್ದೆ. ಒಂದರ ನಂತರ ಮತ್ತೊಂದು ಚಿತ್ರ ತೆರೆ ಕಂಡಿತು. ‘ಕುರುಕ್ಷೇತ್ರ’ ಚಿತ್ರ ಬಹುಬೇಗ ಬಿಡುಗಡೆಯಾಗುತ್ತದೆ ಎಂದುಕೊಂಡಿದ್ದೆ. ಆದರೆ, ಅದರ ಗ್ರಾಫಿಕ್‌ ಕೆಲಸ ಹೆಚ್ಚಿದೆ. ಹಾಗಾಗಿ, ತಡವಾಗುತ್ತಿದೆ ಅಷ್ಟೇ. ‘ಯಜಮಾನ’ ಸಿನಿಮಾ ಬಿಡುಗಡೆಯಾದ ಬಳಿಕ ‘ಕುರುಕ್ಷೇತ್ರ’ವೂ ಬರುತ್ತದೆ.

* ನಿಮ್ಮ ಇಷ್ಟು ವರ್ಷದ ವೃತ್ತಿಬದುಕಿನಲ್ಲಿ ನಟನೆಯನ್ನು ಹೇಗೆ ಅರ್ಥೈಸುತ್ತೀರಿ?
ನಾನು ಇನ್ನೂ ಏನನ್ನೂ ಕಲಿತಿಲ್ಲ. ನಟನೆಯಲ್ಲಿ ಕಲಿಯುವುದು ಬಹಳಷ್ಟು ಇದೆ. ಕೆಲವರು ನಟನೆ ಕಲಿಯಲು ಒಂದು ವರ್ಷ ಸಾಕು ಎನ್ನುತ್ತಾರೆ. ನಾನು ಪ್ರತಿ ತಿಂಗಳು ಹೊಸದನ್ನು ಕಲಿಯುತ್ತಲೇ ಇದ್ದೇನೆ. ಐವತ್ತು ಸಿನಿಮಾಗಳಲ್ಲಿ ನಟಿಸಿದ್ದರೂ ನಾನು ಮೊದಲ ಸಿನಿಮಾದಲ್ಲಿ ಇದ್ದಂತೆಯೇ ಇದ್ದೇನೆ.

* ಮಾರ್ಚ್‌ ಮೊದಲ ವಾರದಲ್ಲಿ ‘ಯಜಮಾನ’ ಬರುತ್ತಿದೆ. ಏನದರ ವಿಶೇಷ?
ಸಿನಿಮಾದಲ್ಲಿ ಹೀರೊ ಯಜಮಾನ ಅಲ್ಲ. ನಾವು ಯಜಮಾನ ಎಂದು ಯಾರಿಗೆ ಕರೆಯುತ್ತೇವೆ ಎನ್ನುವುದೇ ಚಿತ್ರದ ಜೀವಾಳ. ಹಿಂದೆ ವಿವಿಧ ವೃತ್ತಿಯಲ್ಲಿ ತೊಡಗಿದ್ದವರಿಗೆ ‘ಯಜಮಾನ’ ಎಂದು ಕರೆಯಲಾಗುತ್ತಿತ್ತು. ಅವರು ಈಗ ಏನಾಗಿದ್ದಾರೆ ಎನ್ನುವುದೇ ಕಥೆಯ ತಿರುಳು. ನನ್ನ ಎಲ್ಲಾ ಸಿನಿಮಾಗಳಂತೆಯೇ ಇಷ್ಟಪಟ್ಟು ಈ ಸಿನಿಮಾ ಮಾಡಿರುವೆ. ನಾನು ಆಸೆಪಟ್ಟೇ ಸಿನಿಮಾದಲ್ಲಿ ನಟಿಸುತ್ತೇನೆ.

* ವಿಷ್ಣುವರ್ಧನ್‌ ನಟನೆಯ ‘ಯಜಮಾನ’ ಚಿತ್ರಕ್ಕೂ, ಈ ಸಿನಿಮಾಕ್ಕೂ ಏನಾದರೂ ವ್ಯತ್ಯಾಸ ಇದೆಯೇ?
‘ಯಜಮಾನ’ ಟೈಟಲ್ ಇರುವುದು ವಿಷ್ಣುವರ್ಧನ್‌ ಸರ್‌ ಅವರೊಬ್ಬರಿಗೆ ಮಾತ್ರ. ಅವರ ಸಿನಿಮಾಕ್ಕೂ ಮತ್ತು ಇದಕ್ಕೂ ಯಾವುದೇ ಸಂಬಂಧವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರದ ಟೈಟಲ್‌ ಕುರಿತು ನಡೆಯುತ್ತಿರುವ ವಿವಾದವನ್ನು ಗಮನಿಸಿದ್ದೇನೆ. ಟೈಟಲ್‌ ನೋಡಿ ಯಾರೊಬ್ಬರೂ ನಿರ್ಧಾರ ತಳೆಯುವುದು ಸರಿಯಲ್ಲ. ಮಾರ್ನಿಂಗ್‌ ಶೋ ವೀಕ್ಷಿಸಿದ ಬಳಿಕ ವಿಷ್ಣು ಸರ್‌ ಅವರ ‘ಯಜಮಾನ’ನಿಗೂ, ಈ ಚಿತ್ರಕ್ಕೂ ಏನಾದರೂ ಸಾಮ್ಯತೆ ಇದೆಯೇ ಎನ್ನುವುದನ್ನು ಪುರಾವೆ ಸಮೇತ ಅವಲೋಕಿಸಿ ಮಾತನಾಡುವುದು ಉತ್ತಮ.

* ಟ್ರೇಲರ್‌ನಲ್ಲಿ ಪಂಚಿಂಗ್‌ ಡೈಲಾಗ್‌ಗಳಿವೆಯಲ್ಲಾ...
ಇಂತಹ ಪಂಚಿಂಗ್‌ ಡೈಲಾಗ್‌ಗಳು ನೀಡಿ ಬಹಳ ದಿನಗಳೇ ಸರಿದುಹೋಗಿದ್ದವು. ಔಟ್‌ ಅಂಡ್‌ ಔಟ್‌ ಮನರಂಜನೆ ಉಣಬಡಿಸುವ ಚಿತ್ರ ಇದು. ಖಂಡಿತಾ ಹೀರೊಯಿಸಂ ಇಲ್ಲವೇ ಇಲ್ಲ. ಪ್ರೇಕ್ಷಕರಿಗೆ ಏನುಬೇಕೋ ಅದನ್ನು ಚೊಕ್ಕಟವಾಗಿ ಹೇಳಿರುವ ತೃಪ್ತಿಯಿದೆ. ನನ್ನ ಅಭಿಮಾನಿಗಳಿಗಾಗಿ ಅಲ್ಲಲ್ಲಿ ಪಂಚಿಂಗ್‌ ಡೈಲಾಗ್‌ಗಳನ್ನು ಕಟ್ಟಿಕೊಟ್ಟಿದ್ದೇವೆ.

* ಈ ಚಿತ್ರಕ್ಕೆ ಪ್ರೇಕ್ಷಕರಿಗೆ ಹೇಗೆ ಆಹ್ವಾನ ನೀಡುತ್ತೀರಿ?
ನಾನು ಎಂದಿಗೂ ಪ್ರೇಕ್ಷಕರಿಗೆ ವಿಶೇಷ ಆಹ್ವಾನ ನೀಡಿಲ್ಲ. ನನ್ನ ಮೊದಲ ಚಿತ್ರ ‘ಮೆಜೆಸ್ಟಿಕ್’ಗೆ ಹೇಗೆ ಬಂದರೋಹಾಗೆಯೇ ಆಹ್ವಾನ ನೀಡುತ್ತೇನೆ. ನೋಡುಗರಿಗೆ ಮನರಂಜನೆ ನೀಡುವುದಷ್ಟೇ ನನ್ನ ಕಾಯಕ. ಚಿತ್ರಮಂದಿರಕ್ಕೆ ಬಂದವರಿಗೆ ಎರಡೂವರೆ ಗಂಟೆ ಮನಸ್ಸು ತೃಪ್ತಿಯಾಗುವಷ್ಟು ಮನರಂಜನೆ ನೀಡಿ ಕಳುಹಿಸುತ್ತೇನೆ.

* ಚಿತ್ರದ ನಾಲ್ಕೂ ಹಾಡುಗಳು ಸೂಪರ್ ಹಿಟ್‌ ಆಗಿರುವ ಬಗ್ಗೆ ನಿಮ್ಮ ಅನಿಸಿಕೆ ಏನು?
ತುಂಬಾ ಖುಷಿಯಾಗುತ್ತಿದೆ. ನಾನು ನಟಿಸಿದ ಚಿತ್ರವೊಂದರ ಎಲ್ಲಾ ಹಾಡುಗಳು ಹಿಟ್‌ ಆಗಿರುವುದು ಇದೇ ಮೊದಲು. ಇಲ್ಲಿಯವರೆಗೆ ನಾನು ಐವತ್ತು ಚಿತ್ರಗಳಲ್ಲಿ ನಟಿಸಿರುವೆ. ಹಿಟ್‌ಲಿಸ್ಟ್‌ಗೆ ಸೇರುತ್ತಿದ್ದುದು ಒಂದೋ ಅಥವಾ ಎರಡು ಹಾಡು ಮಾತ್ರ. ಕೆಲವೊಮ್ಮೆ ಅದು ಕೂಡ ಆಗುತ್ತಿರಲಿಲ್ಲ. ಯಜಮಾನ ಚಿತ್ರದ ಹಾಡುಗಳನ್ನು ಕೇಳಿದ ಎಲ್ಲರೂ ಖುಷಿಪಡುತ್ತಿದ್ದಾರೆ. ಯಾವ ಹಾಡನ್ನೂ ತೆಗೆದುಹಾಕಲು ಇಷ್ಟವಿಲ್ಲ ಎನ್ನುತ್ತಿದ್ದಾರೆ. ವಿ. ಹರಿಕೃಷ್ಣ ಅವರ ಬದ್ಧತೆ, ಪರಿಶ್ರಮ ಇದರ ಹಿಂದಿದೆ. ಚಿತ್ರದ ಕಥೆ, ಸಾಹಿತ್ಯದಲ್ಲೂ ಅವರ ಪಾಲು ದೊಡ್ಡದಿದೆ.

* ಈ ಪಾತ್ರಕ್ಕೆ ಸಿದ್ಧತೆ ಹೇಗಿತ್ತು?
‘ನನ್ನ ಪ್ರೀತಿಯ ರಾಮು’, ‘ಸಂಗೊಳ್ಳಿ ರಾಯಣ್ಣ’, ‘ಕುರುಕ್ಷೇತ್ರ’ದಂತಹ ಚಿತ್ರಕ್ಕೆ ಸಿದ್ಧತೆ ಬೇಕು. ಅಂತಹ ಚಿತ್ರಗಳಿಗೆ ತಕ್ಷಣಕ್ಕೆ ಹೋಗಿ ನಟಿಸಲು ಆಗುವುದಿಲ್ಲ. ಯಜಮಾನ ಚಿತ್ರದ ಪಾತ್ರಕ್ಕೆ ಯಾವುದೇ ಸಿದ್ಧತೆ ಮಾಡಿಕೊಂಡಿರಲಿಲ್ಲ.

* ‘ನನ್ನ ಪ್ರೀತಿಯ ರಾಮು’ ಚಿತ್ರದ ಬಳಿಕ ನೀವು ಪ್ರಯೋಗಾತ್ಮಕ ಚಿತ್ರಗಳಿಂದ ಹಿಂದೆ ಸರಿದಿದ್ದು ಏಕೆ?
ಆ ಚಿತ್ರವನ್ನು ಟಿ.ವಿ.ಯಲ್ಲಿ ನೋಡಿದೆ ಎಂದು ನನಗೆ ಉತ್ತರಿಸಿದವರೇ ಹೆಚ್ಚು. ಟಿ.ವಿ.ಯಲ್ಲಿ ನೋಡುವುದಕ್ಕಾಗಿ ಸಿನಿಮಾ ಮಾಡಲು ಆಗುವುದಿಲ್ಲ. ಜನರು ಚಿತ್ರಮಂದಿರಕ್ಕೆ ಬರುವಂತಹ ಸಿನಿಮಾ ಮಾಡಬೇಕೆನ್ನುವುದು ನನ್ನ ಗುರಿ. ಚಿತ್ರಮಂದಿರದಲ್ಲಿ ಆ ಚಿತ್ರಕ್ಕೆ ಜನರಿಂದ ಪ್ರಶಂಸೆ ಸಿಗಲಿಲ್ಲ. ಸಿಕ್ಕಿದ್ದರೆ ಅಂತಹ ಮತ್ತಷ್ಟು ಚಿತ್ರಗಳಲ್ಲಿ ನಟಿಸಲು ನನಗೂ ಹುಮ್ಮಸ್ಸು ಬರುತ್ತಿತ್ತು. ಸದ್ಯಕ್ಕಂತೂ ಅಂತಹ ಕಥೆಗಳು ಬಂದಿಲ್ಲ. ನಾನು ಹುಡುಕಿಕೊಂಡು ಹೋಗುವುದಿಲ್ಲ.

* ಸ್ಟಾರ್‌ ನಟರು ಕಾದಂಬರಿ ಆಧಾರಿತ ಸಿನಿಮಾ ಮಾಡುವುದಿಲ್ಲ ಎನ್ನುವ ಆರೋಪ ಇದೆಯಲ್ಲಾ?
ದೂರದರ್ಶನದ ಕಾಲವದು. ಚಾನೆಲ್‌ಗಳ ಅಬ್ಬರವೇ ಇರಲಿಲ್ಲ. ನಾವು ಮೈಸೂರಿನ ಪ್ರಕಾಶ್‌ ಹೋಟೆಲ್‌ ಬಳಿಯಿದ್ದೆವು. ಆಗ ಪ್ರತಿ ಗಲ್ಲಿಗೂ ಗ್ರಂಥಾಲಯದ ವ್ಯಾನ್‌ ಬರುತ್ತಿತ್ತು. ಮಹಿಳೆಯರು ಸೇರಿದಂತೆ ಎಲ್ಲರೂ ವ್ಯಾನ್‌ ಬಳಿಗೆ ಹೋಗಿ ಒಂದೊಂದು ಪುಸ್ತಕ ತಂದು ಓದುತ್ತಿದ್ದರು. ಕಾದಂಬರಿ ಆಧಾರಿತ ಸಿನಿಮಾ ತೆರೆಕಂಡಾಗ ಮಹಿಳೆಯರು ಗಂಡಂದಿರಿಗೆ ಹೇಳಿ ಚಿತ್ರಮಂದಿರಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಇಂದು ಎಷ್ಟು ಮಂದಿ ಕಾದಂಬರಿ ಓದುತ್ತಿದ್ದಾರೆ? ಗಣನೀಯವಾಗಿ ಓದುಗರ ಸಂಖ್ಯೆಯೂ ಕಡಿಮೆಯಾಗಿದೆ. ಕಾದಂಬರಿ ಆಧಾರಿತ ಸಿನಿಮಾ ಮಾಡಿದಾಗ ಜನರಿಗೆ ಅದನ್ನು ತಲುಪಿಸುವುದೇ ಕಷ್ಟವಾಗುತ್ತದೆಯಲ್ಲವೇ?

* ಕಿರುತೆರೆ ಮುಂದೆ ಕುಳಿತ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವ ಬಗೆ ಹೇಗೆ?
ಇದಕ್ಕೆ ಒಳ್ಳೆಯ ಸಿನಿಮಾ ನಿರ್ಮಾಣವೇ ಮದ್ದು. ಜನರು ಕೇವಲ ಧಾರಾವಾಹಿಗಳನ್ನೇ ನೋಡುತ್ತಾರೆ ಎಂದು ಅರ್ಥೈಸಿಕೊಳ್ಳುವುದು ತಪ್ಪು. ಜನರು ಟಿ.ವಿ.ಯಲ್ಲಿ ನೋಡುವ ಸಿನಿಮಾವೇ ಬೇರೆ. ಚಿತ್ರಮಂದಿರಕ್ಕೆ ಬಂದು ನೋಡುವ ಸಿನಿಮಾವೇ ಬೇರೆ. ಜನರ ಅಭಿರುಚಿಯೂ ಭಿನ್ನವಾಗಿರುತ್ತದೆ.

* ಹೊಸಬರ ಸಿನಿಮಾ ಪ್ರವೇಶ ಕುರಿತು ಅನಿಸಿಕೆ ಏನು?
ಸಿದ್ಧತೆ ಮಾಡಿಕೊಂಡು ಪ್ರವೇಶಿಸಿ ಎನ್ನುವುದೇ ನನ್ನ ಸಲಹೆ. ಬಣ್ಣದಲೋಕವನ್ನು ಹಗುರವಾಗಿ ಪರಿಗಣಿಸಬಾರದು. ಇದನ್ನು ವೃತ್ತಿಯಾಗಿ ಪರಿಗಣಿಸಿದಾಗ ಸಾಕಷ್ಟು ಪೂರ್ವಸಿದ್ಧತೆ ಬೇಕು. ನಾನು ಏನು ಮಾಡುತ್ತಿದ್ದೇನೆ ಎನ್ನುವ ಅರಿವು ಇರಬೇಕು. ಅದಕ್ಕೆ ತಕ್ಕಂತೆ ಕಲಿಕೆಯೂ ಮುಖ್ಯ. ಕೆಲವರು ಸಂಪೂರ್ಣ ಸಿದ್ಧತೆ ನಡೆಸಿಯೇ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಕೆಲವರು ಸಿದ್ಧತೆ ಇಲ್ಲದೆಯೇ ಬರುತ್ತಿರುವುದೂ ಉಂಟು. ಮೊನ್ನೆ ಒಬ್ಬ ಹುಡುಗ ಸಿಕ್ಕಿದ್ದ. ಇಲ್ಲಿಯವರೆಗೆ ಏನಪ್ಪ ಮಾಡುತ್ತಿದ್ದೆ ಎಂದು ಪ್ರಶ್ನಿಸಿದೆ. ನಾನು ಎಂಜಿನಿಯರಿಂಗ್‌ ಪೂರ್ಣಗೊಳಿಸಿ ಬಂದೆ ಎಂದು ಉತ್ತರಿಸಿದ. ಸಿನಿಮಾ ರಂಗಕ್ಕೆ ಬರಲು ತಾಂತ್ರಿಕ ಶಿಕ್ಷಣದ ಅಗತ್ಯವಿಲ್ಲ. ಆತ ನಟನಾ ಶಾಲೆಗೆ ತೆರಳಿ ಅಭಿನಯ ಕಲಿತಿದ್ದರೆ ಒಳ್ಳೆಯದಾಗುತ್ತಿತ್ತು. ಅದು ವೃತ್ತಿಗೂ ಪೂರಕ.

* ಕನ್ನಡದಲ್ಲಿನ ಬಿಗ್‌ ಬಜೆಟ್‌ ಸಿನಿಮಾಗಳ ಬಗ್ಗೆ ಹೇಳಿ.
ನೆರೆಹೊರೆಯ ಚಿತ್ರರಂಗದವರು ನೂರೈವತ್ತು ಕೋಟಿಯ ಬಜೆಟ್‌ ಮುಟ್ಟಿದ್ದಾರೆ. ನಾವು ಆ ಮಟ್ಟಕ್ಕೆ ತಲುಪಬೇಕಿದೆ. ನಮ್ಮ ಪ್ರೇಕ್ಷಕರನ್ನು ಚಿತ್ರಮಂದಿರದ ಮುಂದೆ ಕೂರಿಸುವ ಜವಾಬ್ದಾರಿ ನಮ್ಮ ಮೇಲಿದೆ.

**

‘ನನ್ನ ಜೊತೆ ತುಂಬಾ ಪಳಗಿದವರಿಗೆ ಮಾತ್ರವೇ ನನ್ನ ಗುಣ ಅವರಿಗೆ ಗೊತ್ತು. ದೂರದಲ್ಲಿ ನಿಂತವರಿಗೆ ಅದು ಅರ್ಥವಾಗುವುದಿಲ್ಲ. ಸಿನಿಮಾ ರಂಗ ಯಾರಪ್ಪನ ಮನೆಯೂ ಸ್ವತ್ತಲ್ಲ.ಹೊಸಬರ ಹೆಚ್ಚಾಗಿ ಬರಬೇಕು.
– ದರ್ಶನ್, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT