ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳುನಾಡಿನ ಮೋಹಕತಾರೆ ಶ್ರುತಿ ಪೂಜಾರಿ

Last Updated 5 ಏಪ್ರಿಲ್ 2019, 5:06 IST
ಅಕ್ಷರ ಗಾತ್ರ

ದಕ್ಷಿಣ ಭಾರತದ ಜನಪ್ರಿಯ ತಾರೆ ಖುಷ್ಬೂ. ಚಿತ್ರ ಜೀವನದ ಆರಂಭದ ದಿನಗಳಲ್ಲಿ ಅವರು ತಮ್ಮ ಸೌಂದರ್ಯ ಹಾಗೂ ಅಭಿನಯದಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಮೋಡಿ ಮಾಡಿದವರು. ‘ಎನ್ನ’ ಚಿತ್ರದ ಮೂಲಕ ಸಿ–ಟೌನ್‌ ಪ್ರವೇಶಿಸಿದರುವ ನಟಿ ಶ್ರುತಿ ಪೂಜಾರಿ ಕೂಡ ಹೆಚ್ಚು ಕಡಿಮೆ ಖುಷ್ಬೂ ಅವರನ್ನೇ ಹೋಲುತ್ತಾರೆ. ಇವರಿಗೂ ಕೂಡ ಅವರಂತೆ ಚಿತ್ರರಂಗದಲ್ಲಿ ಬೆಳಗುವ ಆಸೆ ಇದೆ.

***

ಹಾಲಿಗೆ ಚಿಟಿಕೆ ಅರಿಷಿಣ ಹಾಕಿದರೆ ಮೂಡುವ ಹೊಂಬಣ್ಣ ಈಕೆಯ ಮೈಬಣ್ಣ. ದುಂಡು ಮುಖದಲ್ಲಿ ಜೋಡಿ ದೀಪದಂತೆ ಪ್ರಕಾಶಿಸುವ ಬಟ್ಟಲು ಕಣ್ಣುಗಳೇ ಇವರ ಚೆಲುವಿನ ಪ್ರಧಾನ ಆಕರ್ಷಣೆ. ರಂಗು ಮೆತ್ತಿದ ತುಟಿಬಟ್ಟಲಿನಿಂದ ತುಳುಕುವ ನಗುವಿಗೆ ಎಲ್ಲರನ್ನೂ ಸೆಳೆಯುವ ಶಕ್ತಿ ಇದೆ. ‘ಎನ್ನ’ ಸಿನಿಮಾದ ಮೂಲಕ ತುಳು ಚಿತ್ರರಂಗ ಪ್ರವೇಶಿಸಿರುವ ಉಡುಪಿಯ ಬೆಡಗಿ ಶ್ರುತಿ ಪೂಜಾರಿ ಅವರು ಸಿ–ಟೌನ್‌ನಲ್ಲಿ ಗಟ್ಟಿಯಾಗಿ ನೆಲೆಯೂರುವ ಆಸೆ ಇರಿಸಿಕೊಂಡವರು.

ಪಡುಬಿದ್ರಿಯ ಅವರಾಲ್‌ ಮಟ್ಟಿಯವರಾದ ಶ್ರುತಿ ಪೂಜಾರಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪೂರೈಸಿದ್ದು ಹುಟ್ಟೂರಿನಲ್ಲೇ. ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಬಿಕಾಂ ಮುಗಿಸಿ, ಈಗ ಬೆಂಗಳೂರಿನ ಎಂಎನ್‌ಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಶ್ರುತಿ ಅವರು ಚಿತ್ರರಂಗಕ್ಕೆ ಬಂದಿದ್ದು ಕೂಡ ಆಕಸ್ಮಿಕ.

‘ಬಣ್ಣದ ಲೋಕ ನನಗೆ ಹೊಸತು. ಇಲ್ಲಿಗೆ ಕಾಲಿಡುವುದಕ್ಕೂ ಮುನ್ನ ಥಿಯೇಟರ್‌ ಅಥವಾ ಮಾಡೆಲಿಂಗ್‌ ಜಗತ್ತಿನ ಪರಿಚಯ ಕೂಡ ಇರಲಿಲ್ಲ. ಅದೂ ಅಲ್ಲದೇ ಚಿತ್ರರಂಗಕ್ಕೆ ಬರಬೇಕು ಎಂಬ ಪ್ರಬಲ ಆಕಾಂಕ್ಷೆಯೂ ನನಗೆ ಇರಲಿಲ್ಲ. ಆದರೆ, ನನ್ನ ಮನದ ಮೂಲೆಯಲ್ಲಿ ಒಂದು ಕಡೆ ನಟಿಯಾಗಬೇಕು ಎಂಬ ಸಣ್ಣದೊಂದು ಆಸೆ ಹಬೆಯಾಡುತ್ತಿತ್ತು. ಇಂತದ್ದೇ ಸಂದರ್ಭದಲ್ಲಿ ‘ಎನ್ನ’ ಸಿನಿಮಾದ ಆಡಿಷನ್‌ ನಡೆಯುತ್ತಿತ್ತು, ಅದರಲ್ಲಿ ಭಾಗವಹಿಸಿದೆ. ನಿರ್ದೇಶಕ ವಿಶ್ವನಾಥ್‌ ಕೋಡಿಕಲ್‌ ಅವರು ಒಂದು ಸ್ಕ್ರಿಪ್ಟ್‌ ಕೊಟ್ಟು ಅಭಿನಯಿಸುವಂತೆ ಹೇಳಿದರು. ಚೆನ್ನಾಗಿಯೇ ಅಭಿನಯಿಸಿ ಚಿತ್ರಕ್ಕೆ ಆಯ್ಕೆಯಾದೆ. ಬೂದಿ ಮುಚ್ಚಿದ ಕೆಂಡದಂತಿದ್ದ ನನ್ನ ಆಸೆ ‘ಎನ್ನ’ ಚಿತ್ರದ ಮುಖೇನ ಪೂರ್ಣಗೊಂಡಿತು’ ಎಂದು ನಕ್ಕರು ಶ್ರುತಿ ಪೂಜಾರಿ.

‘ಎನ್ನ’ ಸಿನಿಮಾದ ನಾಯಕನಟಿಯಾಗಿ ಆಯ್ಕೆಯಾದ ನಂತರ ಮೊದಲಬಾರಿಗೆ ಕ್ಯಾಮೆರಾ ಎದುರಿಸಿದ ಅನುಭವ ಹೇಗಿತ್ತು ಎಂಬ ಪ್ರಶ್ನೆಗೆ ಶ್ರುತಿ ಉತ್ತರಿಸಿದ್ದು ಹೀಗೆ: ‘ನಿಜ ಹೇಳಬೇಕು ಅಂದರೆ, ಮೊದಲ ದಿನ ಕ್ಯಾಮೆರಾ ಮುಂದೆ ಬಂದು ನಿಂತಾಗ ತುಂಬಾ ಅಂದರೆ ತುಂಬಾನೇ ನರ್ವಸ್‌ ಆಗಿದ್ದೆ. ಚಿತ್ರೀಕರಣ ನಡೆಯುತ್ತಿದ್ದ ಜಾಗದಲ್ಲಿ ತುಂಬ ಜನ ಸೇರಿದ್ದರು. ಅವರನ್ನೆಲ್ಲಾ ಒಟ್ಟಿಗೆ ನೋಡಿದ ಕ್ಷಣ ಡೈಲಾಗ್‌ಗಳೇ ಮರೆತು ಹೋದವು. ತುಂಬ ಕಷ್ಟಪಟ್ಟೆ. ಆದರೆ, ಕ್ರಮೇಣ ಸರಿಹೋಯಿತು. ಸಿನಿಮಾದ ಚಿತ್ರೀಕರಣ ಪೂರ್ಣಗೊಳ್ಳುವ ವೇಳೆಗೆ ನನಗೂ ನಟಿಸಲು ಬರುತ್ತದೆ ಎಂಬ ಆತ್ಮವಿಶ್ವಾಸ ಮೂಡಿತ್ತು’.

‘ಎನ್ನ’ ರೊಮ್ಯಾಂಟಿಕ್, ಲವ್ ಸ್ಟೋರಿ ಇರುವಂತಹ ಸಿನಿಮಾ. ಶ್ರುತಿ ಈ ಚಿತ್ರದಲ್ಲಿ ಲೀಡ್‌ ರೋಲ್‌ ಮಾಡಿದ್ದು, ಚಿತ್ರದ ಆರಂಭದಿಂದ ಕೊನೆವರೆಗೂ ಸ್ಕ್ರೀನ್‌ ಮೇಲೆ ಕಾಣಿಸಿಕೊಳ್ಳಲಿದ್ದಾರಂತೆ.

‘ಎನ್ನ’ ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಪ್ರಾಮುಖ್ಯತೆ ಇದೆ. ಸಿನಿಮಾ ತುಂಬ ಚೆನ್ನಾಗಿ ಮೂಡಿಬಂದಿದೆ. ಈ ಚಿತ್ರದಲ್ಲಿ ನವರಸಗಳೂ ಇವೆ. ಸ್ಕೂಲ್‌ ಲೈಫ್‌ನಿಂದ ಹಿಡಿದು ಕಾಲೇಜು ಹಂತದವರೆಗೆ ಯುವಜನತೆಯ ಜೀವನದಲ್ಲಿ ಏನೆಲ್ಲಾ ಸಂಗತಿಗಳು ನಡೆಯುತ್ತವೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಈ ಸಿನಿಮಾದಲ್ಲಿ ನಟಿಸಿರುವ ಶೇ 90ರಷ್ಟು ಕಲಾವಿದರು ಹೊಸಬರು. ಹಾಗಾಗಿ, ನನಗೂ ಕೂಡ ಚಿತ್ರದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಕಷ್ಟ ಅಂತ ಅನ್ನಿಸಲಿಲ್ಲ. ಸೆಟ್‌ನಲ್ಲಿದ್ದಾಗ ಅಭಿನಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ’ ಎನ್ನುತ್ತಾರೆ ಶ್ರುತಿ.

‘ಸಿನಿಮಾ ನಿರ್ಮಾಣದ ಬಗ್ಗೆ ನನಗೆ ಏನೇನೂ ತಿಳಿದಿರಲಿಲ್ಲ. ಒಂದು ಸಿನಿಮಾ ತಯಾರಿಸುವುದಕ್ಕೆ ಎಷ್ಟೆಲ್ಲಾ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂಬುದು ‘ಎನ್ನ’ ಸಿನಿಮಾದಿಂದ ತಿಳಿಯಿತು. ನಿರ್ದೇಶಕ ವಿಶ್ವನಾಥ್‌ ಕೋಡಿಕಲ್‌ ಅವರು ಅಭಿನಯದಲ್ಲಿ ತಪ್ಪಾದರೆ ತಿದ್ದಿಕೊಳ್ಳುವಂತೆ ಸೂಚಿಸುತ್ತಿದ್ದರು. ಚೆನ್ನಾಗಿ ನಟಿಸುವಂತೆ ಸ್ಫೂರ್ತಿ ತುಂಬಿದರು. ಹಾಗೆಯೇ, ವಿಜೆ ವಿನೀತ್‌ ಅವರು ಕೂಡ ಅಭಿನಯ ಕುರಿತಂತೆ ನನಗೆ ಟಿಪ್ಸ್‌ ಕೊಡುತ್ತಿದ್ದರು. ಇಡೀ ಚಿತ್ರತಂಡ ಅಷ್ಟು ಸಪೋರ್ಟಿವ್‌ ಆಗಿದ್ದ ಕಾರಣಕ್ಕೆ ನನಗೆ ಅಭಿನಯಿಸಲು ತುಂಬ ಸುಲಭವಾಯಿತು’ ಎಂಬುದು ಶ್ರುತಿ ಅವರ ಮನದ ಮಾತು.

ಅಂದಹಾಗೆ, ‘ಎನ್ನ’ ಸಿನಿಮಾ ಗ್ಲೋರಿಯಸ್‌ ಆ್ಯಂಗ್ಲೋರ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ಮೂಡಿಬರುತ್ತಿದ್ದು, ಕಾನ್ಯೂಟ್ ಮಥಾಯಸ್‌ ಪಿಲ್ಲರ್‌ ಅವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮ್ಯಾಕ್ಸಿಮ್‌ ಪೆರೀರಾ ಚಿತ್ರದ ಎಕ್ಸಿಕ್ಯುಟಿವ್‌ ನಿರ್ದೇಶಕರಾಗಿದ್ದಾರೆ.

‘ಎನ್ನ’ ವಿಭಿನ್ನ ಕಥಾಹಂದರದ ಸಿನಿಮಾ. ಚಿತ್ರದಲ್ಲಿ ಕಾಮಿಡಿ, ಲವ್‌, ದುಃಖ ಎಲ್ಲವೂ ಇದೆ. ನಿರೂಪಣೆಯೂ ಭಿನ್ನವಾಗಿದೆ. ಜನರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ. ಎಲ್ಲರೂ ಕುಟುಂಬ ಸಮೇತರಾಗಿ ಹೋಗಿ ಚಿತ್ರವನ್ನು ವೀಕ್ಷಿಸಿ ಎಂಜಾಯ್‌ ಮಾಡಬಹುದು’ ಎಂಬುದು ಶ್ರುತಿ ಪೂಜಾರಿ ಅವರು ಚಿತ್ರದ ಕುರಿತಂತೆ ಕೊಡುವ ಭರವಸೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT