ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ರಾಜಕುಮಾರನ ಕಥೆ

Published 21 ಮಾರ್ಚ್ 2024, 23:30 IST
Last Updated 21 ಮಾರ್ಚ್ 2024, 23:30 IST
ಅಕ್ಷರ ಗಾತ್ರ

*‘ಯುವ’ ಸಿನಿಮಾಗೆ ನಿಮ್ಮ ತಯಾರಿ ಹೇಗಿತ್ತು?

ಸಂತೋಷ್‌ ಆನಂದರಾಮ್‌ ಜೊತೆ ಕೆಲಸ ಮಾಡಬೇಕು ಎನ್ನುವ ಆಸೆಯಿತ್ತು. ಸುಮಾರು ನಾಲ್ಕೈದು ವರ್ಷಗಳ ಹಿಂದೆಯೇ ‘ಯುವರತ್ನ’ ಶೂಟಿಂಗ್‌ ಸಂದರ್ಭದಲ್ಲಿ ಅವರೊಂದಿಗೆ ಈ ವಿಷಯ ಹಂಚಿಕೊಂಡಿದ್ದೆ. 2022ರಲ್ಲಿ ಈ ಚಿತ್ರದ ಸ್ಕ್ರಿಪ್ಟಿಂಗ್‌ ಆರಂಭವಾಗಿತ್ತು. ಶೂಟಿಂಗ್‌ ಆರಂಭಕ್ಕೂ ಮುನ್ನ ಸುಮಾರು ಎಂಟು ತಿಂಗಳು ಚಿತ್ರತಂಡದೊಂದಿಗೆ ಕಳೆದಿದ್ದೆ. ಸ್ಕ್ರಿಪ್ಟ್‌ ಪಯಣದಲ್ಲಿ ನಾನು ನನ್ನ ಪಾತ್ರವನ್ನು ಅರ್ಥೈಸಿಕೊಂಡೆ. ಚಿತ್ರಕಥೆ, ಸಂಭಾಷಣೆ ಸಿದ್ಧವಾಗುವ ಸಂದರ್ಭದಲ್ಲಿ ಅಲ್ಲಲ್ಲೇ ನಾನು ಪಾತ್ರದ ನಟನೆಯ ಅಭ್ಯಾಸ ಶುರುಮಾಡಿಕೊಂಡಿದ್ದೆ. ಅದನ್ನು ಚಿತ್ರತಂಡ ಶೂಟ್‌ ಮಾಡಿಕೊಂಡು ಸಲಹೆ ನೀಡುತ್ತಿತ್ತು. ಡೆಲಿವರಿ ಬಾಯ್‌ ಆಗಿ ಪಾತ್ರ ನಿರ್ವಹಿಸಲು ಅವರೊಂದಿಗೆ ನಾಲ್ಕೈದು ದಿನ ಕಳೆದಿದ್ದೆ. ಅವರ ವರ್ತನೆ, ಅನುಭವಗಳ ಬಗ್ಗೆ ತಿಳಿದುಕೊಂಡೆ. 

ಡಬ್ಬಿಂಗ್‌ ಕೂಡಾ ಬಹಳ ಸವಾಲಿನಿಂದ ಕೂಡಿತ್ತು. ಮೊದಲ ಬಾರಿಗೆ ನಿರ್ದೇಶಕರು ಇಲ್ಲದೇ ಡಬ್ಬಿಂಗ್‌ ಮಾಡಿದ್ದೆ. ನಂತರ ತಪ್ಪುಗಳನ್ನು ತಿದ್ದಿಕೊಂಡು ಇಡೀ ಸಿನಿಮಾವನ್ನು ಮೂರು ಬಾರಿ ಡಬ್‌ ಮಾಡಿದ್ದೇನೆ. ನಾನು ಆತ್ಮವಿಶ್ವಾಸದಿಂದ ಇದ್ದೇನೆ. ಆದರೆ ಭಯವೂ ಇದೆ. ಜನ ನನ್ನನ್ನು ಇಷ್ಟಪಡುತ್ತಾರೋ ಇಲ್ಲವೋ ಎನ್ನುವ ಕುತೂಹಲವೂ ಇದೆ.

*ನಟನೆಯ ಬಗ್ಗೆ ಒಲವು ಮೂಡಿದ್ದು ಯಾವಾಗ?

ಚಿಕ್ಕವಯಸ್ಸಿನಿಂದಲೂ ನಟನಾಗಬೇಕು ಎನ್ನುವ ಹಂಬಲ ಇತ್ತು. ಆದರೆ ಓದಿನ ಕಡೆಗೆ ನನ್ನ ಗಮನವಿತ್ತು. ಒಂದು ಡಿಗ್ರಿ ಪಡೆದು ಸಿನಿಮಾ ಕ್ಷೇತ್ರದತ್ತ ಇಳಿಯುವ ನಿರ್ಧಾರ ಮಾಡಿದೆ. ಹೀಗಾಗಿ ಆರ್ಕಿಟೆಕ್ಚರ್‌ ಶಿಕ್ಷಣ ಪೂರ್ಣಗೊಳಿಸಿದೆ. ನಂತರದಲ್ಲಿ ಮುಂಬೈನಲ್ಲಿ ಒಂದು ವರ್ಷ ನಟನೆ, ಡ್ಯಾನ್ಸ್‌ ಹಾಗೂ ಫೈಟ್ ತರಬೇತಿ ಪಡೆದುಕೊಂಡೆ. ಬಳಿಕ ಇಲ್ಲಿರುವ ಫೈಟ್‌ ಮಾಸ್ಟರ್‌ಗಳ ಬಳಿಯೂ ತರಬೇತಿ ಪಡೆದುಕೊಂಡೆ. ಈ ಸಿನಿಮಾದಲ್ಲಿ ಪ್ರತಿ ದೃಶ್ಯದ ಚಿತ್ರೀಕರಣಕ್ಕೂ ಮುನ್ನ 10–15 ದಿನ ರಿಹರ್ಸಲ್‌ ಮಾಡಿಕೊಂಡೇ ಭಾಗವಹಿಸುತ್ತಿದ್ದೆ. ಶೂಟಿಂಗ್‌ ಪ್ರಾರಂಭವಾದಾಗಿನಿಂದ ಹಲವು ವಿಷಯಗಳನ್ನು ಕಲಿತಿದ್ದೇನೆ. ನನ್ನ ಎದುರಿಗಿದ್ದವರೆಲ್ಲರೂ ಹಿರಿಯ ಕಲಾವಿದರು. ಅನುಭವ ಹೊಂದಿದವರು. ತರಬೇತಿ ಪಡೆದಿದ್ದ ಕಾರಣ ಆತ್ಮವಿಶ್ವಾಸ ನನ್ನೊಳಗಿತ್ತು. ನಟನೆಯ ಸಂದರ್ಭದಲ್ಲಿ ಪ್ರತಿ ದೃಶ್ಯವೂ ಸವಾಲಿನದ್ದಾಗಿತ್ತು. ಶೂಟಿಂಗ್‌ಗೂ ಮುನ್ನ ಕಾರ್ಯಾಗಾರ ಮಾಡಿದ್ದ ಕಾರಣದಿಂದ ನಟನೆ ಸುಲಭವಾಯಿತು.

*ನಿಮಗೆ ಸ್ಫೂರ್ತಿ ಯಾರು?

ನನಗೆ ಡ್ಯಾನ್ಸ್‌, ಫೈಟ್‌ ಎಂದರೆ ತುಂಬಾ ಇಷ್ಟ. ಇದಕ್ಕೆ ಚಿಕ್ಕಪ್ಪನೇ(ಪುನೀತ್‌ ರಾಜ್‌ಕುಮಾರ್‌)  ಸ್ಫೂರ್ತಿ. ದೊಡ್ಡಪ್ಪನ (ಶಿವರಾಜ್‌ಕುಮಾರ್‌) ನಟನೆಯನ್ನೂ ನಾನು ತುಂಬಾ ಸೂಕ್ಷ್ಮವಾಗಿ ಗಮನಿಸುತ್ತೇನೆ. ಅವರ ಸ್ಟೈಲ್‌ ವಿಭಿನ್ನ. ಇಬ್ಬರಿಗೂ ಅವರದ್ದೇ ಆದ ಶೈಲಿ ಇದೆ. ಆದರೆ ನನಗೆ ಯಾರನ್ನೂ ನಕಲು ಮಾಡಬೇಕು ಎನ್ನುವುದು ಮನಸ್ಸಿನಲ್ಲಿ ಇಲ್ಲ.

*ಅಪ್ಪ–ಅಣ್ಣನ ಸಲಹೆ...   

ಸಿನಿಮಾಗೆ ಅಪ್ಪ ಬೆಂಬಲವಾಗಿ ನಿಂತರು. ಯಾರೂ ಇದೇ ರೀತಿ ಮಾಡು ಎನ್ನುವ ಒತ್ತಡ ಹಾಕಿಲ್ಲ. ಅಣ್ಣ(ವಿನಯ್‌ ರಾಜ್‌ಕುಮಾರ್‌) ತರಬೇತಿ ಪಡೆದುಕೊಳ್ಳುತ್ತಿರುವಾಗ, ತಾನು ಮಾಡಿದ್ದ ತಪ್ಪುಗಳನ್ನು, ಮಾಡಿಕೊಂಡ ಬದಲಾವಣೆಗಳನ್ನು ನನಗೆ ಹೇಳುತ್ತಿದ್ದ. ಪ್ರತಿ ಬಾರಿಯೂ ಆತನ ಸಲಹೆಯನ್ನು ಪಡೆದುಕೊಳ್ಳುತ್ತಿರುತ್ತೇನೆ. 

*ಈ ಸಿನಿಮಾ ನಿಮ್ಮ ಜೀವನಕ್ಕೆ ಎಷ್ಟು ಹತ್ತಿರವಿದೆ? 

ಸಿಕ್ಕಾಪಟ್ಟೆ ಹತ್ತಿರವಿದೆ. ಈ ಸ್ಕ್ರಿಪ್ಟ್‌ ನನಗೆ ತುಂಬಾ ಇಷ್ಟವಾಗಿದ್ದೇ ತಂದೆ–ಮಗನ ವಿಷಯದಲ್ಲಿ. ನೋಡಿದವರಿಗೂ ಇದು ಕನೆಕ್ಟ್‌ ಆಗುತ್ತದೆ. ಏಕೆಂದರೆ ಪ್ರತಿ ತಂದೆ–ಮಗನ ನಡುವೆ ಈ ಗೊಂದಲ ಇದ್ದೇ ಇರುತ್ತದೆ. ನನ್ನ ವಿಚಾರದಲ್ಲಿ ಮನೆ ಜವಾಬ್ದಾರಿ ತಂದೆ ಮೇಲಿತ್ತು. ಚಿಕ್ಕಪ್ಪನ ಕಥೆಗಳನ್ನು ಕೇಳುತ್ತಿದ್ದರು, ಜೊತೆಗೆ ಚಿತ್ರೀಕರಣಕ್ಕೂ ಹೋಗುತ್ತಿದ್ದರು. ಆ ಸಂದರ್ಭದಲ್ಲಿ ತಂದೆಯ ಜೊತೆ ಸಮಯವನ್ನು ಕಳೆಯುವುದೇ ಕಷ್ಟವಾಗಿತ್ತು. ನನಗೂ ತಂದೆಯನ್ನು ಅರಿಯಲು ಸಮಯ ಹಿಡಿಯಿತು. ತಂದೆಗೆ ಸ್ಟ್ರೋಕ್‌ ಆದಾಗ ನಾನಿನ್ನೂ ಕಾಲೇಜಿನಲ್ಲಿದ್ದೆ. ವಿನಯ್‌ ಆಗಷ್ಟೇ ಕೆರಿಯರ್‌ ಆರಂಭಿಸಿದ್ದ. ಅಲ್ಲಿಯವರೆಗೂ ಎಲ್ಲ ಜವಾಬ್ದಾರಿ ಅವರ ಮೇಲಿತ್ತು, ಸ್ಟ್ರೋಕ್‌ ಆದ ಬಳಿಕ ಯಾವ ಕೆಲಸವೂ ಮುಂದುವರಿಯುತ್ತಿರಲಿಲ್ಲ. ಆಗ ತಂದೆಯ ಜವಾಬ್ದಾರಿ ಬಗ್ಗೆ ಅರಿವಾಯಿತು. ಸ್ಟ್ರೋಕ್‌ ಆದಾಗ ಚಿಕ್ಕಪ್ಪ, ದೊಡ್ಡಪ್ಪ ಅವರನ್ನು ನೋಡಿಕೊಂಡರು. ಪ್ರತಿ ಹೆಜ್ಜೆಯಲ್ಲೂ ಮನೆಯವರು ಜೊತೆಗಿದ್ದರು. ಕಾಲೇಜಿನಲ್ಲಿ ಓಡಾಡಿಕೊಂಡು, ಮಜಾ ಮಾಡುತ್ತಿದ್ದ ನನಗೆ ಈ ಘಟನೆಗಳು ಬದಲಾವಣೆ ತಂದವು. ಈ ಪಾತ್ರ ಮಾಡುವಾಗ ಎಷ್ಟೋ ವಿಷಯಗಳು ಹೋಲಿಕೆಯಾದವು.

ಸಂತೋಷ್‌ ಆನಂದರಾಮ್‌ ಅವರ ಪ್ರತಿ ಸಿನಿಮಾದಲ್ಲೂ ತಂದೆ ಸೆಂಟಿಮೆಂಟ್‌ ಜಾಸ್ತಿ. ತಂದೆಗೆ ಪ್ರಾಮುಖ್ಯತೆ ಜಾಸ್ತಿ. ‘ಯುವ’ ಸಿನಿಮಾನೂ ಇದೇ ಕಥಾಹಂದರ ಹೊಂದಿದೆ. ಎಲ್ಲ ವರ್ಗದ ಪ್ರೇಕ್ಷಕರಿಗೆ ಬೇಕಾದ ಅಂಶಗಳು ಸಿನಿಮಾದಲ್ಲಿವೆ. 

*ನಿಮ್ಮ ಮೇಲಿರುವ ಒತ್ತಡ...

ಒಂದು ರೀತಿಯಲ್ಲಿ ನನ್ನ ಮೇಲಿರುವ ಒತ್ತಡವೇ ಶಕ್ತಿಯಾಗಿ ಬದಲಾಗಿದೆ. ಆ ಒತ್ತಡದಿಂದ ಜವಾಬ್ದಾರಿ ಬಂದಿದೆ. ಹೀಗಾಗಿ ಎಲ್ಲ ವಿಭಾಗಗಳಲ್ಲೂ ಪ್ರಾಮಾಣಿಕವಾದ ಪ್ರಯತ್ನ ಹಾಕಿದ್ದೇನೆ. ಈ ವಿಚಾರದಲ್ಲಿ ಪೂರ್ಣತೃಪ್ತಿ ಇದೆ.

*ಮುಂದಿನ ಸಿನಿಮಾಗಳು...

ಹೊಂಬಾಳೆ ಜೊತೆ ಮತ್ತಷ್ಟು ಸಿನಿಮಾಗಳನ್ನು ಮಾಡಲಿದ್ದೇನೆ. 

‘ಇದೊಂದು ಸ್ಟಾರ್‌ ಸಿನಿಮಾ ಅಲ್ಲ’ 

ಸಿನಿಮಾ ಬಗ್ಗೆ ಮಾಹಿತಿ ಬಿಚ್ಚಿಟ್ಟ ನಿರ್ದೇಶಕ ಸಂತೋಷ್‌ ಆನಂದರಾಮ್‌ ‘ಇದು ಸ್ಟಾರ್‌ ಅಥವಾ ಸೂಪರ್‌ಹೀರೊ ಸಿನಿಮಾವಲ್ಲ. ಮಾಸ್‌ ಹೀರೊಗೆ ಬಿಲ್ಡ್‌ಅಪ್‌ ಕೊಡಬೇಕು ಎಂದು ಮಾಡಿರುವ ಸಿನಿಮಾ ಇದಲ್ಲ. ಹೀರೊಗೆ ಯಾವ ಹೈಪು ಸ್ಲೋಮೋಷನ್‌ ಬಿಲ್ಡ್‌ಅಪ್‌ ಇಲ್ಲಿಲ್ಲ. ನೇರವಾಗಿ ಹೀರೊ ಪರಿಚಯ ಮಾಡುತ್ತೇವೆ. ಯುವ ಈ ಸಿನಿಮಾದಲ್ಲಿ ತುಂಬಾ ಕೋಪ ಇರುವಂತಹ ಈ ಜನರೇಷನ್‌ ಹುಡುಗ. ಆತನನ್ನೂ ಡೆಲಿವರಿ ಬಾಯ್‌ ಆಗಿಯೂ ತೋರಿಸಿದ್ದೇವೆ. Against physics ನಾವು ಈ ಸಿನಿಮಾದಲ್ಲಿ ಯಾವುದನ್ನೂ ಮಾಡಿಲ್ಲ. ನನ್ನ ಹಿಂದಿನ ಸಿನಿಮಾಗಳಲ್ಲಿ ಅಪ್ಪ–ಮಗನ ಕಥೆಯಿದ್ದರೂ ಅವರಿಬ್ಬರ ನಡುವಿನ ಸಂಘರ್ಷ ಬೇರೆ ಬೇರೆಯದ್ದಾಗಿತ್ತು. ಶಿಕ್ಷಣ ಮುಗಿಯುವ ಸಂದರ್ಭದಲ್ಲಿ ಎಲ್ಲ ಕುಟುಂಬದಲ್ಲಿ ತಂದೆ ಮಗನ ನಡುವೆ ನಡೆಯುವ ಒಂದು ಸಂಘರ್ಷವನ್ನು ‘ಯುವ’ ಸಿನಿಮಾದಲ್ಲಿ ತೆಗೆದುಕೊಂಡಿದ್ದೇನೆ. ಈ ಸಿನಿಮಾವನ್ನು ತಂದೆ–ಮಗನ ಲವ್‌ಸ್ಟೋರಿ ಎನ್ನಬಹುದು. ಸಂಘರ್ಷವೂ ಇದೆ ಭಾವನಾತ್ಮಕ ದೃಶ್ಯಗಳೂ ಇವೆ. ಇವು ನನ್ನ ವೈಯಕ್ತಿಕ ಅನುಭವವೂ ಹೌದು ಸಮಾಜದಲ್ಲಿ ನೋಡಿದ ಘಟನೆಗಳೂ ಹೌದು’ ಎಂದರು.  ‘ಯುವ ಸಿನಿಮಾವನ್ನು ಒಂದು ಜವಾಬ್ದಾರಿಯಾಗಿ ತೆಗೆದುಕೊಂಡಿದ್ದೇನೆ. ನಟನೆಯಲ್ಲಿ ಯುವ ಪ್ರಬುದ್ಧತೆ ನೋಡಿ ಆಶ್ಚರ್ಯಪಟ್ಟಿದ್ದೆ. ಕಣ್ಣಿನಲ್ಲಿ ಶಿವಣ್ಣನ ಕಿಚ್ಚು ಡ್ಯಾನ್ಸ್‌ ಮತ್ತು ಫೈಟ್‌ನಲ್ಲಿ ಅಪ್ಪು ಅವರನ್ನು ಯುವ ಹೋಲುತ್ತಾನೆ. ಆದರೆ ನಟನೆಯಲ್ಲಿ ಅವರದ್ದೇ ಆದ ಸ್ವಂತಿಕೆ ಇದೆ. ‘ಯುವ’ ಸಿನಿಮಾದಲ್ಲಿ ಹೆಚ್ಚು ಹಿಂಸಾಚಾರವಿಲ್ಲ ಪ್ರೇಕ್ಷಕರು ಮುಜುಗರ ಪಟ್ಟುಕೊಳ್ಳುವಂತಹ ದೃಶ್ಯಗಳಿಲ್ಲ’ ಎನ್ನುತ್ತಾರೆ ಸಂತೋಷ್‌.            

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT