ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿಪರೀಕ್ಷೆಯಲ್ಲಿ ‘ಕಹಿ’

Last Updated 3 ನವೆಂಬರ್ 2016, 19:30 IST
ಅಕ್ಷರ ಗಾತ್ರ

‘ಈ ಶುಕ್ರವಾರ ನಮ್ಮ ಪಾಲಿಗೆ ಅಗ್ನಿಪರೀಕ್ಷೆಯ ದಿನ’ – ಕೈಲಿದ್ದ ಮೈಕನ್ನು ಇನ್ನಷ್ಟು ಬಿಗಿಯಾಗಿ ಹಿಡಿದುಕೊಳ್ಳುತ್ತಾ ತುಸು ಬೆವರಿದ್ದ ಹಣೆಯನ್ನು ಒರೆಸಿಕೊಂಡರು ಅರವಿಂದ ಶಾಸ್ತ್ರಿ.

ಅವರ ನಿರ್ದೇಶನದ ‘ಕಹಿ’ ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ. ಆ ವಿಷಯವನ್ನು ತಿಳಿಸಲಿಕ್ಕಾಗಿಯೇ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮೊದಲು ಮಾತಿಗಿಳಿದ ಅರವಿಂದ್‌ ಅವರಲ್ಲಿ, ತಮ್ಮ ಸಿನಿಮಾವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೋ ಎಂಬ ಆತಂಕವೂ ಇತ್ತು.

‘ತುಂಬ ಕಷ್ಟಪಟ್ಟು, ಅಷ್ಟೇ ಇಷ್ಟಪಟ್ಟು ಈ ಸಿನಿಮಾ ಮಾಡಿದ್ದೇವೆ. ಈ ವಾರಾಂತ್ಯಕ್ಕೆ ನಮ್ಮ ಸಿನಿಮಾ ಚಿತ್ರಮಂದಿರಗಳಲ್ಲಿರುತ್ತದೆ ಎಂಬ ಸಂಗತಿ ಕನಸಿನ ಹಾಗೆ ಭಾಸವಾಗುತ್ತಿದೆ. ನಂಬುವುದೇ ಕಷ್ಟವಾಗುತ್ತಿದೆ’ ಎನ್ನುತ್ತಾ ಅವರು ಕಲ್ಪನಾಲೋಕದಲ್ಲಿ ಮುಳುಗಿದರು.

ಅವರ ಪಕ್ಕವೇ ಕುಳಿತಿದ್ದ ಸಂಗೀತ ನಿರ್ದೇಶಕ ಮಿಧುನ್‌ ಮುಕುಂದನ್‌ ಅವರಿಗೂ ಇದು ಮೊದಲನೇ ಸಿನಿಮಾ. ಅವರಿಗಷ್ಟೇ ಅಲ್ಲ, ಈ ಸಿನಿಮಾದಲ್ಲಿ ಪಾತ್ರ ನಿರ್ವಹಿಸಿರುವ ಕೃಷಿ ತಾಪಂಡ, ಹರಿ ಶರ್ವ, ಮಾತಂಗಿ ಪ್ರಸನ್‌, ಸೂರಜ್‌ ಗೌಡ ಸೇರಿದಂತೆ ತಂಡದಲ್ಲಿನ ಅನೇಕರಿಗೆ ಇದು ಮೊದಲನೇ ಸಿನಿಮಾ. ನಾಯಕಿಯಾಗಿ ಕಾಣಿಸಿಕೊಂಡ ‘ಅಕಿರಾ’ ಚಿತ್ರ ಈಗಾಗಲೇ ಬಿಡುಗಡೆಯಾಗಿದ್ದರೂ ಮೊದಲು ನಟಿಸಿದ ‘ಕಹಿ’ ಸಿನಿಮಾದ ಪುಲಕವನ್ನು ಹಾಗೆಯೇ ಉಳಿಸಿಕೊಂಡವರಂತೆ ಮಾತನಾಡುತ್ತಿದ್ದರು ಕೃಷಿ ತಾಪಂಡ.

‘ಸ್ಕ್ರೀನ್‌ ಟೆಸ್ಟ್‌, ಫೋಟೊ ಶೂಟ್‌ ಏನೂ ಇಲ್ಲದೇ ನನ್ನನ್ನು ಕರೆದು ತಮ್ಮ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಟ್ಟ ಅರವಿಂದ್‌ ಅವರಿಗೆ ಧನ್ಯವಾದಗಳು’ ಎಂದು ನಗುತ್ತಲೇ ಹೇಳಿದ ಕೃಷಿ – ‘ಇದು ಪಕ್ಕಾ ಕಮರ್ಷಿಯಲ್‌ ಸಿನಿಮಾ ಅಲ್ಲ. ಹೊಸ ರೀತಿಯ ಪ್ರಯೋಗ. ನಮ್ಮ ನಿಜಜೀವನಕ್ಕೆ ಹತ್ತಿರವಾಗಿರುವ ಕತೆ. ಇಂಥ ಚಿತ್ರಗಳನ್ನು ಜನರು ನೋಡಿ ನಮ್ಮನ್ನು ಹರಸಬೇಕು’ ಎಂದು ಮನವಿ ಮಾಡಿಕೊಂಡರು.

‘ಕಹಿ’ ನನ್ನ ಸಿನಿಪಯಣದ ಮೊದಲ ಹೆಜ್ಜೆ. ನಾನು ನಟನಾಗಲಿಕ್ಕೆ ಅವಕಾಶ ಕೊಟ್ಟ ಸಿನಿಮಾ ಇದು. ಇಲ್ಲಿನ ನಾಲ್ಕು ಪಾತ್ರಗಳು ವಿಭಿನ್ನವಾಗಿದೆ. ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗುತ್ತದೆ’ ಎಂದು ವಿಶ್ವಾಸದಿಂದಲೇ ಹೇಳಿದರು ಸೂರಜ್‌ ಗೌಡ.

ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ತಾಪಸಿ ಪ್ರಸನ್‌ ‘ಕನ್ನಡ ಸಿನಿಮಾಗಳನ್ನು ಯುವಕರಷ್ಟೇ ಅಲ್ಲ. ಹಿರಿಯರೂ ನೋಡುವಂತಾಗಬೇಕು’ ಎಂದರು.

ಚಿತ್ರಕ್ಕೆ ಛಾಯಾಗ್ರಹಣ ಮಾಡಿರುವ ಪ್ರಶಾಂತ್‌, ನಾಲ್ಕು ಭಿನ್ನ ಪಾತ್ರಗಳನ್ನು ಭಿನ್ನವಾಗಿಯೇ ಚಿತ್ರಿಸಿದ್ದಾರಂತೆ. ‘ಬಹುತೇಕ ಸಹಜ ಬೆಳಕಿನಲ್ಲಿಯೇ ಚಿತ್ರೀಕರಿಸಿದ್ದೇವೆ. ಭಿನ್ನತೆಯನ್ನು ಕಾಪಾಡಿಕೊಳ್ಳುವುದಕ್ಕೋಸ್ಕರ ವಿಶೇಷ ತಂತ್ರಜ್ಞಾನ ಬಳಸಿಕೊಂಡಿದ್ದೇವೆ’ ಎಂದು ಅವರು ವಿವರಣೆ ನೀಡಿದರು.

ಇನ್ನೊಂದು ಮುಖ್ಯಪಾತ್ರದಲ್ಲಿ ನಟಿಸಿರುವ ಹರಿ ಶರ್ವ ‘ಏನೇನೋ ನಿರೀಕ್ಷೆಗಳನ್ನು ಇಟ್ಟುಕೊಂಡು ಚಿತ್ರಮಂದಿರಕ್ಕೆ ಬರಬೇಡಿ. ಹೊಸಬರ ಪ್ರಯತ್ನ ಇದು. ಮುಕ್ತ ಮನಸ್ಸಿನಿಂದ ಬಂದು ಚಿತ್ರ ನೋಡಿ. ಖಂಡಿತ ನಿರಾಸೆಯಾಗುವುದಿಲ್ಲ’ ಎಂದು ಭರವಸೆ ನೀಡಿದರು. ಚಿತ್ರದ ಸಹಾಯಕ ನಿರ್ದೇಶಕ ಪ್ರವೀಣ್‌ ಕುಮಾರ್‌ ಜಿ. ಮತ್ತು ಅರವಿಂದ ಶಾಸ್ತ್ರಿ ಅವರ ತಂದೆ ಭಾಸ್ಕರ್‌ ಎಚ್‌.ಎಂ.  ಹಾಡುಗಳನ್ನು ಬರೆದಿದ್ದಾರೆ.

ಮೊದಲ ಹಂತದಲ್ಲಿ 25ರಿಂದ 30 ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡಿ ಮುಂದಿನ ವಾರಗಳಲ್ಲಿ ಜನರ ಪ್ರತಿಕ್ರಿಯೆಗಳನ್ನು ನೋಡಿಕೊಂಡು ಚಿತ್ರಮಂದಿರ ಹೆಚ್ಚಿಸುವ ಯೋಚನೆ ಚಿತ್ರತಂಡದ್ದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT