ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೇನಿದ್ದರೂ ಹಣಕ್ಕಾಗಿ ನಟನೆ...

Last Updated 21 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

‘ಸಾಕಷ್ಟು ವರ್ಷ ಅಭಿನಯ ಮಾಡಿ ಆಯಿತು. ಇನ್ನು ಬೇಕಿರುವುದು ಹಣ ಅಷ್ಟೆ’- ಮನೋಜ್ ಬಾಜಪೇಯಿ ತಮ್ಮ ಮೊನಚಾದ ನೋಟದಲ್ಲೇ ಹೀಗೆ ಹೇಳಿರುವುದರ ಹಿಂದೆ ಬಿ-ಟೌನ್‌ನ ಧೋರಣೆ ಎದ್ದುಕಾಣುತ್ತಿದೆ.

‘ಸತ್ಯ’, ‘ಶೂಲ್’ ತರಹದ ಸಿನಿಮಾಗಳ ಮೂಲಕ ಮನೆಮಾತಾದ ಮನೋಜ್ ಎರಡು ದಶಕ ಕಾಲ ಚಿತ್ರರಂಗದಲ್ಲಿ ಸೈಕಲ್ ಹೊಡೆದು ಹೊಡೆದು ಸುಸ್ತಾಗಿದ್ದಾರೆ. ಇತ್ತೀಚೆಗೆ ತೆರೆಕಂಡ ‘ಸತ್ಯಾಗ್ರಹ’ ಚಿತ್ರದಲ್ಲಿ ಅವರದ್ದು ನೆಗೆಟಿವ್ ಪಾತ್ರ. ಅಂಥ ಪಾತ್ರಗಳನ್ನು ಸಲೀಸಾಗಿ ಒಪ್ಪಿಕೊಳ್ಳುವ ಜಾಯಮಾನ ಅವರದ್ದಲ್ಲ. ನಿರ್ದೇಶಕ ಪ್ರಕಾಶ್ ಝಾ ಕೇಳಿಕೊಂಡಾಗ ನಿರಾಕರಿಸಲು ಆಗಲಿಲ್ಲ. ಪ್ರಕಾಶ್ ಈ ಹಿಂದೆ ನಿರ್ದೇಶಿಸಿದ್ದ ‘ಚಕ್ರವ್ಯೆಹ್’, ‘ಅಪಹರಣ್’, ‘ರಾಜನೀತಿ’ ಮೂರೂ ಚಿತ್ರಗಳಲ್ಲಿ ಮನೋಜ್ ಅಭಿನಯಿಸಿದ್ದರು.

‘ಚಕ್ರವ್ಯೂಹ್’ ಚಿತ್ರದಲ್ಲಿ ಅವರು ನಿರ್ವಹಿಸಿದ್ದ ನಕ್ಸಲೀಯನ ಪಾತ್ರಕ್ಕೆ ಹೆಚ್ಚು ದೃಶ್ಯಗಳು ಇರಲಿಲ್ಲ. ಅಂಥ ಪಾತ್ರಗಳಲ್ಲಿ ಅಭಿನಯಿಸುವ ಅಗತ್ಯವಾದರೂ ಏನು ಎಂಬ ಪ್ರಶ್ನೆ ಮುಂದಿಟ್ಟರೆ ಮನೋಜ್ ಕೊಡುವ ಉತ್ತರ ಇದು: ‘ಪ್ರಕಾಶ್ ಮೃತ್ಯುದಂಡ್ ಸಿನಿಮಾ ಮಾಡುತ್ತಿದ್ದಾಗ ನನಗೆ ಪರಿಚಿತರಾದರು. ಅವರು ನಟನೊಬ್ಬನನ್ನು ತಲೆಯಲ್ಲಿ ಇಟ್ಟುಕೊಂಡು ಅವನಿಗೆ ಯಾವ ಪಾತ್ರ ಸೂಕ್ತ ಎಂಬುದನ್ನು ಪಕ್ಕಾ ಆಗಿ ಯೋಚಿಸಬಲ್ಲರು. ಅದು ನನಗೆ ಹಿಡಿಸಿತು. ಆ ಚಿತ್ರದಲ್ಲಿ ನನಗೆ ಪಾತ್ರವಿರಲಿಲ್ಲ. ಮುಂದೆ ಅವರು ಕರೆದಾಗ ನಾನು ಒಲ್ಲೆ ಎನ್ನಲಿಲ್ಲ. ಹಣದ ಮಾತಾಡಲಿಲ್ಲ. ಕರೆದಾಗಲೆಲ್ಲಾ ಕ್ಯಾಮೆರಾ ಎದುರು ನಿಂತೆ. ಹಣದ ಜೊತೆಗೆ ದೊಡ್ಡವರ, ಬಲ್ಲವರ ಸಾಹಚರ್ಯ ಮುಖ್ಯ ಎಂದು ನಂಬಿದವನು ನಾನು’.

ಇಂಥ ಅಭಿಪ್ರಾಯ ಹೇಳಿಕೊಂಡ ಕೆಲವೇ ದಿನಗಳಲ್ಲಿ ಮನೋಜ್ ‘ಇನ್ನು ಬೇಕಿರುವುದು ಹಣ’ ಎನ್ನುವಷ್ಟು ರೋಸಿಹೋಗಿದ್ದಾರೆ. ಯಶ್ ಚೋಪ್ರಾ ಫೋನ್ ಮಾಡಿ, ‘ವೀರ್ ಜರಾ’ ಹಿಂದಿ ಚಿತ್ರದಲ್ಲಿ ಒಂದು ಪಾತ್ರ ಕೊಟ್ಟಾಗ ಎರಡನೇ ಮಾತೇ ಇಲ್ಲದೆ ಒಪ್ಪಿಕೊಂಡವರು ಇದೇ ಮನೋಜ್. ಶ್ಯಾಮ್ ಬೆನೆಗಲ್ ‘ಜುಬೇದಾ’ ಚಿತ್ರದ ನಟನೆಗೆ ಚಿಕ್ಕಾಸನ್ನೂ ಕೊಡಲಿಲ್ಲ. ‘ಫಿಜಾ’ ಚಿತ್ರದ ಅತಿಥಿ ಪಾತ್ರ ನಿರ್ವಹಿಸಿದ್ದೂ ಪುಕ್ಕಟೆಯಾಗಿ.

ಹಣವೊಂದೇ ಮುಖ್ಯವಲ್ಲ ಎಂದುಕೊಂಡು ಎರಡು ದಶಕ ತಾವು ಸವೆಸಿದ ದಿನಗಳನ್ನು ನೆನೆಯುವಾಗ ಮನೋಜ್ ಮುಖದಲ್ಲಿ ದುಃಖವೇನೂ ಇಣುಕುವುದಿಲ್ಲ. ಬದಲಿಗೆ ಅಲ್ಲಿ ಕಾಣುವುದು ಸಾತ್ವಿಕ ಸಿಟ್ಟು. ಬಾಲಿವುಡ್ ಕೆಲವರಿಗಷ್ಟೇ ದುಡ್ಡು ಕೊಡುತ್ತಾ, ಇನ್ನು ಕೆಲವರನ್ನು ದಿವ್ಯವಾಗಿ ನಿರ್ಲಕ್ಷಿಸುತ್ತಾ ಬಂದಿರುವುದನ್ನು ಕಂಡಿರುವ ಅವರಿಗೆ ಈ ಧೋರಣೆಯ ಬಗೆಗೆ ಸಿಟ್ಟಿದೆ.

ಮೂರು ವರ್ಷದ ಹಿಂದೆ ಒಂದೂ ಸ್ಕ್ರಿಪ್ಟ್ ಇಲ್ಲದೆ ಮನೆಯಲ್ಲೇ ದೂಡಿದ ದಿನಗಳನ್ನು ಸ್ಮರಿಸಿಕೊಳ್ಳುವ ಮನೋಜ್ ಆಪ್ತವಲಯದಿಂದ ಆಗ ಎದುರಾದ ಅನುಮಾನಗಳನ್ನು ಮುಚ್ಚುಮರೆಯಿಲ್ಲದೆ ಹೇಳಿಕೊಳ್ಳುತ್ತಾರೆ. ‘ನಾನು ಮನುಷ್ಯ. ದುರಾಸೆ ಇಲ್ಲ. ಗ್ಯಾಂಗ್ಸ್ ಆಫ್ ವಸೇಪುರ್‌ನ ಎರಡೂ ಅವತರಣಿಕೆಯ ಚಿತ್ರಗಳಲ್ಲಿ ನಟಿಸಿದೆ. ಪ್ರಕಾಶ್ ಝಾ ಪ್ರತಿಭೆಯ ಮೇಲೆ ನನಗೆ ತುಂಬಾ ನಂಬಿಕೆ ಇರುವುದರಿಂದ ಅವರು ಸಣ್ಣ ಪಾತ್ರ ಕೊಟ್ಟರೂ ಕಣ್ಣಿಗೆ ಒತ್ತಿಕೊಂಡೆ. ಕೆಲವರು ಅದನ್ನೇ ಉದಾಹರಣೆಯಾಗಿಟ್ಟುಕೊಂಡು ಕಾಲ್‌ಷೀಟ್ ಕೇಳಲು ಬರುತ್ತಾರೆ. ಯಾರ್ಯಾರಿಗೋ ಕಾಲ್‌ಷೀಟ್ ಕೊಡಲು ನನಗಿಷ್ಟವಿಲ್ಲ. ಆದರೆ, ಹಣವಿಲ್ಲದೆ ಬದುಕು ನಡೆಯುವುದಿಲ್ಲ. ಹಾಗಾಗಿ ಈಗ ನಾನು ಹೆಚ್ಚು ಸಂಭಾವನೆ ನಿರೀಕ್ಷಿಸುತ್ತೇನೆ. ನನ್ನ ಪಾತ್ರವನ್ನು ಎಷ್ಟು ಸಾಧ್ಯವೋ ಅಷ್ಟೂ ಉತ್ತಮಪಡಿಸಬಲ್ಲೆ ಎಂಬ ಆತ್ಮವಿಶ್ವಾಸವೂ ನನಗಿದೆ.’- ಮನೋಜ್‌ರ ಈ ಮಾತು ಬಿ-ಟೌನ್‌ನ ವಾಸ್ತವಕ್ಕೆ ಕನ್ನಡಿ ಹಿಡಿಯುತ್ತದೆ.

ಮುಂದಿನ ಹತ್ತು ಹದಿನೈದು ವರ್ಷಕ್ಕೆ ಕನಿಷ್ಠ ನೂರು ಚಿತ್ರಗಳಲ್ಲಿ ಅಭಿನಯಿಸಬೇಕೆಂಬುದು ಮನೋಜ್ ಮಹತ್ವಾಕಾಂಕ್ಷೆ. ತಮ್ಮ ಮಕ್ಕಳು, ಮರಿಮಕ್ಕಳ ವಾರಗೆಯವರು ಆ ಚಿತ್ರಗಳ ಕಡೆ ಕಣ್ಣಾಡಿಸಿದಾಗ, ಯಾವುದೂ ಮಿಸ್ ಮಾಡಿಕೊಳ್ಳುವ ಹಾಗಿಲ್ಲ ಎನ್ನುವಂತಿರಬೇಕು ಎಂಬ ಹೆಬ್ಬಯಕೆಯೂ ಅವರಿಗಿದೆ. ಕನಸನ್ನು ದೊಡ್ಡದಾಗಿ ಕಾಣುವುದರಲ್ಲಿ ತಪ್ಪೇನಿದೆ ಎಂಬ ಪ್ರಶ್ನೆಯನ್ನು ನಗುವ ಬೆರೆಸಿ ಕೇಳುವ ಮನೋಜ್‌ಗೆ ಮಲ್ಪಿಪ್ಲೆಕ್ಸ್ ಸಂಸ್ಕೃತಿ ತಂದೊಡ್ಡಿರುವ ಬದಲಾವಣೆ ಅಷ್ಟೇನೂ ಇಷ್ಟವಾಗಿಲ್ಲ.

‘ಸತ್ಯ’ ಸಿನಿಮಾ ಬಂದಾಗ ಮಲ್ಪಿಪ್ಲೆಕ್ಸ್‌ಗಳು ಇರಲಿಲ್ಲ. ಆಗ ಐವತ್ತು, ನೂರು ದಿನ ಸಿನಿಮಾಗಳು ಓಡುತ್ತಿದ್ದವು. ಜನ ನಿರಂತರವಾಗಿ ಅವುಗಳ ಕುರಿತು ಮಾತನಾಡುತ್ತಿದ್ದರು. ಈಗ ಸಿನಿಮಾಗಳು ಬಿಡುಗಡೆಯಾಗುತ್ತವೆ. ಮಲ್ಪಿಪ್ಲೆಕ್ಸ್‌ಗಳಲ್ಲಿ ಹಣ ದೋಚುತ್ತವೆ. ಲಾಭದ ಸಿಂಹಪಾಲು ಸ್ಟಾರ್‌ಗಳಿಗೆ, ನಿರ್ಮಾಪಕರಿಗೆ, ನಿರ್ದೇಶಕರಿಗೆ ಸೇರುತ್ತದೆ. ತಮ್ಮಂಥ ನಟ-ನಟಿಯರನ್ನು ಉದ್ಯಮ ಹಣಕಾಸಿನ ವಿಷಯದಲ್ಲಿ ನಿರ್ಲಕ್ಷಿಸುತ್ತದೆ ಎಂಬುದು ಮನೋಜ್ ಅಳಲು.

ಮನೆಯ ಕದವನ್ನು ಯಾರಾದರೂ ನಿರ್ಮಾಪಕರು ತಟ್ಟಿದರೆ ಈಗ ಮನೋಜ್ ಬಾಯಿಂದ ಹೊಮ್ಮುವ ಮೊದಲ ಪ್ರಶ್ನೆ- ‘ಹಣ ಎಷ್ಟು ಕೊಡುತ್ತೀರಿ?’!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT