ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರು ಜವ್ವನಿಗನ ಕಣ್ಣಾಮುಚ್ಚಾಲೆ

Last Updated 4 ಜುಲೈ 2013, 19:59 IST
ಅಕ್ಷರ ಗಾತ್ರ

ಟ ರಂಗಾಯಣ ರಘು ಮತ್ತೆ ಯೌವನಕ್ಕೆ ಮರಳಿದ್ದಾರೆ. ಕಣ್ಣಾಮುಚ್ಚೆ ಕಾಡೇ ಗೂಡೆ ಎಂದು `ಐಸ್‌ಪೈಸ್' ಆಟ ಶುರುಮಾಡಿದ್ದಾರೆ. ಅವರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿರುವುದು ನಟಿಯರಾದ ನೀತು ಮತ್ತು ಸಿಂಧೂ ರಾವ್. `ಸಾತ್ವಿಕ ಆಹಾರ ತಿಂದು ಸಣ್ಣಗಾಗಲು ಪ್ರಯತ್ನಿಸುತ್ತಿದ್ದೇನೆ' ಎಂದು ನಗೆ ಚಿಮ್ಮಿಸಿದ ರಂಗಾಯಣ ರಘು ಮತ್ತೆ ನಾಯಕನ ಪಟ್ಟ ಅಲಂಕರಿಸುವಾಗ ದೇಹದ ತೂಕವನ್ನು ಕಡಿಮೆಗೊಳಿಸುವ ಬಗ್ಗೆ ಆಸ್ಥೆ ತೋರುತ್ತಿದ್ದಾರೆ.

`ಮರ ಸುತ್ತುತ್ತೇನೋ, ನಾಯಕಿ ನೀತುವನ್ನೇ ಸುತ್ತುತ್ತೇನೋ ಗೊತ್ತಿಲ್ಲ' ಎಂದು ಅವರು ಹೇಳುವ ಮಾತಿನಲ್ಲೇ ಅವರಿಗಾಗಿ ಚಿತ್ರದಲ್ಲಿ ಪ್ರೇಮಗೀತೆಗಳಿವೆ ಎಂಬುದರ ಸುಳಿವಿತ್ತು. ಪುಟ್ಟದೊಂದು ಹೊಡೆದಾಟದ ಸನ್ನಿವೇಶವೂ ಚಿತ್ರದಲ್ಲಿದೆ. ಈ ಹೊಡೆದಾಟಕ್ಕೆ ಸಿಕ್ಸ್‌ಪ್ಯಾಕ್ ಏನೂ ಬೇಕಿಲ್ಲ ಎಂಬುದು ಅವರ ಸಮಜಾಯಿಷಿ. ಯೌವನಭರಿತ ಪಾತ್ರ ತಮ್ಮದು ಎಂದು ನಕ್ಕರು ಅವರು. ಅರಬ್ ಪ್ರಜೆಯ ಶೈಲಿಯಲ್ಲಿ ಗಡ್ಡ, ಕೇಶ ವಿನ್ಯಾಸ ಮಾಡಿಸಿಕೊಂಡಿದ್ದ ಅವರು ಚಿತ್ರದಲ್ಲಿ ಬಿಜಿನೆಸ್‌ಮ್ಯಾನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಶಿವಸಾಯಿ ಕೃಷ್ಣ
ಸಾಗರ್ ನಾಗಭೂಷಣ್

`ಐತಲಕ್ಕಡಿ', `ರಾಮ ರಾಮ ರಘುರಾಮ' ಚಿತ್ರಗಳಲ್ಲಿ ರಂಗಾಯಣ ರಘು ನಾಯಕ ಪೋಷಾಕು ಧರಿಸಿದ್ದರು. `ಸುಗ್ಗಿ' ಚಿತ್ರದಲ್ಲಿ ತಂದೆಯ ಪಾತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರಿಗೆ ಪಾತ್ರಗಳಲ್ಲಿನ ಹಿಮ್ಮುಖ ಚಲನೆಗೆ ಒಗ್ಗಿಕೊಳ್ಳುವುದು ಕಷ್ಟವೆನಿಸಿಲ್ಲ. `ಐಸ್‌ಪೈಸ್' ಮನೆಯೊಳಗೆ ನಡೆಯುವ ಕಥನ ಎಂಬುದು ಅವರ ವಿವರಣೆ. ಹಾಸ್ಯ ಮಾತ್ರವಲ್ಲ, ವ್ಯಾಪಾರೀ ಚಿತ್ರದಲ್ಲಿ ಇರಬೇಕಾದ ಎಲ್ಲಾ ಅಂಶಗಳೂ ಚಿತ್ರದಲ್ಲಿವೆ ಎಂಬ ಸುಳಿವು ನೀಡಿದರು ಅವರು.

ಹಲವು ನಿರ್ದೇಶಕರ ಬಳಿ ಕೆಲಸ ಮಾಡಿ ಅನುಭವವಿರುವ ಶಿವಸಾಯಿ ಕೃಷ್ಣ ಮೊದಲ ಬಾರಿಗೆ ಸ್ವತಂತ್ರವಾಗಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಒಂದೂವರೆ ವರ್ಷದ ಹಿಂದೆಯೇ ಅವರು ಕಥೆ ಸಿದ್ಧಪಡಿಸಿಕೊಂಡಿದ್ದರು. ಆಕರ್ಷಕವಾಗಿರಲಿ ಎಂಬ ಕಾರಣಕ್ಕೆ `ಐಸ್‌ಪೈಸ್' ಎಂಬ ಹೆಸರಿಡಲಾಗಿದೆಯೇ ಹೊರತು, ಶೀರ್ಷಿಕೆಗೂ ಸಿನಿಮಾಕ್ಕೂ ಸಂಬಂಧವಿಲ್ಲ. ವರ್ಷಗಳ ಹಿಂದೆ ಇದೇ ಹೆಸರಿನ ಸಿನಿಮಾ ಸೆಟ್ಟೇರಿ ನಿಂತುಹೋಗಿತ್ತು.

ಸಾಗರ್ ನಾಗಭೂಷಣ್ ಆರು ಹಾಡುಗಳಿಗೆ ಮಟ್ಟು ಹಾಕಲಿದ್ದಾರೆ. ಎಚ್.ಎಸ್. ವೆಂಕಟೇಶಮೂರ್ತಿ ಅವರ `ರಾತ್ರಿ ಹೊತ್ತು ಮಳೆ ಬರುತ್ತಿತ್ತು...' ಗೀತೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಇಬ್ಬರು ನಾಯಕಿಯರಲ್ಲಿ ನೀತು ಗೈರುಹಾಜರಾಗಿದ್ದರು. ಮೈಸೂರು ಮೂಲದ ಸಿಂಧೂರಾವ್ ಅವರಿಗಿದು ಮೊದಲ ಚಿತ್ರ.

ಎಬಿಸಿಎಲ್ ಕಂಪೆನಿಯಲ್ಲಿ ಕಿರುತೆರೆ ಕಾರ್ಯಕ್ರಮಗಳನ್ನು ನಿರ್ಮಿಸಿ ಅನುಭವ ಹೊಂದಿರುವ ಸುರೇಶ್ ಮುತ್ತಪ್ಪ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಇವರಿಗೆ ಆಸರೆಯಾಗಿ ನಿಂತಿರುವವರು ಪತ್ರಕರ್ತ ವಿ.ಸಿ.ಎನ್. ಮಂಜುನಾಥ್. ಕಾರ್ಯಕಾರಿ ನಿರ್ಮಾಪಕರಾಗಿರುವ ಮಂಜುನಾಥ್, ಹಾಡೊಂದನ್ನು ಹೊಸೆದಿದ್ದಾರೆ. ಬೆಂಗಳೂರು, ಮೈಸೂರು, ಮಡಿಕೇರಿ, ಕುಮಟಾ ಮುಂತಾದೆಡೆ ಚಿತ್ರೀಕರಣ ನಡೆಸುವ ಉದ್ದೇಶ ಅವರದು.           

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT