ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಶ್ವರ್ಯ ನಂ. 2

Last Updated 24 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನ್ನಡ ಸಿನಿಮಾದಲ್ಲಿ ಈಗಾಗಲೇ ಐಶ್ವರ್ಯ ಹೆಸರಿನ ನಟಿಯೊಬ್ಬರು ಇದ್ದಾರೆ. ‘ಸಪ್ನೊಂಕಿ ರಾಣಿ’ ಚಿತ್ರದ ಮೂಲಕ ಮತ್ತೊಬ್ಬ ಐಶ್ವರ್ಯ ಕನ್ನಡ ಚಿತ್ರರಂಗಕ್ಕೆ ದಕ್ಕಿದ್ದಾರೆ. ಅಡುಗೆ ಮನೆಯಲ್ಲಿ ಸೌಟು ಹಿಡಿದು ನಳಪಾಕ ತಯಾರಿಸುವ ಅತ್ಯುತ್ಸಾಹ ಹೊಂದಿದ್ದ ಈ ಹುಡುಗಿಗೆ ಸಿನಿಮಾ ಅಚಾನಕ್ಕಾಗಿ ಒಲಿದ ಅದೃಷ್ಟ! ಅಂದಹಾಗೆ, ಕನ್ನಡ ಚಿತ್ರರಂಗಕ್ಕೆ ಪರಿಚಯಗೊಳ್ಳುವ ಸ್ಥಳೀಯ ಬೆಡಗಿಯರಲ್ಲಿ ಬಹುಪಾಲು ಕರಾವಳಿ ಅಥವಾ ಕೊಡಗು ಪರಿಸರಕ್ಕೆ ಸೇರಿದವರು. ಈ ಮಾತಿಗೆ ಐಶ್ವರ್ಯ ಅಪವಾದ. ಮೆಣಸಿನ ಘಾಟಿನ ಬ್ಯಾಡಗಿ ಮೂಲದ ಪ್ರತಿಭೆ ಇವರು.

ಬಣ್ಣದ ನಂಟು ಬೆಳೆಸು ಆಲೋಚನೆ ಅಥವಾ ಆಸೆಯಾ ಐಶ್ವರ್ಯ ಸಿಂಧೋಗಿ ಅವರಲ್ಲಿರಲಿಲ್ಲ. ಆದರೆ ಪದವಿಪೂರ್ವ ಶಿಕ್ಷಣದ ವ್ಯಾಸಂಗದ ವೇಳೆ ಸ್ನೇಹಿತರೊಬ್ಬರು ‘ಲಕ್ಕಿ’ ಚಿತ್ರದಲ್ಲಿ ಕೊಡಿಸಿದ ಪುಟ್ಟಪಾತ್ರದಿಂದ ಅವರು ತೆರೆಗೆ ಬರುವಂತಾಯಿತು. ನಂತರ ‘ಸ್ವೀಟಿ’ಯಲ್ಲೂ ಪ್ರೇಕ್ಷಕನ ಅರಿವಿಗೆ ಬಾರದಂತಿರುವ ಪಾತ್ರದಲ್ಲಿ ಬಂದು ಹೋದರು. ‘ಆಫ್‌ಮೆಂಟಲ್‌’ ಚಿತ್ರದಲ್ಲಿ ಸೋನೆಯಲ್ಲಿ ಸೊಂಟ ಕುಲುಕಿಸುವ ಅವಕಾಶ ಸಿಕ್ಕಾಗಲೇ ಗಾಂಧಿನಗರದ ಕಣ್ಣೋಟಕ್ಕೆ ಐಶ್ವರ್ಯ ಸಿಕ್ಕಿದ್ದು. ನೃತ್ಯ ನಿರ್ದೇಶಕ ಹೈಟ್‌ ಮಂಜು, ‘ಸಪ್ನೊಂಕಿ ರಾಣಿ’ ಚಿತ್ರದ ನಿರ್ಮಾಪಕರಿಗೆ ಪರಿಚಯಿಸಿ ಐಶ್ವರ್ಯಗೆ ನಾಯಕಿಯಾಗಿ ಬಡ್ತಿ ಕೊಡಿಸಿದರು. ಅದೃಷ್ಟ ಮತ್ತು ಅಚ್ಚರಿ ಎನ್ನುವಂತೆ ಮೊದಲ ಚಿತ್ರದ ಕನವರಿಕೆಯಲ್ಲಿರುವಾಗಲೇ ಸಿನಿಮಾ ಅವರಿಗೆ ಸೌಭಾಗ್ಯವಾಗಿ ಪರಿಣಮಿಸಿದೆ. ನಟ ವಿಜಯ್ ಅವರ ‘ಸಿಂಹಾದ್ರಿ’ ಮತ್ತು ‘ಜಾಕ್ಸನ್‌’ ಚಿತ್ರಗಳಲ್ಲೂ ಅವಕಾಶ ಪಡೆಯುವ ಜತೆಗೆ ಸಾಲು ಸಾಲು ಚಿತ್ರಕಥೆಗಳನ್ನೂ ಕೇಳಿದ್ದಾರೆ. ತಮಿಳು ಮತ್ತು ತೆಲುಗಿನ ನಿರ್ದೇಶಕರು ಆಫರ್‌ಗಳನ್ನು ಎದುರಿಗಿಟ್ಟಿದ್ದಾರೆ.

‘ಸಿನಿಮಾ ಮ್ಯಾಗ್ನೆಟ್ ಇದ್ದ ರೀತಿ. ಒಮ್ಮೆ ಅದರ ಸೆಳೆತಕ್ಕೆ ಸಿಕ್ಕರೆ ಬಿಡಿಸಿಕೊಳ್ಳುವುದು ಕಷ್ಟ. ಗಂಡುಬೀರಿ ವ್ಯಕ್ತಿತ್ವದವಳು ನಾನು. ಭಯ, ವೇದಿಕೆ ಭಯ ಮೊದಲಿನಿಂದಲೂ ಇಲ್ಲ. ಆದರೆ ಮೊದಲ ಬಾರಿ ನಾಯಕಿಯಾದಾಗ ಭಯವಾಯಿತು. ಎಲ್ಲಿ ನಿರ್ದೇಶಕರ ಆಕಾಂಕ್ಷೆಗೆ ತಕ್ಕಂತೆ ನಟಿಸುವುದಿಲ್ಲ, ನಿರ್ಮಾಪಕರು ಬಂಡವಾಳ ಹೂಡಿದರೆ ವಾಪಸು ಬರುತ್ತದಾ ಎಂದು. ಚಿತ್ರ ಸಾಗುತ್ತ ಎಲ್ಲವೂ ಸುಸೂತ್ರವಾಯಿತು’ ಎನ್ನುತ್ತಾರೆ.

ಹೋಟೆಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಯಾಗಿರುವ ಐಶ್ವರ್ಯ ಬಣ್ಣದ ಸಖ್ಯಕ್ಕೆ ಸಿಕ್ಕದಿದ್ದರೆ ಚೆಫ್‌ ಆಗುತ್ತಿದ್ದರು. ಪ್ರೇಕ್ಷಕನಿಗೆ ನಟನೆಯ ಮೂಲಕ ರಸಾನುಭವ ಉಂಟು ಮಾಡುವಂತೆ, ರೆಸ್ಟೋರೆಂಟ್‌ ತೆರೆದು ಮೃಷ್ಟಾನ್ನ ತಯಾರಿಸುವುದು ಅವರ ಜೀವನದ ಮುಖ್ಯಗುರಿಗಳಲ್ಲಿ ಒಂದು. ‘ಅಡುಗೆ ಮಾಡುವುದು ತುಂಬಾ ಇಷ್ಟ. ಶಿಕ್ಷಣ ಮುಗಿಸಿದ ತರುವಾಯ ರೆಸ್ಟೋರೆಂಟ್ ಆರಂಭಿಸುವೆ. ಅಪ್ಪನ ಊರಿನ ಪಲ್ಯಗಳನ್ನು ತಯಾರಿಸುವುದನ್ನು ಕಲಿತ್ತಿದ್ದೇನೆ. ರೊಟ್ಟಿ ತಟ್ಟುವುದನ್ನು ಕಲಿಯಬೇಕು’ ಎಂದು ಮುಗುಳ್ನಗುತ್ತಾರೆ.  

‘ಸಪ್ನೊಂಕಿರಾಣಿ ನನ್ನಲ್ಲಿ ವಿಶ್ವಾಸ ಮೂಡಿಸಿದ ಚಿತ್ರ. ಸಿಂಹಾದ್ರಿ ಅಣ್ಣ–ತಂಗಿ ಕಥೆ ಆಧರಿಸಿದ ಹಳ್ಳಿ ಸೊಗಡು ಹೊಂದಿದೆ. ಚಿತ್ರದಲ್ಲಿ ಮಳೆಯಲ್ಲಿ ಗರ್ಭಿಣಿ ನೆನೆಯುವ ಹಾಡು ಬರುತ್ತದೆ. ತುಂಬಾ ನೆನಪಿನಲ್ಲಿ ಉಳಿಯುತ್ತದೆ ಅದು. ನನಗೆ ಇನ್ನೂ 19 ವರುಷ, ಗರ್ಭಿಣಿಯ ಪಾತ್ರ ಮಾಡಬೇಕು. ಅಮ್ಮನಿಂದ ಗರ್ಭಿಣಿಯ ತೊಳಲಾಟ ಮತ್ತು ಭಾವನೆಗಳನ್ನು ತಿಳಿದುಕೊಂಡೆ’ ಎಂದು ನಟನೆಯ ಕುರಿತ ತಮ್ಮ ಬದ್ಧತೆಯನ್ನು ಐಶ್ವರ್ಯ ಹೇಳಿಕೊಳ್ಳುತ್ತಾರೆ.

ಗ್ಲಾಮರ್ ಮತ್ತು ಎಕ್ಸ್‌ಪೋಸ್‌ ನಡುವೆ ಐಶ್ವರ್ಯ ಸ್ಪಷ್ಟವಾದ ರೇಖೆ ಗುರ್ತಿಸಿಕೊಂಡಿದ್ದಾರೆ. ‘ಎಕ್ಸ್‌ಪೋಸ್‌ ವಿಚಾರದಲ್ಲಿ ಅಸಹ್ಯಪಡುವಂತಹದ್ದು ಏನೂ ಇಲ್ಲ. ಗ್ಲಾಮರ್ ಸಿನಿಮಾಕ್ಕೆ ಅನಿವಾರ್ಯ’ ಎನ್ನುತ್ತಾರೆ. ಪಡ್ಡೆ ಹುಡುಗರ ಮನವನ್ನು ಕದಡುವಂತೆ ಚಳಿ ಬಿಟ್ಟು ಐಟಂ ಹಾಡಿಗೆ ಕುಣಿಯುವ ಆಸೆ ಅವರಿಗಿದೆ. ಇದನ್ನು ಪ್ರತಿಷ್ಠೆಯಾಗಿ ಪರಿಗಣಿಸುವುದಾಗಿಯೂ ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT