ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬೀರ ನಂ.3

Last Updated 26 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಸಂತ ಕಬೀರರ ಬದುಕು ಆಧರಿಸಿದ ‘ಸಂತೆಯಲ್ಲಿ ನಿಂತ ಕಬೀರ’ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ನಟ ಶಿವರಾಜ್‌ಕುಮಾರ್ ‘ಗಂಡುಗಲಿ ಕುಮಾರರಾಮ’ ಚಿತ್ರದ ನಂತರ ಐತಿಹಾಸಿಕ ಕಥಾ ಹಂದರದ ಚಿತ್ರಕ್ಕೆ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಯುಗಾದಿಯ ಶುಭದಿನದಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಚಿತ್ರದ ಮುಹೂರ್ತ ನಡೆಯಿತು.

ಖ್ಯಾತ ಸಾಹಿತಿ ಭೀಷ್ಮ ಸಹಾನಿ ಅವರ ‘ಕಬೀರ್ ಖಡಾ ಬಜಾರ್‌ ಮೆ’ ಎಂಬ ಕೃತಿ ಆಧರಿಸಿ ಇಂದ್ರಬಾಬು ಚಿತ್ರಕಥೆ ಹೆಣೆದಿದ್ದಾರೆ. ತನಗನ್ನಿಸಿದ್ದನ್ನು ಅತ್ಯಂತ ಪ್ರಾಮಾಣಿಕವಾಗಿ ಹೇಳುತ್ತಿದ್ದದ್ದು ಕಬೀರರ ವಿಶೇಷ. ಜನರಲ್ಲಿ ಕಬೀರರ ಬಗ್ಗೆ ಈವರೆಗೆ ಬೇರೆಯದೇ ಆದ ಭಾವನೆಗಳು ಇದ್ದವು. ಆದರೆ ಕಬೀರ ಹೀಗೂ ಇದ್ದರು ಎಂದು ಪ್ರಚುರಪಡಿಸುವುದು ನಿರ್ದೇಶಕರ ಬಯಕೆ.

‘ಎರಡು ವರ್ಷಗಳಿಂದಲೂ ಈ ಸಿನಿಮಾದ ಚಿತ್ರಕಥೆ ರೆಡಿ ಮಾಡುತ್ತಿದ್ದೆ. 1440ರಿಂದ 1518ರವರೆಗೆ ಜೀವಿಸಿದ್ದ ಕಬೀರರ ಬದುಕಿನ ಪ್ರತೀ ಎಳೆಯನ್ನೂ ದೃಶ್ಯರೂಪಕ್ಕೆ ಅಳವಡಿಸುವುದು ನನ್ನ ಉದ್ದೇಶ. ಹಾಗೆಂದು ಎಲ್ಲಿಯೂ ಅವರ ಮೂಲಜೀವನಕ್ಕೆ ಅಪಚಾರವಾಗದಂತೆ ನೋಡಿ ಕೊಳ್ಳುವುದು ಸವಾಲು’ ಎಂಬ ಸ್ಪಷ್ಟನೆ ಅವರದು.

ಚಿಕ್ಕವರಿರುವಾಗಲೇ ಕಬೀರರ ದೋಹಾ ಗಳನ್ನು ಓದಿ ಪ್ರಭಾವಿತರಾಗಿದ್ದವರು ಶಿವರಾಜ್‌ಕುಮಾರ್‌. ಈಗ ಈ ಚಿತ್ರದಲ್ಲಿ ಕಬೀರನ ಪಾತ್ರ ನಿರ್ವಹಿಸಲು ಅದೂ ಪ್ರೇರಣೆ ಎಂಬುದು ಅವರ ಅಭಿಪ್ರಾಯ. ಗೌರವ ಡಾಕ್ಟರೇಟ್ ಪುರಸ್ಕಾರದ ಬಳಿಕ ಉತ್ತಮವಾದ ಪಾತ್ರಕ್ಕಾಗಿ ಅವರು ಕಾಯುತ್ತಿದ್ದರಂತೆ. ಅದೀಗ ಕೂಡಿಬಂದಿದೆ ಎಂದು ಖುಷಿ ಹಂಚಿಕೊಂಡರು ಶಿವಣ್ಣ. ಮಲಯಾಳಂನ ಗೀತಾ ಸನುಷಾ ಈ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ಸಂಭಾಷಣೆ ಹಾಗೂ ಆರು ಹಾಡುಗಳನ್ನು ಗೋಪಾಲ ವಾಜಪೇಯಿ ಬರೆದಿದ್ದಾರೆ. ಈ ಮೊದಲು ಸಹಾನಿ ಅವರ ಕೃತಿಯನ್ನು ಅವರು ‘ಸಂತ್ಯಾಗ ನಿಂತಾನ ಕಬೀರ‘ ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದವರು. ಬಾಲಿವುಡ್‌ನ ಸಂಗೀತ ನಿರ್ದೇಶಕ ಇಸ್ಮಾಯಿಲ್ ದರ್ಬಾರ್ ಈ ಚಿತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಹಿರಿಯ ನಟ ದತ್ತಣ್ಣ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಪುನೀತ್ ರಾಜ್‌ಕುಮಾರ್ ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ತಮಿಳು ನಟ ಹಾಗೂ ಕನ್ನಡಿಗ ಶರತ್ ಕುಮಾರ್, ಬಾಲಿವುಡ್‌ನ ಹಿರಿಯ ಕಲಾವಿದ ಓಂಪುರಿ ಕೂಡ ಪಾತ್ರ ನಿರ್ವಹಿಸಲಿದ್ದಾರೆ. ಬಾಬು ಜೊತೆ ‘ಕಬಡ್ಡಿ’ ಚಿತ್ರದಲ್ಲಿ ಕೆಲಸ ಮಾಡಿದ್ದ ನವೀನ್, ಈ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ.

ಕಾವೇರಿ ನದಿಪಾತ್ರದಲ್ಲಿ ವಿಶೇಷ ಸೆಟ್‌ ಹಾಕಿ, ಬಹುತೇಕ ಭಾಗದ ಚಿತ್ರೀಕರಣ ನಡೆಸಲಾಗುವುದು. ಬಳಿಕ ಕಾಶಿ ಹಾಗೂ ಇತರೆಡೆಗಳಲ್ಲಿ ಶೂಟಿಂಗ್ ನಡೆಸಲು ಚಿತ್ರತಂಡ ಯೋಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT