ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಜಿ’ನ ಕನ್ನಡಿಯಲ್ಲಿ ತರತಮದ ಬಿಂಬ

Last Updated 7 ಜೂನ್ 2018, 19:30 IST
ಅಕ್ಷರ ಗಾತ್ರ

ಸಮಾಜ ಎಷ್ಟೇ ಮುಂದುವರಿದಿದೆ ಎಂದರೂ ವರ್ಗ ವರ್ಗಗಳ ನಡುವಿನ ತರತಮ ಹೆಚ್ಚುತ್ತಲೇ ಇದೆ. ಕಂದರದ ಆಳ ಅಗಲ ಬೆಳೆಯುತ್ತಲೇ ಇದೆ. ಬಡವರ ಪರಿಸ್ಥಿತಿ ಇನ್ನಷ್ಟು ದುರ್ಭರವಾಗುತ್ತಿರುವ ಹಾಗೆಯೇ ಶ್ರೀಮಂತರ ಬಳಿ ಸಂಪತ್ತು ಕೂಡುತ್ತಲೇ ಇದೆ. ಈ ತರತಮದ ಎಳೆಯನ್ನಿಟ್ಟುಕೊಂಡೇ ರೂಪುಗೊಂಡಿರುವ ಕಿರುಚಿತ್ರ ‘ಕಾಜಿ’.

ನಟಿ ಐಶಾನಿ ಶೆಟ್ಟಿ ಅವರು ಬರೆದು ನಿರ್ದೇಶಿಸಿರುವ ಈ ಕಿರುಚಿತ್ರವನ್ನು ನೀನಾಸಂ ಸತೀಶ್ ನಿರ್ಮಾಣ ಮಾಡಿದ್ದಾರೆ. ಕಾಜಿ ಎಂದರೆ ಬಳೆ ಎಂಬ ಅರ್ಥ ಇದೆ. ಕಥೆಯ ಎಳೆಗೂ ಬಳೆಗೂ ಸಂಬಂಧವೂ ಇದೆ.  ಇತ್ತೀಚೆಗೆ ಮಾಧ್ಯಮದ ‘ಕಾಜಿ’ ಚಿತ್ರದ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಎಂಟು ವರ್ಷದ ಮಗನಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಎಂಬ ಉದ್ದೇಶದಿಂದ ಅಮ್ಮ ಮನೆಗೆಲಸಕ್ಕೆ ಹೋಗುತ್ತಿರುತ್ತಾಳೆ. ಅವಳು ವಿಧವೆ. ಅವಳ ಒಡತಿಯ ಮಗಳು ಮತ್ತು ಅವಳ ಮಗ ಇಬ್ಬರೂ ಒಂದೇ ಶಾಲೆಯಲ್ಲಿ ಓದುತ್ತಿರುತ್ತಾರೆ. ಮಕ್ಕಳಲ್ಲಿ ಇಲ್ಲದ ಭೇದ ಭಾವವನ್ನು ಹಿರಿಯರೇ ಹುಟ್ಟುಹಾಕುವ ಸೂಕ್ಷ್ಮಸಂಗತಿಗಳನ್ನು ಕಿರುಚಿತ್ರದಲ್ಲಿ ತೋರಿಸಲಾಗಿದೆ.

ನಮ್ಮ ಸಮಾಜದಲ್ಲಿ ಬೇರೂರಿರುವ ಈ ರೋಗರೂಪಿ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ತೋರಿಸುವ ಈ ಕಿರುಚಿತ್ರ ಯಾವುದೇ ನಿರ್ಣಯವನ್ನು ಮಂಡಿಸುವ ಗೋಜಿಗೆ ಹೋಗುವುದಿಲ್ಲ. ಸಿನಿಮೀಯವಾಗಿ ಶುಭಾಂತ್ಯ ತೋರಿಸುವ ಅತಿಶಯಕ್ಕೂ ಇಳಿಯುವುದಿಲ್ಲ. ವಾಸ್ತವವನ್ನು ಹಾಗೆಯೇ ತೋರಿಸಿ ನೋಡುಗರ ಮನಸಲ್ಲಿ ಮಂಥನವಾಗಲು ಬಿಟ್ಟುಬಿಡುವುದರಲ್ಲಿಯೇ ಈ ಕಿರುಚಿತ್ರದ ಯಶಸ್ಸಿದೆ.

ಐಶಾನಿ ಶೆಟ್ಟಿ ಅವರಿಗೆ ಮೊದಲಿನಿಂದಲೂ ಸಣ್ಣ ಕತೆಗಳನ್ನು ಬರೆಯುವ ಹವ್ಯಾಸವಿತ್ತಂತೆ. ಅವರು ಉತ್ತರ ಕರ್ನಾಟಕದ ಸ್ಥಳಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಕಂಡ ಘಟನೆಯೊಂದನ್ನು ಇಟ್ಟುಕೊಂಡು ‘ಕಾಜಿ’ ಚಿತ್ರದ ಕಥೆ ಬರೆದಿದ್ದಾರೆ. ‘ಈ ಕಥೆಯನ್ನು ಸತೀಶ್‌ಗೆ ಹೇಳಿದಾಗ ಖುಷಿಯಿಂದ ನಿರ್ಮಾಣ ಮಾಡಲು ಒಪ್ಪಿಕೊಂಡರು‍’ ಎಂದು ಅವರು ಹೇಳಿಕೊಂಡರು. ಕಥೆ ಉತ್ತಮವಾಗಿರುವ ಕಾರಣಕ್ಕೆ ಕಲಾವಿದರು, ತಂತ್ರಜ್ಞರು ಎಲ್ಲರೂ ಯಾವುದೇ ಸಂಭಾವನೆ ಪಡೆದುಕೊಳ್ಳದೆ ಕೆಲಸ ಮಾಡಿದ್ದಾರಂತೆ.

ಪ್ರೀತಂ ತಗ್ಗಿನಮನೆ ಸಿನಿಮಾಟೋಗ್ರಫಿ, ಮಿಥುನ್ ಮುಕುಂದನ್ ಸಂಗೀತ, ಹರಿ ಅವರ ಧ್ವನಿವಿನ್ಯಾಸ ಈ ಕಿರುಚಿತ್ರಕ್ಕಿದೆ. ವಿಧವೆಯ ಪಾತ್ರದಲ್ಲಿ ಹಿತಾ ಚಂದ್ರಶೇಖರ್ ನಟಿಸಿದ್ದಾರೆ. ಮಗನ ಪಾತ್ರದಲ್ಲಿ ಮಧುರಚೆನ್ನಿಗ ಸುಬ್ಬಣ್ಣ ಉತ್ತಮವಾಗಿ ಅಭಿನಯಿಸಿದ್ದಾನೆ. ಮನೆಯೊಡತಿಯ ಮಗಳ ಪಾತ್ರದಲ್ಲಿ ಇಂಚರಾ ನಟಿಸಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT