ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರೆಗೆ ಗುರು ‘ಸಿನಿಮಾ ಸವಾರಿ’

ಇದು ‘ಡವ್‌’ ಅಲ್ಲ – ಅದೇಮಾ!
Last Updated 27 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಮಠ’ ಗುರುಪ್ರಸಾದ್ ಒಂದು ತಿಂಗಳಿನಿಂದ ಮನೆ ಮಠ ಎಲ್ಲಾ ಬಿಟ್ಟು ಸ್ಮಶಾನವಾಸಿ ಆಗಿದ್ದಾರೆ. ಹಾಗಂತ ಅವರೇ ಸುದ್ದಿಗೋಷ್ಠಿ ಕರೆದು ತಿಳಿಸಿದ್ದಾರೆ. ಅವರೇನೂ ಸ್ಮಶಾನದಲ್ಲಿ ಸಂಸಾರಿ ಆಗಿದ್ದಾರೆ ಅಂತಲ್ಲ. ತಮ್ಮ ನಿರ್ದೇಶನದ ಹೊಸ ಸಿನಿಮಾ ‘ಅದೇಮಾ’ ಚಿತ್ರೀಕರಣಕ್ಕಾಗಿ ಅವರು ಹೊಸ ಹೊಸ ಸ್ಮಶಾನಗಳ ಶೋಧದಲ್ಲಿದ್ದಾರೆ.
 
ಎಂಬತ್ತು ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಈವರೆಗೆ ಬಂದಿರದಂತಹ ಪ್ರೇಮಕಥೆಯನ್ನು ಹೇಳುತ್ತೇನೆ ಎಂದು ಹೊರಟಿರುವ ಗುರುಪ್ರಸಾದ್‌ ಪಾಲಿಗೆ ಇದು ಮಹತ್ವಾಕಾಂಕ್ಷಿ ಸಿನಿಮಾ.

‘ಸಾವು ಪ್ರತಿಯೊಬ್ಬನಿಗೂ ಸಂಬಂಧಿಸಿದ್ದು. ಆದ್ದರಿಂದ ಈ ಕಥೆ ಸ್ಮಶಾನದಲ್ಲಿ ನಡೆಯುತ್ತದಾದರೂ ಎಲ್ಲರಿಗೂ ಹತ್ತಿರವಾಗುತ್ತದೆ’ ಎನ್ನುತ್ತಾರೆ ನಿರ್ದೇಶಕರು. 
 
ಒಂಬತ್ತು ವರ್ಷಗಳಿಂದ ಅವರ ತಲೆಯಲ್ಲಿದ್ದ ಈ ಕಥೆಗೆ ಈಗ ತೆರೆಯಮೇಲೆ ಬರುವ ಭಾಗ್ಯ ಸಿಕ್ಕಿದೆ. ಒಂದೇ ಮನೆ, ಮಠದಲ್ಲೇ ಚಿತ್ರೀಕರಣ ಮಾಡುತ್ತಿದ್ದ ಗುರುಪ್ರಸಾದ್ ಈ ಚಿತ್ರಕ್ಕೆ ಸಂಪೂರ್ಣ ಹೊರಾಂಗಣ ಚಿತ್ರೀಕರಣದ ಯೋಜನೆ ಹಾಕಿಕೊಂಡಿದ್ದಾರೆ.

ಅದಕ್ಕಾಗಿ ಸ್ಮಶಾನದ ಹುಡುಕಾಟ ನಡೆದಿದೆ. ಮೈಸೂರಿನಲ್ಲಿ ಬ್ರಿಟಿಷ್ ಕಾಲದಲ್ಲಿ ನಿರ್ಮಾಣವಾದ ಸ್ಮಶಾನವೊಂದನ್ನು ಸದ್ಯ ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಕರ್ನಾಟಕದಲ್ಲೇ ಸಂಪೂರ್ಣ ಚಿತ್ರೀಕರಣ ನಡೆಯಲಿದೆ. 
 
ಗುರುಪ್ರಸಾದ್ ಸಿನಿಮಾ ಎಂದರೆ ದೀರ್ಘಾವಧಿ ಯೋಜನೆ ಎಂಬ ಮಾತು ಗಾಂಧಿನಗರದಲ್ಲಿ ಕೇಳಿಬರುತ್ತದೆ. ಅಂಥದ್ದೊಂದು ಸವಾಲಿಗೆ ಉತ್ತರವೆಂಬಂತೆಯೇ ಅವರು ಈ ಸಿನಿಮಾ ಮಾಡುತ್ತಿರುವುದು. ಈ ಸಿನಿಮಾ ಯಾವುದೇ ಕಾರಣಕ್ಕೂ ತಡ ಆಗುವುದಿಲ್ಲ, ವಿಜಯದಶಮಿಗೆ ಖಂಡಿತ ಬಿಡುಗಡೆ ಆಗುತ್ತದೆ ಎಂದು ಅವರು ಹೇಳಿದ್ದಾರೆ.
 
‘ಡವ್’ ಚಿತ್ರದಿಂದ ನಾಯಕನಾಗಿ ಪರಿಚಯ ಆದ ಅನೂಪ್ ಸಾ.ರಾ. ಗೋವಿಂದ್ ಈ ಚಿತ್ರದ ನಾಯಕ. ಗುರುಪ್ರಸಾದ್ ಅವರ ಹಿಂದಿನ ಸಿನಿಮಾಗಳಿಗಿಂತ ಸಂಪೂರ್ಣ ಭಿನ್ನ ಸಿನಿಮಾ ಇದು ಎಂದ ಅನೂಪ್, ‘ಹಿಂದಿನ ಸಿನಿಮಾಗಳಲ್ಲಿ ಹೇಗೋ ಗೊತ್ತಿಲ್ಲ. ಈಗ ನಾನು ಸೇರಿಕೊಂಡ ಗರಡಿ ಸೂಕ್ತವಾಗಿದೆ. ಸಿನಿಮಾ ಹೇಗೆ ಬರುತ್ತದೆ, ನನ್ನಿಂದ ನಟನೆ ಹೇಗೆ ತೆಗೆಸುತ್ತಾರೆ ಎಂಬುದನ್ನು ನೋಡಲು ಕಾತರನಾಗಿದ್ದೇನೆ’ ಎಂದರು.
 
ತಮಗೆ ಎಲ್ಲ ರೀತಿಯ ಬೆಂಬಲ ನೀಡುವ ಹೊಸ ನಿರ್ಮಾಪಕರನ್ನು ಗುರುಪ್ರಸಾದ್ ಹುಡುಕಿದ್ದಾರೆ. ಶ್ರೀಧರ್ ರೆಡ್ಡಿ ಕೆ.ಆರ್. ಚಿತ್ರದ ನಿರ್ಮಾಪಕರು. ಮೊದಲ ಬಾರಿ ನಿರ್ಮಾಣಕ್ಕೆ ತೊಡಗಿದ ಅವರದು, ಈ ಸಿನಿಮಾ ಚೆನ್ನಾಗಿ ಬಂದರೆ ಮಾತ್ರ ಮುಂದೆ ನಿರ್ಮಾಣ ಮಾಡುವ ನಿರ್ಧಾರ. ಇಲ್ಲವಾದಲ್ಲಿ ಚಿತ್ರರಂಗಕ್ಕೆ ವಿದಾಯ ಹೇಳುತ್ತಾರಂತೆ.
 
ನಿರ್ಮಾಪಕರನ್ನು ಗೌರವಿಸಬೇಕು ಎಂದು ಹೇಳುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದ್, ‘ಎಂಥದ್ದೇ ಸಂದರ್ಭದಲ್ಲಿ ನಿರ್ಮಾಪಕನ ಪರ ನಿಲ್ಲಬೇಕು. ನಿರ್ದೇಶಕರಿಗೆ ಒಪ್ಪಿಗೆ ಆಗುವಂತೆ ನಟಿಸಬೇಕು’ ಎಂದು ಮಗ ಅನೂಪ್‌ಗೆ ಚಿತ್ರದ ಮುಹೂರ್ತದ ಸಂದರ್ಭದಲ್ಲಿ ಕಿವಿಮಾತು ಹೇಳಿದರು.
 
ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ. ಶೀಘ್ರವೇ ಹಾಡುಗಳು ಬಿಡುಗಡೆ ಆಗಲಿವೆ. ಮೇ, ಜೂನ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ನಾಯಕಿ ಪಾತ್ರಕ್ಕೆ ಆಡಿಶನ್ ನಡೆಸುವುದಾಗಿ ನಿರ್ದೇಶಕರು ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT