ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ತೇದಾರಿ ಪತ್ರಕರ್ತೆ

Last Updated 6 ಜನವರಿ 2011, 13:00 IST
ಅಕ್ಷರ ಗಾತ್ರ

ಚಿತ್ರದ ಹೆಸರೇ ವಿಚಿತ್ರ- ‘ಜನವರಿ ಒಂದು ಬಿಡುಗಡೆ’. ಯಾರು, ಏನು ಎಂಬುದು ಮಾತ್ರ ಸಸ್ಪೆನ್ಸ್. ಇಂಥ ಶೀರ್ಷಿಕೆಯನ್ನಿಟ್ಟು ಸಿನಿಮಾ ಮಾಡಲು ಬಂದಿರುವುದು ಆಮದು ತಂಡ.  ನಿರ್ಮಾಪಕ ಯುಗಂಧರ್- ತೆಲುಗು ಚಿತ್ರರಂಗದಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿರುವ ಅನುಭವ ಇವರದ್ದು. ನಿರ್ದೇಶಕ ವರ್ಮಾ- ಅದೇ ತೆಲುಗು ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ ಪಳಗಿದ್ದೇನೆ ಎಂದು ಹೇಳಿಕೊಳ್ಳುತ್ತಿರುವವರು. ಇಬ್ಬರಿಗೂ ಇದು ಮೊದಲ ಯತ್ನ. ಕನ್ನಡದಲ್ಲಿ ಹೊಸ ಪ್ರಯೋಗಗಳನ್ನು ಸ್ವೀಕರಿಸುತ್ತಾರೆ ಎಂಬ ಹಳೆಯ ಕುರುಡು ನಂಬಿಕೆಯಿಂದ ಇಬ್ಬರೂ ಇಲ್ಲಿಗೆ ಬಂದಿದ್ದಾರೆ. ನಾಯಕಿ ಪೂಜಾ ಗಾಂಧಿ ತಮ್ಮ ಚಿತ್ರವನ್ನು ಗೆಲ್ಲಿಸಬಹುದೆಂಬುದು ವಿಶ್ವಾಸ.

ವರ್ಮಾ ಪ್ರಕಾರ ಚಿತ್ರದ ನಾಯಕ ಕಥೆ. ಇದು ನಾಯಕಿ ಪ್ರಧಾನ ಚಿತ್ರ. ಟೀವಿ ವಾಹಿನಿಯ ವರದಿಗಾರ್ತಿಯಾದ ನಾಯಕಿ ಒಂದು ವಾರದಲ್ಲಿ ದೊಡ್ಡ ಬದಲಾವಣೆ ತರುವುದಾಗಿ ತನ್ನ ವಾಹಿನಿಯ ಆಡಳಿತ ಮಂಡಳಿಗೆ ಸವಾಲು ಹಾಕುತ್ತಾಳೆ. ಅದನ್ನು ಹೇಗೆ ಸಾಧಿಸುತ್ತಾಳೆ ಎಂಬುದು 60ನೇ ದೃಶ್ಯದಲ್ಲಿ ಅನಾವರಣವಾಗಲಿದ್ದು, ಅದುವರೆಗೆ ಪ್ರೇಕ್ಷಕ ಕುತೂಹಲ ಉಳಿಸಿಕೊಳ್ಳುವಂತೆ ಚಿತ್ರಕಥೆಯನ್ನು ವರ್ಮಾ ಹೆಣೆದಿದ್ದಾರಂತೆ.

ಚಿತ್ರಕ್ಕೆ ಇಬ್ಬರು ನಾಯಕರು. ಒಬ್ಬರು ದೀಪಕ್. ಇದರಲ್ಲಿ ಅವರದ್ದು ಸಿಬಿಐ ಅಧಿಕಾರಿಯ ಪಾತ್ರ. ಎರಡು ವರ್ಷದಿಂದ ಅವರು ಯಾವ ಚಿತ್ರಗಳನ್ನೂ ಒಪ್ಪಿಕೊಂಡಿರಲಿಲ್ಲ. ಚೆನ್ನೈಗೆ ಹೋಗಿ ಆರು ತಿಂಗಳ ಮೇಕಪ್ ಕೋರ್ಸ್ ಮಾಡಿ ಬಂದಿರುವ ಅವರಿಗೆ ಈ ಚಿತ್ರದ ಬಗ್ಗೆ ಭರವಸೆ ಇದೆ. ಇನ್ನೊಬ್ಬ ನಾಯಕ ಮಿಥುನ್ ತೇಜಸ್ವಿ. ಅವರ ಮಾತು ಚಿತ್ರಕಥೆಯ ಹೊಗಳಿಕೆಯ ಸುತ್ತಲೇ ಗಿರಕಿ ಹೊಡೆಯಿತು.
‘ಅನು’ ಚಿತ್ರದಲ್ಲಿ ಪತ್ರಕರ್ತೆಯ ಪಾತ್ರ ನಿರ್ವಹಿಸಿದ್ದ ತಮಗೆ ಈ ಚಿತ್ರದಲ್ಲೂ ಅಂಥದ್ದೇ ಅವಕಾಶ ಸಿಕ್ಕಿರುವುದು ಪೂಜಾ ಗಾಂಧಿಗೆ ಸಂತಸದ ವಿಚಾರ.

ಇಪ್ಪತ್ತು ದಿನದಲ್ಲಿ ಚಿತ್ರೀಕರಣ ಮುಗಿಸಲಿರುವ ‘ಜನವರಿ ಒಂದು ಬಿಡುಗಡೆ’ಯಲ್ಲಿ ‘ಮಠ’ ನಿರ್ದೇಶಕ ಗುರುಪ್ರಸಾದ್ ಕೂಡ ಅಭಿನಯಿಸಲಿದ್ದಾರೆ. ಕ್ಯಾಮರಾ ಕೆಲಸ ವಹಿಸಿಕೊಳ್ಳಲಿರುವ ಸತ್ತಿ ಬಾಬು ಅವರೂ ತೆಲುಗಿನಿಂದಲೇ ಬಂದವರು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT