ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರು ಚಿಕ್ಕಣ್ಣ ಸಾಧನೇಲಿ ದೊಡ್ಡಣ್ಣ!

Last Updated 17 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಆ ಹುಡುಗ ಚಿತ್ರಮಂದಿರ ಹೊಕ್ಕು ಮೊದಲ ಸಿನಿಮಾ ನೋಡಿದ್ದು ಎಸ್ಸೆಸ್ಸೆಲ್ಸಿಯಲ್ಲಿ. ಆತನ ಅಪ್ಪನಿಗೆ ಮಗನನ್ನು ಓದಿಸುವುದಕ್ಕಿಂತ, ತನ್ನಂತೆ ಎತ್ತುಗಳ ಸಾಟಿ ವ್ಯಾಪಾರ ನಡೆಸಿ ತನ್ನ ಹೆಸರಿಗೆ ‘ಕೊಂಬು’ ಮೂಡಿಸಲಿ ಎನ್ನುವ ಆಸೆ. ಮನೆಯಲ್ಲಿ ದುಡ್ಡು ಕೇಳಲು ಮುಜುಗರ ಪಟ್ಟ ಹುಡುಗ, ಕರಣೆ ಹಿಡಿದು ಗಾರೆ ಕೆಲಸ ಮಾಡಿದ. ಕೊನೆಗೆ ಅಚಾನಕ್ಕಾಗಿ ಸೇರಿದ್ದು ಸಿನಿಮಾ ತೊರೆಯೊಳಗೆ. ಚಿತ್ರಕಥೆಯಂತಿರುವ ಈ ಲೈಫ್‌ಸ್ಟೋರಿ ಕನ್ನಡದ ಹಾಸ್ಯ ನಟರ ಸಾಲಿನಲ್ಲಿ ಮುಖ್ಯವಾಗಿ ಕಾಣುತ್ತಿರುವ ನಟ ಚಿಕ್ಕಣ್ಣ ಅವರಿಗೆ ಸಂಬಂಧಿಸಿದ್ದು.

ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಮತ್ತು ನಟಿಸುತ್ತಿರುವ ಪೋಷಕ ನಟ ಯಾರು? ಎಂಬ ಪ್ರಶ್ನೆಗೆ ಉತ್ತರ ಹುಡುಕ ಹೊರಟರೆ ಬಹುಶಃ ಚಿಕ್ಕಣ್ಣನ ಚಹರೆಯೇ ಕಾಣಿಸುತ್ತದೆ. ಈಗಾಗಲೇ ತೆರೆಕಂಡಿರುವ ನಾಲ್ಕೈದು ಚಿತ್ರಗಳ ಜೊತೆಗೆ– ‘ಕ್ವಾಟ್ಲೆ ಸತೀಸ’, ‘ಜಸ್ಟ್‌ ಲವ್’, ‘ಸವಾರಿ 2’, ‘ಸಪ್ನೋಂಕಿ ರಾಣಿ’, ‘ಅಧ್ಯಕ್ಷ’, ‘ಬಾಂಬೆ ಮಿಠಾಯಿ’ ಚಿತ್ರಗಳಲ್ಲೂ ಅವರು ನಟಿಸಿದ್ದಾರೆ. ‘ಬೆಂಗಳೂರು – 560023’, ‘ರುದ್ರ ತಾಂಡವ’ ಮತ್ತಿತರ ಸಿನಿಮಾಗಳು ಕೈಯಲ್ಲಿವೆ.

ಮೈಸೂರು ಜಿಲ್ಲೆಯ ಬಲ್ಲಹಳ್ಳಿಯ ಚಿಕ್ಕಣ್ಣ ಐದೇ ವರುಷದಲ್ಲಿ 32 ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಹಳ್ಳಿ ಸೊಗಡಿನ ಭಾಷೆ ಮತ್ತು ದೇಹಭಾಷೆಯೇ ಅವರ ನಟನೆಯ ಟ್ರೇಡ್‌ಮಾರ್ಕ್‌. ಯಶ್ ನಟನೆಯ ‘ಕಿರಾತಕ’ ಚಿತ್ರದಿಂದ ರಂಗ ಪ್ರವೇಶಿಸಿದ ಅವರಿಗೆ ಬ್ರೇಕ್ ಕೊಟ್ಟಿದ್ದು ‘ರಾಜಾಹುಲಿ’. 

ರಸವತ್ತಾದ ಕಥೆಗಳು
ಚಿಕ್ಕಣ್ಣನ ಬದುಕಿನ ಹಿನ್ನೋಟದಲ್ಲಿ ರಸವತ್ತಾದ ಕಥೆಗಳೇ ತೆರೆದುಕೊಳ್ಳುತ್ತವೆ. ‘ನಮ್ಮದು ಮಧ್ಯಮ ವರ್ಗದ ಕುಟುಂಬ. ನಮ್ಮಪ್ಪ ಭೈರೇಗೌಡ. ಎತ್ತುಗಳ ವ್ಯಾಪಾರಿ. ಸ್ವಲ್ಪ ಸ್ಟ್ರಿಕ್ಟ್‌. ಮನೆ, ಸ್ಕೂಲು, ಜಮೀನು ಇಷ್ಟೇ ನನ್ನ ಪರಪಂಚ. ಹೊರ ಜಗತ್ತಿನ ಜ್ಞಾನವೇ ಇರಲಿಲ್ಲ. ಎಸ್ಸೆಸ್ಸೆಲ್ಸಿ ಓದುವಾಗ ನಾನು ಮೊದಲ ಸಲ ಥಿಯೇಟರ್‌ನಲ್ಲಿ ಚಿತ್ರ ನೋಡಿದ್ದು. ನಮ್ಮಪ್ಪನಿಗೆ ನನ್ನ ಓದೋಕೆ ಕಳಿಸೋದು ಇಷ್ಟವಿರಲಿಲ್ಲ. ಭೈರೇಗೌಡನ ಮನೆ ಎತ್ತುಗಳು ಇದ್ದಂತೆ ಯಾರ ಮನೆ ಎತ್ತುಗಳೂ ಇಲ್ಲ ಎಂದು ನಮ್ಮೂರಿನ ಜನ ಹೆಮ್ಮೆಪಟ್ಟು ಹೇಳುವ ರೀತಿ ಎತ್ತುಗಳನ್ನು ಮೇಯಿಸಿಕೊಂಡು ನಾನು ಮನೆಯಲ್ಲಿರಬೇಕು ಎನ್ನುವುದೇ ಆತನ ಮಹತ್ವದ ಆಸೆ.

ಈಗಲೂ ನಮ್ಮಪ್ಪನಿಗೆ ಆ ಆಸೆ ಬಿಟ್ಟು ಹೋಗಿಲ್ಲ. ನನಗೆ ಆಗಲೇ ದುಡಿಯುವ ಹುಚ್ಚು. ರಜೆಯಲ್ಲಿ ಗಾರೆಕೆಲಸ ಮಾಡುತ್ತಿದ್ದೆ. ಸ್ಕೂಲಲ್ಲಿ ನನ್ನ ಜತೆಗಿನ ಹುಡುಗಿಯರನ್ನು ಅಕ್ಕ ಎಂದು ಕರೆದು ಬೈಸಿಕೊಂಡಿದ್ದೇನೆ. ಮೈಸೂರಿನ ಬನುಮಯ್ಯ ಕಾಲೇಜಿನಲ್ಲಿ ಪಿಯುಸಿ ಕಲಿತಿದ್ದು. ಕಾಲೇಜಿನಲ್ಲಿ ಅತ್ಯಂತ ಕುಳ್ಳನೆಯ ವಿದ್ಯಾರ್ಥಿಯಾದ ನನ್ನ ಎನ್‌ಸಿಸಿಯವರು ಕರೆಯುತ್ತಿದ್ದು ‘ಏ ಚೋಟು ಬಾರೋ’ ಎಂದು. ಪಿಯುಸಿ ಶಿಕ್ಷಣಕ್ಕೆ ಅರ್ಧದಲ್ಲಿಯೇ ಕತ್ತರಿ ಬಿತ್ತು. ಸ್ನೇಹಿತರ ಜತೆ ಸೇರಿ ಫೈನಾನ್ಸ್‌ ವ್ಯವಹಾರ ಮಾಡಿದೆ. ಮೈಸೂರಿನ ದೃಶ್ಯಕಲಾ ವೇದಿಕೆಯಲ್ಲಿ ಮೂರು ವರ್ಷ ಮತ್ತು ನಾಗರಾಜ ಕೋಟೆ ಅವರ ನಗೆಲೋಕದಲ್ಲಿ ಕೆಲಸ ಮಾಡಿದ್ದು ಆರಂಭಿಕ ನಟನೆಯ ಹಂತಗಳು. ಬಾಲ್ಯವನ್ನು ಈಗ ನೆನಪಿಸಿಕೊಂಡರೆ ನಾನು ಆ ರೀತಿ ಇದ್ದೆನೇ ಎಂದು ನಂಬಿಕೆ ಬರುವುದಿಲ್ಲ. ನನ್ನ ಬೌದ್ಧಿಕವಾಗಿ ಮೆಚ್ಯೂರ್ ಮಾಡಿದ್ದು ಚಿತ್ರರಂಗ’ ಎಂದು ಬಾಲ್ಯದ ಮುಗ್ಧತೆಯಲ್ಲಿಯೇ ಬದುಕಿನ ಹಿನ್ನೋಟವನ್ನು ನೆನೆಯುತ್ತಾರೆ.

ಜೀ ವಾಹಿಯಲ್ಲಿ ‘ಕಾಮಿಡಿ ಕಿಲಾಡಿಗಳು’ ಮತ್ತು ಉದಯ ವಾಹಿನಿಯಲ್ಲಿ ಆ್ಯಂಕರ್ ಆಗಿ ಗಮನ ಸೆಳೆದಿದ್ದ ಚಿಕ್ಕಣ್ಣನವರಿಗೆ ಚಿತ್ರರಂಗ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದ್ದು ನಟ ಯಶ್. ‘ಕನ್ನಡ ಚಿತ್ರರಂಗದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ಸಿಕ್ಕಿತ್ತು. ಅಲ್ಲಿ ಯಶ್ ನನ್ನ ನಟನೆ ನೋಡಿದ್ದರು. ‘ಕಿರಾತಕ’ ಚಿತ್ರದಲ್ಲಿ ಪಾತ್ರ ಕೊಡಿಸಿದರು. ನೆಗೆಟಿವ್ ಪಾತ್ರಗಳಲ್ಲಿ ನಟಿಸುವ ಉಮೇದಿತ್ತು. ಆದರೆ ಸಿಕ್ಕಿದ್ದೆಲ್ಲ ಹಾಸ್ಯ ಪಾತ್ರಗಳೇ. ‘ಕ್ವಾಟ್ಲೆ ಸತೀಸ’ನಲ್ಲಿ ಭಿನ್ನ ಪಾತ್ರ ಸಿಕ್ಕಿದೆ. ಹೆಚ್ಚು ಗಂಭೀರವಾಗಿದ್ದು, ಪ್ರೇಕ್ಷಕನನ್ನು ನಗಿಸುವ ರೋಲು ನನ್ನದು’ ಎನ್ನುತ್ತಾರೆ.

ಚಿಕ್ಕಣ್ಣನವರ ಪಾತ್ರಗಳನ್ನು ವಿಮರ್ಶೆಗೊಳಪಡಿಸುವುದು ಅವರ ಸ್ನೇಹಿತರಂತೆ. ‘ನನಗೆ ಮೂರ್ನಾಲ್ಕು ಮಂದಿ ಒಳ್ಳೆಯ ಸ್ನೇಹಿತರಿದ್ದಾರೆ. ನನ್ನ ಪ್ರತಿ ನಟನೆಯ ಬಗ್ಗೆ ಅಭಿಪ್ರಾಯ ಕೇಳುತ್ತೇನೆ. ಸರಿ ಇದ್ದರೆ ಸರಿ ಎನ್ನುತ್ತಾರೆ, ತಪ್ಪಿದ್ದರೆ ತಪ್ಪು ಎನ್ನುತ್ತಾರೆ. ಆದ್ದರಿಂದ ಪಾತ್ರಗಳು ಏಕತಾನತೆ ಎನಿಸಿಲ್ಲ’ ಎನ್ನುವ ಭಾವ ಅವರದು.

ಚಿತ್ರಬದುಕಿನಲ್ಲಿ ಎಳ್ಳಷ್ಟು ಕಹಿ ಅನುಭವ ಆಗಿಲ್ಲವಂತೆ. ‘ಇಲ್ಲಿಂದ ಪಡೆದಿರುವುದೇ ಅಪಾರ’ ಎನ್ನುವ ಅವರಿಗೆ ಎಂದೂ ಮರೆಯಲಾಗದ ಘಟನೆ ಎಂದರೆ ‘ಬುಲ್‌ಬುಲ್‌’ ಚಿತ್ರದಲ್ಲಿ ಸಿಕ್ಕ ಅವಕಾಶ. ಅಂಬರೀಶ್ ಅಭಿಮಾನಿಯಾದ ಅವರು ಬಾಲ್ಯದಲ್ಲಿ ‘ಮಂಡ್ಯದ ಗಂಡು’ ಚಿತ್ರದ ಹಾಡಿಗೆ ಸೈಕಲ್ ತುಳಿದವರು. ತನ್ನ ನೆಚ್ಚಿನ ನಟನೊಂದಿಗೆ ‘ಬುಲ್‌ಬುಲ್‌’ನಲ್ಲಿ ನಟಿಸಲು ಸಿಕ್ಕ ಅವಕಾಶ ಅವರಿಗೆ ಸ್ಮರಣೀಯವಾದದ್ದು.
‘ರಾಜಾಹುಲಿ’ ಚಿತ್ರಕ್ಕೆ ಸಿಕ್ಕ ಯಶಸ್ಸು ಅವರ ಸಿನಿಮಾ ಹಾದಿಗೆ ವೇಗ ಕೊಟ್ಟಿತು.

‘ರಾಜಾಹುಲಿ’ ಚಿತ್ರದ ನಂತರ 12 ಚಿತ್ರಗಳಲ್ಲಿ ನಾಯಕನಾಗುವ ಅವಕಾಶ ಬಂದಿದ್ದವು. ಆದರೆ ನನಗೆ ಹೀರೊ ಆಗಿ ನಟಿಸಲು ಪೂರ್ಣ ಆತ್ಮವಿಶ್ವಾಸವಿಲ್ಲ. ಕೆಲವು ಕಥೆ ಕೇಳಿದೆ, ಕಾಮಿಡಿ, ಪ್ರೀತಿಯ ಚಿತ್ರಕಥೆಗಳು. ನಿರ್ಮಾಪಕರು ದುಡ್ಡನ್ನು ಎಲ್ಲಿಂದಲಾದರೂ ತಂದು ಹೂಡಲಿ, ಆದರೆ ನನ್ನ ದೃಷ್ಟಿಯಲ್ಲಿ ಅದು ದುಡ್ಡು ದುಡ್ಡೇ. ಒಂದು ವೇಳೆ ಚಿತ್ರ ಗೆದ್ದರೆ ಸೂಪರ್. ಸೋತರೆ ಅತ್ತಲೂ ಇಲ್ಲ ಇತ್ತಲೂ ಇಲ್ಲ. ನಾನೂ ಡ್ಯಾನ್ಸ್, ಫೈಟ್ ಮಾಡುವ ಸ್ವಯಂ ಆತ್ಮವಿಶ್ವಾಸ ಬಂದ ದಿನ ಆ ಬಗ್ಗೆ ನೋಡುವೆ. ಕೂಲಿ ಕೆಲಸ ಮಾಡಿಕೊಂಡಿದ್ದ ನಾನು ಈ ರೀತಿ ಆಗುತ್ತೇನೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ’ ಎಂದು  ತಮ್ಮ ನಟನೆಯನ್ನು ಸ್ವಯಂ ವಿಮರ್ಶಿಸಿಕೊಳ್ಳುತ್ತಾರೆ.

ಹಳ್ಳಿಯ ನಿವಾಸಿ ಚಿಕ್ಕಣ್ಣ, ಶೂಟಿಂಗ್ ಇದ್ದರೆ ಮಾತ್ರ ಬೆಂಗಳೂರಿನತ್ತ ಮುಖ ಮಾಡುವುದು. ಅವರಿಗೆ ಹೆಸರು ತಂದಿತ್ತ ‘ಅಣ್‌ತಮ್ಮನ’ ಡೈಲಾಗು ಹಳೆ ಮೈಸೂರು ಭಾಗವನ್ನು ಮೀರಿದೆ. ಹುಬ್ಬಳ್ಳಿ, ಮಂಗಳೂರಿನಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದಾಗ ಅಲ್ಲಿನ ಮಂದಿ ‘ಅಣ್‌ತಮ್ಮ’ ಎಂದು ಮಾತನಾಡಿಸಿದ್ದನ್ನು ಪ್ರೀತಿಯ ನಿದರ್ಶನ ಎನ್ನುವಂತೆ ವಿವರಿಸುವರು. ‘‘ಅಧ್ಯಕ್ಷ ಚಿತ್ರದ ಚಿತ್ರೀಕರಣದ ವೇಳೆ ಕುಡಿದ ವ್ಯಕ್ತಿಯೊಬ್ಬ ‘ಲೋ ಅಣ್ಣತಮ್ಮ ಬಡ್ಡಿಹೈದನೇ’ ಎಂದಾಗ, ಹತ್ತಿರ ಹೋಗಿ ‘ಏನಪ್ಪ’ ಎಂದು ಕೇಳಿದೆ. ಆಗ ‘ಮಗಾ, ನಾನು ನಿನ್ನ ಫ್ಯಾನ್ ಲೋ’ ಎಂದ. ಬಹುಪಾಲು ಜನರು ನನಗೆ ಮರ್ಯಾದೆ ಕೊಟ್ಟು ಮಾತನಾಡಿಸಲ್ಲ. ಇವನು ನಮ್ಮವನೂ ಎಂದುಕೊಂಡಿದ್ದಾರೆ’’ ಎನ್ನುವ ಚಿಕ್ಕಣ್ಣನವರಿಗೆ ಜನರು ತಮ್ಮನ್ನು ಗುರ್ತಿಸುತ್ತಿರುವ ಬಗ್ಗೆ ಹೆಮ್ಮೆಯಿದೆ.

ಶರಣ್ ನಾಯಕರಾಗಿರುವ ‘ಅಧ್ಯಕ್ಷ’ ಚಿತ್ರ ತಮಗೆ ಮತ್ತೊಂದು ಬ್ರೇಕ್ ನೀಡುತ್ತದೆ ಎನ್ನುವ ವಿಶ್ವಾಸ ಅವರದು. ಆದರೆ ತಾವು ಹಂಬಲಿಸುತ್ತಿರುವ ನೆಗೆಟಿವ್ ಛಾಯೆಯ ಪಾತ್ರವನ್ನು ಯಾವ ನಿರ್ದೇಶಕರು ಕೊಡುತ್ತಾರೆ ಎಂದು ಕಾಯುತ್ತಿದ್ದಾರೆ ಚಿಕ್ಕಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT