ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಗ್ಗಿ’ ಕನ್ನಡ ಮಗ್ಗಿ!

Last Updated 23 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ವಿಳಂಬವಾದರೂ ಅಂದುಕೊಂಡಂತೆ ಮಾಡಿದ ಸಿನಿಮಾವನ್ನು ತೆರೆಗೆ ತರುವ ಉತ್ಸಾಹದಲ್ಲಿದೆ ‘ಜಗ್ಗಿ’ ಚಿತ್ರತಂಡ. ನಿರ್ಮಾಪಕ ಶ್ರೀನಿವಾಸ್ ಅವರು ಕನ್ನಡದ ಕಟ್ಟಾ ಅಭಿಮಾನಿಯಂತೆ. ಹೀಗಾಗಿ ಕನ್ನಡ ರಾಜ್ಯೋತ್ಸವದ ಉಡುಗೊರೆಯಾಗಿ ಕನ್ನಡಿಗರಿಗೆ ಅಕ್ಟೋಬರ್ ೩೧ರಂದು ‘ಜಗ್ಗಿ’ ಚಿತ್ರವನ್ನು ಅರ್ಪಿಸಲಿದ್ದಾರೆ.

ಸಿನಿಮಾ ಬಿಡುಗಡೆ ಸುದ್ದಿ ಹಂಚಿಕೊಳ್ಳಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ, ನಿರ್ಮಾಪಕರ ಕನ್ನಡ ಪ್ರೀತಿಯನ್ನು ನಿರ್ದೇಶಕ ರಾಜು ಪದೇ ಪದೇ ಕೊಂಡಾಡಿದರು. ಆದರೆ ಚಿತ್ರದ ಪೋಸ್ಟರ್‌ಗಳಲ್ಲಿ ಇಂಗ್ಲಿಷ್ ಪದಗಳು ಎದ್ದು ಕಾಣುತ್ತಿರುವುದನ್ನು ಪ್ರಸ್ತಾಪಿಸಿದಾಗ ‘ಕೆಲವೊಂದು ಸಲ ಇಂಗ್ಲಿಷ್ ಬಳಕೆ ಅನಿವಾರ್ಯ’ ಎಂಬ ಸಮರ್ಥನೆ ಅವರದಾಗಿತ್ತು!

ಕಾಲೇಜು ಕಲಿಯುವ ಬಿಂದಾಸ್ ಹುಡುಗನ ಪ್ರೇಮ ಕಥೆ ಇದಂತೆ. ತಂದೆ-ತಾಯಿ ತನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಆತ ಹೇಗೆ ಉಳಿಸಿಕೊಳ್ಳುತ್ತಾನೆ? ಇನ್ನೊಬ್ಬರಿಗೆ ಒಳ್ಳೆಯದನ್ನು ಮಾಡಲು ಹೋಗಿ, ಹೇಗೆಲ್ಲ ತೊಂದರೆ ಅನುಭವಿಸುತ್ತಾನೆ ಎಂಬುದು ಚಿತ್ರದ ಒಂದು ಸಾಲಿನ ಕಥೆ. ‘ಯುವಕರು ಹಾಗೂ ಪಾಲಕರು ನಮ್ಮ ಸಿನಿಮಾ ನೋಡಲೇಬೇಕು. ಅದರಿಂದ ಅವರಿಗೆ ಒಳ್ಳೆಯ ಸಂದೇಶಗಳು ಸಿಗಲಿವೆ. ಅಷ್ಟು ಚೆನ್ನಾಗಿ ಸಿನಿಮಾ ಮೂಡಿಬಂದಿದೆ’ ಎಂಬ ಶಿಫಾರಸು ನಿರ್ದೇಶಕ ರಾಜು ಅವರದು.

ಮೊದಲ ಬಾರಿಗೆ ನಾಯಕನಾಗಿ ಬಣ್ಣ ಹಚ್ಚಿರುವ ನಾಯಕ ಸುನಿಲ್, ಅಪಾಯಕರ ಸನ್ನಿವೇಶಗಳಲ್ಲಿ ಡ್ಯೂಪ್ ಇಲ್ಲದೇ ತಾವೇ ನಟಿಸಿದ್ದಾರಂತೆ. ‘ನಾನು ನಾನೇ ಆಗಬೇಕು. ಚಿತ್ರರಂಗದಲ್ಲಿ ನನ್ನದೊಂದು ಹೆಜ್ಜೆ ಮೂಡಿಸಬೇಕು. ಹೀಗಾಗಿ ಎಲ್ಲ ಬಗೆಯ ಹೊಡೆದಾಟದ ದೃಶ್ಯಗಳಲ್ಲಿ ನಾನೇ ಪಾಲ್ಗೊಂಡೆ’ ಎಂದು ಹೇಳಿಕೊಂಡರು. ನಾಯಕಿಯರಾದ ಅಹನಾ ಹಾಗೂ ಆರೋಹಿತ, ಛಾಯಾಗ್ರಾಹಕ ರಮೇಶ್ ಮತ್ತು ಕಲಾವಿದ ಕುರಿ ರಂಗ ಚಿತ್ರದ ಬಗ್ಗೆ ಮಾತನಾಡಿದರು. ತಾವು ಸಂಗೀತ ಸಂಯೋಜಿಸಿದ ಐದು ಹಾಡುಗಳು ಈಗಾಗಲೇ ಯೂಟ್ಯೂಬ್‌ಗಳಲ್ಲಿ ಸಾಕಷ್ಟು ಹಿಟ್ ಆಗಿವೆ ಎಂದು ಸಂಗೀತ ನಿರ್ದೇಶಕ ಎಲ್ವಿನ್ ಜೋಶ್ ಖುಷಿಪಟ್ಟರು.

‘ಆರ್ಯಮೌರ್ಯ’ ವಿತರಣಾ ಸಂಸ್ಥೆಯು ಕರ್ನಾಟಕದ ೭೫ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಮಾಡಲಿದೆ ಎಂದು ಸಂಸ್ಥೆಯ ತಿಮ್ಮೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT