ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿಯ ಅಸ್ತವ್ಯಸ್ತ ಪ್ರಸ್ತ ಪುರಾಣ!

Last Updated 5 ಅಕ್ಟೋಬರ್ 2018, 11:53 IST
ಅಕ್ಷರ ಗಾತ್ರ

ಸಿನಿಮಾ: ಆದಿ ಪುರಾಣ
ನಿರ್ಮಾಣ: ಶಮಂತ್‌
ನಿರ್ದೇಶನ: ಮೋಹನ್ ಕಾಮಾಕ್ಷಿ
ತಾರಾಗಣ: ಶಶಾಂಕ್, ಅಹಲ್ಯಾ ಸುರೇಶ್, ಮೋಕ್ಷಾ ಕುಶಾಲ್

ಅಡಲ್ಟ್‌ ಕಾಮಿಡಿ ಸಿನಿಮಾಗಳನ್ನು ಮಾಡುವುದರಲ್ಲಿ ಕಾಶೀನಾಥ್ ಅವರನ್ನು ಮೀರಿಸಿದವರು ಕನ್ನಡದಲ್ಲಿ ಇನ್ನೊಬ್ಬರಿಲ್ಲ. ಕಾಶೀನಾಥ್ ತನ್ನ ಗುರುಸಮಾನರು ಎಂದು ಹೇಳಿಕೊಂಡಿರುವ ಮೋಹನ್ ಕಾಮಾಕ್ಷಿ ಸಹ ತಮ್ಮ ನಿರ್ದೇಶನದ ‘ಆದಿ ಪುರಾಣ’ದಲ್ಲಿ ಅಡಲ್ಟ್‌ ಕಾಮಿಡಿ ವಸ್ತುವನ್ನೇ ಆಯ್ತುಕೊಂಡಿದ್ದಾರೆ. ಆದರೆ ವಸ್ತುವಿನ ಆಯ್ಕೆಯಲ್ಲಿರುವ ಗುರುಭಕ್ತಿ ಚಿತ್ರಕಥೆಯಲ್ಲಾಗಲಿ, ನಿರ್ದೇಶನ ಕೌಶಲದಲ್ಲಿಯಾಗಲಿ ಕಾಣಿಸುವುದಿಲ್ಲ. ಹಾಗಾ‌ಗಿ ‘ಆದಿ ಪುರಾಣ’ ಆ ಕ್ಷಣದ ವೀಕ್ಷಣೆಯ ಮನರಂಜನೆಯನ್ನೂ ಕೊಡುವುದಿಲ್ಲ; ಅದರಾಚೆಯ ಹೊಸ ತಿಳಿವಳಿಕೆಯನ್ನೂ ಮೂಡಿಸುವುದಿಲ್ಲ.

ಆದಿತ್ಯ ಎಂಬ ಹುಡುಗನ ಪ್ರಸ್ತದ ಸುತ್ತಲೇ ಇಡೀ ಸಿನಿಮಾ ಸುತ್ತುತ್ತದೆ. ತನಗೆ ಯಾವ ಹುಡುಗಿಯೂ ಸಿಗುತ್ತಿಲ್ಲ ಎನ್ನುವುದು ಅವನ ಕೊರಗು. ಎಂಜಿನಿಯರಿಂಗ್ ಓದಿ ಕೈತುಂಬ ಸಂಬಳ ಸಿಗುವ ಕೆಲಸಕ್ಕೆ ಸೇರಿಕೊಂಡರೂ ಹೆಣ್ಣುಜೀವವೊಂದು ಜತೆಯಾಗುತ್ತಿಲ್ಲವಲ್ಲ ಎಂಬ ಕೊರಗನ್ನು ಆಶ್ಲೀಲ ಚಿತ್ರಗಳನ್ನು ನೋಡಿ ನೀಗಿಸಿಕೊಳ್ಳುತ್ತಿರುತ್ತಾನೆ. ಅದು ಮನೆಯವರಿಗೆ ಗೊತ್ತಾಗಿ ಮದುವೆ ಮಾಡುತ್ತಾರೆ. ಮದುವೆಯಾದವಳು ಚೆಂದುಳ್ಳಿ ಚೆಲುವೆ. ಆದರೆ ಮದುವೆಯಾಗಿ ಹತ್ತು ದಿನ ಪ್ರಸ್ತ ಮಾಡುವಂತಿಲ್ಲ ಎಂಬ ಶಾಸ್ತ್ರ. ಆ ಹತ್ತು ದಿನ ಮುಗಿದ ಮೇಲೆ ಮತ್ತೆ ನಾಲ್ಕು ದಿನದ ತೊಂದರೆ, ಅದಾದ ಮೇಲೆ ಮತ್ತೊಂದು ತಿಂಗಳ ಮುಂದೂಡಿಕೆ ಹೀಗೆ ಆದಿಯ ಫಸ್ಟ್‌ನೈಟ್‌ ಕನಸು ಅಸ್ತವ್ಯಸ್ತಗೊಂಡು ಯಾವ್ಯಾವುದೋ ಕಾರಣಕ್ಕೆ ಮುಂದುವರಿಯುತ್ತಲೇ ಹೋಗುತ್ತದೆ.

ಈ ಅಸ್ತವ್ಯಸ್ತ ಎನ್ನುವ ಶಬ್ದವನ್ನು ನಾಯಕನ ಪ್ರಸ್ತಕ್ಕೆ ಮಾತ್ರವಲ್ಲ, ಇಡೀ ಸಿನಿಮಾಕ್ಕೇ ಅನ್ವಯಿಸುವ ಹಾಗಿದೆ. ಗಟ್ಟಿಯಿಲ್ಲದ ಚಿತ್ರಕಥೆ, ತೆಳುವಾದ ಪಾತ್ರಪೋಷಣೆ, ಚುರುಕಿಲ್ಲದ ಸಂಭಾಷಣೆ, ಅವವೇ ಹಳೆ ಹಳೆಯ ಅಡಲ್ಟ್‌ ಜೋಕ್‌ಗಳು, ಮುಖ್ಯಕಲಾವಿದರ ಅಭಿನಯ ಬಡತನ ಹೀಗೆ ಹಲವು ಕಾರಣಗಳಿಗಾಗಿ ಮೊದಲರ್ಧ ಪೂರ್ತಿ ಬೋರ್‌ ಹೊಡೆಯುತ್ತದೆ. ದ್ವಿತೀಯಾರ್ಧದಲ್ಲಿ ಕೊಂಚ ಹಳಿಗೆ ಹತ್ತುತ್ತಿದೆಯೇನೋ ಅಂದುಕೊಳ್ಳುವಷ್ಟರಲ್ಲಿ ಮತ್ತೆ ದಿಕ್ಕಾಪಾಲಾಗಿಬಿಡುತ್ತದೆ. ಹಲವು ಪಾತ್ರಗಳ ತುಟಿಚಲನೆಗೂ ಧ್ವನಿಗೂ ಹೊಂದಾಣಿಕೆಯಾಗುವುದಿಲ್ಲ. ಹೇಳದೇ ಕೇಳದೇ ಬಂದು ಹೋಗುವ ಹಾಡುಗಳ್ಯಾವವೂ ನೆನಪಲ್ಲುಳಿಯುವುದಿಲ್ಲ. ಕೆಲವು ದೃಶ್ಯಗಳಂತೂ ಆಶ್ಲೀಲ ಚಿತ್ರಗಳಿಂದಲೇ ಕಾಪಿ ಮಾಡಿದಂತಿದೆ. ಕೊನೆಯಲ್ಲಿ ಅವುಗಳಿಗೆ ಕೊಡುವ ಸಮರ್ಥನೆಗಳೂ ಅಷ್ಟೇ ವಿಚಿತ್ರವಾಗಿದೆ.

ರಂಗಾಯಣ ರಘು ಪಾತ್ರ ಮೊದಲಾರ್ಧದಲ್ಲಿ ‘ನೀರೊಳಿರ್ದುಂ ಬೆಮರ್ತನ್ ಉರಗಪತಾಕಂ’ ಎಂಬ ಸಾಲಿಗೆ ವ್ಯಾಖ್ಯಾನಿಸುವುದಕ್ಕೂ, ದ್ವಿತೀಯಾರ್ಧದಲ್ಲಿ ನಾಯಕನಿಗೆ ಜ್ಞಾನೋದಯ ಮಾಡುವುದಕ್ಕೂ ಸಲಕರಣೆಯಾಗಿ ಬಳಕೆಯಾಗಿದ್ದಾರೆ. ಆದಿತ್ಯ ಮತ್ತು ಮೋಕ್ಷಾ ಇಬ್ಬರೂ ಅಭಿನಯದ ಎಬಿಸಿಡಿಯನ್ನಾದರೂ ಕಲಿತುಕೊಳ್ಳಬೇಕಾದ ಅನಿವಾರ್ಯತೆ ಇದೆ. ಅವರಿಗೆ ಹೋಲಿಸಿದರೆ ಅಹಲ್ಯಾ ಸುರೇಶ್ ಹೆಚ್ಚು ಸಹನೀಯ.

ಅತ್ತ ‘ಕುಟುಂಬದವರೆಲ್ಲ ಒಟ್ಟಿಗೇ ಕೂತು ನೋಡಬಹುದು ’ ಎನ್ನಲೂ ಸಾಧ್ಯವಿಲ್ಲದ; ಇತ್ತ ‘ಪಡ್ಡೆ ಹುಡುಗರು ಗೆಳೆಯರ ಜತೆ ನೋಡಿ ಮಜಾ ಮಾಡಬಹುದು’ ಎಂದೂ ಭರವಸೆ ಕೊಡಲಾಗದ ಸಿನಿಮಾ ಆದಿ ಪುರಾಣ. ಸಿನಿಮಾ ನೋಡಿ ಮುಗಿದ ಮೇಲೆ ‘ಒಳ್ಳೆಯ ಅಡಲ್ಟ್ ಕಾಮಿಡಿ’ ಸಿನಿಮಾವನ್ನಾದರೂ ಮಾಡಬಹುದಿತ್ತು ಅನಿಸುವ ಹಾಗೆ ಮಾಡುವುದೇ ಇದರ ಹೆಗ್ಗಳಿಕೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT