ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತೀಶ್‌ ನೀನಾಸಂ: ಬ್ರಹ್ಮಚಾರಿಯ ಅಸ್ತವ್ಯಸ್ತ ಪ್ರಸ್ತ ಪುರಾಣ

Last Updated 29 ನವೆಂಬರ್ 2019, 11:38 IST
ಅಕ್ಷರ ಗಾತ್ರ

ಚಿತ್ರ: ಬ್ರಹ್ಮಚಾರಿ

ನಿರ್ಮಾಣ: ಉದಯ್‌ ಕೆ. ಮೆಹ್ತಾ

ನಿರ್ದೇಶನ: ಚಂದ್ರಮೋಹನ್

ತಾರಾಗಣ: ಸತೀಶ್‌ ನೀನಾಸಂ, ಅದಿತಿ ಪ್ರಭುದೇವ, ಅಚ್ಯುತ್‌ಕುಮಾರ್, ದತ್ತಣ್ಣ, ಶಿವರಾಜ್‌ ಕೆ.ಆರ್‌. ಪೇಟೆ

ಕನ್ನಡ ಸಿನಿಮಾ ನಿರ್ದೇಶಕರ ಪಾಲಿಗೆ ತಥಾಕಥಿತ ‘ಪ್ರಸ್ತ’ದ ಕಥನಗಳು ಎಂದಿಗೂ ಬದಲಾಗುವುದಿಲ್ಲ. ಮಧುಮಗನ ಗುಪ್ತ ಸಮಸ್ಯೆಗಳೇ ಇಂತಹ ಚಿತ್ರಗಳ ಮೂಲ ಕಥಾವಸ್ತು. ಚಂದ್ರಮೋಹನ್‌ ನಿರ್ದೇಶನದ ‘ಬ್ರಹ್ಮಚಾರಿ’ ಚಿತ್ರದ್ದೂ ಇದೇ ಕಥೆ.

ಮಧ್ಯಮ ವರ್ಗದ ಕೃತಕ ಪರಿಸರದಲ್ಲಿ ನಡೆಯುವ ಕಥೆ ಇದು. ತೆರೆಯ ಮೇಲೆ ಅದನ್ನು ತೋರಿಸಲು ನಿರ್ದೇಶಕರು ಆಯ್ದುಕೊಂಡಿರುವ ಹಾದಿ, ಪಾತ್ರಗಳು, ಅವುಗಳ ಪೋಷಣೆ, ಸಂಭಾಷಣೆ ಕೂಡ ಅಷ್ಟೇ ಕೃತಕ. ಹಾಗಾಗಿ ಭಾವುಕ ಕ್ಷಣಗಳು, ಹಾಸ್ಯದ ತುಣುಕುಗಳು ನೋಡುಗರ ಮನದಾಳಕ್ಕೆ ಬಹುಬೇಗ ತಟ್ಟುವುದಿಲ್ಲ.

ನಿರ್ದೇಶಕರು ಹೇಳಲು ಹೊರಟ ವಿಷಯ ಹೊಸದೇನಲ್ಲ. ಚಿತ್ರದ ವಿರಾಮದ ವೇಳೆಗೆ ಅಂತ್ಯದ ಸ್ವರೂಪ ಊಹೆಗೆ ನಿಲುಕುತ್ತದೆ. ಆದರೆ, ಮೊದಲ ಅಧ್ಯಾಯದಲ್ಲಿನ ಎಡವಟ್ಟುಗಳನ್ನು ಎರಡನೇ ಅಧ್ಯಾಯದಲ್ಲಿ ಸರಿಪಡಿಸುವ ಜಾಣ್ಮೆ ತೋರಿದ್ದಾರೆ. ತೆಳುವಾದ ಎಳೆಗೆ ಬಿಡಿ ಕಥನವನ್ನು ಪೋಣಿಸಿ ನಗೆಯ ಹಾರ ಕಟ್ಟಿದ್ದಾರೆ. ಹಾಸ್ಯರಸ ತುಂಬಿಸುವಾಗ ಅಲ್ಲಿ ತುಂಟತನಕ್ಕೂ ಸ್ಥಳವಿರಬೇಕು. ದತ್ತಣ್ಣ ಮತ್ತು ಶಿವರಾಜ್‌ ಕೆ.ಆರ್‌. ಪೇಟೆ ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಆಧುನಿಕ ತಲೆಮಾರಿಗೂ ಸಂಪ್ರದಾಯದ ಚೌಕಟ್ಟು ಮೀರುವ ಹಂಬಲವಿರುವುದಿಲ್ಲ. ಅದರಿಂದ ಎದುರಾಗುವ ಸವಾಲುಗಳನ್ನು ರಾಮು ಮತ್ತು ಸುನೀತಾ ಮೂಲಕ ನಿರ್ದೇಶಕರು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಬದುಕಿನ ಸುಳಿಗಳು ಮತ್ತು ಸಾಂಸಾರಿಕ ಸೌಂದರ್ಯವನ್ನೂ ಒಟ್ಟೊಟ್ಟಿಗೆ ಕಾಣಿಸುತ್ತಾ ಸಾಗುವ ರೀತಿಯಲ್ಲಿಯೇ ಚಿತ್ರದ ಕಥೆ ಹೆಣೆದಿದ್ದಾರೆ.

ರಾಮು ಅಪ್ಪಟ ಬ್ರಹ್ಮಚಾರಿ. ಆತನಿಗೆ ಶ್ರೀರಾಮಚಂದ್ರನೇ ಆದರ್ಶ. ಇದಕ್ಕೆ ಅಜ್ಜಿಯೇ ಅವನಿಗೆ ಪ್ರೇರಣೆ. ಅಪ್ಪಿತಪ್ಪಿಯೂ ಪರಸ್ತ್ರೀಯರನ್ನು ಕಣ್ಣೆತ್ತಿಯೂ ಆತ ನೋಡುವುದಿಲ್ಲ. ಸುನೀತಾಳ ಪ್ರವೇಶದೊಂದು ಆತನ ಬದುಕು ಹೊಸ ದಿಕ್ಕಿಗೆ ಹೊರಳುತ್ತದೆ. ಆದರೆ, ಗುಪ್ತ ಸಮಸ್ಯೆಯಿಂದ ಮೊದಲ ರಾತ್ರಿಯು ಅವನ ಪಾಲಿಗೆ ಕರಾಳರಾತ್ರಿಯಾಗುತ್ತದೆ. ಕೊನೆಗೆ, ಆತನ ಪ್ರಸ್ತ ನಡೆಯುತ್ತದೆಯೇ ಎಂಬುದೇ ಚಿತ್ರದ ಕೌತುಕ.

ಹಾಡುಗಳಲ್ಲಿ ಮೈಚಳಿ ಬಿಟ್ಟು ಕುಣಿದಿರುವ ಅದಿತಿ ಪ್ರಭುದೇವ ಅವರ ನಟನೆ ಕೊಂಚು ಮಂಕಾಗಿದೆ. ಕೆಲವು ದೃಶ್ಯಗಳಲ್ಲಿ ಸತೀಶ್‌ ನೀನಾಸಂ ನಗೆಯುಕ್ಕಿಸುತ್ತಾರೆ. ಅಚ್ಯುತ್‌ಕುಮಾರ್‌, ಪದ್ಮಜಾ ರಾಜ್‌, ಗೋವಿಂದೇಗೌಡ ಅವರದು ಅಚ್ಚುಕಟ್ಟಾದ ನಟನೆ. ಧರ್ಮವಿಶ್‌ ಸಂಗೀತ ಸಂಯೋಜನೆಯ ‘ಇಡ್ಕ ಇಡ್ಕ ವಸಿ ತಡ್ಕ ತಡ್ಕ’ ಹಾಡು ಕೇಳಲು ಇಂಪಾಗಿದೆ. ಆದರೆ, ಕೆಲವು ಕಡೆಗಳಲ್ಲಿ ಸನ್ನಿವೇಶಕ್ಕೆ ವ್ಯತಿರಿಕ್ತವಾದ ಹಿನ್ನೆಲೆ ಸಂಗೀತ ಕಿರಿಕಿರಿ ಉಂಟು ಮಾಡುತ್ತದೆ. ರವಿಕುಮಾರ್‌ ಅವರ ಛಾಯಾಗ್ರಹಣ ಕೆಲವು ದೃಶ್ಯಗಳಿಗಷ್ಟೇ ಚೆನ್ನಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT