ಚಿತ್ರ: ಇಷ್ಟಕಾಮ್ಯ
ನಿರ್ಮಾಪಕ: ಕೆ.ವೈ. ಶಂಕರೇಗೌಡ ಹಾಗೂ ಮಿತ್ರರು
ನಿರ್ದೇಶಕ : ನಾಗತಿಹಳ್ಳಿ ಚಂದ್ರಶೇಖರ
ತಾರಾಗಣ: ವಿಜಯ್ ಸೂರ್ಯ, ಮಯೂರಿ, ಕಾವ್ಯ ಶೆಟ್ಟಿ, ರಂಗಾಯಣ ರಘು, ಪ್ರಕಾಶ್ ಬೆಳವಾಡಿ, ಸುಮನ್ ನಗರಕರ್ ಇತರರು

‘ಏನ್ರಯ್ಯ ಗೋಳು ನಿಮ್ದು! ಮಂತ್ರ ಹೇಳಿಸ್ತೀರಿ, ವಾಲಗ ಊದಿಸ್ತೀರಿ, ಸಪ್ತಪದಿ, ಮಾಂಗಲ್ಯ ಕಟ್ಟೋದು ಅಂತೆಲ್ಲ ಏನೇನೋ ಮಾಡ್ತೀರಾ. ಕೊನೆಗೆ ನೋಡಿದರೆ, ಒಂದಾಗಿ ಬಾಳೋದನ್ನೇ ಬಿಟ್ಟು ಬಿಡ್ತೀರಾ!’ ಎಂದು ವಿಕ್ರಾಂತ್ ಉದ್ಗರಿಸುವುದರ ಮೂಲಕ ಕುಟುಂಬವೆಂಬ ಸಾಂಸ್ಥಿಕ ಚೌಕಟ್ಟನ್ನು ಕಟುವಿಮರ್ಶೆಗೆ ಒಳಪಡಿಸುತ್ತಾನೆ. ಒಂದರ್ಥದಲ್ಲಿ ಅದು ಇಡೀ ಸಿನಿಮಾದ ಆಶಯವೂ ಆಗಿರುತ್ತದೆ.

‘ಸುಧಾ’ ವಾರಪತ್ರಿಕೆಯಲ್ಲಿ ಈ ಹಿಂದೆ ಪ್ರಕಟವಾಗಿದ್ದ ದೊಡ್ಡೇರಿ ವೆಂಕಟಗಿರಿರಾವ್ ಅವರ ಕಾದಂಬರಿಯನ್ನು ‘ಇಷ್ಟಕಾಮ್ಯ’ವಾಗಿ ಪ್ರೇಕ್ಷಕರ ಕೈಗೆ ಒಪ್ಪಿಸಲು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ನಿರ್ಧರಿಸಿದಾಗ, ಬಹುಶಃ ಅದು ಪ್ರತಿಪಾದಿಸುವ ಕುಟುಂಬ ಮೌಲ್ಯಗಳೇ ಅವರ ಗಮನ ಸೆಳೆದಿರಬಹುದು. ಕಾದಂಬರಿಯನ್ನು ಚಿತ್ರರೂಪಕ್ಕೆ ತರುವಾಗ ಅವರು ಆಯ್ದುಕೊಂಡ ನಿರೂಪಣಾ ಶೈಲಿ ಚಿತ್ರದುದ್ದಕ್ಕೂ ಗಮನ ಸೆಳೆಯುವಂತಿದೆ.

ಪ್ರೇತಿ, ಪ್ರೇಮಕ್ಕೂ ‘ಇಷ್ಟಕಾಮ್ಯ’ದಲ್ಲಿ ಜಾಗವುಂಟು. ಆದರೆ ಅದು ನವಿರು ಭಾವನೆ ಮೂಡಿಸುವುದರ ಜತೆಗೆ ಒಂದೆರಡು ಸಲ ಅಘಾತವನ್ನು ಉಂಟು ಮಾಡಿಬಿಡುತ್ತದೆ! ಕನಸುಕಂಗಳ ಅಚ್ಚರಿ (ಮಯೂರಿ) ಅಪಘಾತಕ್ಕೀಡಾಗಿ ಡಾ. ಆಕರ್ಷ್‌ನ (ವಿಜಯ್ ಸೂರ್ಯ) ‘ಬೆಳ್ಳಕ್ಕಿ ನರ್ಸಿಂಗ್ ಹೋಂ’ಗೆ ದಾಖಲಾಗುತ್ತಾಳೆ. ನಿರೀಕ್ಷೆಯಂತೆ, ಆಕರ್ಷ್‌ನತ್ತ ಪ್ರೀತಿಯೂ ಪಲ್ಲವಿಸುತ್ತದೆ.

ಆದರೆ ಆತನಿಗೆ ಈಗಾಗಲೇ ಅದಿತಿ (ಕಾವ್ಯ ಶೆಟ್ಟಿ) ಎಂಬಾಕೆಯ ಜತೆ ಮದುವೆಯಾಗಿದೆ ಎಂಬ ಗುಟ್ಟು ರಟ್ಟಾದಾಗ, ಹೇಗಾದರೂ ಮಾಡಿ ಆತನನ್ನು ತನ್ನವನನ್ನಾಗಿ ಮಾಡಿಕೊಳ್ಳಲು ಛಲ ತೊಡುತ್ತಾಳೆ. ಅತ್ತ ಪತ್ನಿಯನ್ನು ತೊರೆಯದೇ, ಇತ್ತ ಅಚ್ಚರಿಯನ್ನೂ ಬಿಡದೇ ಸಂಕಟಕ್ಕೆ ಸಿಲುಕುತ್ತಾನೆ ಆಕರ್ಷ್. ಕೊನೆಗೆ ಆತ ಒಲಿಯುವುದು ಯಾರಿಗೆ? ಪ್ರೇಕ್ಷಕನ ಕಲ್ಪನೆಯನ್ನೆಲ್ಲ ಉಲ್ಟಾ ಮಾಡಿ, ಕಥೆಗೆ ಅಂತ್ಯ ಹಾಡುತ್ತಾರೆ ನಿರ್ದೇಶಕ ನಾಗತಿಹಳ್ಳಿ.

ಚಿತ್ರಕಥೆಯಲ್ಲಿ ಪ್ರಧಾನವಾಗಿ ತಾಕುವುದು, ಪ್ರತಿ ಪಾತ್ರ ವ್ಯಕ್ತಪಡಿಸುವ ಭಾವನೆಗಳು. ಹೀಗಾಗಿ ಇಲ್ಲಿ ನಾಯಕ, ನಾಯಕಿ ಎಂಬುದಕ್ಕಿಂತ ಭಾವನೆಗಳೇ ಪ್ರಧಾನವಾಗಿರುವ ಚಿತ್ರಕಥೆ ಮೇಲುಗೈ ಸಾಧಿಸುತ್ತದೆ. ಮದುವೆಯಾಗಿ ಪತ್ನಿಯಿಂದ ಭ್ರಮನಿರಸನಕ್ಕೆ ಒಳಗಾಗುವ ಡಾ. ಆಕರ್ಷ್, ಗಂಡು– ಹೆಣ್ಣು ಜತೆಯಾಗಿ ಬದುಕುವ ಸಂಬಂಧಕ್ಕೆ ಹೆಸರು ಬೇಕೇ ಎಂಬ ತೊಳಲಾಟದಲ್ಲಿರುತ್ತಾನೆ.

ಅದಕ್ಕೆ ವ್ಯತಿರಿಕ್ತವಾಗಿ ‘ಲಿವ್–ಇನ್ ರಿಲೇಶನ್‌ಶಿಪ್‌ನಲ್ಲಿರುವ ವಿಕ್ರಾಂತ್– ರೋಶನಿ (ಪ್ರಕಾಶ ಬೆಳವಾಡಿ– ಸುಮನ್ ನಗರಕರ್) ಮಾತುಗಳು ಕುಟುಂಬ ವ್ಯವಸ್ಥೆಯ ಒಳಹೊರಗನ್ನು ಸೂಕ್ಷ್ಮವಾಗಿ ವಿಶ್ಲೇಷಿಸುತ್ತವೆ. ‘ಮದುವೆ ಎಂಬುದೊಂದು ಸಂಸ್ಥೆ. ಅಲ್ಲಿ ನಿಯಮಗಳು ಇರುವುದರಿಂದ ಅದರಲ್ಲಿರಲು ಯಾರು ಬಯಸುತ್ತಾರೆ’ ಎಂಬ ವಿಕ್ರಾಂತ್ ಮಾತುಗಳು ದಾಂಪತ್ಯದ ಇನ್ನೊಂದು ಮುಖವನ್ನು ವಿಮರ್ಶೆಗೆ ಒಡ್ಡುತ್ತವೆ.

ಮೊದಲಾರ್ಧದಲ್ಲಿ ಆಕರ್ಷ್ ಮತ್ತು ಅಚ್ಚರಿಯ ಯುಗಳಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎನ್ನಿಸುತ್ತದೆ. ಆದರೆ ಅನಂತರದ ತಿರುವುಗಳನ್ನು ಗಟ್ಟಿಯಾಗಿ ಕಟ್ಟಿಕೊಡಲು ಅದು ಬೇಕಿತ್ತು ಎಂದ ಮನವರಿಕೆಯಾಗುತ್ತದೆ. ವಿರಾಮದ ನಂತರದ ಸನ್ನಿವೇಶಗಳು ಹೆಚ್ಚು ಎಳೆತವಿಲ್ಲದೆ, ಸರಳವಾಗಿ ಚುರುಕಾಗಿ ಓಡುತ್ತವೆ.

ವಿಜಯ್ ಸೂರ್ಯ ಹಾಗೂ ಮಯೂರಿ ಕಿರುತೆರೆ ಪ್ರಭಾವದಿಂದ ಹೊರಬರಲು ಯತ್ನಿಸಿ, ನಟನೆಯಲ್ಲಿ ಸಫಲರಾಗಿದ್ದಾರೆ. ಇವರಿಗೆ ಹೋಲಿಸಿದರೆ ಕಾವ್ಯ ಶೆಟ್ಟಿ ಒಂದಷ್ಟು ಸಪ್ಪೆ. ಮಲೆನಾಡಿನ ಸೊಬಗನ್ನು ಅಚ್ಚುಕಟ್ಟಾಗಿ ಸೆರೆಹಿಡಿದಿರುವ ಛಾಯಾಗ್ರಾಹಕ ರವಿಕುಮಾರ ಸಾನಾ, ಚಿತ್ರವನ್ನು ಇನ್ನಷ್ಟು ಚೆಂದವಾಗಿಸಿದ್ದಾರೆ.

ಅಜನೀಶ ಲೋಕನಾಥ್ ಸಂಗೀತ ಸಂಯೋಜಿಸಿದ ಹಾಡುಗಳು ಮತ್ತೆ ಮತ್ತೆ ಗುನುಗುವಂತಿವೆ. ಚಿಕ್ಕಣ್ಣ, ಮಂಡ್ಯ ರಮೇಶ, ಬಿ. ಜಯಶ್ರೀ ಪಾತ್ರಗಳಿಗೆ ಹೆಚ್ಚೇನೂ ಕೆಲಸವಿಲ್ಲ. ಕಥೆಗೆ ತಿರುವು ಕೊಡುವಾಗಲೆಲ್ಲ ರಂಗಾಯಣ ರಘು ಕಾಣಿಸಿಕೊಂಡು, ತಮಾಷೆ ಮಾತುಗಳಿಂದ ರಂಜಿಸುತ್ತಾರೆ.

ಕಾದಂಬರಿಗಳಲ್ಲಿ ಹೆಚ್ಚಾಗಿ ಕಾಣುವುದು ಕೌಟುಂಬಿಕ ಕತೆ. ‘ಇಷ್ಟಕಾಮ್ಯ’ ಅದಕ್ಕೆ ಹೊರತೇನಲ್ಲ. ದಾಂಪತ್ಯ, ಪ್ರೀತಿ, ವಿರಸಕ್ಕೆ ಸಂಬಂಧಿಸಿದಂತೆ ‘ಇದೇ ಅಂತಿಮ’ ಎಂದು ಸ್ಪಷ್ಟವಾಗಿ ಷರಾ ಬರೆಯದಿರುವುದು ‘ಇಷ್ಟಕಾಮ್ಯ’ದಲ್ಲಿ ಮೇಲ್ನೋಟಕ್ಕೆ ಕಾಣುತ್ತದೆ. ಆದರೆ ಚರ್ಚೆಗೆ ಇಳಿಯುವ ಇಲ್ಲಿನ ವೈವಿಧ್ಯಮಯ ಪಾತ್ರಗಳು ಕೊನೆಗೂ ಪ್ರತಿಪಾದಿಸುವುದು ‘ಸುಮಧುರ ದಾಂಪತ್ಯಕ್ಕೆ ಹೊಂದಾಣಿಕೆಯೇ ದಾರಿ’ ಎಂಬುದನ್ನೇ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.