ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಂಚ ರೋಚಕ, ಕೊಂಚ ಅಚ್ಚರಿದಾಯಕ

‘ತಮಿಸ್ರ’
Last Updated 2 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

‘ತಮಿಸ್ರ’
ನಿರ್ಮಾಣ: ಆರ್.ಎಂ.ಎನ್. ನಾಗರಾಜ್, ನಿರ್ದೇಶನ: ಪ್ರಕಾಶ್ ಹಾಸನ್, ತಾರಾಗಣ: ಸುಗ್ರೀವ್, ಕಾವ್ಯಾ, ಸಂದೀಪ್ ಆರ್. ನಾಯರ್, ಜೀವನ್ ಸುರೇಶ್.


ಈ ಕಾಲದಲ್ಲೂ ದೆವ್ವದ ಕತೆಯನ್ನು ರೋಚಕವಾಗಿ ಹೇಳುವ ಪ್ರಯತ್ನಗಳು ಆಗಾಗ ನಡೆಯುತ್ತಲೇ ಇವೆ. ಕನ್ನಡದಲ್ಲಿ ಪ್ರೇಕ್ಷಕರ ಮೇಲೆ ಅಷ್ಟೇನೂ ಪರಿಣಾಮ ಬೀರುವುದಿಲ್ಲ ಎಂಬ ಕಾರಣದಿಂದ ಕಡಿಮೆಯಾಗಿದ್ದ ಈ ಪ್ರಯತ್ನ ‘ತಮಿಸ್ರ’ದ ಮೂಲಕ ಮತ್ತೆ ಪ್ರತ್ಯಕ್ಷವಾಗಿದೆ.

ಪ್ರಕಾಶ್ ಹಾಸನ್ ನಿರ್ದೇಶಿರುವ ಈ ಸಿನಿಮಾ ಕನ್ನಡ ಪ್ರೇಕ್ಷಕರನ್ನು ಕೊಂಚ ಅಚ್ಚರಿಗೊಳಿಸಲು ಪ್ರಯತ್ನಿಸಿದೆ. ‘ತಮಿಸ್ರ’ ಗರುಡಪುರಾಣದಲ್ಲಿ ಬರುವ ಸಂಸ್ಕೃತ ಭಾಷೆಯ ಒಂದು ಹೆಸರು. ಬೇರೆಯವರ ವಸ್ತುವಿಗೆ ಆಶೆಪಡುವ ವ್ಯಕ್ತಿಗೆ ನರಕದಲ್ಲಿ ಕೊಡಲಾಗುವ ಶಿಕ್ಷೆಯ ಹೆಸರು ಅದು. ಸಿನಿಮಾದ ಕತೆಯ ಎಳೆಯೂ ಬೇರೆಯವರ ವಸ್ತುವನ್ನು ಹುಡುಕಿಕೊಂಡು ಹೋಗುವ ಹುಡುಗರು ಆ ಮನೆ ಒಡತಿಯ ಭೂತದಿಂದ ತಕ್ಕ ಪಾಠ ಕಲಿಯುವುದನ್ನು ಒಳಗೊಂಡಿದೆ.

ಮೂವರು ಹುಡುಗರು, ಒಬ್ಬ ಹುಡುಗಿ ಸಕಲೇಶಪುರದ ಕಾಡಿನ ಎಸ್ಟೇಟ್‌ ಒಂದರ ಮನೆಯಲ್ಲಿ ಇರುವ ಪುರಾತನ ಕಲಾಕೃತಿಯನ್ನು ತೆಗೆದುಕೊಂಡು ಬರಲು ಹೋಗುತ್ತಾರೆ. ಹಾಗೆ ಹೋಗುವ ಅವರು ಯಾರೂ ಇಲ್ಲದ ಆ ಮನೆಯಲ್ಲಿ ಒಂದು ರಾತ್ರಿ ಪಡುವ ಪಾಡು ಹಾಗೂ ಆತಂಕದ ಕ್ಷಣಗಳನ್ನು ಎದುರಿಸುತ್ತಾರೆ ಎಂಬುದನ್ನು ನಿರ್ದೇಶಕರು ರೋಚಕವಾಗಿ ಹೇಳಲು ಪ್ರಯತ್ನಿಸಿದ್ದಾರೆ. ಇಂತಹ ಸಿನಿಮಾಗಳ ಜೀವವೇ ಮುಂದಿನ ಕ್ಷಣ ಏನು ಘಟಿಸುತ್ತದೆ ಎಂಬುದರಲ್ಲಿ. ಅದು ತಕ್ಕಮಟ್ಟಿಗೆ ಇದರಲ್ಲಿದೆ.

ಇದು ಮಕ್ಕಳಿಗೆ ಹೇಳುವ ನಿಧಿ, ಅದನ್ನು ಕಾಯುವ ಭೂತದ ಕತೆಯನ್ನು ಹೋಲುತ್ತದೆ. ಅಂತಹ ಕತೆಯೊಂದಕ್ಕೆ ಇರಬೇಕಾದ ಮಕ್ಕಳನ್ನು ಕ್ಷಣಕ್ಷಣಕ್ಕೂ ಹಿಡಿದಿಡುವ ಮಾಂತ್ರಿಕ ಗುಣ ಮಾತ್ರ ಇದಕ್ಕಿಲ್ಲ. ಭೂತ, ದೆವ್ವಗಳು ಇವೆಯೇ, ಅವುಗಳ ಚೇಷ್ಟೆ ಯಾವ ಬಗೆಯದು ಎಂಬುದು ಯಾರಿಗೂ ಗೊತ್ತಿಲ್ಲ. ಹಾಗಾಗಿ ನಮ್ಮ  ಭ್ರಮೆಗಳಿಗೆ ಸಂಬಂಧಿಸಿದ ದೆವ್ವಗಳ ಸುಳ್ಳಿನ ಕತೆ ಹೇಳಿ ಜನರನ್ನು ಈಗ ಹೆದರಿಸಲಾಗದು. ಆದರೆ,  ನಾಲ್ಕೇ ಪಾತ್ರಗಳನ್ನು ಇಟ್ಟುಕೊಂಡು ಕತೆಯೊಂದನ್ನು ಒಂದೇ ಪರಿಸರದಲ್ಲಿ ಹೇಗೆ ಪರಿಣಾಮಕಾರಿಯಾಗಿ ಹೇಳಬಹುದು ಎಂಬುದನ್ನು ಇದು ತೋರಿಸಿದೆ.

ಅಪರೂಪದ ವಸ್ತುಗಳನ್ನು ಹುಡುಕಿ ತಂದು ದಿನಬೆಳಗಾಗುವುದರಲ್ಲಿ ಶ್ರೀಮಂತರಾಗುವ ಮನುಷ್ಯನ ಕನಸು ಹಳೆಯದು. ಅದನ್ನೇ ಈಗಿನ ಪ್ರೇಕ್ಷಕರು ನಂಬುವಂತೆ ಹೇಳುವಲ್ಲಿ ಇದು ಎಡವಿದೆ. ಇದನ್ನು ಹೊರತು ಪಡಿಸಿದರೆ ಸಿನಿಮಾದಲ್ಲಿ ಕೆಲವು ಉತ್ತಮ ತಾಂತ್ರಿಕ ಅಂಶಗಳಿವೆ. ಬಹುಪಾಲು ಸಿನಿಮಾ ಕತ್ತಲಲ್ಲಿ ನಡೆಯುತ್ತದೆ. ಅದನ್ನು ಎಸ್.ಕೆ. ಬಾವಿಕಟ್ಟಿ ಅವರ ಛಾಯಾಗ್ರಹಣ ಪರಿಣಾಮಕಾರಿಯಾಗಿ ಹಿಡಿದಿಟ್ಟಿದೆ. ನಾಗತಿಹಳ್ಳಿ ಸಂತೋಷ್ ಅವರ ಚಿತ್ರಕಥೆ, ಸಂಭಾಷಣೆಯಲ್ಲಿ ಇಂತಹ ಸಿನಿಮಾಗಳಿಗೆ ಬೇಕಾದ ಬಿಗು, ಮೊನಚು ಮಾತುಗಳಿವೆ. ಹಳೆಯ ಕತೆಯನ್ನೇ ತೆರೆಗೆ ತಂದರೂ ಹೊಸಹುಡುಗರ ವಿಶಿಷ್ಟ ಪ್ರಯತ್ನವಾಗಿ ಮಾತ್ರ ಇದು ಪ್ರೇಕ್ಷಕರ ಗಮನ ಸೆಳೆಯಬಲ್ಲುದು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT