ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭಾವಳಿಯಲ್ಲಿ ಕಾಣೆಯಾದ ರಜನಿ: ಲಿಂಗ (ತಮಿಳು)

Last Updated 12 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನಿರ್ಮಾಣ: ರಾಕ್‌ಲೈನ್‌ ವೆಂಕಟೇಶ್‌
ನಿರ್ದೇಶನ:  ಕೆ.ಎಸ್‌. ರವಿಕುಮಾರ್‌
ತಾರಾಗಣ: ರಜನಿಕಾಂತ್‌, ಸೋನಾಕ್ಷಿ ಸಿನ್ಹ, ಅನುಷ್ಕಾ ಶೆಟ್ಟಿ, ಕೆ.ವಿಶ್ವನಾಥ್‌, ಜಗಪತಿ ಬಾಬು, ಸಂತಾನಂ, ಮುಂತಾದವರು


ನಾಯಕನನ್ನು ಪ್ರತಿನಾಯಕನನ್ನಾಗಿಯೋ, ಜನ­ನಾಯ­ಕ­ನ­ನ್ನಾಗಿಯೋ ‘ಝೂಮ್‌’ ಮಾಡಿ ತೋರಿಸುವುದು ಸಿನಿಮಾದ ಜನಪ್ರಿಯ ತಂತ್ರಗಳಲ್ಲಿ ಒಂದು. ‘ಲಿಂಗ’ ಸಿನಿಮಾದಲ್ಲಿ ಕಾಣುವುದು ಎರಡನೇ ಪ್ರಕಾರದ ನಾಯಕ.

‘ಅಭಿಮಾನಿಗಳಿಗೆ ರಜನೀಕಾಂತ್‌ ಮುದ್ದು’– ಈ ವಾಕ್ಕನ್ನು ನಿರ್ದೇಶಕ ರವಿಕುಮಾರ್‌ ಉಜ್ಜಿದ್ದಾರೆ. ಅದರ ಹೊಳಪಿನ ಪ್ರಭಾವಳಿಯಲ್ಲಿ ಹಳೆಯ ರಜನಿ ಕಳೆದುಹೋಗಿದ್ದಾರೆ­ನ್ನುವುದು ಕೊರತೆ.

ಸಿನಿಮಾ ಶುರುವಾಗುವುದು ಲವಲವಿಕೆಯ ಕೆಲವು ಸಂಭಾಷಣೆಗಳಿಂದ. ಆಮೇಲೆ  ಹೊರಳುವುದು ಕಳ್ಳತನದ ಎಪಿಸೋಡಿಗೆ. ಅಲ್ಲಿಂದ ನಾಯಕ ತನ್ನ ಬೇರಿನ ಊರಿಗೆ ತಲುಪುವಂತೆ ಮಾಡುವ ಅನುಕೂಲಸಿಂಧುತ್ವ. ಅಲ್ಲೊಂದು ಪೂರ್ವವೃತ್ತಾಂತ. ಸ್ವಾತಂತ್ರ್ಯ ಪೂರ್ವದ ಕಾಲಕ್ಕೆ ಸಿನಿಮಾ ಹೊರಳುವ ಮೂಲಕ ಪ್ರಕಟ­ಗೊಳ್ಳುವುದು ‘ಫ್ಲ್ಯಾಷ್‌ಬ್ಯಾಕ್‌’ನ ಇನ್ನೊಂದು ಜನಪ್ರಿಯ ತಂತ್ರ.

ರೈಲಿನಲ್ಲಿ ಒಂದು ಮೈನವಿರೇಳಿಸುವ ಹೊಡೆದಾಟ ಮುಗಿದದ್ದೇ ಸಿನಿಮಾ ತೆವಳತೊಡಗುತ್ತದೆ. ಬ್ರಿಟಿಷರ ಜೊತೆಗಿನ ತಣ್ಣನೆಯ ಸಂಘರ್ಷ, ಕಂಡೂ ಕಾಣದ ಪ್ರೇಮ, ಪರಮ ಜನಾನುರಾಗ ಇವೆಲ್ಲವನ್ನೂ ನಿರ್ದೇಶಕರು ದೃಶ್ಯಕ್ಕೆ ತಂದಿರುವ ಬಗೆ ‘ಫ್ಯಾನ್ಸಿ ಡ್ರೆಸ್‌’ ಪ್ರದರ್ಶನದಂತೆ ಪೇವಲವಾಗಿ, ಒಂದು ಘಟ್ಟದಲ್ಲಿ ಡಾಕ್ಯುಮೆಂಟರಿಯ ರೂಹು ಪಡೆದು, ಬೇಸರ ಮೂಡಿಸುತ್ತದೆ.

ರಜನಿಕಾಂತ್‌ ಮ್ಯಾನರಿಸಂಗಳ ರಸಪಾಕ ಕೂಡ ಒತ್ತೊತ್ತಾಗಿ ಇಲ್ಲ. ಮಾತಿನ ಇದಿರೇಟು ಅಲ್ಲಲ್ಲಿ ಮಿಂಚಿದರೂ ಒಟ್ಟಾರೆ ರಜನಿ ಜೀವಂತಿಕೆ ಮಾಯ.  ತರ್ಕವನ್ನು ಬದಿಗೊತ್ತಿ ನೋಡಿ­ದರೂ ಸೋನಾಕ್ಷಿ ಸಿನ್ಹ ಪಾತ್ರ ಪಕ್ಕಾ ವೇಷಧಾರಿಯೊಬ್ಬಳ ನಿಸ್ತೇಜ ಸಂಚಾರವೆನಿ­ಸುತ್ತದೆ. ಅವರ ಅಭಿನಯ ಪ್ರತಿಭೆಗಾಗಲೀ ಗ್ಲಾಮರ್‌­ಗಾಗಲೀ ಎಳ್ಳಷ್ಟೂ ಅವಕಾಶವಿಲ್ಲ. ಇನ್ನೊಬ್ಬ ನಾಯಕಿ ಅನುಷ್ಕಾ ಶೆಟ್ಟಿ ಸಿನಿಮಾದಲ್ಲಿ ಇದ್ದೂ ಇಲ್ಲದಿರುವಷ್ಟು ಕಡಿಮೆ ಅವಧಿ ಕಾಣಿಸಿಕೊಂಡಿದ್ದಾರೆ.

ಸಂತಾನಂ, ವಿಶ್ವನಾಥ್‌, ಬ್ರಹ್ಮಾನಂದಂ, ಜಗಪತಿಬಾಬು ಹೀಗೆ ತಮಿಳು–ತೆಲುಗು ತಾರಾಗಣದ ದೊಡ್ಡ ಕ್ರೋಡೀಕರಣವೇ ಆಗಿದ್ದು, ಎಲ್ಲರೂ ಗುಂಪಿನಲ್ಲಿ ಗೋವಿಂದ ಎನಿಸಿಬಿಡುತ್ತಾರೆ. ಎ.ಆರ್‌. ರೆಹಮಾನ್‌ ಸಂಗೀತಕ್ಕೆ ಕೊಡಲಾಗುವುದೂ ಕಡಿಮೆ ಅಂಕಗಳನ್ನು. 
‘ಶಿವಾಜಿ’ಯ ಲವಲವಿಕೆ, ‘ರೋಬೋ’ದ ಕಾಡುವ ಗುಣಗಳು, ರಜನಿ ಅಸ್ಮಿತೆ ಎಲ್ಲಕ್ಕೂ ಹುಡುಕಾಡಬೇಕಾ­ದದ್ದರಿಂದ ‘ಲಿಂಗ’ ಮೆಚ್ಚಿ ಅಹುದಹುದು ಎನ್ನಲಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT