ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆಮರೆಗೆ ಸರಿದಿದ್ದ ಹರಿಕಥೆಗೆ ಹೊಸನೀರು

Last Updated 7 ಜನವರಿ 2023, 19:30 IST
ಅಕ್ಷರ ಗಾತ್ರ

ತೆರೆಮರೆಗೆ ಸರಿದಿದ್ದ ಹರಿಕಥೆ ದಕ್ಷಿಣ ಬೆಂಗಳೂರಿನ ಸುತ್ತಮುತ್ತ ಯುವ ಕಲಾವಿದರ ಮೂಲಕ ಮರುಚೇತನ ಪಡೆಯುತ್ತಿದೆ. ಹೀಗೆ ತಾಳ ತಂಬೂರಿ ಮತ್ತೆ ಮಿಡಿಯಲು ಸಿಕ್ಕಿದ ಸ್ಫೂರ್ತಿ ಯಾವುದು? ಆ ಕಥೆ ಇಲ್ಲಿದೆ

***

ಒಮ್ಮೆ ಚಾಮರಾಜಪೇಟೆಯ ರಾಮೇಶ್ವರ ದೇವಾಲಯದಲ್ಲಿ ಜನರು ಕಿಕ್ಕಿರಿದು ನೆರೆದಿದ್ದರಂತೆ. ‘ಅರೆ, ಇಷ್ಟೊಂದು ಜನರು ಏನೋ ಕೇಳುತ್ತ ಕೂತಿದ್ದಾರಲ್ಲ’ ಎಂದುಕೊಂಡ ಸರ್ ಎಂ. ವಿಶ್ವೇಶ್ವರಯ್ಯನವರು ಕೂಡ ಹೋಗಿ ಅವರೊಂದಿಗೆ ಕುಳಿತರಂತೆ. ಇದು ಸುಮಾರು 1920ರ ಮಧ್ಯ ಭಾಗದಲ್ಲಿರಬಹುದು. ಆ ಕಾಲಕ್ಕೆ ಬಹಳ ಹೆಸರುವಾಸಿಯಾಗಿದ್ದ ವೆಂಕಣ್ಣ ದಾಸರ ಹರಿಕಥೆಯನ್ನು ಕೇಳುವುದಕ್ಕೆಂದು ಅಷ್ಟು ಜನರು ನೆರೆದಿದ್ದರಂತೆ.

ಹರಿಕಥೆ ಮುಗಿದ ನಂತರ ಹೋಗಿ ವೆಂಕಣ್ಣ ದಾಸರನ್ನು ಮಾತನಾಡಿಸಿದ ಸರ್ ಎಂವಿ ಹೇಳಿದರಂತೆ, ‘ಅಲ್ಲಾ ಸ್ವಾಮಿ... ಜನರು ಮೈಯೆಲ್ಲ ಕಿವಿಯಾಗಿಸಿಕೊಂಡು ನಿಮ್ಮ ಮಾತು ಕೇಳ್ತಾ ಕೂತಿರುತ್ತಾರೆ. ಯಾಕೆ ಸುಮ್ಮನೇ ಕಥೆ ಹೇಳಿಕೊಂಡು ಕಾಲಕ್ಷೇಪ ಮಾಡುತ್ತೀರಿ? ಇದೇ ಅವಕಾಶ ಬಳಸಿಕೊಂಡು, ಜನರು ಒಳ್ಳೆಯ ನಾಗರಿಕರಾಗುವಂತೆ, ಅವರಿಗೆ ಶಿಕ್ಷಣ ನೀಡಬಹುದಲ್ಲವೇ?’

ಅದಕ್ಕೆ ದಾಸರು ನಕ್ಕು ಹೇಳಿದರಂತೆ, ‘ಜನರು ಒಳ್ಳೆಯ ನಾಗರಿಕರಾಗಬೇಕು ಅಂದರೆ ಅವರ ವ್ಯಕ್ತಿತ್ವವನ್ನು ರೂಪಿಸಬೇಕು, ಬರಿಯ ನೀತಿ ಬೋಧನೆಯಿಂದ ಉಪಯೋಗವಿಲ್ಲ. ಜನರೊಳಗೆ ಕಥೆಗಳ ಮೂಲಕವೇ ಅರಿವು ಮೂಡುತ್ತದೆ. ಕಥೆಗಳು ಬಹುಮುಖ್ಯ. ಕಥೆಗಳು ನಮ್ಮತನವನ್ನು ರೂಪಿಸಿ, ನಮ್ಮನ್ನು ಗಟ್ಟಿಗೊಳಿಸುತ್ತವೆ. ನಮ್ಮೊಳಗೆ ಸಹೃದಯತೆಯನ್ನು ಮೂಡಿಸುತ್ತವೆ.’

ಆಗ ‘ಹೌದು, ನೀವು ಹೇಳೋದೂ ನಿಜವೇ’ ಎಂದು ಸರ್ ಎಂವಿ ತಲೆದೂಗಿದರಂತೆ.

ಬೆಂಗಳೂರು ಇತಿಹಾಸದ ಕುರಿತು ಅಪಾರವಾಗಿ ಬರೆದಿರುವ ಖ್ಯಾತ ಅಂಕಣಕಾರ ಸುರೇಶ್ ಮೂನ ಈ ಘಟನೆಯನ್ನು ಹೇಳುತ್ತ, ‘ಪೌರಾಣಿಕ ಕಥೆ’ಗಳು ಎಂಬ ಮಿತಿಯನ್ನು ಮೀರಿದ ಈ ಕಥೆಗಳೇ ಹರಿಕಥೆಗಳನ್ನು ಕೇಳುವುದಕ್ಕೆ ಜನರು ಮುಗಿಬೀಳುವುದಕ್ಕೆ ಕಾರಣವಾಗಿತ್ತು ಎನ್ನುತ್ತಾರೆ. ಆದರೆ ಇತ್ತೀಚಿನ ದಶಕಗಳಲ್ಲಿ ಈ ಕಲಾ ಪ್ರಕಾರವು ಕ್ರಮೇಣ ಮೂಲೆಗುಂಪಾಗುತ್ತ, ನಗರದ ಗತವೈಭವದ, ಇತಿಹಾಸದ ಭಾಗವಾಗಿದೆ.

ಹದವಾಗಿ ಬೆರೆತ ಕಥೆ, ಕೀರ್ತನೆ, ರಂಜನೆ: ಒಂದು ಕಾಲಕ್ಕೆ ಎಲ್ಲ ವಯೋಮಾನದವರಿಗೆ ರಂಜನೆಯ ಜೊತೆಗೇ ಬೋಧಪ್ರದವೂ ಆಗಿದ್ದ ಈ ಕಲೆ ಕ್ರಮೇಣ ವಯಸ್ಸಾದವರಿಗೆ ಲಾಯಕ್ಕಾದ ಧಾರ್ಮಿಕ ಗೊಡ್ಡುಕಥೆ ಎಂಬ ಕುಚೋದ್ಯಕ್ಕೆ ಈಡಾಯಿತು. ಹೆಚ್ಚಿನ ಕಲಾವಿದರು ಕಾರ್ಯಕ್ರಮದ ಅವಕಾಶಗಳು ಕಡಿಮೆಯಾಗುತ್ತಿದ್ದಂತೆ ಹೊಟ್ಟೆಪಾಡು ಕಷ್ಟವಾಗುತ್ತ, ಹತಾಶೆಗೊಂಡು ಹರಿಕಥೆ ಮಾಡುವುದನ್ನೂ ಕೈಬಿಟ್ಟರು ಅಥವಾ ಬೇರೆ ಕಲಾಪ್ರಕಾರಗಳತ್ತ ಮುಖ ಮಾಡಿದರು. ಸಂಗೀತ, ಅಭಿನಯ, ಪುರಾಣ ಹಾಗೂ ನೀತಿಕಥೆ, ಆಗೀಗ ತಿಳಿ ಹಾಸ್ಯ, ರಂಜನೆ ಇತ್ಯಾದಿಗಳ ಮೂಲಕ ಆದರ್ಶ, ಸನ್ನಡತೆ, ಸುಸಂಸ್ಕೃತಿಯ ಜೀವನಮಾರ್ಗವನ್ನು ರೂಢಿಸಿಕೊಳ್ಳಲು ಪ್ರೇರಣೆ ಒದಗಿಸುತ್ತಿದ್ದ ಈ ಕಲೆ ಕ್ರಮೇಣ ತನ್ನ ನೆಲೆಯನ್ನು ಕಳೆದುಕೊಂಡಿತು.

‘ಎಷ್ಟೋ ಜನ ಹರಿಕಥೆ ದಾಸರು ತಮಗೆ ಸಲ್ಲಬೇಕಿದ್ದ ಗೌರವ, ಪ್ರಸಿದ್ಧಿ ಏನನ್ನೂ ಪಡೆಯದೇ ತೆರೆಮರೆಯಲ್ಲೇ ಉಳಿದುಬಿಟ್ಟರು. ಪಾಂಡಿತ್ಯಕ್ಕೆ ಹೆಸರಾಗಿದ್ದ ವೆಂಕಣ್ಣ ದಾಸರು ಮತ್ತು ಅವರ ನಾಲ್ಕು ಜನ ಮಕ್ಕಳು ತಮ್ಮ ಹರಿಕಥೆಯಲ್ಲಿ ನಿತ್ಯಜೀವನದ ಪಡಿಪಾಟಲುಗಳನ್ನು ಸೇರಿಸಿಕೊಂಡು ತಿಳಿಹಾಸ್ಯದಲ್ಲಿ ನಿರೂಪಿಸುತ್ತಿದ್ದರು. ಈ ಅದ್ಭುತ ಕೌಶಲದಿಂದಾಗಿ ಅವರ ಹರಿಕಥೆಗಳು ಪುರಾಣದ ಕಥೆಗಳ ಜೊತೆಗೇ ಸಾಮಾಜಿಕ-ರಾಜಕೀಯ ಸ್ಥಿತಿಗತಿಗಳ ಕನ್ನಡಿಯೂ ಆಗಿರುತ್ತಿತ್ತು. ಹೀಗಾಗಿ ಜನಸಾಮಾನ್ಯರಿಗೂ ತಲುಪಿತು’ ಎಂದು ಮೂನ ಹೇಳುತ್ತಾರೆ.

‘ಇನ್ನು ಭದ್ರಗಿರಿ ಅಚ್ಯುತದಾಸರು ಹಾಗೂ ಅವರ ಸಹೋದರ ಕೇಶವದಾಸರು ಇಂಗ್ಲಿಷಿನಲ್ಲಿ ಹರಿಕಥೆ ಮಾಡುತ್ತ, ಹಲವಾರು ದೇಶಗಳಲ್ಲಿಯೂ ಕಾರ್ಯಕ್ರಮ ನೀಡಿದ್ದರು. ಗುರುರಾಜುಲು ನಾಯ್ಡು ಬಹಳ ಚಿತ್ತಾಕರ್ಷಕವಾಗಿ ಹರಿಕಥೆ ಮಾಡುತ್ತಿದ್ದರು. ಅವರ ಹೆಣ್ಣುಮಕ್ಕಳು ಕೂಡ ಮಹಿಳಾ ಹರಿಕಥೆ ದಾಸರಲ್ಲಿ ಬಹಳ ಪ್ರಮುಖರಾಗಿದ್ದರು’ ಎಂದು ಅವರು ಹರಿಹಥೆಯ ಆ ಸಂಭ್ರಮದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಈ ಕಲೆ ಉಳಿದುಕೊಳ್ಳಲು ಸಾಧ್ಯವಾಗದೇ ಇದ್ದಿದ್ದಕ್ಕೆ ಇನ್ನೊಂದು ಕಾರಣವೆಂದರೆ ಈ ಕಲಾಪ್ರಕಾರದ ವಿಶಿಷ್ಟ ಲಕ್ಷಣ ಹಾಗೂ ಕಲಾವಿದರು ಬಹುಶ್ರುತರಾಗಿರಬೇಕಾದ ಅಗತ್ಯ. ಹರಿಕಥೆ ದಾಸರಿಗೆ ಕೇವಲ ವಾಗ್ವಿಲಾಸದ ಕಲೆ ಗೊತ್ತಿದ್ದರಷ್ಟೇ ಸಾಲದು, ಅವರಿಗೆ ಸಂಗೀತ, ಅಭಿನಯ, ನೃತ್ಯ, ತತ್ವಶಾಸ್ತ್ರ, ಪೌರಾಣಿಕ ಕಥೆ ಹಾಗೂ ಇತಿಹಾಸದ ಜ್ಞಾನ ಇವೆಲ್ಲವೂ ಗೊತ್ತಿರಬೇಕು. ಅಷ್ಟೇ ಅಲ್ಲ, ಆಯಾ ಕಾಲಘಟ್ಟದ ಸಾಮಾಜಿಕ-ರಾಜಕೀಯ ಒಲವುಗಳನ್ನು ಗ್ರಹಿಸಿ, ಅದನ್ನು ಚುರುಕು ಹಾಸ್ಯದೊಂದಿಗೆ ಬೆರೆಸಿ, ತತ್‍ಕ್ಷಣಕ್ಕೆ ಪ್ರದರ್ಶಿಸುವ ಕಲೆಯೂ ಗೊತ್ತಿರಬೇಕು.

ಚಿಗುರುತ್ತಿರುವ ಆಸಕ್ತಿ: ಕ್ರಮೇಣ ತೆರೆಮರೆಗೆ ಸರಿದಿದ್ದ ಹರಿಕಥೆ ದಕ್ಷಿಣ ಬೆಂಗಳೂರಿನ ಸುತ್ತಮುತ್ತಲಿನಲ್ಲಿ ಇತ್ತೀಚಿನ ದಿನಗಳಲ್ಲಿ ಯುವ ಕಲಾವಿದರ ಮೂಲಕ ಮರುಚೇತನ ಪಡೆದು, ನಿಧಾನಕ್ಕೆ ವ್ಯಾಪ್ತಿ ಹೆಚ್ಚಿಸಿಕೊಳ್ಳುತ್ತಿರುವುದು ಕುತೂಹಲಕಾರಿ ಬೆಳವಣಿಗೆ. ಇದಕ್ಕೆ ಯುಟ್ಯೂಬ್, ಸಾಮಾಜಿಕ ಮಾಧ್ಯಮ ಮತ್ತು ಆನ್‍ಲೈನ್ ವೇದಿಕೆಗಳು ಕಲಾವಿದರಿಗೆ ಹೊಸರೀತಿಯ ಸ್ಥಳಾವಕಾಶ ಒದಗಿಸುತ್ತಿರುವುದೇ ಕಾರಣ. ಹೀಗಾಗಿ ಈಗ ಹರಿಕಥೆಯು ಜಾಗತಿಕ ಮಟ್ಟದಲ್ಲಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಹರಿಕಥೆಯನ್ನು ಪಠ್ಯಕ್ರಮದಲ್ಲಿ ಸೇರಿಸಬೇಕೆಂದು ಶಿಫಾರಸು ಮಾಡಿರುವುದು ಈ ಸಾಂಪ್ರದಾಯಿಕ ಕಲಾ ಪ್ರಕಾರಕ್ಕೆ ಬಲವಾದ ಪ್ರೋತ್ಸಾಹ ನೀಡಿದಂತಾಗಿದೆ. ಬೆಂಗಳೂರು ವಾಸಿ ಹರಿಕಥಾ ಕಲಾವಿದರಾದ ದುಷ್ಯಂತ ಶ್ರೀಧರ್ ಇದೊಂದು ಸ್ವಾಗತಾರ್ಹ ಕ್ರಮ ಎನ್ನುತ್ತಾರೆ. ‘ಮಕ್ಕಳಿಗೆ ನಮ್ಮದೇ ಸಂಸ್ಕೃತಿಯಲ್ಲಿ ಬೇರುಬಿಟ್ಟ ಪರ್ಯಾಯ ಮನರಂಜನೆಗಳನ್ನು ಒದಗಿಸದಿದ್ದರೆ, ಹಿಂಸಾತ್ಮಕ ವಿಡಿಯೊ ಹಾಗೂ ತಿಳಿಗೇಡಿ ಕಾರ್ಟೂನ್‍ಗಳಿಂದ ಅವರು ವಿಮುಖರಾಗಬೇಕೆಂದು ಹೇಗೆ ನಿರೀಕ್ಷಿಸುವುದು’ ಎಂದು ಕೇಳುತ್ತಾರೆ.

ಇಂಗ್ಲಿಷ್ ಹಾಗೂ ತಮಿಳಿನಲ್ಲಿ ಮನಸೆಳೆಯುವ ಹರಿಕಥೆ ಪ್ರದರ್ಶನ ನೀಡುವ ದುಷ್ಯಂತರ ಯುಟ್ಯೂಬ್‍ ಚಾನೆಲ್‍ಗೆ 116000ಕ್ಕೂ ಹೆಚ್ಚು ಜನ ಚಂದಾದಾರರಾಗಿದ್ದಾರೆ. ಅವರು ಮೊದಲು ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡುತ್ತ, ಇದನ್ನು ಹವ್ಯಾಸವಾಗಿ ಬೆಳೆಸಿಕೊಂಡರು. ‘ಇಂಗ್ಲಿಷ್‍ನಲ್ಲಿ ಹರಿಕಥೆ ಮಾಡುವುದಕ್ಕೆ ಬಹಳ ಬೇಡಿಕೆ ಇದೆ, ಆದರೆ ಕೆಲವೇ ಕಲಾವಿದರು ಇಂಗ್ಲಿಷಿನಲ್ಲಿಯೂ ಮಾಡಬಲ್ಲರು’ ಎನ್ನುತ್ತಾರೆ ಅವರು.

ಇತ್ತೀಚೆಗೆ ಜನರಲ್ಲಿ ಮತ್ತೆ ಆಸಕ್ತಿ ಕುದುರುತ್ತಿದೆ ಎನ್ನುವ ವೆಂಕಣ್ಣದಾಸರ ಮರಿಮೊಮ್ಮಗ ಶರತ್. ಅವರು ಪ್ರಭಾತ್ ವೇದಿಕೆ ಕಾರ್ಯಕ್ರಮಗಳ ಜೊತೆಗೆ ಆನ್‍ಲೈನ್‌ನಲ್ಲಿಯೂ ಪ್ರದರ್ಶನ ನೀಡುತ್ತಾರೆ. ‘ನನ್ನ ಅಜ್ಜಂದಿರಂತೆ ನಾನು ಈಗ ಹರಿಕಥೆ ಮಾಡೋದಕ್ಕೆ ಆಗೋದಿಲ್ಲ. ಅವುಗಳ ಸಾರ ಇಟ್ಟುಕೊಂಡು, ಇಂದಿನ ಅಗತ್ಯಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಳ್ಳುತ್ತೇನೆ. ನಮ್ಮಜ್ಜ ಸಂಧ್ಯಾವಂದನೆ ಬಗ್ಗೆ ತಿಳಿಹಾಸ್ಯದಲ್ಲಿ ಹೇಳಿದಂತೆ ನಾನು ಹೇಳಕ್ಕೆ ಆಗಲ್ಲ, ನಾನೀಗ ನೋಟು ಅಮಾನ್ಯಗೊಳಿಸಿದ್ದರ ಬಗ್ಗೆ ಹಾಸ್ಯ ಮಾಡ್ತೀನಿ’ ಎನ್ನುತ್ತಾರೆ ಶರತ್.

33 ವರ್ಷದ ಈ ಯುವ ಕಲಾವಿದ ‘ಪೂರ್ಣ ಸಾಮಾಜಿಕ’ ವಿಷಯದ ಬಗ್ಗೆಯೂ ಕೆಲವು ಪ್ರಯೋಗಗಳನ್ನು ಮಾಡಿದ್ದಾರೆ. ಹಿಂದೂ ಮದುವೆ ಸಂಪ್ರದಾಯಗಳ ಅರ್ಥವನ್ನು ವಿಷಯವಾಗಿಟ್ಟುಕೊಂಡು ಮದುವೆ ಹಿಂದಿನ ದಿನದ ಕಾರ್ಯಕ್ರಮದಲ್ಲಿ ಒಂದು ಹರಿಕಥೆಯನ್ನು ಮಾಡಿದ್ದರು. ಆದರೆ ಈ ಬಗೆಯ ನೇರ ಕಾರ್ಯಕ್ರಮಗಳಲ್ಲಿ ಇರುವ ಉಲ್ಲಾಸ, ಹುಮ್ಮಸ್ಸು ಆನ್‍ಲೈನ್ ಕಾರ್ಯಕ್ರಮಗಳಲ್ಲಿ ಇರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸುವ ಅವರು ಆನ್‍ಲೈನ್‌ನಲ್ಲಿ ಕೆಲವು ಅನುಕೂಲತೆಗಳು ಇವೆ ಎನ್ನುತ್ತಾರೆ.

‘ನಾನು ಮಧ್ಯೆಮಧ್ಯೆ ವಿರಾಮ ತೆಗೆದುಕೊಂಡು, ಮತ್ತೆ ವಿಡಿಯೊ ಶೂಟ್ ಮಾಡಬಹುದು. ಜೊತೆಗೆ ವೀಕ್ಷಕರು ಕೂಡ ವಿಡಿಯೊಗಳನ್ನು ಮತ್ತೆಮತ್ತೆ ನೋಡಬಹುದು, ಭಾಷೆ ಅರ್ಥವಾಗದಿದ್ದರೆ, ಸಬ್‍ಟೈಟಲ್ ನೋಡಿಕೊಳ್ಳಬಹುದು’ ಎಂದು ಆನ್‍ಲೈನಿನಲ್ಲಿ ಸಕ್ರಿಯವಾಗಿರುವ ಶರತ್ ಹೇಳುತ್ತಾರೆ. ತರಗತಿಗಳನ್ನು ತೆಗೆದುಕೊಂಡು ಕಲಿಸಿ ಎಂದು ಹಲವರು ಕೇಳಿಕೊಳ್ಳುತ್ತಿರುವುದರಿಂದ, ಸದ್ಯದಲ್ಲಿಯೇ ಯುವಜನರಿಗೆ ತರಗತಿ ಶುರು ಮಾಡುವ ಆಶಯವಿದೆ ಅವರಿಗೆ.

ಬುದ್ಧಿ-ಭಾವದ ವಿಕಾಸಕ್ಕೆ...: ಈಗ ಹರಿಕಥೆ ಮಾಡುತ್ತಿರುವವರಲ್ಲಿ ಮನೆಮಾತಾಗಿರುವ ವಿಶಾಖಾ ಹರಿ ಈಗಾಗಲೇ ತಮ್ಮ ‘ವಿಜಯಶ್ರೀ ಸ್ಕೂಲ್ ಆಫ್ ಹರಿಕಥಾ’ ಮೂಲಕ ಹಲವಾರು ಆಸಕ್ತರಿಗೆ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. 2020ರ ಫೆಬ್ರವರಿಯಲ್ಲಿ ಆರಂಭವಾದ ಈ ಶಾಲೆಗೆ ಯಾವ ವಯಸ್ಸಿನವರಾದರೂ ಸೇರಿಕೊಳ್ಳಬಹುದು. ವಿದ್ಯಾರ್ಥಿಗಳನ್ನು ಪ್ರೌಢತೆಯ ಆಧಾರದಲ್ಲಿ ಗುಂಪು ಮಾಡುತ್ತಾರೆ. 28-30 ವರ್ಷದವರು ಆರಂಭಿಕ ತರಗತಿಗಳಿಗೂ ಹೋಗಬಹುದು, ಹತ್ತು ವರ್ಷದ ಪುಟಾಣಿಗೆ ಯೋಗ್ಯತೆಯಿದ್ದರೆ ಹಿರಿಯರ ತರಗತಿಗೂ ಹೋಗಬಹುದು.

‘ಕೋವಿಡ್ ಸಮಯದಲ್ಲಿ ನಾವು ಆನ್‍ಲೈನ್ ತರಗತಿಗಳನ್ನು ಶುರುಮಾಡಿದಾಗ, ಎಲ್ಲೆಲ್ಲೋ ಇದ್ದ 7-8 ವರ್ಷದ ಪುಟಾಣಿಗಳು ಕೂಡ ತರಗತಿಗೆ ಸೇರಿದರು. ಆ ಮಕ್ಕಳ ಗ್ರಹಣ ಶಕ್ತಿ, ಹೊಸತನ ಅರಸುವ ಹುಮ್ಮಸ್ಸು ನಮಗೆ ಅಚ್ಚರಿಯೆನ್ನಿಸಿತು’ ಎನ್ನುತ್ತಾರೆ ವಿಶಾಖಾ.

ಇಂದಿನ ಒತ್ತಡದ ದಿನಮಾನದಲ್ಲಿ ಹರಿಕಥೆಗಳಂತಹ ಕಲಾ ಪ್ರಕಾರಗಳು ಮಾನಸಿಕ ಸಮಾಲೋಚನೆಗೆ ಸಮನಾಗಿವೆ ಎಂದು ವಿಶಾಖಾ ಭಾವಿಸುತ್ತಾರೆ. ‘ಕಥೆಗಳು ನಮ್ಮ ಚಿಂತನೆಗಳನ್ನು ರೂಪಿಸುತ್ತವೆ, ನಮ್ಮ ಕಲ್ಪನೆಯಲ್ಲಿ ನೆಲೆಯೂರಿ, ನಮಗೆ ಮಾರ್ಗದರ್ಶನ ಮಾಡುತ್ತವೆ. ಹೀಗೆ ಕಥೆಗಳನ್ನು ಹಾಡು, ಅಭಿನಯ, ತಿಳಿಹಾಸ್ಯದೊಂದಿಗೆ ನಿರೂಪಿಸಿದಾಗ, ಕಥೆಗಳೇ ನಾವಾಗುತ್ತೇವೆ’ ಎನ್ನುವ ವಿಶಾಖಾ ಮಾತಿನಲ್ಲಿ ಬಹಳ ಹಿಂದೆ ಸರ್ ಎಂವಿಗೆ ವೆಂಕಣ್ಣ ದಾಸರು ಹೇಳಿದ್ದು ಪ್ರತಿಧ್ವನಿಸುತ್ತದೆ.

ಕನ್ನಡಕ್ಕೆ: ಸುಮಂಗಲಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT