ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಹಾಡದ ಕೋಗಿಲೆ‌... ಎಸ್‌ಪಿಬಿ ಅವರೊಂದಿಗೆ ಮಧುರ ನೆನಪು

Last Updated 2 ಅಕ್ಟೋಬರ್ 2020, 0:49 IST
ಅಕ್ಷರ ಗಾತ್ರ

ಈಚೆಗೆ ನಿಧನರಾದ ಸಂಗೀತ ಕ್ಷೇತ್ರದ ದಿಗ್ಗಜ ಎಸ್.ಪಿ.ಬಾಲಸುಬ್ರಹ್ಮಣ್ಯಂ (ಎಸ್‌ಪಿಬಿ) ಅವರ ಜತೆಗಿನ ಒಡನಾಟದ ನೆನಪುಗಳೇ ಮಧುರವಾದು. ಅವರನ್ನು ನೇರ ಕಾರ್ಯಕ್ರಮದ ಮೂಲಕ ಇನ್ನು ನೋಡಲು ಸಾಧ್ಯವಾಗದೆ ಇದ್ದರೂ ‘ಜೊತೆಯಲಿ... ಜೊತೆ ಜೊತೆಯಲಿ... ಇರುವೆನು ಹೀಗೇ ಎಂದೂ...’ ಎಂಬ ಹಾಡಿನ ಮೂಲಕ, ‘ನೂರೊಂದು ನೆನಪಾಗಿ’ ಎಂಬ ಗಾಯನ ದಲ್ಲಿ ಧ್ವನಿಯಾಗಿ ನಮ್ಮ ಮಧ್ಯದಲ್ಲೇ ಇರುತ್ತಾರೆ ಎಂದು ಸಮಾಧಾನ ಪಟ್ಟುಕೊಳ್ಳಬೇಕಿದೆ.

2005 ಹಾಗೂ 2007ರಲ್ಲಿ ಎಸ್‌ಪಿಬಿ ಅವರನ್ನು ಭೇಟಿಯಾಗುವ ಸಂದರ್ಭ ನನಗೆ ಒದಗಿಬಂದಿತ್ತು.

2005ರಲ್ಲಿ ಎಸ್‌ಪಿಬಿ ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ‘ಸಂಗೀತ-ಸುಮಧುರ ಸಂಜೆ’ ಕಾರ್ಯಕ್ರಮವನ್ನು ನಡೆಸಿಕೊಟ್ಟಾಗ ಭೇಟಿಯಾಗುವ ಅವಕಾಶ ಸಿಕ್ಕಿತ್ತು. ‘ಭಗವಾನ್ ಮಹಾವೀರ್ ಜೈನ್ ಆಸ್ಟತ್ರೆಯ’ ವೈದ್ಯರ ತಂಡದ ಸದಸ್ಯೆಯಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ದೊರಕಿತ್ತು. ನನ್ನ ಪತಿ ಡಾ.ಕಿಶೋರ್ ಮೂರ್ತಿ ‘ಜೈನ್ ಹಾಸ್ಪಿಟಲ್’ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದರು.

ಎಸ್.ಪಿ.ಬಾಲ ಸುಬ್ರಹ್ಮಣ್ಯಂ ಅವರ ಆರೋಗ್ಯದ ಜವಾಬ್ದಾರಿಯನ್ನು ಆ ದಿನ ಸಂಜೆ ಆರು ಗಂಟೆಯಿಂದ ರಾತ್ರಿ ಹತ್ತು ಗಂಟೆಯವರಿಗೆ ವಿಚಾರಿಸುವ ಹೊಣೆಯನ್ನು ನಮ್ಮ ತಂಡಕ್ಕೆ ವಹಿಸಿದ್ದರು. (ವಿಮಾನ ಯಾನದ ಬಳಲಿಕೆ, ಕಾರ್ಯಕ್ರಮದ ಅಭ್ಯಾಸದಿಂದ ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರೆ ಚಿಕಿತ್ಸೆ ನೀಡಬೇಕಾಗಬಹುದೆಂದು ಆಯೋ ಜಕರು ನಿಯೋಜಿಸಿದ್ದರು).

ಅಂದು ಸಂಜೆ 7.30ಕ್ಕೆ ಚಹಾ ವಿರಾಮದ ವೇಳೆ ಎಸ್‌ಬಿಬಿ ಅವರು ಲವಲವಿಕೆಯಿಂದ ನನ್ನೊಡನೆ ಮಾತನಾಡಿದರು. ‘ಸರ್ ನಿಮ್ಮ ಹಾಗೂ ನಮ್ಮ ನೆಚ್ಚಿನ ಹೀರೋಗೆ ಜೈನ್ ಆಸ್ರತ್ರೆಯಲ್ಲಿ ‘ಫಿಸಿಯೋಥೆರಪಿ’ ಹಾಗೂ ‘ಪಾದಗಳ ರಕ್ಷಣೆ’ (ಪೋಡಿಯಾಟ್ರಿಕ್ ಕೇರ್) ನಡೆಸಲಾಗುತ್ತಿದೆ’ ಎಂದು ನಾನು ಒಗಟಿನಂತೆ ಹೇಳಿದ್ದೆ. ತಕ್ಷಣ ಎಸ್‌ಪಿಬಿ ಅವರು ‘ಹೇಗಿದ್ದಾನಮ್ಮಾ ವಿಷ್ಣು?!’ ಎಂದು ಪ್ರಶ್ನಿಸಿದ್ದರು.

‘ಕರ್ನಾಟಕ ಚಾಪ್ಟರ್ ಆಫ್ ಹಿಮೋಫಿಲಿಯ’ ಬಗ್ಗೆ ನಾನು ‘ಡೆಕ್ಕನ್ ಹೆರಾಲ್ಡ್’ನಲ್ಲಿ ಬರೆದಿದ್ದ ಲೇಖನ ನೀಡಿ, ದಾವಣಗೆರೆ ‘ಹಿಮೋಫಿಲಿಯಾ ಅಸೋಸಿಯೇಷನ್‌ಗೆ’ ಅವರು ಕೊಡು ತ್ತಿದ್ದ ಒತ್ತಾಸೆಗೆ ಅಭಿನಂದನೆ ಹೇಳಿದ್ದೆ.

2007ರಲ್ಲಿ ಬೆಂಗಳೂರಿನ ಅರಮನೆ ಆವರಣದ ‘ಸಂಗೀತ ಸಂಜೆ’ಯಲ್ಲಿ ಅರ್ಚನಾ ಉಡುಪ ಅವರೊಡನೆ ಸುಮಧುರ, ಸಾರ್ವಕಾಲಿಕ ಕನ್ನ, ತೆಲುಗು, ತಮಿಳು ಹಾಗೂ ಹಿಂದಿ ಚಲನಚಿತ್ರಗಳನ್ನು ಹಾಡಿದ್ದರು. ಅಂದು ಅವರು ‘ನೈಸ್ ಟು ಬಿ ಸೀಯಿಂಗ್ ಯು ಎಗೈನ್’ ಎಂದು ಗುರುತಿಸಿ ಮಾತನಾಡಿದ್ದು ಈಗಲೂ ನನ್ನ ಕಿವಿಗಳಲ್ಲಿ ಗುನುಗುಟ್ಟುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT