ಗುರುವಾರ , ಏಪ್ರಿಲ್ 9, 2020
19 °C
ಯುಟ್ಯೂಬ್‌ ಟ್ರೆಂಡ್‌

ಸಾಧಕರ ಪರಿಚಯಿಸುವ ‘ಜೋಶಿಲೆ’

ಸುಮನಾ ಕೆ. Updated:

ಅಕ್ಷರ ಗಾತ್ರ : | |

ಇಂಗ್ಲಿಷ್‌, ಹಿಂದಿ ಭಾಷೆಯಲ್ಲಿರುವಂತೆ  ಕನ್ನಡದಲ್ಲೂ ಈಗ ವೆಬ್‌ಸಿರೀಸ್‌ಗಳು ಸದ್ದು ಮಾಡುತ್ತಿವೆ. ಯೂಟ್ಯೂಬ್‌ ಟ್ರೆಂಡಿಂಗ್‌ನಲ್ಲೂ ಅವು ಸ್ಥಾನ ಪಡೆದಿವೆ. ಆರ್‌.ಜೆ. ಪ್ರದೀಪ್‌ ಅವರ ‘ಸಕ್ಕತ್‌ ಸ್ಟುಡಿಯೊ’ದಲ್ಲಿ ‘ಲೂಸ್‌ ಕನೆಕ್ಷನ್‌’, ‘ಡಾ. ಫಾಲ್‌’ನಂತಹ ವೆಬ್‌ಸಿರೀಸ್‌ಗಳು ಈಗಾಗಲೇ ಜನಪ್ರಿಯವಾಗಿವೆ. ಈಗ ವಿನಾಯಕ ಜೋಶಿ ನಿರ್ದೇಶನದ ‘ಜೋಶಿಲೆ’ ಎಂಬ ಹೊಸ ಮಾದರಿಯ ಸ್ಫೂರ್ತಿದಾಯಕ ವೆಬ್‌ಸರಣಿಯೊಂದು ‘ಸಕ್ಕತ್‌ ಸ್ಟುಡಿಯೊ’ದಲ್ಲಿ ಪ್ರಸಾರವಾಗುತ್ತಿದೆ.

ವೆಬ್‌ಸರಣಿ ಎಂದರೆ ಸಾಮಾನ್ಯವಾಗಿ ಹಾಸ್ಯ ಅಥವಾ ಕಾಲ್ಪನಿಕ ಕತೆಗಳನ್ನು ಒಳಗೊಂಡಿರುತ್ತದೆ. ಆದರೆ, ‘ಜೋಶಿಲೆ’ ವೆಬ್‌ ಧಾರಾವಾಹಿ ಭಿನ್ನವಾಗಿದ್ದು ನಿರೂಪಣಾ ಶೈಲಿಯೂ ಹೊಸದಾಗಿದೆ. ರಾಜ್ಯದ ನಾನಾ ಭಾಗಗಳ ವಿಶೇಷ ಸಾಧಕರ ನಿಜಕತೆ ಇಲ್ಲಿದೆ. ಸಾಧಕರು ಬೇರೆಯವರಿಗೆ ಹೇಗೆ ಸ್ಫೂರ್ತಿ? ಕಷ್ಟನಷ್ಟಗಳ ಮಧ್ಯೆಯೂ ಅವರು ಸಾಧನೆ ಮಾಡಿದ್ದು ಹೇಗೆ? ಎಂದು ನಿರೂಪಿಸುತ್ತಾ ಸಾಗುತ್ತದೆ. 

ಕನ್ನಡದ ಮಟ್ಟಿಗೆ ಇದು ಹೊಸ ಪ್ರಯೋಗ. ನಟ ವಿನಾಯಕ ಜೋಶಿ ಈ ವೆಬ್‌ಸಿರೀಸ್‌ ಮೂಲಕ ನಿರ್ದೇಶನ, ಚಿತ್ರಕತೆ, ಸಂಭಾಷಣೆ, ಗೀತೆ ರಚನೆಗೂ ಕೈ ಹಾಕಿದ್ದಾರೆ. ಇದು ಒಟ್ಟು ಏಳು ಸರಣಿಗಳಲ್ಲಿ ಪ್ರಸಾರವಾಗಲಿದ್ದು, ಈಗಾಗಲೇ 3 ಸರಣಿಗಳನ್ನು ಯೂಟ್ಯೂಬ್‌ನಲ್ಲಿ ವೀಕ್ಷಿಸಬಹುದು.

ಈ ಎಲ್ಲಾ ವೆಬ್‌ ಧಾರಾವಾಹಿಗಳು 16 ನಿಮಿಷದ್ದಾಗಿದ್ದು, ಮೊದಲ ಸರಣಿಯಲ್ಲಿ ವಿನಾಯಕ ಜೋಶಿ ಅವರು ‘ನಾನು ಏಕೆ ಇಂತಹ ವಿಶೇಷ ವೆಬ್‌ಸಿರೀಸ್‌ ಮಾಡಲು ಹೊರಟೆ’ ಎಂಬುದನ್ನು ಹೇಳಿಕೊಂಡಿದ್ದಾರೆ. ‘ಈ ಸಮಾಜಕ್ಕೆ, ಇರುವುದಕ್ಕಿಂತ ಇಲ್ಲದರ ಬಗ್ಗೆಯೇ ಚಿಂತೆ ಜಾಸ್ತಿ. ತಮಗಿರುವ ಸಂದೇಹಗಳನ್ನು ಬೇರೆಯವರ ಮೇಲೆ ಹೇರಿ ಕಿರಿಕಿರಿ ಮಾಡುವವರೇ ಇಲ್ಲಿ ಜಾಸ್ತಿ. ಇಂತಹ ಸಮಾಜದಿಂದ
ಹೊರಬಂದು ಸಾಧಕರ ಕತೆಯನ್ನು ತಿಳಿಸಿ ಸಾಧನೆ ಮಾಡಲು ಇಚ್ಛಿಸುವವರಿಗೆ ಪ್ರೇರಣೆ ನೀಡುವುದು ಇದರ ಉದ್ದೇಶ’ ಎನ್ನುತ್ತಾರೆ ಜೋಶಿ. 

‘ಇದು ಮೂರು ವರ್ಷಗಳ ಹಿಂದೆ ಹುಟ್ಟಿಕೊಂಡ ಪರಿಕಲ್ಪನೆ. ಹೊಸದಾಗಿ ಏನಾದರೂ ಮಾಡಬೇಕು ಎಂದುಕೊಂಡಾಗ ಹುಟ್ಟಿದ್ದು ‘ಜೋಶಿಲೆ’. ಮಧ್ಯೆ ನಾನು ಅಪಘಾತಕ್ಕೆ ಈಡಾದೆ. ಆಗ ನನ್ನ ಆಲೋಚನೆಯ ಕತೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡೆ. ಅಂಗವಿಕಲರು, ಬುದ್ಧಿಮಾಂದ್ಯರ ಸಾಧನೆಯ ಹಿಂದೆ ಹಲವು ನೋವುಗಳಿರುತ್ತವೆ. ಅವರು ಆ ನ್ಯೂನತೆಗಳನ್ನು ಮೆಟ್ಟಿನಿಂತದ್ದು ಹೇಗೆ ಎಂಬುದನ್ನು ಎಲ್ಲರಿಗೂ ತಿಳಿಸಬೇಕು. ನಮ್ಮ ನಡುವೆ ಹೀರೊಗಳಿದ್ದಾರೆ. ಅವರನ್ನು ಹುಡುಕಿ ಅವರ ಹಿಂದಿನ ಶ್ರಮ, ನೋವು- ಗೆಲುವು ಎಲ್ಲವನ್ನೂ ತೋರಿಸಬೇಕು’ ಎಂದು ಜೋಶಿಲೆ ಹುಟ್ಟಿಕೊಂಡ ಕತೆಯನ್ನು ಅವರು ವಿವರಿಸಿದರು. 

ಜೋಶಿಲೆ–1ರಲ್ಲಿ ವಿನಾಯಕ ಜೋಶಿ ಕಿರಿಕಿರಿ, ಒತ್ತಡದಿಂದ ಬೇಸತ್ತು ದೂರ ಪ್ರದೇಶಕ್ಕೆ ಬೈಕ್‌ನಲ್ಲಿ ಸಂಚಾರ ಹೊರಟಾಗ ಅಲ್ಲಿ  ಮನುಷ್ಯರೇ ಇಲ್ಲದ ಊರಿನಲ್ಲಿ ಮಾತಿನ ಮಹತ್ವ ಅರಿವಾಗುತ್ತದೆ. ಆದರೆ, ಕಣ್ಣು ಕಾಣದ, ಕಿವಿ ಕೇಳದ, ಮಾತು ಬಾರದ ವ್ಯಕ್ತಿಯ ಪರಿಸ್ಥಿತಿ ಹೇಗೆ ಎಂದುಕೊಂಡಾಗ ಅವರ ಮನದಲ್ಲಿ ಮೂಡುವ ವ್ಯಕ್ತಿಯ ಚಿತ್ರ ಪ್ರದೀಪ್‌ ಸಿನ್ಹಾ ಅವರದು. ಅವರು ಬಹುರಾಷ್ಟ್ರೀಯ ಕಂಪನಿಯೊಂದರ ಉದ್ಯೋಗಿ. ಬ್ರೈಲ್‌ ಲಿಪಿ ಮೂಲಕ ಜಾವಾ ಕಲಿತಿದ್ದಾರೆ. ಅಂಧರ ನೆರವಿಗೆಂದೇ ತಯಾರಿಸಿರುವ ವಿಶೇಷ ತಂತ್ರಾಂಶ ಮತ್ತು ಸಾಧನಗಳ ನೆರವಿನಿಂದ ಲ್ಯಾಪ್‌ಟಾಪ್‌ ಕೂಡ ಬಳಸುತ್ತಾರೆ. ಇವರ ಸಾಧನೆಗೆ ಪ್ರತಿಷ್ಠಿತ ಹೆಲೆನ್‌ ಕಿಲ್ಲರ್‌ ಪ್ರಶಸ್ತಿಯೂ ದೊರಕಿದೆ. ಇದೇ ಕತೆಯನ್ನು ಸ್ಫೂರ್ತಿಯಾಗಿಸಿಕೊಂಡು ಮಾತೇ ತುಂಬಿರುವ ಈ ಪ್ರಪಂಚದಲ್ಲಿ ಸ್ಪರ್ಶದ ಮೂಲಕ ಸಂವಹನ ನಡೆಸಿ, ಖುಷಿಯಿಂದ ಸ್ನೇಹಿತರನ್ನು ಕಾಣುವ ಪ್ರದೀಪ್‌ ವ್ಯಕ್ತಿತ್ವ ದೊಡ್ಡದು ಎನ್ನುತ್ತದೆ ಈ ಸರಣಿ.

ಎರಡನೇ ಸರಣಿಯಲ್ಲಿ ಇಬ್ಬರು ಸಾಧಕರ ಪರಿಚಯವಿದೆ. ಒಬ್ಬರು 57 ವರ್ಷದ ಮ್ಯಾರಥಾನ್‌ ಓಟಗಾರ ಮೈಸೂರಿನ ಅಜಿತ್‌ ತಾಂಡೂರ್‌, ಮತ್ತೊಬ್ಬರು ಬಾಲ್ಯದಲ್ಲೇ ವಿದ್ಯುತ್‌ ಅಪಘಾತದಲ್ಲಿ ಎರಡೂ ಕೈ ಕಳೆದುಕೊಂಡ ಜಯಂತ್‌. ಮ್ಯಾರಥಾನ್‌ನಲ್ಲಿ ಸಾಧನೆ ಮಾಡಿರುವ ಅಜಿತ್‌ ಈ ವಯಸ್ಸಲ್ಲೂ ಮೂರೂವರೆ ಗಂಟೆಯಲ್ಲಿ 42 ಕಿ.ಮೀ ಓಡುತ್ತಾರೆ. ಕಾಲಿನಲ್ಲೇ ತನ್ನ ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳುವ ಜಯಂತ್‌, ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಇಬ್ಬರ ಕತೆಯನ್ನೂ ತನ್ನ ಜೀವನದ ಜೊತೆ ಸಮೀಕರಿಸಿಕೊಂಡು ಅವರು ಹೇಗೆ ತನಗೆ ಸ್ಫೂರ್ತಿ ಎಂದು ವಿವರಿಸುತ್ತಾ ಹೋಗುತ್ತಾರೆ ಜೋಶಿ. 

‘ಪ್ರತಿ ಸಂಚಿಕೆಯಲ್ಲೂ ಸಾಧಕರು ಮತ್ತು ಅವರ ಸಾಧನೆ ತೋರಿಸುವ ಮೂಲಕ ನೋಡುಗರಲ್ಲಿ ಮತ್ತಷ್ಟು ಆತ್ಮಸ್ಥೈರ್ಯ ತುಂಬಿ ಪ್ರೋತ್ಸಾಹಿಸುವ ಕೆಲಸ ‘ಜೋಶಿಲೆ’ಯದು. ಹಿರಿಯ ಕಲಾವಿದರಾದ ಶ್ರೀನಾಥ್‌, ಮಾಸ್ಟರ್‌ ಹಿರಣ್ಣಯ್ಯ, ಉಪೇಂದ್ರ ಸೇರಿದಂತೆ ಹಲವರು ‘ಜೋಶಿಲೆ’ ಭಾಗವಾಗಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಒಟ್ಟು 28 ಸಾಧಕರ ಕತೆ ಮುಂದಿನ ಸಂಚಿಕೆಯಲ್ಲಿ ಪ್ರಸಾರವಾಗಲಿದೆ’ ಎನ್ನುತ್ತಾರೆ ಜೋಶಿ.

ಇದರಲ್ಲಿ ರಾಜ್ಯದ ವಿವಿಧ ಸ್ಥಳಗಳನ್ನು, ಪ್ರಕೃತಿ ಸೌಂದರ್ಯವನ್ನು ಅದ್ಭುತವಾಗಿ ತೋರಿಸಿದ್ದಾರೆ. ಹಾಗೇ ಒಟ್ಟು ಏಳು ಹಾಡುಗಳಿವೆ. ಪ್ರತಿ ಸೋಮವಾರ ಹೊಸಸರಣಿ ಪ್ರಸಾರವಾಗುತ್ತದೆ.  ಸುಜಿತ್‌ ವೆಂಕಟರಾಮಯ್ಯ, ಚಂದನ್‌ ಶೆಟ್ಟಿ, ವಿನಾಯಕ ಜೋಶಿ ಗೀತೆ ರಚಿಸಿದ್ದಾರೆ. ಧೀರೇಂದ್ರ ದಾಸ್‌ ಅವರ ಸಂಗೀತವಿದೆ.

ಯೂಟ್ಯೂಬ್‌ನಲ್ಲಿ sakkath studio ಎಂದು ಹುಡುಕಿದರೆ ‘ಜೋಶಿಲೆ’ ವೆಬ್‌ಸಿರೀಸ್‌ಗಳನ್ನು ವೀಕ್ಷಣೆ ಮಾಡಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)