ಶುಕ್ರವಾರ, ಆಗಸ್ಟ್ 19, 2022
22 °C
ರಂಗಭೂಮಿ ಸಂಗೀತಕ್ಕೆ ‘ಶಾಸ್ತ್ರೀಯ’ ಘನತೆ ತಂದುಕೊಟ್ಟ ಸಂಯೋಜಕ

ರಂಗಸಂಗೀತ ರತ್ನ ಪರಮಶಿವನ್‌

ಎಚ್.ಎಸ್. ಗೋವಿಂದೇಗೌಡ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ರಂಗಸಂಗೀತಕ್ಕೆ ಘನತೆ ತಂದುಕೊಟ್ಟು ಆ ಭಾಗದ ‘ರಂಗಸಂಗೀತ ರತ್ನ’ ಎನಿಸಿದ್ದವರು ಏಣಗಿ ಬಾಳಪ್ಪನವರು. ಅವರ ಸ್ಥಾನವನ್ನು ದಕ್ಷಿಣ ಕರ್ನಾಟಕ ಭಾಗದಲ್ಲಿ ಸಮರ್ಥವಾಗಿ ತುಂಬಿದವರು ಆರ್. ಪರಮಶಿವನ್. ರಂಗಕರ್ಮಿಯಾಗಿ, ಹಾರ್ಮೋನಿಯಂ ವಾದಕರಾಗಿ, ಸಂಗೀತ ಸಂಯೋಜಕರಾಗಿ ಪರಮಶಿವನ್‌ ಅವರು ಈ ಕ್ಷೇತ್ರದಲ್ಲಿನ ‘ಧ್ರುವತಾರೆ’ಯಂತಿದ್ದರು. ಉತ್ತರ ಹಾಗೂ ದಕ್ಷಿಣ ಕರ್ನಾಟಕದ ಈ ಎರಡು ಧ್ರುವತಾರೆಗಳೂ ಈಗ ನಮ್ಮಿಂದ ದೂರವಾಗಿದ್ದಾರೆ.

ಮೈಸೂರಿನಲ್ಲಿ ರಾಮಕೃಷ್ಣ, ರುಕ್ಮಿಣಿ ದಂಪತಿಯ ಪುತ್ರರಾಗಿ 1931ರಲ್ಲಿ ಪರಮಶಿವನ್‌ ಜನಿಸಿದರು. ತಮ್ಮ ನಾಲ್ಕನೇ ವಯಸ್ಸಿನಲ್ಲಿಯೇ ವೃತ್ತಿ ರಂಗಭೂಮಿಗೆ ಪದಾರ್ಪಣೆ ಮಾಡಿದ್ದರು. ಚಾಮುಂಡೇಶ್ವರಿ ನಾಟಕದ ಕಂಪನಿಯಲ್ಲಿ ರೋಹಸೇನ, ಋಷಿಕೇತು, ಪ್ರಹ್ಲಾದ ಸೇರಿದಂತೆ ಅನೇಕ ಪಾತ್ರಗಳಿಗೆ ಜೀವ ತುಂಬಿದರು. ಹಾಡುಗಾರಿಕೆ, ವೀಣೆ ಮತ್ತು ಪಿಟೀಲು ವಾದನದಲ್ಲಿ ವಿದ್ವತ್‌ ಪದವಿ ಪಡೆದಿದ್ದ ಅವರು, ತಮ್ಮ ಕಲೆಯನ್ನು ಅನೇಕರಿಗೆ ಧಾರೆ ಎರೆದರು. 

ಮೈಸೂರು, ಬೆಂಗಳೂರಿನ ಅನೇಕ ಪ್ರೌಢಶಾಲೆಗಳಲ್ಲಿ ಸಂಗೀತ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದ ಪರಮಶಿವನ್ 1994ರಲ್ಲಿ ಸೇವೆಯಿಂದ ನಿವೃತ್ತರಾದರು. ಶಿಕ್ಷಕ ವೃತ್ತಿಯ ಜೊತೆಗೆ, ವೃತ್ತಿ ರಂಗಭೂಮಿಯಲ್ಲಿಯೂ ಅಷ್ಟೇ ಉತ್ಸಾಹದಿಂದ ತಮ್ಮನ್ನು ತೊಡಗಿಸಿಕೊಂಡಿದ್ದರು. ಶೇಷಾಚಾರ್, ಸುಬ್ಬಯ್ಯ ನಾಯ್ಡು, ಗುಬ್ಬಿ ವೀರಣ್ಣ, ಹಿರಣ್ಣಯ್ಯ ಸೇರಿದಂತೆ ಅನೇಕ ಪ್ರಮುಖ ಕಂಪನಿಗಳು ಅವರ ಪ್ರತಿಭೆಯನ್ನು ಸಮರ್ಥವಾಗಿ ಬಳಸಿಕೊಂಡವು. ಅವರ ಅಕ್ಕ ಆರ್. ನಾಗರತ್ನಮ್ಮ ಅವರ ಸ್ತ್ರೀ ನಾಟಕ ಮಂಡಳಿಯಲ್ಲಿ ಹಾರ್ಮೋನಿಯಂ ವಾದಕರಾಗಿ ಅನೇಕ ವರ್ಷ ಕೆಲಸ ಮಾಡಿದ್ದರು. ‘ಕೃಷ್ಣ ಗಾರುಡಿ’ ‘ಕೃಷ್ಣಲೀಲೆ’ ನಾಟಕಗಳಿಗೆ ಅವರು ಮಾಡಿದ್ದ ಸಂಗೀತ ಸಂಯೋಜನೆ ರಂಗಪ್ರಿಯರ ಮನ ಗೆದ್ದಿತ್ತು.

ಸುಬ್ಬಯ್ಯ ನಾಯ್ಡು, ಡಾ. ರಾಜಕುಮಾರ್, ಲೋಕೇಶ್‌ ಅವರ ಜೊತೆಗೆ ಕೆಲಸ ಮಾಡಿದ ಹೆಗ್ಗಳಿಕೆ ಅವರದು. ಈ ದಿಗ್ಗಜರು ಅಭಿನಯಿಸುತ್ತಿದ್ದ ನಾಟಕಗಳಿಗೆ ಹಾರ್ಮೋನಿಯಂ ವಾದಕರಾಗಿದ್ದರು. ರಾಜಕುಮಾರ್‌ ಅವರ ನೆಚ್ಚಿನ ನಾಟಕ ‘ಭಕ್ತ ಅಂಬರೀಷ’ಕ್ಕೂ ಹಾರ್ಮೋನಿಯಂ ನುಡಿಸಿದ್ದರು. ಸಂಗೀತ ನಿರ್ದೇಶಕ ಪಿ. ಕಾಳಿಂಗರಾಯರ ಸಹಾಯಕರಾಗಿಯೂ ಅವರು ಕೆಲಸ ಮಾಡಿದ್ದರು.

ಪ್ರಾರಂಭದಲ್ಲಿ ನಟರಾಗಿ ರಂಗಭೂಮಿ ಪ್ರವೇಶಿಸಿದ ಅವರು, ನಂತರದಲ್ಲಿ ಗಾಯನಕ್ಕೇ ಹೆಚ್ಚು ಆದ್ಯತೆ ನೀಡಿದ್ದರು. 20ಕ್ಕೂ ಹೆಚ್ಚು ನೃತ್ಯರೂಪಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು. ‘ರಂಗ ರತ್ನಾಕರ’ ಸಂಸ್ಥೆಗಾಗಿ ಸುಮಾರು 15 ಧ್ವನಿಸುರುಳಿಗಳಲ್ಲಿ ವೃತ್ತಿ ರಂಗಭೂಮಿಯ ಸಾವಿರಕ್ಕೂ ಮಿಗಿಲಾದ ಹಾಡುಗಳನ್ನು ರೆಕಾರ್ಡ್‌ ಮಾಡಿಸಿದ್ದಾರೆ. ಅವುಗಳಲ್ಲಿ 500ಕ್ಕೂ ಹೆಚ್ಚು ಹಾಡುಗಳನ್ನು ಅವರೇ ಹಾಡಿದ್ದರು. ವೃತ್ತಿರಂಗಭೂಮಿ ಪ್ರವೇಶಿಸಲು ಬಯಸುವ ಯಾವುದೇ ನಟ ಅಥವಾ ನಟಿಗೆ ಈ ಗೀತೆಗಳು ಪಾಠದಂತಿವೆ. ರಂಗಕ್ಷೇತ್ರಕ್ಕೆ ಪರಮಶಿವನ್‌ ಅವರ ಬಹುದೊಡ್ಡ ಕೊಡುಗೆ ಇವು.

1991ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ, 2005ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕಳೆದ ವರ್ಷ ಗುಬ್ಬಿ ವೀರಣ್ಣ ಪ್ರಶಸ್ತಿ ಲಭಿಸಿತ್ತು. ಅಲ್ಲದೆ, ಅನೇಕ ಪ್ರಶಸ್ತಿಗಳು ಅವರನ್ನು ಅರಸಿ ಬಂದಿದ್ದವು. ಪದ್ಮಶ್ರೀ ಪ್ರಶಸ್ತಿ ಪಡೆಯುವ ಎಲ್ಲ ಅರ್ಹತೆಗಳೂ ಅವರಿಗಿದ್ದವು. ಅಂತಹ ಮೇರುಪ್ರತಿಭೆಯನ್ನು ರಂಗಭೂಮಿ ಕಳೆದುಕೊಂಡಿದೆ.

(ಲೇಖಕ ಪರಮಶಿವನ್‌ ಅವರ ಒಡನಾಡಿ, ರಂಗನಟ, ಸಾಹಿತಿ)

*
ಪರಮಶಿವನ್‌ ಅವರು ನನಗೆ ಗಾಡ್‌ಫಾದರ್‌ನಂತಿದ್ದರು. ಅವರ ಜೊತೆ ನನ್ನದು 71 ವರ್ಷಗಳ ಸಖ್ಯ. ಸಾವಿರಾರು ರಂಗಗೀತೆಗಳ ಸರದಾರ ಎನಿಸಿದ್ದರು.
–ಎಂ.ಎಸ್. ಉಮೇಶ್, ಹಿರಿಯ ನಟ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು