ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಕಾವ್ಯದ ಮಹಾ ರಂಗದರ್ಶನ

Last Updated 24 ನವೆಂಬರ್ 2018, 19:45 IST
ಅಕ್ಷರ ಗಾತ್ರ

‘ಅದು ಮಹಾಕವಿಯ ಮಹಾಕಾವ್ಯದ ಮಹಾ ರಂಗದರ್ಶನ...’

ಹೀಗೆ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯ ನಾಟಕವಾಗಿ ಮೈಸೂರು ರಂಗಾಯಣ ಪ್ರಸ್ತುತಪಡಿಸುತ್ತಿರುವ ಕುರಿತು ವ್ಯಾಖ್ಯಾನಿಸಬಹುದು. ಈ ಕಾವ್ಯ ಜ್ಞಾನಪೀಠ ಪ್ರಶಸ್ತಿಗೆ ಭಾಜನವಾಗಿ 50 ವರ್ಷವಾದ ಪ್ರಯುಕ್ತ ರಂಗರೂಪವಾಗಿ ಸಾಮಾನ್ಯರಿಗೂ ತಲುಪುವ ಉದ್ದೇಶದಿಂದ ಈಗ ರಂಗಾಯಣ ರಂಗಪಯಣ ಕೈಗೊಂಡಿದೆ. ಈಗಾಗಲೇ, ಮೈಸೂರಿನಲ್ಲಿ ಕೆಲವು ಪ್ರದರ್ಶನಗಳ ಮೂಲಕ ಪ್ರೇಕ್ಷಕರ ಮನಸೂರೆಗೊಂಡಿದ್ದು, ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಪ್ರದರ್ಶನಗೊಳ್ಳಲಿದೆ.

ನಾಟಕದಲ್ಲಿ ಕಲಾವಿದರೆಲ್ಲ ಚುರುಕಾಗಿ ಅಭಿನಯಿಸುತ್ತ, ಕಾವ್ಯದ ಮುಖ್ಯಭಾಗಗಳನ್ನು ಪ್ರದರ್ಶಿಸಿ ತಮ್ಮ ವೃತ್ತಿಪರತೆ ಮೆರೆದಿದ್ದಾರೆ. ಕೋದಂಡ ಇಲ್ಲದ ರಾಮ, ಬಾಲವಿಲ್ಲದ ಆಂಜನೇಯ... ಇಂಥ ಬದಲಾವಣೆಗಳನ್ನೂ ಕಾಣುತ್ತೇವೆ. ಆದರೆ, ರಂಗಾಯಣದ ಹಿರಿಯ ಕಲಾವಿದರೊಂದಿಗೆ ಅಭಿನಯಿಸಿರುವ ಹೊಸ ಕಲಾವಿದರು ಪಳಗಬೇಕಿದೆ. ಅವಸರವಾಗಿ ಸಂಭಾಷಣೆ ಒಪ್ಪಿಸುವುದಕ್ಕೆ ತಡೆಯೊಡ್ಡಬೇಕು. ಹಿರಿಯ ಕಲಾವಿದರ ಹಾಗೆ ಪಾತ್ರದ ಔಚಿತ್ಯ ಅರಿತು ಅಭಿನಯಿಸಬೇಕು ಹಾಗೂ ಸಂಭಾಷಣೆ ಹೇಳಬೇಕು. ಆದರೂ, ಕಬ್ಬಿಣದ ಕಡಲೆಯೆಂದು ತಿಳಿದ ಈ ಮಹಾಕಾವ್ಯವನ್ನು ಮಾತಾಗಿ ಆಡಿ, ಅಭಿನಯಿಸಿದ ಎಲ್ಲ ಕಲಾವಿದರು ಅಭಿನಂದನಾರ್ಹರು.

ನಾಟಕ ಆರಂಭವಾಗುವುದೇ ಕುವೆಂಪು ಪಾತ್ರಧಾರಿಯ ಪ್ರವೇಶದಿಂದ. ‘ಇತಿಹಾಸಮಲ್ತು ಬರೀ ಕಥೆ ಅಲ್ತು, ಕಥೆ ತಾ ನಿಮಿತ್ತ ಮಾತ್ರಂ, ಆತ್ಮಕೆ ಶರೀರದೋಲಂತೆ, ಮೈವೆತ್ತುದಿಲ್ಲಿ ರಾಮನ ಕಥೆಯ, ಪಂಜರದಿ ರಾಮರೂಪದ ಪರಾತ್ಪರನ ಪುರುಷೋತ್ತಮ ಲೋಕಲೀಲಾ ದರ್ಶನ ಶ್ರೀರಾಮಾಯಣ ದರ್ಶನಂ’ ಎಂದು ಕುವೆಂಪು ಪಾತ್ರಧಾರಿ ಧನಂಜಯ್‌ ರಾಮಸಮುದ್ರ ನುಡಿದಾಗ ಪ್ರೇಕ್ಷಕರು ಪುಳಕಿತರಾಗುತ್ತಾರೆ. ಆ ಮೇಲೆ ‘ಇದೋ ಮುಗಿಸಿ ತಂದಿಹೇನ್ ಈ ಬೃಹತ್ ಗಾನಮಂ ನಿಮ್ಮ ಸಿರಿ ಅಡಿಗೆ ಒಪ್ಪಿಸಲಿಕ್ಕೆ ಓ ಪ್ರಿಯ ಗುರುವೆ, ಕರುಣಿಸಿ ನಿಮ್ಮ ಹರಕೆಯ ಬಲದ ಶಿಷ್ಯನಂ, ಕಾವ್ಯಮಂ ಕೇಳ್ವೆಂದು ಕೃಪೆಗೆ ಕೃತಂ’. ಆ ಮೇಲೆ ಕ್ರೌಂಚಪಕ್ಷಿಯನ್ನು ಬೇಡ ಕೊಲ್ಲುವ ದೃಶ್ಯ. ಇದರಲ್ಲಿ ಸತ್ತ ಗಂಡು ಕ್ರೌಂಚ ಪಕ್ಷಿಯನ್ನು ಮತ್ತೆ ಬದುಕಿಸಿ, ಬೇಡನನ್ನು ಅಹಿಂಸಾತತ್ವ ಹೇಳುವೆ ನಡೆ ಎಂದು ಕರೆದೊಯ್ಯುತ್ತಾರೆ ವಾಲ್ಮೀಕಿ.

ಈ ನಾಟಕದ ಆಕರ್ಷಣೆ ಎಂದರೆ ರಂಗಸಜ್ಜಿಕೆ ಹಾಗೂ ವಸ್ತ್ರವಿನ್ಯಾಸ. ಲಂಕೆಯ ದೃಶ್ಯಾವಳಿಗೆ ಶ್ರೀಲಂಕಾದ ಪಾರಂಪರಿಕ ಉಡುಗೆಯ ಮಾದರಿ, ಅಯೋಧ್ಯೆಯ ದೃಶ್ಯಾವಳಿಗೆ ಥಾಯ್ಲೆಂಡಿನ ಪಾರಂಪರಿಕೆ ಉಡುಗೆ, ಕಿಷ್ಕಿಂಧೆಯ ದೃಶ್ಯಾವಳಿಗೆ ಬುಡಕಟ್ಟು ವಾಸಿಗಳ ತೊಡುಗೆಯನ್ನು ವಿನ್ಯಾಸಗೊಳಿಸಲಾಗಿದೆ. ಜತೆಗೆ ಅಯೋಧ್ಯೆ ಸಂಸ್ಕೃತಿ, ಆಶ್ರಮ ಸಂಸ್ಕೃತಿ, ಕಿಷ್ಕಿಂಧೆ ಸಂಸ್ಕೃತಿ ಹಾಗೂ ಲಂಕಾ ಸಂಸ್ಕೃತಿಗಳ ಪರಿಚಯವಿದೆ. ಹೀಗೆ ನಿಧಾನವಾಗಿ ಸಾಗುವ ನಾಟಕ ವಾಲಿ ವಧೆಯೊಂದಿಗೆ ಮಧ್ಯಂತರದ ಬಿಡುವು. ಆಮೇಲೆ ನಾಟಕದ ಓಘ ಹೆಚ್ಚುತ್ತದೆ.

ವಾನರ ಹಾಗೂ ಲಂಕೆಯರ ಮಧ್ಯೆ ಯುದ್ಧ, ಕುಂಭಕರ್ಣನನ್ನು ಎಬ್ಬಿಸುವ ದೃಶ್ಯ ಹಿಡಿದಿಡುತ್ತದೆ. ಎರಡು ದೊಡ್ಡ ಪಾದಗಳ ಮೂಲಕ ಕುಂಭಕರ್ಣನ ಆಕಾರವನ್ನು ಸಾಂಕೇತಿಕವಾಗಿ ತೋರಿಸಲಾಗಿದೆ. ಹಿಡಿಯಿಂದ ಚುಚ್ಚಿದರೂ ಏಳದ ಕುಂಭಕರ್ಣನಿಗೆ ಗರಗಸದಿಂದ ಕೊಯ್ಯುವಾಗ ಎರಡು ಪಾದಗಳ ನಡುವೆ ಕಲಾವಿದ ಸಿಕ್ಕಿಕೊಂಡು ಒದ್ದಾಡುವ ದೃಶ್ಯ ಪ್ರೇಕ್ಷಕರನ್ನು ನಗಿಸುತ್ತದೆ. ಕೊನೆಗೆ ಕುಂಭಕರ್ಣನನ್ನು ಎಬ್ಬಿಸುವುದು ದೂರವಾಣಿಯ ರಿಂಗ್‌ ಟೋನ್‌!

ನಂತರ ಕಪಿ ಸೇನೆ– ರಾವಣನ ಸೇನೆ ನಡುವೆ ನಡೆದ ಯುದ್ಧದಲ್ಲಿ ಅನಾಥರಾಗುವ ಮಕ್ಕಳ, ವಿಧವೆಯರ ಸಂಖ್ಯೆ ಏರುತ್ತದೆ. ಇದರಲ್ಲಿ ರಾವಣನ ಪುತ್ರ ಇಂದ್ರಜಿತು, ಉಪಪತ್ನಿ ಧಾನ್ಯಮಾಲಿನಿ ಮೃತಪಡುತ್ತಾರೆ. ಇಂದ್ರಜಿತುನನ್ನು ಕಳೆದುಕೊಂಡ ನಂತರ ಆತನ ಪತ್ನಿ ತಾರಾಕ್ಷಿ ಅಗ್ನಿಪ್ರವೇಶ ಮಾಡಲು ಹೊರಟಾಗ ರಾವಣ, ‘ನಮ್ಮ ಕುಲದ ಕೊನೆಯ ಕುಡಿ ಇದಾದರೂ ಬದುಕಲಿ. ಇದರ ಮುಖ ನೋಡಿ ಬಾಳು, ಬಾಳಿಸು’ ಎಂದು ಹಾರೈಸುವಾಗ ಪ್ರೇಕ್ಷಕರು ಮೂಕರಾಗುತ್ತಾರೆ.

ರಾವಣನ ತಂಗಿ ಚಂದ್ರನಖಿ ಕೂಡ ‘ನರಮೇಧ ನಿಲ್ಲಿಸು, ನಮ್ಮ ಕುಲಕ್ಕೆ ಒಳಿತಾಗುತ್ತದೆ’ ಎಂದು ಬೇಡಿಕೊಳ್ಳುತ್ತಾಳೆ. ‘ನಿಲ್ಲಿಸು ರಣಭೇರಿ, ನನಗಾಗಿ ಸೀತೆ ತಂದೆ, ಕುಂಭಕರ್ಣನ ಕೊಂದೆ, ಸಾಕು ಪಟ್ಟ ಪ್ರಾಯಶ್ಚಿತ’ ಎಂದು ಶೂರ್ಪನಖಿ ಅಲವತ್ತುಕೊಳ್ಳುತ್ತಾಳೆ. ಹೀಗೆ ಯುದ್ಧಗಳ ಅನಾಹುತದ ಪ್ರಸ್ತಾಪ ಕಾವ್ಯದಲ್ಲಿದೆ. ಇದರಲ್ಲಿ ನೇರವಾಗಿ ಹಿಟ್ಲರ್‌ ಹಿಂಸೆ, ಮಹಾತ್ಮ ಗಾಂಧೀಜಿ ಅವರ ಅಹಿಂಸಾತತ್ವದ ಸಾರ ಸೂಕ್ಷ್ಮವಾಗಿ ಬರುತ್ತದೆ. ಕೊನೆಗೆ ರಾವಣ ಯುದ್ಧದಲ್ಲಿ ಮಡಿದು, ರಾಮನ ಪಟ್ಟಾಭಿಷೇಕವಾಗುವುದರೊಂದಿಗೆ ನಾಟಕ ಮುಗಿದಾಗ ಕುವೆಂಪು ಪಾತ್ರಧಾರಿ ಹಾಜರಾಗುತ್ತಾರೆ. ಎಲ್ಲರೂ ಒಳ್ಳೆಯದರ ಕಡೆಗೆ ತುಡಿಯುತ್ತಾರೆ. ಹೀಗಾಗಿ ಇಲ್ಲಿ ರಾಮ ಮಾತ್ರ ಹೀರೊ ಅಲ್ಲ, ಎಲ್ಲರೂ ಹೀರೊಗಳೇ. ಇದು ಕುವೆಂಪು ವಿಶೇಷ.

ರಂಗಾಯಣ ನಿರ್ದೇಶಕಿ ಭಾಗೀರತಿಬಾಯಿ ಕದಂ ಅವರು ಮಂಥರೆಯಾಗಿ, ರಾಮನಾಗಿ ಮಂಜು ಸಿರಿಗೇರಿ/ಶರತ್‌, ಸೀತೆಯಾಗಿ ಅಶ್ವಿನಿ/ಶ್ರುತಿ, ರಾವಣನಾಗಿ ಅನುರಾಗ್‌/ಹುಲಗಪ್ಪ ಕಟ್ಟಿಮನಿ, ಮಂಡೋದರಿಯಾಗಿ ಲಾಸ್ಯಾ/ನಂದಿನಿ, ಮಾರೀಚನಾಗಿ ಪ್ರಶಾಂತ್ ಹಿರೇಮಠ/ಪೀರಪ್ಪ, ವಿಭೀಷಣನಾಗಿ ವಿನಾಯಕ ಭಟ್‌/ಇನ್ಸಾಫ್‌ ಅಭಿನಯ ಗಮನಾರ್ಹ. ಒಪ್ಪುವ ರಂಗಸಜ್ಜಿಕೆ, ವಸ್ತ್ರಾಭರಣ, ಯಕ್ಷಗಾನ ಪ್ರಭಾವದ ಹಿನ್ನೆಲೆ ಸಂಗೀತ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಪೌರಾಣಿಕ ನಾಟಕಗಳಲ್ಲಿ ನಟರ ನೀರಸ ಚಲನೆಯನ್ನು ಮೀರಿಸಿ ಈ ನಾಟಕದಲ್ಲಿ ಚೆಂಡೆ ಹಾಗೂ ಯಕ್ಷಗಾನದ ಹೆಜ್ಜೆಗಾರಿಕೆಯೊಂದಿಗೆ ಕಲಾವಿದರ ಅಭಿನಯ ಅಚ್ಚುಕಟ್ಟಾಗಿತ್ತು. ರವಿ ಮೂರೂರು ಅವರ ತಂಡದ ಹಿತಮಿತವಾದ ಹಾಗೂ ಯಕ್ಷಗಾನ ಹಿನ್ನೆಲೆಯ ಸಂಗೀತ ನಾಟಕಕ್ಕೆ ಪೂರಕವಾಗಿದೆ.

ಶ್ರೀರಾಮಾಯಣ ದರ್ಶನಂ ಮಹಾಕಾವ್ಯ ನಾಟಕದ ದೃಶ್ಯ –ಚಿತ್ರ: ಸವಿತಾ ಬಿ.ಆರ್‌.
ಶ್ರೀರಾಮಾಯಣ ದರ್ಶನಂ ಮಹಾಕಾವ್ಯ ನಾಟಕದ ದೃಶ್ಯ –ಚಿತ್ರ: ಸವಿತಾ ಬಿ.ಆರ್‌.

ಸಂಚಾರಕ್ಕೆ ಸಜ್ಜು
ರಂಗಾಯಣ ರಾಜ್ಯದಾದ್ಯಂತ ಈ ನಾಟಕ ಪ್ರದರ್ಶನಕ್ಕೆ ಸಜ್ಜುಗೊಂಡಿದೆ.

* ಪರಿಕಲ್ಪನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್‌.ಆರ್‌. ವಿಶುಕುಮಾರ್‌
* ನಿರ್ವಹಣೆ: ರಂಗಾಯಣ ನಿರ್ದೇಶಕಿ ಭಾಗೀರತಿಬಾಯಿ ಕದಂ
* ರಂಗರೂಪ: ಜಗದೀಶ ಮನೆವಾರ್ತೆ ಹಾಗೂ ಕೃಷ್ಣಕುಮಾರ್‌ ನಾರ್ಣಕಜೆ
* ರಂಗವಿನ್ಯಾಸ: ಎಚ್‌.ಕೆ. ದ್ವಾರಕಾನಾಥ್‌
* ಸಂಗೀತ: ರವಿ ಮೂರೂರು
* ಸಂಗೀತ ನಿರ್ವಹಣೆ: ಶ್ರೀನಿವಾಸ ಭಟ್‌
* ವಸ್ತ್ರ ಹಾಗೂ ಪರಿಕರ ವಿನ್ಯಾಸ: ಪ್ರಮೋದ ಶಿಗ್ಗಾಂವ
* ಪ್ರಚಾರ ವಿನ್ಯಾಸ: ಕೆ.ಜೆ. ಸಚ್ಚಿದಾನಂದ
* ಬೆಳಕಿನ ವಿನ್ಯಾಸ: ಮಹೇಶ್ ಕಲ್ಲತ್ತಿ
* ಸಹ ನಿರ್ದೇಶನ: ಉಮೇಶ್‌ ಸಾಲಿಯಾನ
* ನಿರ್ದೇಶನ: ಕೆ.ಜಿ. ಮಹಾಬಲೇಶ್ವರ
* ರಂಗಚಲನೆ: ಎಂ. ಗಣೇಶ್‌, ಅಂಜು ಸಿಂಗ್, ವಿದುಷಿ ನಯನಾ ರೈ, ಸ್ವಸ್ತಿಕ ಆರ್‌. ಶೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT