ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೂರ್ತಿಯ ಜ್ಯೋತಿ ಬೆಳಗಿದ ಸಾವಿತ್ರಿಬಾಯಿ

Last Updated 17 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಸಾವಿತ್ರಿಬಾಯಿ ಎರಡು ರೀತಿಯಲ್ಲಿ ಸ್ಫೂರ್ತಿ. ತಾವು ಬದುಕುತ್ತಿದ್ದ ಸಂದರ್ಭದಲ್ಲಿನ ‘ಸನಾತನಿ’ ಮನಃಸ್ಥಿತಿಯ ವಿರುದ್ಧ ಹೋರಾಡುತ್ತ ತಮ್ಮನ್ನು ತಾವು ಗಟ್ಟಿಯಾಗಿ ನಿಲ್ಲಿಸಿಕೊಂಡದ್ದು ಒಂದಾದರೆ, ಸ್ವಂತ ಸಂಕಟಗಳ ನಡುವೆಯೂ ಸ್ತ್ರೀ ಸಮುದಾಯವನ್ನು ಅವರ ನಿರ್ಬಂಧಗಳಿಂದ ಬಿಡುಗಡೆಗೊಳ್ಳುವಂತೆ ಮಾಡುವುದಕ್ಕಾಗಿ ಶಾಲೆಗಳನ್ನು ತೆರೆದದ್ದು ಮತ್ತೊಂದು. ಅವರ ಬದುಕನ್ನು ಸಮರ್ಥವಾಗಿ ಕಟ್ಟಿಕೊಡುವಲ್ಲಿ ನಾಟಕ ಯಶಸ್ವಿಯಾಯಿತು

***

ಮಹಾತ್ಮ ಗಾಂಧಿ ಮತ್ತು ಡಾ.ಭೀಮರಾವ್ ಅಂಬೇಡ್ಕರ್ ಈ ಇಬ್ಬರ ಜನನಕ್ಕಿಂತಲೂ ಮೊದಲೇ ಜನಿಸಿ, ಮುಂದೆ ಆ ಇಬ್ಬರೂ ಮಾಡಿದ ಕಾರ್ಯಗಳನ್ನು ಅವರಿಗೂ ಮೊದಲೇ ಮಾಡಿದವರು ಜ್ಯೋತಿಬಾ ಫುಲೆ ಮತ್ತು ಅವರ ಪತ್ನಿ ಸಾವಿತ್ರಿಬಾಯಿ ಫುಲೆ. ಹಾಗೆ ನೋಡಿದರೆ ಗಾಂಧೀಜಿ ಮಹಾತ್ಮ ಆಗುವುದಕ್ಕಿಂತ ಮೊದಲೇ ಮಹಾರಾಷ್ಟ್ರ ಮೂಲದ ಫುಲೆಯವರು ‘ಮಹಾತ್ಮ’ ಗೌರವಕ್ಕೆ ಪಾತ್ರರಾದವರು. ಹಿಂದುಳಿದ ವರ್ಗಕ್ಕೆ ಸೇರಿದ ಈ ದಂಪತಿ, ಅದೇ ಕಾರಣದಿಂದ ಅನೇಕ ಸೌಲಭ್ಯಗಳಿಂದ ವಂಚಿತರಾದವರು. ಹಾಗೆಯೇ ಕೊರತೆಗಳನ್ನೆಲ್ಲ ಮೀರಿ ತಾವೂ ವಿದ್ಯಾವಂತರಾಗಿ ಬೇರೆಯವರಿಗೆ ಕೂಡ ಕಲಿಸಿದವರು. ಮುಖ್ಯವಾಗಿ ಸ್ತ್ರೀ ಶಿಕ್ಷಣದ ಮಹತ್ವವನ್ನು ಅರ್ಥಮಾಡಿಕೊಂಡು ಅದರಲ್ಲೂ ಹಿಂದುಳಿತ ವರ್ಗಗಳ ಬಾಲಕಿಯರಿಗೆ ಸುಶಿಕ್ಷಿತರನ್ನಾಗಿ ಮಾಡುವುದಕ್ಕಾಗಿ ಅನೇಕ ಅಡ್ಡಿ ಆತಂಕ ಮೀರಿ ಶಾಲೆಗಳನ್ನು ಸ್ಥಾಪಿಸಿದವರು.

ಸಾವಿತ್ರಿಬಾಯಿ ಎರಡು ರೀತಿಯಲ್ಲಿ ಸ್ಫೂರ್ತಿ. ತಾವು ಬದುಕುತ್ತಿದ್ದ ಸಂದರ್ಭದಲ್ಲಿನ ‘ಸನಾತನಿ’ ಮನಃಸ್ಥಿತಿಯ ವಿರುದ್ಧ ಹೋರಾಡುತ್ತ ತಮ್ಮನ್ನು ತಾವು ಗಟ್ಟಿಯಾಗಿ ನಿಲ್ಲಿಸಿಕೊಂಡದ್ದು ಒಂದಾದರೆ, ಸ್ವಂತ ಸಂಕಟಗಳ ನಡುವೆಯೂ ಸ್ತ್ರೀ ಸಮುದಾಯವನ್ನು ಅವರ ನಿರ್ಬಂಧಗಳಿಂದ ಬಿಡುಗಡೆಗೊಳ್ಳುವಂತೆ ಮಾಡುವುದಕ್ಕಾಗಿ ಶಾಲೆಗಳನ್ನು ತೆರೆದದ್ದು ಮತ್ತೊಂದು. ಪತಿ ಸತ್ತ ಮೇಲೆ ಕೂದಲು ಕತ್ತರಿಸುವುದರ ವಿರುದ್ಧ, ವಿಧವೆ ಗರ್ಭವತಿಯಾದರೆ ಎದುರಾಗುವ ಸಮಸ್ಯೆಗಳ ವಿರುದ್ಧ ಶ್ರಮಿಸಿದವರೂ ಅವರು. ಒಂದು ವೈಯಕ್ತಿಕವಾದರೆ ಮತ್ತೊಂದು ಸಾಮುದಾಯಿಕ. ಅಂತಹ ಹೋರಾಟದ ಮುಂಚೂಣಿಯಲ್ಲಿದ್ದ ಮಹಾನ್‌ ಸಾಧಕಿ ಸಾವಿತ್ರಿಬಾಯಿ ಅವರ ಬದುಕನ್ನು ಕಟ್ಟಿಕೊಟ್ಟಿದ್ದು ಈ ಏಕವ್ಯಕ್ತಿ ರಂಗ ಪ್ರಯೋಗ. ಕೆ.ವಿ. ಸುಬ್ಬಣ್ಣ ರಂಗಸಮೂಹದ ಸಹಯೋಗದಲ್ಲಿ ಈ ನಾಟಕ ಇತ್ತೀಚೆಗೆ ಸಾಗರದಲ್ಲಿ ನಡೆಯಿತು.

ನಾಟಕದ ಹೆಸರು ‘ಸಾವಿತ್ರಿಬಾಯಿ ಫುಲೆ’ ಎಂದಾದರೂ ಅವರ ಪತಿ ಜ್ಯೋತಿಬಾ ಅವರ ಕಥೆಯೂ ಇದರಲ್ಲಿ ಹಾಸುಹೊಕ್ಕಾಗಿದೆ. ಅವರ ಸಾಧನೆಯ ಪ್ರಸ್ತಾಪ ಮೇಲಿಂದ ಮೇಲೆ ಬರುತ್ತಲೇ ಇರುತ್ತದೆ. ‘ಜ್ಯೋತಿರಾವ್‌ ಜ್ವಾಲಾಮುಖಿಯ ಸ್ಫೋಟವಾಗಿದ್ದು, ನಾನದರ ಬೆಳಕು. ಆ ಮಹಾತ್ಮ ಪ್ರಚಂಡ ಆಲದ ಮರ, ನಾನು ಅದರ ತಣ್ಣನೆಯ ನೆರಳು’ ಎಂಬುದಾಗಿ ಸ್ವತಃ ಸಾವಿತ್ರಿ ಈ ನಾಟಕದಲ್ಲಿ ಹೇಳಿಕೊಳ್ಳುತ್ತಾರೆ. ಅಂದರೆ ತಾವು ಏನೆಲ್ಲ ಮಾಡಿದರೂ ಅದರಲ್ಲಿ ತಮ್ಮ ಗಂಡನ ನೆರಳಿದೆ ಎಂದು. ಇದು ಅವರ ದಾಂಪತ್ಯದ ಸೊಗಸು.

ಮುಖ್ಯವಾಗಿ ಈ ನಾಟಕವನ್ನು ಆರಂಭಮಾಡಿದ ರೀತಿ ಮತ್ತು ಅದನ್ನು ಮುಗಿಸಿದ ರೀತಿ ಅರ್ಥಪೂರ್ಣವಾಗಿತ್ತು. ಒಂದು ದೊಡ್ಡ ಹಣತೆಯನ್ನು ಕೈಲಿ ಹಿಡಿದು ಸಾವಿತ್ರಿಬಾಯಿ ರಂಗಕ್ಕೆ ಪ್ರವೇಶ ಕೊಡುತ್ತಾರೆ ಮತ್ತು ಅದನ್ನು ರಂಗದ ಮುಂಭಾಗದಲ್ಲಿ ತಂದಿಡುತ್ತಾರೆ. ಅವರ ಪತಿಯ ಹೆಸರೂ ಜ್ಯೋತಿ, ಆಕೆಯು ಕೈಕೊಂಡ ಕಾರ್ಯವೂ ವಿದ್ಯೆ ಎಂಬ ಜ್ಯೋತಿ. ಹಾಗೆಯೇ ಮುಕ್ತಾಯವಾಗುವಾಗ ಒಂದು ಹಣತೆ ಹತ್ತಾರು ಚಿಕ್ಕ ಚಿಕ್ಕ ಹಣತೆಗಳನ್ನು ಬೆಳಗಿ ರಂಗದ ತುಂಬೆಲ್ಲ ಇರಿಸುವುದರೊಂದಿಗೆ ನಾಟಕ ಮುಗಿಯುತ್ತದೆ. ಆ ಹೊತ್ತಿಗೆ ಸಾವಿತ್ರಿಬಾಯಿ ಅವರು ಪ್ಲೇಗ್ ರೋಗದಿಂದ ಸಾವನ್ನಪ್ಪಿರುತ್ತಾರೆ. ಆಗ ಸ್ವತಃ ಅವರೇ ಜ್ಯೋತಿ. ಅಲ್ಲಿ ಅನೇಕ ಜ್ಯೋತಿಗಳಾಗಿ ಹರಡಿಕೊಂಡಿದ್ದಾರೆ ಎಂಬ ಅರ್ಥವನ್ನು ನಾಟಕ ಧ್ವನಿಸುತ್ತದೆ. ಸರಳ ರಂಗಪರಿಕರಗಳನ್ನೇ ಬಳಸಲಾಗಿದೆ. ಸಾವಿತ್ರಿ ತಮ್ಮ ತಂದೆ–ತಾಯಿ, ಬಾಲ್ಯದ ಕುರಿತು ಹೇಳುವಾಗ ಕೆಲವು ಗೊಂಬೆಗಳನ್ನು ಬಳಸಿಕೊಳ್ಳಲಾಗಿದೆ. ರಂಗದ ಮಧ್ಯೆ ಜ್ಯೋತಿಬಾ ಫುಲೆಯವರನ್ನು ಸಂಕೇತಿಸುವ ಕೆಂಪುಬಣ್ಣದ ಮುಂಡಾಸು ಸುತ್ತಿದ ಮನುಷ್ಯಾಕಾರದ ಆಕೃತಿ. ಅದರ ಒಂದು ಪಕ್ಕದಲ್ಲಿ ಬಸುರಿಯೊಬ್ಬಳ ರೇಖಾಚಿತ್ರ, ಮತ್ತೊಂದು ಪಕ್ಕ ಉರಿಯ ನಡುವೆ ಇರುವ ಸ್ತ್ರೀಯ ರೇಖಾಚಿತ್ರದ ಪರದೆ – ರಂಗದ ಸಾಧ್ಯತೆಯನ್ನು ಸೃಜನಾತ್ಮಕವಾಗಿ ಬಳಸಿಕೊಂಡಿದ್ದಕ್ಕೆ ಸಾಕ್ಷಿಯಾಗಿದ್ದವು.

ಈ ಪ್ರದರ್ಶನದ ಒಂದು ಮುಖ್ಯ ಸಮಸ್ಯೆ ಏನೆಂದರೆ ಕಥನ ಮುಂದೆ ಬಂತು, ಆದರೆ ಸಂಕಥನ ಹಿಂದಾಯಿತು. ಸಾವಿತ್ರಿ ಎಂಬ ಅನುಭವವು ಪಡೆದುಕೊಳ್ಳುವ ರೂಪದ ಕಡೆ ಗಮನ ಕೊಟ್ಟಿದ್ದರೆ ನಾಟಕ ರೂಪಕವಾಗಿ ಇನ್ನಷ್ಟು ಅರ್ಥಪೂರ್ಣವಾಗುತ್ತಿತ್ತು. ಈ ನಾಟಕದಲ್ಲಿ ಬೇರೆ ಬೇರೆ ಹಾಡುಗಳನ್ನು ಬಳಸಿಕೊಂಡಿದ್ದಾರೆ. ಆದರೆ, ಈ ಹಾಡುಗಳು ಮೊದಲೇ ಹೆಚ್ಚು ಜನಪ್ರಿಯವಾದಂಥವು ಮತ್ತು ಅವುಗಳಿಗೆ ಈಗಾಗಲೇ ಪ್ರತ್ಯೇಕ ಸಂದರ್ಭ ಸ್ಥಾಪಿತವಾಗಿದ್ದರಿಂದ ಇಲ್ಲಿ ಪರಿಪೂರ್ಣ ಹೊಂದಿಕೆ ಆಗಲಿಲ್ಲ. ಆದರೆ ಸರ್ವಜ್ಞ ಕವಿಯ ‘ಜ್ಯೋತಿ ಹೀನನ ಮನೆಯ..’ ಎಂಬ ಪದ ಚೆನ್ನಾಗಿ ಹೊಂದಿಕೊಂಡಿತ್ತು. ನಟಿ ಶೈಲಜಾ ಅವರದು ಕೊರತೆಯಿಲ್ಲದ ಅಭಿನಯ. ಡಿ.ಎಸ್‌. ಚೌಗಲೆ ಅವರು ಸಾವಿತ್ರಿಬಾಯಿ ಅವರ ಈ ಕಥೆಯನ್ನು ರಂಗಕ್ಕೆ ತರುವಲ್ಲಿ ಸಾಕಷ್ಟು ಶ್ರಮ ಹಾಕಿದ್ದಾರೆ. ಕೆಲವು ಕೊರತೆಗಳು ಏನೇ ಇದ್ದರೂ ಈ ನಾಟಕದ ಉಪಯುಕ್ತತೆಯೇನೂ ಕಮ್ಮಿಯಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT