ಬುಧವಾರ, ಆಗಸ್ಟ್ 17, 2022
25 °C

ಮುದ ನೀಡಿದ ರಾಷ್ಟ್ರೀಯ ನಾಟಕೋತ್ಸವ

ಮಂಜುಶ್ರೀ ಎಂ. ಕಡಕೋಳ Updated:

ಅಕ್ಷರ ಗಾತ್ರ : | |

Prajavani

ನಿರಂತರ ಚಲನಶೀಲತೆಯನ್ನು ಕಾಪಿಟ್ಟುಕೊಂಡಿರುವ ರಂಗಭೂಮಿ, ಆಯಾ ಕಾಲದ ವಿದ್ಯಮಾನಗಳಿಗೆ ಸೃಜನಾತ್ಮಕವಾಗಿ ಪ್ರತಿಕ್ರಿಯಿಸುತ್ತಾ ಬಂದಿದೆ. ಕೋವಿಡ್‌ ಕಾಲದಲ್ಲೂ ಕನ್ನಡ ರಂಗಭೂಮಿ ತನ್ನ ಬದ್ಧತೆಯಿಂದ ವಿಮುಖಗೊಂಡಿಲ್ಲ. ಕೋವಿಡ್‌ನಿಂದಾಗಿ ಇನ್ನೇನು ರಂಗಚಟುವಟಿಕೆಗಳು ಕ್ಷೀಣಗೊಂಡವು ಅನ್ನುವ ಸಮಯದಲ್ಲೇ ‘ಪ್ರಜಾವಾಣಿ’ ಹಾಗೂ ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಯು (ಎನ್‌ಎಸ್‌ಡಿ) ಫೇಸ್‌ಬುಕ್ ಮೂಲಕ ‘ರಾಷ್ಟ್ರೀಯ ನಾಟಕೋತ್ಸವ 2020’ ಆಯೋಜಿಸಿ ರಂಗಮನ್ನಣೆಗೆ ಭಾಜನವಾದವು.

***

ನಿರಂತರ ಚಲನಶೀಲತೆಯನ್ನು ಕಾಪಿಟ್ಟುಕೊಂಡಿರುವ ರಂಗಭೂಮಿ, ಆಯಾ ಕಾಲದ ವಿದ್ಯಮಾನಗಳಿಗೆ ಸೃಜನಾತ್ಮಕವಾಗಿ ಪ್ರತಿಕ್ರಿಯಿಸುತ್ತಾ ಬಂದಿದೆ. ಕೋವಿಡ್‌ ಕಾಲದಲ್ಲೂ ಕನ್ನಡ ರಂಗಭೂಮಿ ತನ್ನ ಬದ್ಧತೆಯಿಂದ ವಿಮುಖಗೊಂಡಿಲ್ಲ. ಕೋವಿಡ್‌ನಿಂದಾಗಿ ಇನ್ನೇನು ರಂಗಚಟುವಟಿಕೆಗಳು ಕ್ಷೀಣಗೊಂಡವು ಅನ್ನುವ ಸಮಯದಲ್ಲೇ ‘ಪ್ರಜಾವಾಣಿ’ ಹಾಗೂ ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಯು (ಎನ್‌ಎಸ್‌ಡಿ) ಫೇಸ್‌ಬುಕ್ ಮೂಲಕ ‘ರಾಷ್ಟ್ರೀಯ ನಾಟಕೋತ್ಸವ 2020’ ಆಯೋಜಿಸಿ ರಂಗಮನ್ನಣೆಗೆ ಭಾಜನವಾದವು.

ಡಿ. 4ರಿಂದ ಡಿ. 14ರವರೆಗೆ ಒಟ್ಟು 11 ದಿನಗಳಲ್ಲಿ ಫೇಸ್‌ಬುಕ್‌ನಲ್ಲಿ ಪ್ರದರ್ಶನವಾದ 13 ನಾಟಕಗಳು ಪ್ರೇಕ್ಷಕರಿಗೆ ರಸದೌತಣವನ್ನೇ ಉಣಬಡಿಸಿದವು. ಸುದ್ದಿಗಳಷ್ಟೇ ಅಲ್ಲ ಸಾಂಸ್ಕೃತಿಕ ವಿಷಯಗಳಲ್ಲೂ ಮೇಲ್ಪಂಕ್ತಿ  ಹಾಕಿಕೊಟ್ಟಿರುವ ‘ಪ್ರಜಾವಾಣಿ’ ಆನ್‌ಲೈನ್ ರಾಷ್ಟ್ರೀಯ ನಾಟಕೋತ್ಸವ ಮೂಲಕ ಕಲಬುರ್ಗಿ, ದಾವಣಗೆರೆ, ಮಂಗಳೂರು, ಚೆನ್ನೈ, ಅಮೆರಿಕ ಹೀಗೆ ಹತ್ತುಹಲವೆಡೆ ಇರುವ ಪ್ರೇಕ್ಷಕರನ್ನು ರಂಜಿಸಿತು. ಆನ್‌ಲೈನ್‌ನಲ್ಲಿ ಎಲ್ಲಾ ನಾಟಕಗಳನ್ನು ಒಂದೂವರೆ ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ವೀಕ್ಷಿಸಿದ್ದು ಗಮನೀಯ.

‘ದುರಿತ ಕಾಲದಲ್ಲಿ ಜನರ ಬಳಿಗೆ ರಂಗಭೂಮಿ ಆನ್‌ಲೈನ್ ಮೂಲಕ ಬೃಹತ್ ಪ್ರಮಾಣದಲ್ಲಿ ತಲುಪಬಹುದು ಎಂಬುದನ್ನು ‘ಪ್ರಜಾವಾಣಿ’ ತೋರಿಸಿಕೊಟ್ಟಿತು. ಅದಕ್ಕಾಗಿ ರಂಗಕರ್ಮಿಗಳು ಅಪ್‌ಡೇಟ್ ಆಗುವ ಅಗತ್ಯವನ್ನೂ ಇದು ಮನಗಾಣಿಸಿತು’ ಎಂದರು ಎನ್‌ಎಸ್‌ಡಿಯ ಪ್ರಾದೇಶಿಕ ನಿರ್ದೇಶಕ ಸಿ. ಬಸವಲಿಂಗಯ್ಯ.

ಶ್ರೀನಿವಾಸ ಜಿ. ಕಪ್ಪಣ್ಣ ಅವರ ಪರಿಕಲ್ಪನೆಗೆ ಸಂಚಾಲಕರಾಗಿ ಸಿ.ಕೆ. ಗುಂಡಣ್ಣ, ಶಶಿಧರ ಬಾರಿಘಾಟ್ ಕೈಜೋಡಿಸಿದರೆ, ತಾಂತ್ರಿಕವಾಗಿ ನೆರವಾದವರು ಕೆ.ಎಂ.ಚಂದ್ರಶೇಖರ್. ಅಂತೆಯೇ ನೇಪಥ್ಯದಲ್ಲಿ ಹಲವರು ದುಡಿದರು. ಎನ್‌ಎಸ್‌ಡಿಯಷ್ಟೇ ಅಲ್ಲ, ಪ್ರಸಿದ್ಧ ರಂಗಕರ್ಮಿಗಳ ನಾಟಕಗಳೂ ಉತ್ಸವದಲ್ಲಿ ಪ್ರದರ್ಶನಗೊಂಡಿದ್ದು ವಿಶೇಷ. 6 ವರ್ಷಗಳಲ್ಲಿ ಎನ್‌ಎಸ್‌ಡಿಯಲ್ಲಿ ಕಲಿತ ವಿದ್ಯಾರ್ಥಿಗಳ ನಾಟಕಗಳು ಇವು ಎಂಬುದು ಮತ್ತೊಂದು ವಿಶೇಷ.


ಸಿ. ಬಸವಲಿಂಗಯ್ಯ

ಸಿರಿ (ರಂಗರೂಪ:ನಾ. ದಾಮೋದರ ಶೆಟ್ಟಿ, ನಿ: ಬಿ. ಜಯಶ್ರೀ): ಸ್ತ್ರೀ ಸಮಾನತೆಗಾಗಿ ಹೆಣಗಾಡಿ ಜಯ ಸಾಧಿಸಿದ ‘ಸಿರಿ’ ತುಳುವರ ಆರಾಧ್ಯ ದೈವ. ಕೆಟ್ಟ ಗಂಡನಿಂದ ವಿಚ್ಛೇದನ ಪಡೆದು ಮರುಮದುವೆಯಾಗುವ ಪ್ರಥಮ ಮಹಿಳೆಯಾಗಿ ಮೇಲ್ಪಂಕ್ತಿ ಹಾಕಿಕೊಟ್ಟ ‘ಸಿರಿ’ಯ ವ್ಯಕ್ತಿತ್ವವನ್ನು ನಾಟಕ ಯಶಸ್ವಿಯಾಗಿ ತೆರೆದಿಟ್ಟಿತು.

ವೀರಗಾಸೆ–ನೀರ ಒಡಪು (ದೊಂಬಿದಾಸರ ಕಥೆ, ನಿ: ಗೋಪಾಲಕೃಷ್ಣ ನಾಯರಿ): ಗಂಗೆ–ಗೌರಿಯರ ಸವತಿ ಮತ್ಸರದ ಕಥೆಯಾದರೂ, ಭೂಲೋಕದಲ್ಲಿ ನೀರಿನ ಮಹತ್ವ ಸಾರುವ ವೀರಗಾಸೆ–ನೀರ ಒಡಪು ಕಥಾನಕವು ದೊಂಬಿದಾಸರ ಕಥೆಗಾರಿಕೆಯ ಮಹತ್ವವನ್ನು ಪ್ರತಿಪಾದಿಸಿತು.

ಊರು ಭಂಗ (ಯಕ್ಷಗಾನ ಆಧರಿತ, ನಿ: ಬನ್ನಂಜೆ ಸಂಜೀವ ಸುವರ್ಣ): ಗದಾಯುದ್ಧದಲ್ಲಿ ಗೆಲ್ಲುವ ಭೀಮ ಹಾಗೂ ಸೋಲುವ ದುರ್ಯೋಧನನ ಕಥಾನಕವನ್ನು ಎನ್‌ಎಸ್‌ಡಿ ವಿದ್ಯಾರ್ಥಿಗಳು ಯಶಸ್ವಿಯಾಗಿ ಪ್ರದರ್ಶಿಸಿದರು.

ಬೆರಳ್‌ಗೆ ಕೊರಳ್ (ರಚನೆ: ಕುವೆಂಪು, ನಿ: ಪ್ರಸನ್ನ ರಾಮಸ್ವಾಮಿ): ಬಿಲ್ವಿದ್ಯೆಯಲ್ಲಿ ನಿಪುಣನಾಗಬೇಕೆಂಬ ಅರ್ಜುನನ ಅತಿಯಾಸೆಯಿಂದಾಗಿ ಗುರು ದ್ರೋಣಾಚಾರ್ಯ, ಕಾಡಿನ ಹುಡುಗ ಏಕಲವ್ಯನಿಂದ ಬೆರಳನ್ನೇ ಗುರುಕಾಣಿಕೆಯಾಗಿ ಪಡೆಯುವ ಕಥೆ ‘ಬೆರಳ್‌ಗೆ ಕೊರಳ್’ ನಾಟಕದ್ದು.

ಸೀತಾ ಸ್ವಯಂವರ (ರಚನೆ: ಮಹಾಕವಿ ರಾಜಶೇಖರ/ಎಂ.ಎ.ಹೆಗಡೆ, ನಿ: ಚಿದಂಬರ ರಾವ್ ಜಂಬೆ): ರಾಮಾಯಣದ ಭಾಗವೊಂದಾಗಿರುವ ಸೀತಾ ಸ್ವಯಂವರವು ರಾಮ ಮತ್ತು ಸೀತೆಯರ ಪ್ರಸ್ತುತತೆಯನ್ನು ಮನಗಾಣಿಸುತ್ತದೆ.


ಶ್ರೀನಿವಾಸ ಜಿ. ಕಪ್ಪಣ್ಣ

ಮಾರೀಚನ ಬಂಧುಗಳು (ರಚನೆ: ಅರುಣ್ ಮುಖ್ಯೋಪಾಧ್ಯಾಯ, ಕನ್ನಡಕ್ಕೆ: ಬಿಂಡಿಗನವಿಲೆ ನಾರಾಯಣಸ್ವಾಮಿ, ನಿ: ವಾಲ್ಟರ್ ಡಿಸೋಜ): ರಾಮಾಯಣದ ಮಾರೀಚ, ಆಧುನಿಕ ಭಾರತದ ರೈತ ಈಶ್ವರ, ಅಮೆರಿಕದ ಗ್ರೆಗೊರಿ ತಮ್ಮತಮ್ಮ ಕಾಲ–ದೇಶದ ಸಂದರ್ಭಗಳ ಸಹಿತ ಏಕಕಾಲಕ್ಕೆ ಮುಖಾಮುಖಿಯಾಗುತ್ತಾರೆ. ಆಗ ಏಳುವ ನೈತಿಕ ಮೌಲ್ಯಗಳ ಪ್ರಶ್ನೆಯು ಚಿಂತನೆಗೆ ಹಚ್ಚುವಂಥದ್ದು.

ಗುಳ್ಳಕಾಯಜ್ಜಿ (ರಚನೆ: ಚಂದ್ರಶೇಖರ ಕಂಬಾರ, ನಿ: ಮಾಲತೇಶ್ ಬಡಿಗೇರ): ಭರತ ಮತ್ತು ಬಾಹುಬಲಿ ನಡುವಿನ ಸಂಬಂಧ, ಬಾಹುಬಲಿಯ ತ್ಯಾಗವನ್ನು ಮನೋಜ್ಞವಾಗಿ ಚಿತ್ರಿಸಿತು.

ಕರಿಯ ದೇವರ ಹುಡುಕಿ (ರಚನೆ: ಶಂಕರ ಪಿಳ್ಳೈ, ನಾ.ದಾಮೋದರ ಶೆಟ್ಟಿ, ನಿ: ಚಂದ್ರದಾಸನ್): ವರ್ಗ ಸಂಘರ್ಷದ ಪ್ರಾತಿನಿಧಿಕ ಕಥೆ ಹೇಳುತ್ತಲೇ ನಮ್ಮೊಳಗಿರುವ ದೇವರ‌‌ನ್ನು ಕಂಡುಕೊಳ್ಳುವ ಬಗೆಯನ್ನು ತೆರೆದಿಟ್ಟಿತು.

ಕುರ್ಚಿ ಮತ್ತು ಆ… ನಂತರ (ಕನ್ನಡ, ತಮಿಳು, ತೆಲುಗು, ಮಲಯಾಳಂ ಕಥಾರಂಗ, ನಿ: ದೇವೇಂದ್ರರಾಜ್ ಅಂಕುರ್): ಕಥೆಗಳ ಕೊಲಾಜ್‌ನಂತೆ ಮೂಡಿಬಂದ ಈ ನಾಟಕವು ಸಿದ್ಧ ನಾಟಕಗಳ ಚೌಕಟ್ಟನ್ನು ಮುರಿದು ಕಥಾರಂಗ ಮಂಚ್ ಎನ್ನುವ ವಿಶಿಷ್ಟ ಪ್ರಕಾರವನ್ನು ಪರಿಚಯಿಸಿತು.

ಅನಿಮಲ್ ಫಾರ್ಮ್ (ರಚನೆ: ಜಾರ್ಜ್ ಆರ್ವೆಲ್, ಕನ್ನಡಕ್ಕೆ: ಸಿ. ಬಸವಲಿಂಗಯ್ಯ, ನಿ: ಸತ್ಯಬ್ರತ್ ರೌತ್): ಮಾಲೀಕನಾಗಿರುವ ಮನುಷ್ಯನ ವಿರುದ್ಧ ಪ್ರಾಣಿಗಳು ಸಿಡಿದೆದ್ದು ತಮ್ಮ ಸ್ವಾತಂತ್ರ್ಯವನ್ನು ದಕ್ಕಿಸಿಕೊಳ್ಳುವ ಕತೆ ಇದು.

ಗುಣಮುಖ (ರಚನೆ: ಪಿ.ಲಂಕೇಶ್, ನಿ: ಬಸವಲಿಂಗಯ್ಯ): ಭಾರತದ ಮೇಲೆ ಆಕ್ರಮಣ ಮಾಡಿದ ಪರ್ಷಿಯಾದ ಸಾಮಾನ್ಯ ಸೈನಿಕ ನಾದಿರ್ ಷಾ ಕುರಿತ ಐತಿಹಾಸಿಕ ನಾಟಕ. ಖಡ್ಗದ ಮೂಲಕ ಅಸ್ತಿತ್ವ ಕಂಡುಕೊಂಡರೂ ದೈಹಿಕ–ಮಾನಸಿಕವಾಗಿ ಅಸ್ವಸ್ಥನಾಗುವ ನಾದಿರನ ಮನಸ್ಥಿತಿಯನ್ನು ಚಿತ್ರಿಸುವ ‘ಗುಣಮುಖ’ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಪಡೆಯಿತು.

ಹಯವದನ, ನಾಗಮಂಡಲ, ಅಗ್ನಿ ಮತ್ತು ಮಳೆ (ರಚನೆ: ಗಿರೀಶ್ ಕಾರ್ನಾಡ್, ನಿ: ಸಿ. ಬಸವಲಿಂಗಯ್ಯ): ಸೃಷ್ಟಿ ಕಲೆ, ವಿನ್ಯಾಸ ಮತ್ತು ತಂತ್ರಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳು ಕಾರ್ನಾಡರ ನಾಟಕೋತ್ಸವದಲ್ಲಿ ಪ್ರದರ್ಶಿಸಿದ ಮೂರು ನಾಟಕಗಳ ದೃಶ್ಯಾವಳಿಗಳು (ಹಯವದನ, ನಾಗಮಂಡಲ, ಅಗ್ನಿ ಮತ್ತು ಮಳೆ ಮೂರು) ಪ್ರೇಕ್ಷಕರನ್ನು ಸೆಳೆಯಿತು.


‘ಬೆರಳ್‌ಗೆ ಕೊರಳ್‌’ ನಾಟಕದ ದೃಶ್ಯ

ಕುಸುಮಬಾಲೆ (ರಚನೆ: ದೇವನೂರ ಮಹಾದೇವ, ನಿ: ಸಿ. ಬಸವಲಿಂಗಯ್ಯ): ಕುಸುಮಬಾಲೆ ಒಂದು ಸಮುದಾಯದ ಸಾಂಸ್ಕೃತಿಕ ಮೌಲ್ಯವನ್ನಷ್ಟೇ ಅಲ್ಲ, ಸಾಮಾಜಿಕ ಹಿನ್ನೆಲೆಯನ್ನೂ ತೆರೆದಿಟ್ಟ ನಾಟಕ. ಪ್ರೀತಿಸಿದ ಕಾರಣಕ್ಕಾಗಿ ಮರ್ಯಾದೆಗೇಡು ಹತ್ಯೆಗೀಡಾಗುವ ಚನ್ನ, ಮಾನಸಿಕ ಕ್ಷೋಭೆಗೊಳಗಾಗುವ ಕುಸುಮಳ ಜೀವನ ಚಿತ್ರಣ ನೀಡುವ ಮೂಲಕ ರಾಷ್ಟ್ರೀಯ ನಾಟಕೋತ್ಸವ ಯಶಸ್ವಿಯಾಗಿ ಮುಕ್ತಾಯವಾಯಿತು.

ನಾಟಕ ವಿಮರ್ಶಾ ಸ್ಪರ್ಧೆಯಲ್ಲಿ ಭಾಗವಹಿಸಿ, ಬಹುಮಾನ ಗೆಲ್ಲಿ
11 ದಿನಗಳ ನಾಟಕೋತ್ಸವದ ಎಲ್ಲ 13 ನಾಟಕಗಳ ಮೇಲೆ ಬೆಳಕು ಚೆಲ್ಲುವ ಸಮಗ್ರ ವಿಮರ್ಶೆಯೊಂದನ್ನು ಓದುಗರಿಂದ ಆಹ್ವಾನಿಸಲಾಗಿದೆ. ವಿಮರ್ಶೆಯು 500ರಿಂದ ಗರಿಷ್ಠ 1000 ಪದಗಳ ಮಿತಿಯೊಳಗೆ ಇರಬೇಕು.

ರಂಗಕರ್ಮಿಗಳೇ ಆಯ್ಕೆ ಮಾಡುವ ಉತ್ತಮವಾದ 3 ವಿಮರ್ಶೆಗಳು prajavani.net ನಲ್ಲಿ ಪ್ರಕಟವಾಗಲಿದ್ದು, ಅವುಗಳಿಗೆ ಖ್ಯಾತ ರಂಗ ನಿರ್ದೇಶಕ ಬಿ.ಸುರೇಶ್ ಅವರು ₹5000, ₹3000 ಹಾಗೂ ₹2000 ನಗದು ಪುರಸ್ಕಾರ ನೀಡಲಿದ್ದಾರೆ. ನಾಟಕ ವಿಮರ್ಶೆಯು ನಮಗೆ ತಲುಪಬೇಕಾದ ಅಂತಿಮ ದಿನಾಂಕ ಡಿಸೆಂಬರ್ 20, 2020.

ಇಮೇಲ್ ಮೂಲಕ ವಿಮರ್ಶೆ ಕಳುಹಿಸಬೇಕಾದ ವಿಳಾಸ: prajavani9@gmail.com

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು