‘ತಬರನ ಕಥೆ’ ನಾಟಕ ಪ್ರದರ್ಶನ

ಸೋಮವಾರ, ಮೇ 20, 2019
28 °C

‘ತಬರನ ಕಥೆ’ ನಾಟಕ ಪ್ರದರ್ಶನ

Published:
Updated:
Prajavani

ನಗರದ ಸರ್ಕಾರಿ ಕಲಾ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಮಾ ರಂಗ ಸಂಶೋಧನ ಪ್ರತಿಷ್ಠಾನದ ಸಹಯೋಗದಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಕಥೆಯನ್ನು ಆಧರಿಸಿದ ‘ತಬರನ ಕಥೆ’ ನಾಟಕವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಬೆಳಿಗ್ಗೆ 11.30 ಗಂಟೆಗೆ ಪ್ರದರ್ಶಿಸಲಿದ್ದಾರೆ.

ಹಿರಿಯ ರಂಗಕರ್ಮಿಗಳಾದ ಎಲ್.ಕೃಷ್ಣಪ್ಪ ನಾಟಕವನ್ನು ವಿನ್ಯಾಸಿಸಿ, ನಿರ್ದೇಶನ ಮಾಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಲವಂತರಾವ್ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸುವರು. ನಟಿ ಶ್ವೇತಾ ಶ್ರೀವಾತ್ಸವ ಪ್ರಾಸ್ತಾವಿಕವಾಗಿ ಮಾತನಾಡುವರು.

ಪ್ರಾಂಶುಪಾಲರಾದ ಪ್ರೊ. ಎಸ್.ಜಿ. ಮೂರ್ತಿ ಅಧ್ಯಕ್ಷತೆ ವಹಿಸುವರು. ರಂಗ ವಿಮರ್ಶಕರಾದ ಗುಡಿಹಳ್ಳಿ ನಾಗರಾಜ ಹಾಗೂ ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಜೆ.ಎಸ್.ವೀಣಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ತಬರನಕಥೆ ಕುರಿತು
ಪ್ರಸ್ತುತ ಸಮಾಜಕ್ಕೆ ಹಿಡಿದ ಕೈಗನ್ನಡಿ ತಬರನ ಕಥೆ. ಸ್ವಾತಂತ್ರ್ಯಪೂರ್ವದಲ್ಲಿ ವಿವಿಧ ಇಲಾಖೆಯಲ್ಲಿ ಗುಮಾಸ್ತನಾಗಿ ಕಾರ್ಯ ನಿರ್ವಹಿಸಿದ ತಬರ ಸ್ವಾತಂತ್ರ್ಯೋತ್ತರದಲ್ಲಿ ನಿವೃತ್ತನಾಗುತ್ತಾನೆ. ಕಾಫಿ ಬೆಳೆಗಾರರು ಸರ್ಕಾರಕ್ಕೆ ನ್ಯಾಯವಾಗಿ ಕಟ್ಟಬೇಕಾದ ತೆರಿಗೆಯನ್ನು ತಬರನ ಸಂಬಳದಲ್ಲಿ ಹಿಡಿದುಕೊಳ್ಳಲಾಗುತ್ತದೆ. ಗುಮಾಸ್ತನಾಗಿ ನಿವೃತ್ತನಾದ ಅವನಿಗೆ ಸಲ್ಲಬೇಕಾದ ಗ್ರಾಚ್ಯುಟಿ, ಪಿಂಚಣಿ ಸಿಗದೆ ಅವುಗಳನ್ನು ಪಡೆಯಲು ಅಧಿಕಾರಿಯಿಂದ ಅಧಿಕಾರಿಗಳ ಬಳಿ, ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಾನೆ.

ಜಡ್ಡುಗಟ್ಟಿದ ಸರ್ಕಾರಿ ಕಚೇರಿ ವ್ಯವಸ್ಥೆಗೆ ತಬರನ ಕೂಗು ತಲುಪುವುದಿಲ್ಲ. ಪ್ರತಿ ಕಚೇರಿಯಲ್ಲೂ ಇಲ್ಲದ ಸಬೂಬು ಹೇಳಿ ವಿವಿಧ ದಾಖಲೆ ತರಲು ತಬರನನ್ನು ಅಲೆದಾಡಿಸುತ್ತಾರೆ. ಅಮಾಯಕನಾದ ತಬರ ಕಚೇರಿಯಿಂದ ಕಚೇರಿಗೆ ಅಲೆಯುತ್ತಾ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸುವಲ್ಲಿ ಹೈರಾಣಾಗುತ್ತಾನೆ.

ತಬರನ ಹೆಂಡತಿ ಅಪ್ಪಮ್ಮಳಿಗೆ ಸಕ್ಕರೆ ಕಾಯಿಲೆಯಾಗಿ ಕಾಲಿನಲ್ಲಾದ ಗಾಯ ಗ್ಯಾಂಗ್ರೀನ್ನಾಗಿ ಕಾಲನ್ನು ತೆಗೆಯಬೇಕಾಗುತ್ತದೆ. ಸರಿಯಾದ ಉಪಚಾರವಿಲ್ಲದೆ ಅಪ್ಪಮ್ಮ ಅಸುನೀಗುತ್ತಾಳೆ. ಈರೇಗೌಡ, ಬಂಟಪ್ಪರಂಥ ರಾಜಕಾರಣಿಗಳು ತಬರನಂಥ ಅಮಾಯಕರನ್ನು ಬಳಸಿಕೊಳ್ಳುತ್ತಾ ಬೆಳೆಯುತ್ತಾರೆ. ಇಷ್ಟರಲ್ಲಿ ಸ್ವಾತಂತ್ರ್ಯದ ಬೆಳ್ಳಿ ಹಬ್ಬ ಆಚರಣೆಗೆ ವಸೂಲಿಗಿಳಿದವರು ತಬರನಿಗೆ ಬರಲಿರುವ ಪೆನ್ಷನ್ ಹಣದ ಮೇಲೆ ಕಣ್ಣಾಕುತ್ತಾರೆ.

ಇದರಿಂದ ರೋಸಿಹೋದ ತಬರ ಪೂರ ಹಣವನ್ನು ತೆಗೆದುಕೊಳ್ಳಿರೆಂದು ಹೇಳಿ ವ್ಯವಸ್ಥೆಯನ್ನು ಅಳಿಯುತ್ತಾನೆ. ಮುಂದೆ ನಡೆಯುವ ರಾಜಕೀಯ ಪಿತೂರಿಯಲ್ಲಿ ಈರೇಗೌಡನ ಕೊಲೆ ತಬರನ ಮೇಲೆ ಹೊರಿಸಿ ಬಂಧಿಸಿ ಜೈಲಿನಲ್ಲಿ ಚಿತ್ರಹಿಂಸೆಯನ್ನು ನೀಡಲಾಗುತ್ತದೆ. ತಬರನ ಕಥೆ ಸಮಕಾಲೀನ ಸಮಾಜದಲ್ಲಿ ನಡೆಯುವ ಭ್ರಷ್ಟಾಚಾರ, ಜಡ್ಡುಗಟ್ಟಿದ ಅಧಿಕಾರಶಾಹಿ, ರಾಜಕಾರಣದ ಮೇಲಾಟವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ.

ಸ್ವಾತಂತ್ರ ಚಳವಳಿಯಲ್ಲಿದ್ದ ಆಶೋತ್ತರಗಳು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಈಡೇರದೆ ಶ್ರೀಸಾಮಾನ್ಯರ ಬದುಕು ಮತ್ತಷ್ಟು ಅವಸಾನದತ್ತ ಸಾಗುವ ಚಿತ್ರಣವನ್ನು ನಾಟಕವು ವಿಡಂಬನೆಯ ನೆಲೆಯಲ್ಲಿ ಕಟ್ಟಿಕೊಡುತ್ತದೆ. ತಬರ ಎನ್ನುವ ವ್ಯಕ್ತಿ ಇಂದು ನಮ್ಮ ಸಮಾಜದಲ್ಲಿ ನುಡಿಗಟ್ಟಾಗಿ ಬಳಕೆಯಾಗುತ್ತಿರುವುದು ನಾಟಕದ ಆಶಯವನ್ನು ಸಮರ್ಥವಾಗಿ ಅಭಿವ್ಯಕ್ತಿಸುತ್ತದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !