‘ವಾರಾಂತ್ಯ ವೈಭವ’ದಲ್ಲಿ ಮನ್ಮಥ ವಿಜಯ ನಾಟಕ ಪ್ರದರ್ಶನ

7
ರಂಗಾಯಣ ಕಲಾವಿದರ ಕಲಾ ಚಾತುರ್ಯ

‘ವಾರಾಂತ್ಯ ವೈಭವ’ದಲ್ಲಿ ಮನ್ಮಥ ವಿಜಯ ನಾಟಕ ಪ್ರದರ್ಶನ

Published:
Updated:
Deccan Herald

ನಾಟಕ: ಮನ್ಮಥ ವಿಜಯ
ರಚನೆ: ಗಿರಿಭಟ್ಟರ ತಮ್ಮಯ್ಯ
ಸಂಗೀತ ಮತ್ತು ನಿರ್ದೇಶನ: ವಿದ್ವಾನ್ ವೈ.ಎಂ.ಪುಟ್ಟಣ್ಣಯ್ಯ
ತಂಡ: ರಂಗಾಯಣ
ಪ್ರಸ್ತುತಿ: ವಾರಾಂತ್ಯ ನಾಟಕ, ಭೂಮಿಗೀತ.

ನಗರದ ರಂಗಾಯಣದ ಭೂಮಿಗೀತದಲ್ಲಿ ರಂಗಾಯಣದ ಕಲಾವಿದರು ವೈ.ಎಂ.ಪುಟ್ಟಣ್ಣಯ್ಯ ಅವರ ನಿರ್ದೇಶನದಲ್ಲಿ ಶಾಸ್ತ್ರೀಯ ಸಂಗೀತ ಪ್ರಧಾನ ಪೌರಾಣಿಕ ನಾಟಕ 'ಮನ್ಮಥ ವಿಜಯ’ವನ್ನು ವಾರಾಂತ್ಯ ನಾಟಕವಾಗಿ ಪ್ರದರ್ಶಿಸಿದರು.

ವೃತ್ತಿರಂಗಭೂಮಿಯ ಪ್ರಖ್ಯಾತ ‘ಹಾರ್ಮೋನಿಯಂ ಮಾಸ್ಟರ್’, ಹಾರ್ಮೋನಿಯಂ ವಾದನ ಗಾರುಡಿಗ ವೈ.ಎಂ.ಪುಟ್ಟಣ್ಣಯ್ಯನವರು. 71ರ ಹರೆಯದಲ್ಲೂ ಪೆಡ್ಲಿಂಗ್ ಹಾರ್ಮೋನಿಯಂ ನುಡಿಸುತ್ತ ಸರಾಗವಾಗಿ ಹಾಡು, ಕಂದಗಳನ್ನು ಉಸುರುವ ಇವರು ಹಾರ್ಮೋನಿ ಯಂನ ಸ್ವರನಳಿಗೆಗಳಿಂದ ಲಯಬದ್ಧ ಸಂಗೀತವನ್ನು ಹೊರಡಿಸುತ್ತಾರೆ. ಹಿಂದೆ ನಾಡಿನ ಹೆಸರಾಂತ ವೃತ್ತಿರಂಗಭೂಮಿ ನಾಟಕದ ಕಂಪೆನಿಗಳಾದ ಗುಬ್ಬಿ ಕಂಪೆನಿ, ಹೊನ್ನಪ್ಪ ಭಾಗವತರ್ ಕಂಪೆನಿ, ಹಿರಣ್ಣಯ್ಯ ಮಿತ್ರಮಂಡಳಿಯಲ್ಲಿ ಸಂಗೀತ ನಿರ್ದೇಶಕರಾಗಿದ್ದರು. ಇವರ ವಿದ್ವತ್ಪೂರ್ಣ ಸಂಗೀತ ಜ್ಞಾನ ಎಲ್ಲರನ್ನು ನಿಬ್ಬೆರಗಾಗಿಸಿತ್ತು. ಆಕಾಶವಾಣಿಯ ಕಲಾವಿದರಾದ ಪುಟ್ಟಣ್ಣಯ್ಯ ಅವರು ಹಲವಾರು ಕಂಪೆನಿ ನಾಟಕಗಳನ್ನು ಬಾನುಲಿ ಪ್ರಸರಣಕ್ಕೆ ಹೊಂದುವಂತೆ ನಿರ್ದೇಶಿಸಿದ್ದಾರೆ. ‘ಮನ್ಮಥ ವಿಜಯ’ ನಾಟಕವು ಎ.ವಿ.ವರದಾಚಾರ‍್ಯರ ರತ್ನಾವಳಿ ಕಂಪೆನಿಯ ನಾಟಕ. ಇಲ್ಲಿನ ಕಥನ ಕಾಳಿದಾಸನ ‘ಕುಮಾರ ಸಂಭವ’ ಹಾಗೂ ಹರಿಹರನ ‘ಗಿರಿಜಾ ಕಲ್ಯಾಣ’ ಆಧಾರಿತ. ಹಿಂದೆ 7 ತಾಸು ಪ್ರದರ್ಶಿಸುತ್ತಿದ್ದ ಈ ನಾಟಕವನ್ನು ಕೇವಲ 3 ತಾಸಿಗೆ ಇಳಿಸಿ ರಂಗಕ್ಕೆ ತರಲಾಗಿದೆ. ಹಳೆಯ ಮಾದರಿಗಳಲ್ಲಿ ಕೆಲವನ್ನು ಬಳಸಿಕೊಳ್ಳಲಾಗಿದೆ. ಜಾವಳಿ, ಸೀಸ, ಕಂದ ಪಂದ್ಯ, ವೃತ್ತ ಇತ್ಯಾದಿ ಕಂಪೆನಿಯ ಮಟ್ಟುಗಳ ಮಿಳಿತವಾಗಿದ್ದ ಈ ರಂಗಪ್ರಯೋಗಕ್ಕೆ ಇಂದಿನ ಆಧುನಿಕತೆಗೆ ತಕ್ಕಂತೆ ಹೊಸ ತಂತ್ರಗಳನ್ನು ಮೇಳೈಸಿ ರಂಗಕ್ಕೆ ತರಲಾಗಿದೆ. ಶೃಂಗಾರ ರಸಪ್ರಧಾನ ನಾಟಕವಾದರೂ ರೌದ್ರ, ಹಾಸ್ಯ ರಸಪ್ರಧಾನ ಸನ್ನಿವೇಶಗಳು ನಾಟಕದುದಕ್ಕೂ ಬಂದು ಹೋಗುತ್ತಿದ್ದದ್ದು ನೋಡುಗರನ್ನು ಏಕತಾನತೆಯಿಂದ ಮುಕ್ತಗೊಳಿಸಿದವು.

ರಂಗಾಯಣದ ಹಿರಿಯ-ಕಿರಿಯ ಒಟ್ಟು 28 ಕಲಾವಿದರು ಅಭಿನಯಿಸಿರುವ ನಾಟಕ ಇದು. ರಾಗಮಾಲಿಕಾ ಕಂದಗಳ ಸಾಹಿತ್ಯ ವೈಖರಿಗೆ ಮನಸೋತು ತಲೆದೂಗದವರಿಲ್ಲ. 30 ಕಂದ ಪದ್ಯಗಳನ್ನು ಹೃದಯಂಗಮವಾಗಿ ಹಾಡುವ ಪರಿ ಸೋಜಿಗವೇ ಸರಿ.

ನಿರ್ದೇಶಕರು ಕಂದ ಪದ್ಯದ ಸಾಲುಗಳನ್ನು ತಮ್ಮ ಕಂಠದಲ್ಲಿ ಬಿತ್ತರಿಸುವುದು ಮತ್ತೂ ಸೊಗಸಾಗಿದೆ. ಯುವಪೀಳಿಗೆಗೆ ವೃತ್ತಿರಂಗಭೂಮಿಯ ಅಮೋಘ ಪರಿಚಯ ಈ ನಾಟಕದಿಂದ ಸಾಧ್ಯವಾದೀತು. ‘ಪತಿ ಆಜ್ಞೆಯ ಮೀರಿ ಘತಿ ಇಲ್ಲದ ಸತಿ..’, ‘ಭಾಮೆಯ ಚಿಂತೆಯಲಿ ನೊಂದ ಮಹೇಶ್ವರ..’, ‘ವೀರರು ನಾವೇ ಧರಿಣಿಯೊಳಗೆ..’, ‘ದುಷ್ಟ ದೇವೇಂದ್ರನು ಭ್ರಷ್ಟ ದೇವತೆಗಳು..’, ‘ಪ್ರಾಣೇಶನೆ ಪೋಗಬೇಡವೋ ಬೇಡಿಕೊಂಬೆನು..’ ಇಂಥ ಮಾಧುರ್ಯಪೂರ್ಣ ಗೀತೆಗಳ ಆಲಿಸುತ್ತಾ ನಾಟಕ ನೋಡಲೇಬೇಕು.

ಪುರಾಣವನ್ನು ಮೂಲವಾಗಿ ಇರಿಸಿ ರಚಿಸಲಾದ ಈ ನಾಟಕದ ಕಥಾಹಂದರದ ಮೊದಲ ಮೂರು ಅಂಕಗಳು ಕುಮಾರಸಂಭವದ ಕಥನ. ದಕ್ಷನಯಜ್ಙ, ದಾಕ್ಷಾಯಿಣಿ ದೇಹತ್ಯಾಗ, ವೀರಭದ್ರನಿಂದ ಯಜ್ಙ ಧ್ವಂಸ, ಕುಸುಮ ಶರನಿಂದ ಶಿವನ ತಫೋಭಂಗ, ಕಾಮದಹನ, ಗಿರಿಜಾ ಕಲ್ಯಾಣ ಮೂಡಿಬಂದರೆ, ಕೊನೆಯ ಎರಡು ಅಂಕದಲ್ಲಿ ಮನ್ಮಥ ಪ್ರದ್ಯುಮ್ನನ ಅವತಾರವೆತ್ತುವುದು, ರತಿ ಮಾಯಾವತಿಯಾಗಿ ಗಂಡನಿಗಾಗಿ ಹುಡುಕಾಟ, ಶಂಬರಾಸುರನ ಉಪಟಳ, ಕಡೆಗೆ ರತಿ-ಮನ್ಮಥರ ಪರಿಗ್ರಹಣದೊಂದಿಗೆ ನಾಟಕಕ್ಕೆ ತೆರೆ ಬೀಳುತ್ತದೆ. ಇದು ಕಥನ.

ಕಂಪೆನಿ ನಾಟಕಗಳ ಕಥಾಹಂದರ ರಚನಾ ಕೌಶಲ ಯಾವ ಗ್ರೀಕ್ ರುದ್ರನಾಟಕಗಳ ಕಥನಕ್ಕಿಂತ ಕಡಿಮೆಯೆನಿಲ್ಲ. ಗಮಕ ಶೈಲಿಯ ಗಾಯನ ನಾಟಕದ ಯಶಸ್ಸಿನ ರೂವಾರಿ. ರಂಗಾಯಣದ ಕಲಾವಿದರ ಸುಧೀರ್ಘ ರಂಗ ಅನುಭವದ ಮೂಸೆಯಿಂದ ಅದ್ದಿ ತೆಗೆದ ಪ್ರಯೋಗ ಮನ್ಮಥ ವಿಜಯ. ಲವಲವಿಕೆ ಭರಿತ ಜೀವಂತಿಕೆಯ ಅಭಿನಯ, ಗಾಯನ, ನೃತ್ಯಗಳು ಮನೋಜ್ಙವಾಗಿವೆ.

ವಯಸ್ಸಿನ ಸೀಮಿತತೆಯನ್ನು ಬದಿಗಿಟ್ಟು ಈವರೆಗಿನ ತಮ್ಮ ಕಲಿಕೆಯನ್ನೆಲ್ಲ ಬಳಸಿ ಪ್ರಯೋಗಿಸಿದಂತಿತ್ತು ಎಲ್ಲ ನಟರ ಅಭಿನಯ. ಮಹದೇವ (ಈಶ್ವರ), ಪ್ರಮೀಳಾ ಬೆಂಗ್ರೆ-ಪಾರ್ವತಿ/ದಾಕ್ಷಾಯಿಣಿ, ಜಗದೀಶ್ ಮನವಾರ್ತೆ (ನಾರದ), ಎಸ್.ರಾಮು (ದಕ್ಷಬ್ರಹ್ಮ, ತಾರಕಾಸುರ), ಹುಲುಗಪ್ಪ ಕಟ್ಟೀಮನಿ (ಮನ್ಮಥ, ಪ್ರದ್ಯುಮ್ನ), ಕೆ.ಆರ್.ನಂದಿನಿ (ರತಿ), ಕೃಷ್ಣಕುಮಾರ್ ನಾರ್ಣಕಜೆ (ಮಹೇಂದ್ರ, ಕೃಷ್ಣ), ಪ್ರಶಾಂತ್ ಹಿರೇಮಠ (ಶಂಬರಾಸುರ, ಪುರೋಹಿತ), ಎಂ.ಎಸ್.ಗೀತಾ (ವೀರಭದ್ರ, ಇಂದಿರೆ, ಸಖಿ), ವಿನಾಯಕಭಟ್ ಹಾಸಣಗಿ (ಪುರೋಹಿತ, ಬೃಹಸ್ಪತಾಚಾರ್ಯ), ಸರೋಜಾ ಹೆಗಡೆ (ಮಾಯಾವತಿ), ಬಿ.ಎನ್.ಶಶಿಕಲಾ (ತಾರೆ, ಸಖಿ), ಎಸ್.ಎಸ್. ವನಿತಾ (ನಂದಿ, ರುಕ್ಮಿಣಿ, ಸಖಿ), ವಿ.ಪುಟ್ಟಲಕ್ಷ್ಮಿ (ಭೃಂಗಿ, ಸಖಿ), ಜೆ.ಹೊಯ್ಸಳ (ಶೂರಪದ್ಮ, ಪರ್ವತರಾಜ, ಋಷಿಮುನಿ, ಅಸುರ), ಬಿ.ಎಂ.ಪ್ರದೀಪ್ (ಸಿಂಹವಕ್ತ್ರ, ಋಷಿಮುನಿ, ಅಸುರ), ಟುವ್ವಿ ಟುವ್ವಿ, ಲಕ್ಷ್ಮಿ ಎಂ, ಶೃತಿ, ಕವಿತಾ (ಸಖಿಯರು), ಮಲ್ಲೇಶ ಮಾಲ್ವಿ, ಪವನ್‌ಕುಮಾರ್ ಮ ಗಂಟೆ (ಚಾರ, ಭಟರು, ಋಷಿಮುನಿ), ಸಿ.ಪಿ.ಭಾಸ್ಕರ್, ಎಚ್.ಆರ್.ಶಿವರಾಜ್, ಕಿರಣ್, ವೀರಭದ್ರಪ್ಪ ಅಣ್ಣಿಗೇರಿ (ಅಷ್ಟದಿಕ್ಪಾಲಕರು), ಮೈಸೂರಿನ ನೃತ್ಯಾಲಯ ತಂಡದ ವಿದ್ಯಾರ್ಥಿಗಳು (ಅಪ್ಸರೆಯರು) .

ನಾಟಕದ ಸಂಗೀತದಷ್ಟೇ ಪ್ರಖರವಾಗಿತ್ತು ಎಚ್.ಕೆ.ದ್ವಾರಕಾನಾಥ್ ಅವರ ರಂಗವಿನ್ಯಾಸ. ಕಂಪೆನಿ ನಾಟಕದ ವೇದಿಕೆಯನ್ನು ಬಿಂಬಿಸುವ ವಿವಿಧ ತರಹೇವಾರಿ ಪರದೆಗಳು, ಸನ್ನಿವೇಶಕ್ಕೆ ಅನುಗುಣವಾಗಿ ಶಿಳ್ಳೆ ಹಾಕಿ ಬದಲಿಸುತ್ತಿದ್ದ ಪರಿ ನೋಡುಗರನ್ನು ರಂಜಿಸಿತ್ತು.

ಬಿ.ಎಂ. ರಾಮಚಂದ್ರ ಅವರ ರಾಜರಾಜೇಶ್ವರಿ ವಸ್ತ್ರಾಲಂಕಾರದ ಚಿತ್ತಾಕರ್ಷಕ ಉಡುಗೆ ತೊಡುಗೆ ಮತ್ತು ವರ್ಣಾಲಂಕಾರ ಹುಬ್ಬೇರಿಸುವಂತಿತ್ತು. ಮಹೇಶ್ ಕಲ್ಲತ್ತಿ ಅವರ ನುರಿತ ಬೆಳಕಿನ ವಿನ್ಯಾಸ, ಸಂಗೀತದಲ್ಲಿ ಪಕ್ಕವಾದ್ಯ ಸಹಕಾರ (ಕ್ಲಾರಿಯೋನೆಟ್) ಡಿ.ರಾಮು, (ತಬಲಾ), ಎಂ.ಎಸ್.ಜಯರಾಮ್ ಇವರ ಲೈವ್ ಸಂಗೀತ ಪ್ರೇಕ್ಷರನ್ನು ನಾಟಕ ಮುಗಿದ ನಂತರವೂ ಕಾಡಿದ್ದಂತೂ ನಿಜ. ನಾಟಕಕ್ಕೆ ಪೂರಕ ನೃತ್ಯ ಸಂಯೋಜನೆ ಡಾ.ತುಳಸಿ ರಾಮಚಂದ್ರ.

ರಂಗಭೂಮಿಯ ವಿದ್ಯಾರ್ಥಿಗಳು ಮಾತ್ರವಲ್ಲ ರಂಗಾಸಕ್ತರು ನೋಡಲೇಬೇಕಾದ ರಂಗಪ್ರಯೋಗಗಳಲ್ಲಿ ಮನ್ಮಥ ವಿಜಯವೂ ಒಂದು.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !