ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದ ರಂಗ ಮೇಳ

ಜಗದ ಮಾನವೀಯತೆ ಹುಡುಕಾಟದ ಕುಂಭಮೇಳ
Last Updated 25 ಫೆಬ್ರುವರಿ 2023, 19:31 IST
ಅಕ್ಷರ ಗಾತ್ರ

‘ವಯಸ್ಸಾದವರು ಮಕ್ಕಳು ಬರಬೇಡಿ, ಹೃದಯದ ಸಮಸ್ಯೆ ಇರುವವರು, ಹೆಚ್ಚಿನ ಬಿ.ಪಿ. ಇರುವವರು ದಯವಿಟ್ಟು ದೂರವಿರಿ, ಸ್ಟಂಟ್ ಹಾಕಿಸಿಕೊಂಡವರು ಬರುವುದು ಒಳ್ಳೆಯದಲ್ಲ’ ಎನ್ನುವ ಘೋಷಣೆ ಮೇಲಿಂದ ಮೇಲೆ ಕೇಳಿ ಬರುತ್ತಿತ್ತು. ಅದೇ ವೇಳೆ ಆಂಬುಲೆನ್ಸ್‌ಗಳು ಆ ಘೋಷಣೆ ಮಾಡುತ್ತಿದ್ದ ಜಾಗಕ್ಕೆ ಬಂದು ಆಯಕಟ್ಟಿನ ಜಾಗದಲ್ಲಿ ನಿಂತವು. ಡಾಕ್ಟರ್‌ಗಳು ತಮ್ಮ ಕಿಟ್‌ಗಳ ಸಮೇತ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಆರಂಭಿಸಿದರು.

ಖಂಡಿತಾ ಇದು ಯಾವುದೇ ಅವಘಡ ಸಂಭವಿಸಿದ ಜಾಗವಾಗಿರಲಿಲ್ಲ, ಭೂ ಕುಸಿತವೂ ಉಂಟಾಗಿರಲಿಲ್ಲ, ಅಪಾಯಕಾರಿ ಸಾಹಸಕ್ರೀಡೆಯ ಜಾಗವಂತೂ ಅಲ್ಲವೇ ಅಲ್ಲ. ಇದು ಕೇರಳ ಸಂಗೀತ ನಾಟಕ ಅಕಾಡೆಮಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ನಾಟಕ ನೋಡಲು ಯಾರು ಬರಬಹುದು ಎಂದು ನೀಡುತ್ತಿದ್ದ ಸೂಚನೆಯಾಗಿತ್ತು.

ಆ ವೇಳೆಗಾಗಲೇ ಇಟಲಿಯಿಂದ ಬಂದಿಳಿದಿದ್ದ ‘ಥರ್ಡ್ ರೀಚ್’ ನಾಟಕ ನೋಡಲು ಸಾವಿರಾರು ಜನ ಉದ್ದೋ ಉದ್ದನೆಯ ಸರತಿ ಸಾಲಿನಲ್ಲಿ ನಿಂತಿದ್ದರು. ಹಾಗೆ ಒಂದು ಗಂಟೆಗೂ ಹೆಚ್ಚು ಕಾಲ ನಿಂತಿದ್ದ ನನಗೂ, ಹೊನ್ನಾವರದ ಕಿರಣ್ ಭಟ್‌ರಿಗೂ ಆಶ್ಚರ್ಯವೋ ಆಶ್ಚರ್ಯ. ನಾಟಕ ನೋಡಲು ಬನ್ನಿ ಎಂದು ಕರೆ ನೀಡಿದವರನ್ನಷ್ಟೇ ನೋಡಿದ್ದ ನಮಗೆ ನಾಟಕ ನೋಡಲು ಇಂತಿಂಥವರು ಬರಬೇಡಿ ಎಂದು ಕೇಳಿದ್ದು ಅದೇ ಮೊದಲು. ಸರತಿ ಸಾಲಿನಲ್ಲಿದ್ದ ಇತರರಿಗೂ ಅಂತಹದ್ದೇ ಆಶ್ಚರ್ಯವಾಗಿರಬಹುದು ಎಂದು ಅವರತ್ತ ತಿರುಗಿದರೆ ಇಲ್ಲ, ಬಿಲ್ ಕುಲ್ ಇಲ್ಲ.

ಯಾಕೆಂದರೆ ಅದು ಕೇರಳದಲ್ಲಿ ಜರುಗುತ್ತಿದ್ದ ಹತ್ತು ದಿನಗಳ ಅಂತರರಾಷ್ಟ್ರ್ರೀಯ ರಂಗ ಹಬ್ಬ. ನಾಟಕ ಎಂದರೆ ಹೀಗೇ ಎನ್ನುವ ಕಲ್ಪನೆಯನ್ನು ಒಂದೊಂದು ದೇಶವೂ ಬದಲಿಸಿ ಹಾಕುತ್ತಿತ್ತು. ಒಂದೊಂದು ನಾಟಕವೂ ತನ್ನದೇ ಆದ ಶೈಲಿಯೊಂದಿಗೆ ರಂಗಭೂಮಿಗೆ ಹೊಸದೇ ಭಾಷ್ಯ ಬರೆದಿತ್ತು. ಹಾಗಾಗಿಯೇ ಇಟಲಿಯ ರೋಮಿಯೋ ಕ್ಯಾಸ್ಟೆಲುಸ್ಸಿ ಅವರ ‘ಥರ್ಡ್ ರೀಚ್’ ನಾಟಕ ಎಂಬ ಹೆಸರಿನ ವಿಡಿಯೊ ಇನ್‌ಸ್ಟಾಲೇಷನ್ ಪ್ರಯೋಗ ಸಹ. ಕಳೆದ 12 ವರ್ಷಗಳಿಂದ ಇಂತಹ ಪ್ರಯೋಗಗಳಿಗೆ ಸಾಕ್ಷಿಯಾದ ಪ್ರೇಕ್ಷಕರಿಗೆ ಇದು ಮತ್ತೊಂದು ಹೊಸ ಅನುಭವಕ್ಕೆ ತೆರೆಯಲಿದ್ದ ಹೆಬ್ಬಾಗಿಲು ಆಗಿತ್ತಷ್ಟೆ.

ಕಿರಣ್ ಭಟ್, ಬಿಎಸ್‌ಎನ್‌ಎಲ್‌ನಲ್ಲಿ ಹಿರಿಯ ಅಧಿಕಾರಿಯಾಗಿದ್ದರು. ಅವರಿಗೆ ಕೇರಳಕ್ಕೆ ವರ್ಗವಾಯಿತು. ಅಲ್ಲಿದ್ದ ಎರಡು ವರ್ಷಗಳಲ್ಲಿ ಬಹುತೇಕ ದಿನಕ್ಕೊಂದು ನಾಟಕ ನೋಡುತ್ತಾ ಹೋದರು. ಇದನ್ನು ಸಂಗ್ರಹಿಸಿ ಕಟ್ಟಿಕೊಟ್ಟ ಕೃತಿಯೇ ‘ರಂಗ ಕೈರಳಿ’. ಈ ಕೃತಿ ಓದುತ್ತಾ ಹೋದ ನನಗೆ ಕೇರಳದಲ್ಲಿನ ರಂಗಭೂಮಿಯ ಹುಚ್ಚಿನ ಝಲಕ್ ಸಿಕ್ಕಿಹೋಯಿತು. ಹಾಗೆ ಬರೆಯುತ್ತಾ ಕಿರಣ್ ಭಟ್ ಅಲ್ಲಿ ಪ್ರತೀ ವರ್ಷ ಜರುಗುವ ಅಂತರರಾಷ್ಟ್ರೀಯ ರಂಗಭೂಮಿ ಉತ್ಸವದ ಬಗ್ಗೆ ಪ್ರಸ್ತಾಪ ಮಾಡಿದ್ದರು. ಅಲ್ಲಿಗೆ ಕೇರಳಕ್ಕೆ ಹೋಗಿ ಅಲ್ಲಿನ ರಂಗ ಹುಚ್ಚಿನ ಕೈಕುಲುಕಿ ನೋಡಿಯೇಬಿಡುವ ಹುಕಿ ನನ್ನೊಳಗೆ ಹೊಕ್ಕಿತು.

ಕೇರಳಕ್ಕೆ ಇದು 13ನೆಯ ವರ್ಷದ ರಂಗ ಉತ್ಸವ. 2008ರಲ್ಲಿ ಆರಂಭವಾದ ಈ ಉತ್ಸವ ಪ್ರತೀ ವರ್ಷ ತನ್ನನ್ನು ತಾನೇ ಇನ್ನಷ್ಟು ಪುನರ್ ರೂಪಿಸಿಕೊಳ್ಳುತ್ತಾ ಈಗ ಇಡೀ ಜಗತ್ತು ಈ ನಾಟಕೋತ್ಸವಕ್ಕೆ ಕಾಯುತ್ತಾ ಕೂರುವಷ್ಟರ ಮಟ್ಟಿಗೆ ಬೆಳೆದು ಬಿಟ್ಟಿದೆ.

ಉತ್ಸವದ ಮುಖ್ಯ ತಾಣವಾದ ಕೇರಳ ಸಂಗೀತ ನಾಟಕ ಅಕಾಡೆಮಿಯ ಆವರಣಕ್ಕೆ ಕಾಲಿಡುತ್ತಿದ್ದಂತೆಯೇ ನಮಗೆ ಕಂಡದ್ದು ಗಿರೀಶ ಕಾರ್ನಾಡ, ಸಫ್ದರ್ ಹಷ್ಮಿ, ಬಾದಲ್ ಸರ್ಕಾರ್, ಶೇಕ್ಸ್‌ಪಿಯರ್.. ಹೀಗೆ ಸಾಲು ಸಾಲು ರಂಗ ದಿಗ್ಗಜರು. ಅಲ್ಲಿದ್ದ ಎರಡು ಕಾಯಂ ರಂಗಮಂದಿರಗಳ ಜೊತೆಗೆ ಉತ್ಸವಕ್ಕಾಗಿಯೇ ಎದ್ದು ನಿಂತ ಸಾವಿರಕ್ಕೂ ಹೆಚ್ಚು ಜನ ಕೂರುವ ಸಾಮರ್ಥ್ಯವಿರುವ ತಾತ್ಕಾಲಿಕ ರಂಗಮಂದಿರಗಳು. ಎಲ್ಲೆಡೆಯೂ ನಾಟಕದ ಲೈಟ್‌ಗಳು, ಪರದೆಗಳು, ಮೈಕ್‌ಗಳನ್ನು ಹೊತ್ತವರ ಸರಬರ ಓಡಾಟ.

ನಾಟಕವೊಂದರ ನೋಟ
ನಾಟಕವೊಂದರ ನೋಟ

ಇಲ್ಲಿ ರಂಗ ಉತ್ಸವ ಎಂದರೆ ಅದು ಉತ್ಸವ ಸಂಘಟಿಸುವ ಸಂಗೀತ ನಾಟಕ ಅಕಾಡೆಮಿಯ ಕಾರ್ಯಕ್ರಮ ಮಾತ್ರವಲ್ಲ, ಲಲಿತಕಲಾ ಅಕಾಡೆಮಿ, ಸಾಹಿತ್ಯ ಅಕಾಡೆಮಿ, ಕೇರಳದಲ್ಲಿರುವ ಡ್ರಾಮಾ ಸ್ಕೂಲ್, ಯುವಜನ ಮತ್ತು ಕ್ರೀಡಾ ಕೇಂದ್ರ ಎಲ್ಲವೂ ತಮ್ಮದೇ ಉತ್ಸವವೇನೋ ಎನ್ನುವಂತೆ ಕೈ ಜೋಡಿಸುತ್ತವೆ.

ಕೇರಳದ ಕಲಾವಿದರು ತಿಂಗಳಿಗೂ ಮುಂಚೆಯೇ ಬೀದಿಗಿಳಿದು ‘ಗೋಡೆ ಬರಹವೂ ಕಲೆಯೇ’ ಎನ್ನುವ ಘೋಷಣೆಯೊಂದಿಗೆ ಚಂದದ ಚಿತ್ತಾರಗಳನ್ನು ಬಿಡಿಸುತ್ತಾರೆ. ಆಟೊಗಳನ್ನೇ ಮಿನಿ ವೇದಿಕೆಯಾಗಿ ಪರಿವರ್ತಿಸಿಕೊಂಡ ಬೀದಿ ನಾಟಕ ತಂಡಗಳು ತ್ರಿಶ್ಶೂರಿನ ಮೂಲೆ ಮೂಲೆಗೆ ಹೋಗಿ ಉತ್ಸವದ ಕುತೂಹಲ ಉಕ್ಕುವಂತೆ ಮಾಡುತ್ತವೆ. ಗುರುವಾಯೂರಿನಲ್ಲಿರುವ ಮ್ಯೂರಲ್ ಕಲಾವಿದರು ನಾಟಕ ಅಕಾಡೆಮಿಯ ರಂಗ ಮಂದಿರಗಳ ಗೋಡೆಗಳ ಮೇಲೆ ಚಿತ್ತಾರ ಮೂಡಿಸುತ್ತಾರೆ.

ಈ ವರ್ಷದ ನಾಟಕೋತ್ಸವಕ್ಕೆ ಯಾವ ವರ್ಷವೂ ಇಲ್ಲದಷ್ಟು ರಂಗು ಬಂದಿತ್ತು. ಇದಕ್ಕೆ ಕಾರಣವೂ ಇತ್ತು. ಕೋವಿಡ್, ಎರಡು ವರ್ಷದ ನಾಟಕೋತ್ಸವವನ್ನು ನುಂಗಿ ಹಾಕಿತ್ತು. ಹಾಗಾಗಿಯೇ ಈ ಬಾರಿ ಎಲ್ಲಿ ನೋಡಿದರೂ ಜನ. ಕೋವಿಡ್ ಮಾನವೀಯತೆಯನ್ನೇ ಕಿತ್ತು ತಿಂದಿತ್ತು. ಅಲ್ಲಿಯವರೆಗೆ ಇದ್ದ ವಲಸೆ, ಬಡತನಕ್ಕೆ ಇನ್ನಷ್ಟು ಬೇಗೆಯನ್ನು ಸೇರಿಸಿತ್ತು. ಆ ಕಾರಣಕ್ಕಾಗಿಯೇ ‘ಮಾನವೀಯತೆ ಒಗ್ಗೂಡಬೇಕು’ ಎನ್ನುವುದು ಈ ಬಾರಿಯ ರಂಗ ಉತ್ಸವದ ಮೂಲ ಆಶಯ ಹಾಗೂ ಘೋಷಣೆಯಾಗಿತ್ತು.

ಹಾಗಾಗಿಯೇ ಇಡೀ ನಾಟಕಗಳು ಈ ಮಾನವೀಯತೆಯ ಸುತ್ತಲೇ ಇರುವಂತೆ ನೋಡಿಕೊಳ್ಳಲಾಗಿತ್ತು. ‘ಸಾಂಸ್ಕೃತಿಕ ಅಭಿವ್ಯಕ್ತಿ ಎನ್ನುವುದು ಸಮಾಜದ ಬೆನ್ನೆಲುಬು. ದುರಿತ ಕಾಲದಲ್ಲಿ ಪರಸ್ಪರ ವಿಶ್ವಾಸ ತುಂಬಲು, ಜೊತೆಗಿದ್ದೇವೆ ಎನ್ನುವ ಭಾವ ತುಂಬಲು ಇಂತಹ ಉತ್ಸವ ಅತಿ ಮುಖ್ಯ’ ಎಂದಿದ್ದು ಕೇರಳದ ಸಂಸ್ಕೃತಿ ಸಚಿವ ಸಾಜಿ ಚೆರಿಯನ್.

ಮಾನವೀಯತೆ ಎನ್ನುವ ಗುಪ್ತಗಾಮಿನಿಯನ್ನು ಅರಸುತ್ತಿದ್ದ ಅನೇಕ ದೇಶಗಳು ಅಲ್ಲಿದ್ದವು. ಅನೇಕ ರಂಗತಂಡಗಳು, ಅಸಂಖ್ಯಾತ ಪ್ರೇಕ್ಷಕರೂ ಇದ್ದರು. ಹೀಗಾಗಿಯೇ ಉತ್ಸವದ ಹತ್ತೂ ದಿನ ಎಲ್ಲೆಂದರಲ್ಲಿ ವಾದ್ಯಗಳು ಮೊಳಗುತ್ತಿದ್ದವು, ಇನ್ನೆಲ್ಲೋ ಹಾಡಿಗೆ ಅನೇಕರು ಹೆಜ್ಜೆ ಹಾಕುತ್ತಿದ್ದರು, ಟೀ ಅಂಗಡಿಯ ಬದಿಯಲ್ಲಿ ಮಿನಿ ವಿಚಾರ ಸಂಕಿರಣವೇ ಜರುಗಿ ಹೋಗುತ್ತಿತ್ತು. ಈ ಮಧ್ಯೆ ಕೆಂಪು ಕೋಳಿ ವೇಷ ಧರಿಸಿದ ಬೀದಿ ರಂಗ ಕಲಾವಿದರು ಎಲ್ಲರ ಮುಖದಲ್ಲಿ ನಗೆ ಅರಳಿಸಿ ಹೋಗುತ್ತಿದ್ದರು. ಎಷ್ಟು ಸೆಲ್ಫಿಗಳು ಕ್ಲಿಕ್ಕಿಸಲ್ಪಟ್ಟವೋ ಲೆಕ್ಕ ಇಟ್ಟವರಾರು?

ಕಾರ್ನಾಡರ ನೆನಪು...
ಕಾರ್ನಾಡರ ನೆನಪು...

ದಕ್ಷಿಣ ಆಫ್ರಿಕಾ, ಲೆಬನಾನ್, ಇಟಲಿ, ಫ್ರಾನ್ಸ್, ಇಂಗ್ಲೆಂಡ್, ಪ್ಯಾಲೆಸ್ಟೀನ್, ಡೆನ್ಮಾರ್ಕ್, ಇಸ್ರೇಲ್ ದೇಶಗಳ ಜೊತೆಗೆ ಕೇರಳ, ಕರ್ನಾಟಕ, ಮಹಾರಾಷ್ಟ್ರ, ಬಿಹಾರ್, ದೆಹಲಿ, ತಮಿಳುನಾಡು, ಪುದುಚೇರಿ, ಅಸ್ಸಾಂ ರಾಜ್ಯಗಳ ನಾಟಕಗಳೂ ಬೆಸಗೊಂಡವು. ಮಾರನೆಯ ದಿನ ನಾಟಕ ತಂಡದೊಡನೆ ಕೂತು ನಾಟಕವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ನಡೆಯಿತು.

ಇದೇ ಮೊದಲ ಬಾರಿಗೆ ಮಹಿಳೆಯರಿಗಾಗಿಯೇ ರಂಗ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಇಲ್ಲಿನ ನಾಟಕ ಶಾಲೆ ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ನಾಟಕ ಶಾಲೆಗಳ ಉತ್ಸವವನ್ನೂ ನಡೆಸಿತು. ಉತ್ಸವದ ಪೂರ್ವಭಾವಿಯಾಗಿ ಅನೇಕ ಸಂಕಿರಣಗಳೂ ರಂಗ ಗಣ್ಯರ ಉಪನ್ಯಾಸಗಳೂ ಜರುಗಿದವು. ನಾಟಕದ ಅಂಗಳದಲ್ಲಿ ಹಾಡಿನ ಹೊಳೆಯೂ ಹರಿಯಲಿ ಎಂಬಂತೆ ದೇಶದ ನಾನಾ ಕಡೆಯ ಮ್ಯೂಸಿಕ್ ಬ್ಯಾಂಡ್‌ಗಳನ್ನೂ ಕರೆಸಲಾಗಿತ್ತು.

ಲೆಬನಾನ್‌ನ ‘ಟೋಲ್ಡ್ ಬೈ ಮೈ ಮದರ್’ಗೆ ರಂಗಮಂದಿರದ ಸಾಮರ್ಥ್ಯದ ಎರಡು ಪಟ್ಟು ಪ್ರೇಕ್ಷಕರಿದ್ದರು. ಗಾಳಿ ಆಡಲೂ ಜಾಗ ಇರಲಿಲ್ಲ. ಪ್ರೇಕ್ಷಕರೊಬ್ಬರು ಇದೇನು ‘ತ್ರಿಶ್ಶೂರ್ ಮಹಾಪೂರಮ್’ ಏನು? ಎಂದು ಜೋರಾಗಿ ಬೊಬ್ಬೆ ಹಾಕಿದರು. ಅಲ್ಲಿಯವರೆಗೂ ಅಷ್ಟೂ ದಿನ ಈ ರಂಗ ಉತ್ಸಾಹಕ್ಕೆ ಮಾತು ಕೊಡಲು ತಿಣುಕುತ್ತಿದ್ದ ನನಗೆ ಉತ್ತರ ಸಿಕ್ಕಿ ಹೋಯಿತು. ಪಕ್ಕಾ ತ್ರಿಶ್ಶೂರಿನ ಮಹಾಪೂರಮ್‌ನಂತೆಯೇ ಪ್ರೇಕ್ಷಕರು ಹಗಲೂ ರಾತ್ರಿ ನಾಟಕದಲ್ಲಿ ಮಿಂದೆದ್ದರು. ಕುಣಿದು ಕುಪ್ಪಳಿಸಿದರು.

ಈ ಸಂಭ್ರಮ ಅನುಭವಿಸಿ ಹಿಂದಿರುಗಿದ ಮೇಲೂ ಲೆಬನಾನ್‌ನ ನಾಟಕದ ತಾಯಿಯ ಆರ್ತನಾದ, ದಕ್ಲಾಕಥಾ ದೇವಿ ಕಾವ್ಯದ ಆಳದ ನೋವು, ಅಸ್ಸಾಮಿನ ಆ ಗಿಳಿಯ ಪೀ, ಪೀ ದನಿ ನನ್ನನ್ನು ಹಿಂಬಾಲಿಸುತ್ತಲೇ ಇದೆ.

ಗೆದ್ದ ‘ದಕ್ಲಕಥಾ ದೇವಿ ಕಾವ್ಯ’
ಅಂತರರಾಷ್ಟ್ರೀಯ ನಾಟಕ ಉತ್ಸವದಲ್ಲಿ ನಾಟಕ ಪ್ರದರ್ಶಿಸುವುದು ಯಾವುದೇ ತಂಡಕ್ಕೆ ಹೆಮ್ಮೆಯ ವಿಷಯ. ಈ ಬಾರಿ ಅಂತಹ ಹಿರಿಮೆಗೆ ಪಾತ್ರವಾಗಿದ್ದು ಜಂಗಮ ಕಲೆಕ್ಟಿವ್‌ನ ‘ದಕ್ಲಕಥಾ ದೇವಿ ಕಾವ್ಯ’. ಈ ಹಿಂದೆ ಶರಣ್ಯ ರಾಂಪ್ರಕಾಶ್ ಅವರ ನಿರ್ದೇಶನದ 'ಅಕ್ಷಯಾಂಬರ' ನಾಟಕ ಪ್ರದರ್ಶನಗೊಂಡಿತ್ತು. ಕನ್ನಡ ನಾಟಕವಲ್ಲದಿದ್ದರೂ ಎಂ.ಡಿ. ಪಲ್ಲವಿ ಅಭಿನಯಿಸಿದ್ದ ‘ಸಿ ಶಾರ್ಪ್ ಸಿ ಬ್ಲಂಟ್’ ಪ್ರದರ್ಶನಗೊಂಡಿತ್ತು. ಪ್ರತೀ ವರ್ಷ ರಂಗಭೂಮಿಗೆ ನೀಡಿದ ಮಹತ್ವದ ಕೊಡುಗೆಗಾಗಿ ಉತ್ಸವ ಹಿರಿಯ ರಂಗಕರ್ಮಿಯನ್ನು ಗೌರವಿಸುತ್ತದೆ. ಅಂತಹ ಮಹತ್ವದ ಪ್ರಶಸ್ತಿ ಪ್ರಸನ್ನ ಅವರಿಗೆ ಸಂದಿತ್ತು.

ಈ ಬಾರಿ ‘ದಕ್ಲಕಥಾ ದೇವಿ ಕಾವ್ಯ’ ಬಹು ನಿರೀಕ್ಷೆಯನ್ನು ಹುಟ್ಟಿಸಿತ್ತು. ಕೆ.ಪಿ. ಲಕ್ಷ್ಮಣ್ ಈಗಾಗಲೇ ‘ಕೋರ್ಟ್ ಮಾರ್ಷಲ್’, ‘ವೀ ದ ಪೀಪಲ್ ಆಫ್‌ ಇಂಡಿಯಾ’, ‘ದ್ವೀಪ’ ನಾಟಕಗಳನ್ನು ನಿರ್ದೇಶಿಸಿ ನೋಡುಗರ ಮನ ಗೆದ್ದಿದ್ದಾರೆ. ರಂಗಭೂಮಿಗೆ ಹೊಸ ವ್ಯಾಕರಣ ನೀಡಲು ತುಡಿಯುತ್ತಿರುವ ಲಕ್ಷ್ಮಣ್ ತ್ರಿಶ್ಶೂರಿನಲ್ಲಿ ಸೇರಿದ್ದ ಭಾರೀ ಸಂಖ್ಯೆಯ ಪ್ರೇಕ್ಷಕರ ಮನ ಗೆದ್ದರು.

ಬೇರೆ ಭಾಷೆಗಳ ನಾಟಕವನ್ನು ರಂಗದ ಒಂದು ಬದಿಯಲ್ಲಿ ತೆರೆಯ ಮೇಲೆ ಬರುವ ಇಂಗ್ಲಿಷ್ ಹಾಗೂ ಮಲಯಾಳಂ ಅನುವಾದದ ಮೂಲಕವೇ ಅರ್ಥ ಮಾಡಿಕೊಳ್ಳಬೇಕಾದ ಸವಾಲು ಪ್ರೇಕ್ಷಕನಿಗಿರುತ್ತದೆ. ಆದರೆ ಭಾಷೆಯ ಗಡಿಯನ್ನೂ ಮೀರಿ ಲಕ್ಷ್ಮಣ್ ಕಟ್ಟಿಕೊಟ್ಟ ದೃಶ್ಯ, ಬೆಳಕು, ಸಂಗೀತದ ಈ ನಾಟಕ ಸಲೀಸಾಗಿ ಪ್ರೇಕ್ಷಕರ ಬಳಿಗೆ ನಡೆದುಕೊಂಡು ಬಂದುಬಿಟ್ಟಿತು. ಇಡೀ ಉತ್ಸವದ ಅತಿ ದೊಡ್ಡ ಸಭಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರು ಪ್ರತೀ ದೃಶ್ಯಕ್ಕೂ, ಡೈಲಾಗ್‌ಗೂ ಸಿಳ್ಳೆ ಹಾಕುತ್ತ, ಚಪ್ಪಾಳೆ ತಟ್ಟುತ್ತಾ ನಾಟಕ ಗೆದ್ದಿತು ಎನ್ನುವುದನ್ನು ಸಾಬೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT