ಧಾರ್ಮಿಕ ರಾಜಕೀಯ ಸಾಂಸ್ಕೃತಿಕ ಮುಂತಾದ ಕ್ಷೇತ್ರಗಳಲ್ಲಿ ದುರಾಸೆ ಹೆಚ್ಚು ಪ್ರತ್ಯಕ್ಷವಾಗಿರುತ್ತದೆ. ಅದು ಎಲ್ಲ ಬಗೆಯ ಮೌಲ್ಯಗಳನ್ನು, ಸಂಬಂಧಗಳನ್ನು ಬಲಿಗೊಡುವುದು ಸಾಮಾನ್ಯ. ಲಜ್ಜೆಯಿಲ್ಲದ ಅದಕ್ಕೆ ತನ್ನ ಉದ್ದೇಶ ಪೂರೈಸಿಕೊಳ್ಳಲು ಜಾಣತನವೇ ಆಯುಧ. ತಾನು ಬಯಸಿದ್ದೆಲ್ಲವನ್ನು ಪಡೆದು ಮಿತಿ ಮೀರಿದ ಗೆಲುವಿನಿಂದ ಬೀಗುವ ಅದು ಅಂತಿಮವಾಗಿ ಕೊನೆಗೊಳ್ಳುವ ರೀತಿಯನ್ನು ಅನನ್ಯವಾಗಿ ಪ್ರಸ್ತುತಪಡಿಸುವ ನಾಟಕ ‘ಮಿಸ್ಟರ್ ಬೋಗೀಸ್’. ಒಟ್ಟಾರೆಯಾಗಿ ದುರಾಸೆಯನ್ನು ಕುರಿತು ಜನಸಮುದಾಯ ಧೃತಿಗೆಡಬೇಕಾಗಿಲ್ಲವೆಂಬ ಸಂದೇಶವನ್ನು ಮನಗಾಣಿಸುತ್ತದೆ.

ಇಂಗ್ಲೆಂಡಿನ ರೋಆಲ್ಡ್ ದಾಹ್ಲ್ನ ಪಾರ್ಸನ್ಸ್ ಪ್ಲೆಶರ್ ಕಥೆಯನ್ನು (ಅನುವಾದ: ಸಂತೋಷ್ ಕೌಲಗಿ) ಆಧರಿಸಿದ ನಾಟಕರೂಪ ಇತ್ತೀಚೆಗೆ ರಂಗಶಂಕರದಲ್ಲಿ ಪ್ರದರ್ಶನಗೊಂಡಿತು. ಇದರ ರಚನೆ, ವಿನ್ಯಾಸ, ನಿರ್ದೇಶನ ಎಚ್.ಕೆ.ದ್ವಾರಕನಾಥ್ ಅವರದು.

ಬೋಗೀಸ್ ಸ್ಥಿತಿವಂತನಲ್ಲ. ಮೇಲ್ವರ್ಗದವನೂ ಅಲ್ಲ. ಅದನ್ನು ಹೊಂದುವುದಕ್ಕಾಗಿಯೇ ಅವನಿಗೆ ದುರಾಸೆಯ ಗೀಳು. ಅವನು ಬಹಳ ಬೆಲೆ ಬಾಳುವ ಪುರಾತನ ವಸ್ತುಗಳನ್ನು ಅತಿ ಕಡಿಮೆ ಕ್ರಯಕ್ಕೆ ಕೊಂಡುಕೊಂಡು ವಾರಕ್ಕೊಮ್ಮೆ ಹರಾಜು ಹಾಕಿ ಅತಿ ಹೆಚ್ಚು ಗಳಿಸುವ ಅಭ್ಯಾಸ ಮಾಡಿಕೊಂಡಿರುತ್ತಾನೆ. ಈ ವ್ಯಕ್ತಿಯ ಮನಸ್ಸು ವರ್ತಿಸುವ ಮತ್ತು ಅವನನ್ನು ಬೆಂಬಲಿಸುವ ರೀತಿಯನ್ನು ರೂಪಕದ ರೀತಿಯಲ್ಲಿ ಮಹದೇವ್ ಪಾತ್ರವನ್ನು ಬಳಸಿಕೊಳ್ಳಲಾಗಿದೆ.

ಸಂಬಂಧಗಳ ಮಹತ್ವವನ್ನು ಕಡೆಗಣಿಸುವ ಅವನು ಒಂಟಿಯಾಗಿ ಬಾಳುತ್ತಿರುವ ತನ್ನ ತಾಯಿಯನ್ನು ಕೂಡ ಬಹಳ ಕಾಲದಿಂದ ಭೇಟಿಯಾಗಿರುವುದಿಲ್ಲ. ಮೊದಲ ದೃಶ್ಯದಲ್ಲಿಯೇ ಇಡೀ ರಂಗಸ್ಥಳದ ಮೇಲೆ ಅವನ ತಾಯಿಯನ್ನಷ್ಟೇ ಬೆಳಗಿದ ಬೆಳಕು ಆಕೆಯ ವಿಷಾದ ಮನಸ್ಥಿತಿಯನ್ನು ಬಿಂಬಿಸುತ್ತದೆ. ಆ ಭಾವಕ್ಕೆ ಪೂರಕವಾಗಿ ಮೆಲು ಸಂಗೀತವಿದೆ. ಇದರಿಂದ ಸ್ಫುರಿಸುವ ನೋವಿನ ಎಳೆಯೊಂದು ಪ್ರೇಕ್ಷಕರನ್ನು ಸುತ್ತುವರಿಯುತ್ತದೆ.

ಆನಂತರದ ದೃಶ್ಯದಲ್ಲಿನ ರಂಗಸಜ್ಜಿಕೆ ನಾಟಕದ ಆಧಾರವಾಗಿ ತೋರುತ್ತದೆ. ಉಳಿದ ದೃಶ್ಯಗಳಲ್ಲಿ ತ್ವರಿತಗತಿಯಲ್ಲಿ ಅಷ್ಟಿಷ್ಟು ಮಾರ್ಪಾಡಾಗುತ್ತದೆ. ಇಷ್ಟಲ್ಲದೆ ಆಯಾ ದೃಶ್ಯದ ಪಾತ್ರಗಳು ಅವುಗಳ ಭಾಗವೆನಿಸಿದಂತೆ ಕಾಣುತ್ತವೆ. ಇದಕ್ಕೆ ಪಾತ್ರಗಳು ಅವುಗಳೊಂದಿಗೆ ನಡೆದುಕೊಳ್ಳುವ ಬಗೆ ವಿಶೇಷವೆನಿಸುತ್ತದೆ. ಹೀಗೆ ಬದಲಾಗುವ ರಂಗಸಜ್ಜಿಕೆ ಅಂತಿಮವಾಗಿ ಬೋಗೀಸ್ನ ಮನಸ್ಥಿತಿಯನ್ನು ಬಿಂಬಿಸುವಂತೆ ಅಂದಗೆಟ್ಟು ನೆಲಸಮವಾಗುತ್ತದೆ.

ನಾಟಕ ಮುಂದುವರಿದಂತೆ ಅವನು ದುರಾಸೆಯ ಮೆಟ್ಟಿಲುಗಳನ್ನು ಹತ್ತುತ್ತ ಹೋಗುತ್ತಾನೆ. ಸುತ್ತಲ ಹಳ್ಳಿಗಳಿಗೂ ಅವನ ಹುಡುಕಾಟ ಹಬ್ಬುತ್ತದೆ. ಮೊದಲಿಗಿಂತಲೂ ಹೆಚ್ಚು ಪುರಾತನ ವಸ್ತುಗಳ ಹುಡುಕಾಟದಲ್ಲಿ ತೊಡಗುತ್ತಾನೆ. ಪ್ರಾರಂಭದಲ್ಲಿ ಅವನನ್ನು ಅನುಮಾನಿಸಿದವರು, ಆದರಿಸಿದವರು ಅವನ ಜಾಣತನದ ಮಾತುಗಾರಿಕೆಗೆ ಬಲಿಯಾಗುತ್ತಾರೆ. ಇವುಗಳ ವ್ಯಂಗ್ಯವೆಂದರೆ ತಾವು ಕಳೆದುಕೊಂಡದ್ದೇನು, ಅವುಗಳ ಬೆಲೆ ಈಗ ಎಷ್ಟಿರಬಹುದು ಎನ್ನುವುದರ ಕಿಂಚಿತ್ ಅರಿವು ಆ ಮುಗ್ಧರಿಗೆ, ಅಮಾಯಕರಿಗೆ ಇಲ್ಲದಿರುವುದು. ಎಲ್ಲವನ್ನೂ ಬೋಗೀಸ್ ನ ಮಾತು, ವರ್ತನೆಗಳು ನುಂಗಿ ಹಾಕಿರುತ್ತದೆ.

ಇವೆಲ್ಲವೂ ತಲೆಕೆಳಗಾಗುವ ಪ್ರಸಂಗ ಜರುಗುತ್ತದೆ. ಅದೊಂದು ಮನೆಯಲ್ಲಿ ಅತ್ಯಂತ ಪುರಾತನವಾದ, ಅತಿ ಹೆಚ್ಚು ಬೆಲೆ ಬಾಳುವ ಮೇಜೊಂದನ್ನು ಕನಿಷ್ಠ ಕ್ರಯಕ್ಕೆ ಕೊಳ್ಳಲು ಮನೆಯಲ್ಲಿದ್ದವರನ್ನು ಒಪ್ಪಿಸಿರುತ್ತಾನೆ. ಆ ಮನೆಯಲ್ಲಿ ವಾಸಿಸುವ ಮೂವರು ಹೆಣ್ಣು ಮಕ್ಕಳ ಮುಂದೆ ಹೇಳಿದ ಸಣ್ಣ ತಪ್ಪಿನಿಂದಾಗಿ ಅವನಿಗೆ ಸಂಪೂರ್ಣ ಸೋಲುಂಟಾಗುತ್ತದೆ. ಮೈಸೂರು ರಂಗಾಯಣದ ಕಲಾವಿದರಾದ (ಕೃಷ್ಣಕುಮಾರ್ ನಾರ್ಣ ಕಜೆ (ಬೋಗೀಸ್), ಮಹದೇವ್ (ಮನಸ್ಸು), ಪ್ರಮೀಳಾ ಬೆಂಗ್ರೆ, ಎಂ.ಎಸ್ ಗೀತಾ, ಬಿ.ಎಂ. ಶಶಿಕಲಾ ಮತ್ತು ಕೆ.ಆರ್.ನಂದಿನಿ ಸಮರ್ಥವಾಗಿ ಸಹಜವೆನಿಸುವಂತೆ ಅಭಿನಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.