ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾ ರಾಜಗುರು’ ನಾಟಕ: ಏಕವ್ಯಕ್ತಿಯ ವಿಭಿನ್ನ ರಂಗ ಪ್ರಯೋಗ

Published 4 ಮೇ 2024, 23:30 IST
Last Updated 4 ಮೇ 2024, 23:30 IST
ಅಕ್ಷರ ಗಾತ್ರ

ಕನ್ನಡ ರಂಗಭೂಮಿಯಲ್ಲಿ ಹೆಚ್ಚಿನಸಂಖ್ಯೆಯಲ್ಲಿ ಏಕವ್ಯಕ್ತಿ ರಂಗ ಪ್ರಯೋಗಗಳು ಪ್ರದರ್ಶನಗೊಳ್ಳುತ್ತಿರುವ ದಿನಗಳಿವು. ಇಂಥ ಸಂದರ್ಭದಲ್ಲಿ ದೊಡ್ಡ ಸಂಗೀತ ಕಲಾವಿದನ ಬದುಕನ್ನು ಏಕವ್ಯಕ್ತಿ ರಂಗ ಪ್ರಯೋಗದ ಮೂಲಕ ಅನಾವರಣಗೊಳಿಸಿರುವುದು ವಿಶಿಷ್ಟ ಪ್ರಯತ್ನವಾಗಿದೆ.

ಹೆಗ್ಗೋಡಿನ ನೀನಾಸಂ ಸಂಸ್ಥೆಯು 75 ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಇದರ ಅಂಗವಾಗಿ ಪ್ರತಿ ತಿಂಗಳು ಹೆಗ್ಗೋಡಿನ ಶಿವರಾಮ ಕಾರಂತ ರಂಗಮಂದಿರದಲ್ಲಿ ನಾಟಕಗಳು ಪ್ರದರ್ಶನವಾಗುತ್ತಿವೆ. ಈಚೆಗೆ ಅಲ್ಲಿ ಧಾರವಾಡದ ಆಟಮಾಟ ತಂಡವು ‘ನಾ ರಾಜಗುರು’ ಎನ್ನುವ ಏಕವ್ಯಕ್ತಿ ರಂಗ ಪ್ರಯೋಗ (ರಂಗರೂಪ, ಪರಿಕಲ್ಪನೆ: ಮಹಾದೇವ ಹಡಪದ, ಅಭಿನಯ: ವಿಶ್ವರಾಜ ರಾಜಗುರು) ಪ್ರದರ್ಶನಗೊಂಡಿತು.

ಸ್ವರ ಸಾಮ್ರಾಟ ಎಂದೇ ಪ್ರಸಿದ್ಧರಾಗಿದ್ದ ಪಂಡಿತ್ ಬಸವರಾಜ ರಾಜಗುರು ಅವರು ತಂದೆಯಿಂದಲೇ ಮೊದಲು ಸಂಗೀತದ ಪಾಠ ಹೇಳಿಸಿಕೊಂಡರು. ನಂತರ ವಾಮನ್ ರಾವ್ ಮಾಸ್ತರರ ನಾಟಕ ಕಂಪನಿ, ಶಿವಯೋಗ ಮಂದಿರ, ಪಂಚಾಕ್ಷರಿ ಗವಾಯಿಗಳು, ಸವಾಯಿ ಗಂಧರ್ವರು, ಪಂಡಿತ್ ನೀಲಕಂಠ ಮಿರಜಕರ ಬುವಾ, ಉಸ್ತಾದ್ ವಹೀದ್ ಖಾನ್–ಹೀಗೆ ಹಲವರ ಸಂಗೀತ ಗರಡಿಯಲ್ಲಿ ಪಳಗಿದ ಸ್ವಾರಸ್ಯಕರ ಕಥನ 90 ನಿಮಿಷಗಳ ಅವಧಿಯಲ್ಲಿ ರಂಗದ ಮೇಲೆ ಅನಾವರಣಗೊಳ್ಳುತ್ತದೆ. ರಾಜಗುರು ಅವರ ಬದುಕಿನ ಕತೆ, ನಾಟ್ಯ ಸಂಗೀತ, ಸಂಗೀತ ಸಾಧನೆಯ ಸ್ವರೂಪವನ್ನು ಇಟ್ಟುಕೊಂಡು ರೂಪುಗೊಂಡಿರುವ ಈ ಪ್ರಯೋಗವಿದು.

ಆತ್ಮಚರಿತ್ರೆಯ ವೃತ್ತಾಂತದ ರೂಪದಲ್ಲಿ ಒಂದೊಂದೆ ಘಟನೆಗಳು ರಂಗದ ಮೇಲೆ ಕುತೂಹಲ ಹುಟ್ಟುವ ರೀತಿಯಲ್ಲಿ ಸಾದರಪಡಿಸಿರುವುದು ಪ್ರಯೋಗದ ಹೆಗ್ಗಳಿಕೆ. ಸರಳ ರಂಗ ಸಜ್ಜಿಕೆಯಲ್ಲಿನ ಈ ಪ್ರಯೋಗಕ್ಕೆ ರಾಜಗುರುಗಳು ಹಾಡುತ್ತಿದ್ದ ರಂಗಗೀತೆ, ಚೀಜ್, ಖಯಾಲ್‌, ವಚನ, ನಾಟ್ಯಗೀತೆ–ಹೀಗೆ ಎಲ್ಲಾ ಪ್ರಕಾರಗಳನ್ನು ಬಳಸಿಕೊಂಡಿರುವುದು ಪ್ರಯೋಗಕ್ಕೆ ಕಳೆ ತಂದಿದೆ.

ಸಂಗೀತವೇ ನಾಟಕದ ಆತ್ಮವಾಗಿರುವುದರಿಂದ ಒಂದೇ ಪ್ರಯೋಗದಲ್ಲಿ ನಟನೆ, ರಂಗ ಕೌಶಲದ ಜೊತೆಗೆ ವಿಭಿನ್ನ ಪ್ರಕಾರದ ಸಂಗೀತವನ್ನೂ ಸವಿಯುವ ಅವಕಾಶ ಪ್ರೇಕ್ಷಕರಿಗೆ ಲಭ್ಯವಾಗುತ್ತದೆ. ರಾಜಗುರುಗಳ ಬದುಕಿನ ಘಟನೆಗಳ ನೆನಪಿನ ಬುತ್ತಿಬಿಚ್ಚಿಕೊಳ್ಳುವಾಗ ಏಕತಾನತೆ ಕಾಡಬಾರದು ಎನ್ನುವ ಕಾರಣಕ್ಕೆ ನಡುವೆ ಬಳಸಿರುವ ರಂಗ ಚಲನೆ, ತಿಳಿಹಾಸ್ಯ ಪ್ರಯೋಗದ ಜೀವಂತಿಕೆಯನ್ನು ಕಾಪಾಡುವಲ್ಲಿ ನಿರ್ದೇಶಕರ ಜಾಣ್ಮೆ ಎದ್ದು ಕಾಣುತ್ತದೆ.

ಸಂಗೀತದಲ್ಲಿ ಉನ್ನತವಾದದ್ದನ್ನು ಸಾಧಿಸಬೇಕು ಎನ್ನುವ ಕಾರಣಕ್ಕೆ ರಾಜಗುರು ಅವಿಭಜಿತ ಪಾಕಿಸ್ತಾನದ ಲಾಹೋರ್, ಕರಾಚಿಯವರೆಗೂ ಗುರುಗಳನ್ನು ಹುಡುಕಿಕೊಂಡು ಹೋಗಿದ್ದು, ವಿಭಜನೆಯ ಹಿಂಸೆಯಿಂದ ಪ್ರಯಾಸದಿಂದ ಬದುಕಿ ಭಾರತಕ್ಕೆ ಬಂದಿದ್ದು, ಭಾರತದ ಯಾವುದೇ ಮೂಲೆಗೆ ಸಂಗೀತ ಕಛೇರಿ ನೀಡಲು ಹೋಗುವಾಗಲೂ ಧಾರವಾಡದ ನೀರನ್ನೆ ಕೊಂಡೊಯ್ಯುತ್ತಿದ್ದದ್ದು.... ಹೀಗೆ ಹತ್ತು ಹಲವು ಸ್ವಾರಸ್ಯಕರ ಸಂಗತಿಗಳನ್ನು ಪ್ರಯೋಗ ಒಳಗೊಂಡಿದೆ.

ಶಾಸ್ತ್ರೀಯ ಸಂಗೀತವನ್ನು ಅಭಿನಯ, ಚಲನೆಯ ಜೊತೆಗೆ ರಂಗದ ಮೇಲೆ ಪ್ರಸ್ತುತಪಡಿಸುವುದು ಒಂದು ಸವಾಲಿನ ಸಂಗತಿ. ಈ ಸವಾಲನ್ನು ಬಸವರಾಜ ರಾಜಗುರುಗಳ ಮೊಮ್ಮಗ ವಿಶ್ವರಾಜ ರಾಜಗುರು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದಾರೆ. ತಬಲಾ, ಹಾರ‍್ಮೋನಿಯಂ ಸಾಥ್ ನೀಡುತ್ತಲೇ ಅಕ್ಷಯ ಜೋಶಿ ಹಾಗೂ ವೆಂಕಟೇಶ ರೆಡ್ಡಿ ರಂಗದ ಮೇಲೆ ರಾಜಗುರುಗಳ ಬದುಕಿನ ವೃತ್ತಾಂತದ ಘಟನೆಗಳಿಗೆ ಸಾಕ್ಷಿಯಾಗುತ್ತ ಸಾಗುವುದು ಪ್ರಯೋಗದ ಚಲನಶೀಲತೆಗೆ ಹಿಡಿದ ಕೈಗನ್ನಡಿಯಾಗಿದೆ.

ಪ್ರಯೋಗದ ಉದ್ದಕ್ಕೂ ರಂಗವನ್ನು ಸಂಗೀತ ಕಛೇರಿಯ ವೇದಿಕೆಯ ಮಾದರಿಯಲ್ಲೆ ಸಿದ್ದಪಡಿಸಿರುವುದು ಬೆಳಕಿನ ವಿನ್ಯಾಸ (ಬೆಳಕು:ಚಂದ್ರು ಕಿಲ್ಲೇದಾರ) ದ ಪ್ರಭಾವಳಿಯನ್ನು ಹೆಚ್ಚಿಸಲು ಕಾರಣವಾಗಿದೆ. ನಾಟಕದ ಪ್ರಮುಖ ಘಟ್ಟಗಳಲ್ಲಿ ಧ್ವನಿಸುವ ಕಥಾ ವಸ್ತುವಿಗೆ ಬೆಳಕು ಸೂಕ್ತ ಆವರಣ ಕಲ್ಪಿಸಿದೆ.

ಕರ್ನಾಟಕದಲ್ಲಿ ಪ್ರಸಿದ್ಧಿ ಗಳಿಸಿರುವ ಹಲವು ಶಾಸ್ತ್ರೀಯ ಸಂಗೀತ ಕಲಾವಿದರ ಕುರಿತು ಆತ್ಮಚರಿತ್ರೆಯ ಕೃತಿ ಪ್ರಕಟವಾಗಿರುವ ಉದಾಹರಣೆಗಳಿವೆ. ಹಾಗೆ ನೋಡಿದರೆ ಪಂಡಿತ್ ಬಸವರಾಜ ರಾಜಗುರುಗಳ ಸಾಧನೆಗೆ ತಕ್ಕ ದಾಖಲೀಕರಣದ ಕೆಲಸ ಈವರೆಗೆ ಆಗಿರಲಿಲ್ಲ. ಈ ಕೊರತೆಯನ್ನು ಕೊಂಚವಾದರೂ ‘ನಾ ರಾಜಗುರು’ ಪ್ರಯೋಗ ತುಂಬುತ್ತದೆ.

ಸಂಗೀತ ಕಲಾವಿದನೊಬ್ಬನ ಬದುಕು ಅದೆಷ್ಟು ಕಷ್ಟ ಕಾರ್ಪಣ್ಯಗಳಿಂದ ಕೂಡಿರುತ್ತದೆ, ಮಹತ್ವದ್ದನ್ನು ಸಾಧಿಸಬೇಕು ಎಂಬ ಆಕಾಂಕ್ಷೆ ಕಲಾವಿದನನ್ನು ದೇಶ, ಭಾಷೆ, ಗಡಿರೇಖೆಗಳ ಆಚೆಗೂ ಹೇಗೆ ದಾಟಿಸುತ್ತದೆ, ಕಲಾವಿದನ ಉನ್ನತ ಸಾಧನೆಗೆ ವೈಯುಕ್ತಿಕ ಬದುಕಿನಲ್ಲಿ ಶಿಸ್ತು ಎಷ್ಟು ಮುಖ್ಯ, ಎಷ್ಟೆ ಎತ್ತರಕ್ಕೇರಿದರೂ ಕಲಾವಿದ ತನ್ನ ನೆಲದ ‘ಮಣ್ಣಿನ ವಾಸನೆ’ ಗೆ ಎಷ್ಟು ಹತ್ತಿರವಾಗಿರುತ್ತಾನೆ ಎಂಬ ಹಲವು ಸಂಗತಿಗಳು ನಾಟಕ ನೋಡಿದ ನಂತರ ಮನಸ್ಸಿನಲ್ಲಿ ಅಚ್ಚಳಿಯದೆ ನಿಲ್ಲುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT