ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಕಿದ –ದಕ್ಕದ ಗಾಂಧಿ!

Last Updated 21 ನವೆಂಬರ್ 2013, 19:30 IST
ಅಕ್ಷರ ಗಾತ್ರ

ನೀನಾಸಂ ತಿರುಗಾಟ ಕಳೆದ ತಿಂಗಳ ಕೊನೆಯಲ್ಲಿ ನಗರದ ಎಚ್‌.ಎನ್‌. ಕಲಾಕ್ಷೇತ್ರದಲ್ಲಿ ಪ್ರದರ್ಶಿಸಿದ ‘ಗಾಂಧಿ ವರ್ಸಸ್ ಗಾಂಧಿ’ ನಾಟಕವು ಮಹಾತ್ಮರ ವೈಯಕ್ತಿಕ ಬದುಕಿನ ಆಖ್ಯಾನ, ರಾಜಕೀಯ ಸಂಘರ್ಷ, ತಾತ್ವಿಕತೆಯೊಟ್ಟಿಗೆ ತಳುಕು  ಹಾಕಿಕೊಂಡ ಅವರ ಕೌಟುಂಬಿಕ, ಒಂದು ಸೂಕ್ಷ್ಮ ಸ್ತರದ ಅತಿಭಾವುಕತೆಯ (ಮೆಲೋಡ್ರಮಾಟಿಕ್) ನಾಟಕ. 

   ಗಾಂಧಿಯ ನಿಷ್ಠುರತೆ ಮತ್ತು ಸತ್ಯನಿಷ್ಠೆಯನ್ನು ತೋರಿಸಿಕೊಡುತ್ತಾ, ಒಬ್ಬ ಸಾಮಾಜಿಕ ಆದರ್ಶವಾದಿ, ತನ್ನ ಕುಟುಂಬದೊಂದಿಗೆ ತಾತ್ವಿಕವಾಗಿ ಹೊಂದಾಣಿಕೆ ಮಾಡಿಕೊಳ್ಳಲಾಗದೆ ಪರಿತಪಿಸುವ ಚಿತ್ರಣವನ್ನು ನಾಟಕ ಕಟ್ಟಿಕೊಡುತ್ತದೆ. ಗಾಂಧೀಜಿಯ ಜೀವನ ಸಿದ್ಧಾಂತ, ತತ್ವ, ಆದರ್ಶಗಳು, ಅವರ ಸತ್ಯ ಶೋಧನೆಯ ಹಂಬಲ ಹಟಮಾರಿತನ ಹೇಗೆ ಅವರ ಕೌಟುಂಬಿಕ ಜೀವನದ ಮೇಲೆ ಪರಿಣಾಮ ಬೀರಿದವು ಎಂಬುದೂ ‘ಗಾಂಧಿ ವರ್ಸಸ್ ಗಾಂಧಿ’ ನಾಟಕದಲ್ಲಿದೆ.

ಮೂಲ ಮರಾಠಿ ನಾಟಕದ ಕತೃ ಅಜಿತ ದಳವಿ. ಕನ್ನಡಾನುವಾದ ಡಿ.ಎಸ್. ಚೌಗಲೆ ಅವರದು. ಗಾಂಧಿ ಜಗತ್ತು ಕಂಡ ಮಹಾನ್ ದಾರ್ಶನಿಕ. ತನ್ನ ಜೀವನವನ್ನು ಸತತ ಪ್ರಯೋಗಕ್ಕೊಳಪಡಿಸಿಕೊಂಡು ಬದುಕಿನ ದರ್ಶನ ಕಂಡುಕೊಂಡವರು. ಅಂಥ ಮಹಾನ್ ಸಂತನನ್ನು ಜಗತ್ತಿಗೆ ಕೊಟ್ಟ ಇಲ್ಲೇ ಅವರ ತತ್ವದ ಸಾರವೆಲ್ಲಾ ವಿಚ್ಛಿದ್ರಗೊಂಡು ಅರ್ಥಾಂತರವಾಗಿದೆ.

ಗಾಂಧಿ ಅವರ ಸತ್ಯಾಗ್ರಹ, ಅಹಿಂಸೆ, ಉಪವಾಸ ಎಂಬ ವ್ಯಕ್ತಿತ್ವ ಶೋಧನೆಯ ಪರಿಭಾಷೆಗಳು ಕೆಲವರ ಸ್ವಾರ್ಥ ಸಾಧನೆಯ ಅಸ್ತ್ರಗಳಾಗಿವೆ.

ನಾಟಕದ ಕಡೆಯ ದೃಶ್ಯದಲ್ಲಿ ಗಾಂಧಿಯೇ ರಾಜಘಾಟ್‌ನಲ್ಲಿರುವ ತಮ್ಮ ಪ್ರತಿಮೆಯ ಕೆಳಗೆ ಕುಳಿತು ಪ್ರತಿಭಟಿಸುವ ಕ್ಷುದ್ರರ ಕುರಿತು ವ್ಯಂಗ್ಯವಾಡುತ್ತಾರೆ.

ಗಾಂಧಿ ತಮ್ಮ ಮಗ ಹರಿಲಾಲನಿಂದ ಶೋಧನೆಗೆ ಒಳಗಾಗುತ್ತಾರೆ. ಇಂದಿಗೂ ಶೋಧನೆಗೊಳಗಾಗುತ್ತಿದ್ದಾರೆ. ಗಾಂಧಿ ಏರಿದ ಎತ್ತರವನ್ನು ಅರಿಯದೆ ಕಂಡ ಅವರ ಕಾಲುಗಳನ್ನೇ ಗಾಂಧಿಯೆಂಬಂತೆ ಚಿತ್ರಿಸುವ, ಅನುಭಾವಿಯೊಬ್ಬನ ಕೌಟುಂಬಿಕತೆಯ ಚಿತ್ರಣದಲ್ಲಿ, ಗಾಂಧಿಯ ಚಿತ್ರವನ್ನು ಭಗ್ನಗೊಳಿಸುವ ಕ್ರಿಯೆ ಅತಿ ಸೂಕ್ಷ್ಮವಾಗಿ ಈ ನಾಟಕದಲ್ಲಿ ಕಾಣುತ್ತದೆ. ಪ್ರಸ್ತುತ ನಾಟಕವು ಗಾಂಧಿ ಮತ್ತು ಹರಿಲಾಲನ ಭಿನ್ನಾಭಿಪ್ರಾಯವನ್ನು ಮಹತ್ತಾಗಿ ಕಲ್ಪಿಸಿ ಚಿತ್ರಿಸಿದ ರಂಗರೂಪ.   ಗಾಂಧಿಯಂಥ ಅನುಭಾವಿ ತನ್ನ ಸಾಮಾಜಿಕ ಜೀವನ, ಕೌಟುಂಬಿಕ ಜೀವನದಲ್ಲೂ ಭಿನ್ನತೆ ಕಾಣದ ಹರಿಲಾಲನ ವಿಷಯದಲ್ಲಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಗಮನಾರ್ಹ.

   ಗಾಂಧಿಯ ವರ್ತನೆಗಳು ಪಿತೃ–-ಪುತ್ರ ಸಂಬಂಧದ ರೂಪುರೇಖೆ ಬಲ್ಲ ನಮಗೆ ಗಾಂಧಿ ಮಾಡಿದ್ದು ತಪ್ಪು ಅನ್ನಿಸುತ್ತದೆ. ಆದರೆ ಗಾಂಧಿಯ ಎತ್ತರದಲ್ಲಿ ನಿಂತು ನೋಡಿದಾಗ ಅನ್ನಿಸುವುದೇ ಬೇರೆ.

‌ಹರಿಲಾಲನ ಪಾತ್ರ ಸೃಷ್ಟಿಯಲ್ಲಿ ಹೇರಳವಾದ ಕಲ್ಪನೆ, ನಾಟಕೀಯತೆ ಇದೆ. ಎಲ್ಲದರಲ್ಲೂ ಅವನು ಗಾಂಧಿಗೆ ವಿರುದ್ಧ. ಮೂಲ ನಾಟಕಕಾರರು ಈ ನಾಟಕದ ಮೂಲಕ ಯಾರನ್ನು ಮೇಲೆತ್ತಲು ಹೊರಟಿದ್ದಾರೆ? ಹರಿಲಾಲ ಯಾವ ಕಾರಣಕ್ಕಾಗಿ ಗಾಂಧಿಗೆ ವಿರುದ್ಧವಾಗಬೇಕು; ಗಾಂಧಿ ತನ್ನನ್ನು ಮಗನಂತೆ ಕಾಣಲಿಲ್ಲವೆಂದೇ? ಹಾಗೆ ನೋಡಿದರೆ ನಾಟಕದಲ್ಲಿ ತಂದೆಯಾಗಿ ಗಾಂಧಿ ಅತ್ಯಂತ ಪ್ರೀತಿಯಿಂದ ಕಾಣುತ್ತಾರೆ. ಗಾಂಧಿಯ ನೈತಿಕ ಶಿಕ್ಷಣ, ಅದರ ಜೊತೆಗೆ ಉನ್ನತ ಶಿಕ್ಷಣವನ್ನೂ ಬಯಸುವ ಹರಿಲಾಲ ಅದನ್ನು ಗಾಂಧಿ ನಿರಾಕರಿಸಿದರೆನ್ನುವ ಒಂದೇ ಉದ್ದೇಶಕ್ಕೆ ಗಾಂಧಿಯವರನ್ನು ವಿರೋಧಿಸುವ ಮಟ್ಟಕ್ಕೆ ಬೆಳೆಯುತ್ತಾನೆ. ಅವನ ಮುಂದೆ ಗಾಂಧಿಯ ಚಿತ್ರ ಭಗ್ನವಾಗುತ್ತಾ ಹೋಗುತ್ತದೆ. ನಾವು ಕಟ್ಟಿಕೊಂಡ ಗಾಂಧಿ ಚಿತ್ರ ಕಳಚುತ್ತಾ, ತನ್ನ ತತ್ವಗಳಿಗಾಗಿ,ಕೇವಲ ಸತ್ಯವೆಂಬ ಒಂದು ಸ್ಥಿತಿಗಾಗಿ, ತಾನು ಮಾಡಿದ ಹಟ ಎನಿಸುತ್ತದೆ. ನಿಸ್ವಾರ್ಥತೆಯು ತನ್ನ ರಕ್ತವೇ ಆದ ಹರಿಲಾಲನ ಮುಂದೆ ಸೋಲುತ್ತಾ ನೋಡುವವರ ಕಣ್ಣಿಗೆ ಗಾಂಧಿ ಪುತ್ರ ಪೀಡಕ ಅವರ ಆಶಾವಾದಗಳಿಗೆ ಬೆಲೆಕೊಡದ ಹಟವಾದಿಯಂತೆ ಕಾಣುತ್ತಾರೆ. ಒಂದು ಭಗ್ನತೆಯ ಹಿಂದೆ ಕಟ್ಟುವಿಕೆಯಿರಬೇಕು. ಒಂದು ಚಿತ್ರ ಭಗ್ನವಾಗಿ ವ್ಯಕ್ತಿತ್ವದ ಬದಲೀ ದೃಷ್ಟಿಕೋನ ಪ್ರಾಪ್ತಿಯಾದರೆ ಅದು ಸಾರ್ಥಕ ಪ್ರಯತ್ನ.

ಪ್ರಯೋಗವೆಂಬ ಪರಿಭಾಷೆ ವಿಜ್ಞಾನಕ್ಕೆ ಸಂಬಂಧಪಟ್ಟದ್ದು, ಗಾಂಧಿ ತಮ್ಮ ಜೀವನವನ್ನು ಸತ್ಯದೊಂದಿಗೆ ಪ್ರಯೋಗ ಎಂದು ಕರೆದುಕೊಳ್ಳುತ್ತಾರೆ. ಪ್ರಯೋಗದಲ್ಲೂ ಒಂದರ ಅರಿಯುವಿಕೆಗೆ, ಯಾವುದೋ ಸಾರ್ಥಕ ನಿಷ್ಪನ್ನಕ್ಕಾಗಿ ಇಲಿ, ಮೊಲ, ಮಂಗನಂಥಾ ಜೀವಿಗಳು, ಬಲಿಪಶುಗಳಾಗುವುದು ಸಾಮಾನ್ಯ. ಹಾಗೆ ಗಾಂಧಿಯ ಸತ್ಯ ಪ್ರಯೋಗದಲ್ಲಿ, ಅವರೂ ಸೇರಿದಂತೆ ಬಲಿಯಾದದ್ದು ಅವರ ಕುಟುಂಬ, ಜಗತ್ತಿಗೆ ದಕ್ಕಿದ್ದು ಒಂದು ಮಹಾನ್ ಜೀವನ ತತ್ವ.

ನಾಟಕದುದ್ದಕ್ಕೂ ಗಾಂಧಿಯ ಒಟ್ಟೂ ತತ್ವಗಳಿಗೆ ವಿರುದ್ಧವಾಗಿ ಮುಖಾಮುಖಿಯಾಗುತ್ತಾನೆ ಹರಿಲಾಲ. ‘ಗಾಂಧಿ ವರ್ಸಸ್ ಗಾಂಧಿ’ ಎಂಬ ಶೀರ್ಷಿಕೆಯನ್ನು ತಾತ್ವಿಕವಾಗಿ ನೋಡಿದರೆ, ‘ಗಾಂಧಿ ವರ್ಸಸ್ ಹರಿಲಾಲ’ ಅನ್ನಬೇಕು. ಯಾಕೆಂದರೆ ಗಾಂಧಿ ತಾವು ಗಾಂಧಿಯಾಗಲು ಎಷ್ಟೆಲ್ಲಾ ಕಷ್ಟಪಡಬೇಕಾಯಿತು. ಆದರೆ ಹರಿಲಾಲನ ಹೆಸರಿನ ಮುಂದೆ ಗಾಂಧಿ ಬಂದರೆ ಅವನನ್ನು ಗಾಂಧಿ ಎನ್ನಲಾಗುತ್ತದೆಯೇ? ಗಾಂಧಿಯೆಂಬ ಹೆಸರನ್ನೇ ಕಳಚಿಕೊಳ್ಳಲು ಪ್ರಯತ್ನಿಸಿದ ಹರಿಲಾಲ, ನಿಜವಾಗಲೂ  ಗಾಂಧಿಯಲ್ಲ, ಅವನು ಅಬ್ದುಲ್ಲಾ.
ಗಾಂಧಿಯ ತತ್ವವನ್ನು ಅರ್ಥಮಾಡಿಕೊಳ್ಳದೇ ಬದುಕುತ್ತಿರುವ ಇಂದಿನ ಭಾರತದಂತೆ ಅವನೂ ವಿಕ್ಷಿಪ್ತ, ಸಂಕುಚಿತ. ಕೊನೆಗೆ ಉಳಿಯುವುದು ಅವನು ಸತ್ತಾಗ, ಅಬ್ದುಲ್ಲಾನಾದಾಗ ಕೊರಳಲ್ಲಿದ್ದ ಬಿಲ್ಲೆ ಮಾತ್ರ.

ನಿರ್ದೇಶಕರಾದ ಎಂ. ಗಣೇಶ್, ನಾಟಕದಲ್ಲಿರುವ ಒಟ್ಟೂ  ಮೆಲೊಡ್ರಾಮಾಟಿಕ್ ಅಂಶಗಳನ್ನು ಗುರುತಿಸಿಕೊಂಡು ಅವುಗಳ ಮೂಲಕ ನಾಟಕವನ್ನ ಪರಿಕ್ರಮಿಸುತ್ತಾರೆ. ಅವರು ನಿರ್ದೇಶಿಸಿದ ಸಣ್ಣ ರೆಪರ್ಟರಿಯ  ನಾಟಕಗಳ ಆಯ್ಕೆಯೂ ಈ ಅಂಶಗಳನ್ನೇ ಅವಲಂಬಿಸಿದ್ದು. ಸಂಘರ್ಷದ ಕಥಾನಕಗಳ ನಿರ್ವಹಣೆಯಲ್ಲಿ ನೋವನ್ನು ಮುಖ್ಯವಾಗಿ ಚಿತ್ರಿಸುವುದು, ಪ್ರೇಕ್ಷಕರಲ್ಲಿ ದುಃಖವನ್ನು ಉಂಟು ಮಾಡುವುದರಲ್ಲಿ ಅಷ್ಟೊಂದು ಮಹತ್ವವಿಲ್ಲ.

ಹರಿಲಾಲನ, ಕಸ್ತೂರ ಬಾ ಅವರ   ದುಃಖ ಒಂದು ನಾಟಕೀಯ ಅಂಶವಾಗದೆ ಗೊಳೋ ಎಂದು ಅಳುವ ನಟರ ದುಃಖಾಲಾಪವಾಗುವುದು ಸ್ವಲ್ಪ ಭಾರವೆನಿಸುತ್ತದೆ. ನಿರ್ದೇಶಕರ ಒಟ್ಟೂ ದೃಷ್ಟಿ ಹರಿಲಾಲನ ಮೇಲೆಯೇ ಇದೆ. ಇಡೀ ದೇಶಕ್ಕೇ ಬಾಪು ಆದ ಗಾಂಧಿ ತನ್ನ ಮಗನಿಗೇಕೆ ಸರಿಯಾದ ತಂದೆಯಾಗಲಿಲ್ಲ? ಅವರೊಬ್ಬ ರಿಂಗ್ ಮಾಸ್ಟರ್‌ನಂತೆ ವರ್ತಿಸಿದರು ಎಂಬ ಮಾನವಿಕ ಸಂಬಂಧದ ಸಣ್ಣ ಕೋನದೊಳಗೇ ಯೋಚಿಸಿದಂತಿರುವ ನಿರ್ದೇಶಕ–ನಾಟಕಕಾರರು, ಗಾಂಧಿ ಎಂಬ ಗಾಂಧಿ ಯಾವ ಎತ್ತರದಲ್ಲಿ ನಿಂತು ಇಡೀ ಭಾರತದ ಒಬ್ಬೊಬ್ಬ ಹರಿಲಾಲನ ಬಾಪುವಾಗಿ ಪರ್ಯಾಲೋಚಿಸುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಸಬೇಕಿತ್ತು. ಹರಿಲಾಲನ ತಪ್ಪೊಪ್ಪಿಗೆ, ಅವರಿಬ್ಬರು ಸ್ವರ್ಗದಲ್ಲಿ ಮಾಡುವ ಚರ್ಚೆ, ಪ್ರೀತಿ ಏನೇ ಇದ್ದರೂ ಅದೊಂದು ತಂದೆ–ಮಗನ ವೈಯಕ್ತಿಕ ಭಿನ್ನಾಬಿಪ್ರಾಯದ ಹಂತದಲ್ಲೇ ಉಳಿದುಬಿಡುತ್ತದೆ, ಮಹಾತ್ಮನ ಈ ಕಥೆ ಅಷ್ಟೇನೂ ಮಹತ್ತಾಗುವುದಿಲ್ಲ. ರಾಚನಿಕವಾಗಿ ಇದು ನಾಟಕದೊಳಗಿನ ತೊಡಕು.

ಅಭಿನಯದಲ್ಲಿ ಗಟ್ಟಿ ಕಾಣುವ ನಟ ಚಂದ್ರು (ಹರಿಲಾಲ) ಅವರ ವಾಕ್ಪಟುತ್ವ ಸಹ್ಯವಾಗದು. ಅಷ್ಟೊಂದು ಶಕ್ತಿ ಹಾಕಿ ನಟಿಸುವ ಅವರು, ಸ್ವಲ್ಪವೂ ಏರಿಳಿತವಿಲ್ಲದೆ ಮೊದಲಿನಿಂದ ಕೊನೆಯ ತನಕ ಅದೇ ಮಟ್ಟದಲ್ಲಿದ್ದರು. ಉಳಿದ ನಟರ ಮಟ್ಟ ಹೊಂದಾಣಿಕೆಯಾಗದೆ ನಾಟಕದ ಶಕ್ತಿ ಮಟ್ಟ ಏರಿಳಿತವಾಗಿ ಚಂದ್ರು ಅಗತ್ಯಕ್ಕಿಂತ ಹೆಚ್ಚು ನಟಿಸುತ್ತಿದ್ದಾರೆ ಎನಿಸುತ್ತದೆ. ಗಾಂಧಿ, ಹರಿಲಾಲ, ಕಸ್ತೂರಬಾ ಅವರನ್ನು ಬಿಟ್ಟರೆ ಉಳಿದವೆಲ್ಲ ಸಹಾಯಕ ಪಾತ್ರಗಳು.

ರಂಗಸಜ್ಜಿಕೆಯ ಅದ್ದೂರಿತನ,  ಎಲ್ಲವೂ ಬಿಳುಪು ಬಿಳುಪು. ಉಳಿದಂತೆ ಸಂಗೀತ ತಕ್ಕ ಮಟ್ಟಿಗೆ ಹಿತವೆನ್ನಿಸುತ್ತದೆ. ಬೆಳಕಿನ ನಿರ್ವಹಣೆಯ ಲಾಲಿತ್ಯ, ಅತಿಸೂಕ್ಷ್ಮ ನಿರ್ವಹಣೆ ನಟ ಪ್ರೇರಕ-ಪೂರಕವಾಗಿರುವುದು ಅವಶ್ಯ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT