ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆಗೆ ಒಗ್ಗಿದ ಗಾರ್ಕಿ

Last Updated 30 ಸೆಪ್ಟೆಂಬರ್ 2013, 20:07 IST
ಅಕ್ಷರ ಗಾತ್ರ

ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಅಧ್ಯಾಯ; ಇವರ ಹೊಸ ‘ರಂಗ ನಿರ್ಮಿತಿ’ಯು ರಷ್ಯನ್ ಲೇಖಕ ಮ್ಯಾಕ್ಸಿಂ ಗಾರ್ಕಿಯ ‘ದಿ ಲೋವರ್ ಡೆಪ್ತ್ಸ್’ ಆಧರಿಸಿದ ‘ಈ ಕೆಳಗಿನವರು’ ನಾಟಕವನ್ನು ವಸಂತನಗರದ ಗುರುನಾನಕ ಭವನದಲ್ಲಿ ಮೂರು ದಿನಗಳ ಕಾಲ ಪ್ರದರ್ಶಿಸಿತು. ಇದರ ಕನ್ನಡ ರೂಪಾಂತರ ಬಿ.ಟಿ ದೇಸಾಯಿಯವರದು. ನಿರ್ದೇಶನ ಚಿದಂಬರರಾವ್ ಜಂಬೆ ಅವರದು.

‘ಈ ಕೆಳಗಿನವರು’ ಸಾಹಿತ್ಯಿಕವಾಗಿ ಒಂದು ಸಾಂದ್ರ ಕಥಾವಳಿಯಿಲ್ಲದ, ಘಟನೆಗಳಿಂದಲೇ ಸಂದರ್ಭ ಮತ್ತು ಸಂಘರ್ಷಗಳೆರಡೂ ಕಟ್ಟಿಕೊಳ್ಳುವ ಒಂದು ಕೃತಿ. ಕೆಳವರ್ಗದ ಬದುಕಿನಾಳವ ಹೊಕ್ಕು ಚಿತ್ರಿಸುವ, ಬದುಕಿನ ಉನ್ನತ ನೋಟ, ಘನತೆ, ಮನುಷ್ಯನ ಕ್ರೌರ್ಯ, ಕಟುಕತನ, ವಂಚನೆ, ಮೋಸ, ಇವೆಲ್ಲವನ್ನು ಭಿನ್ನ ಮಾರ್ಗದಲ್ಲಿ ಅನುಸಂಧಾನ ಮಾಡುವ ಕೃತಿ. ರಷ್ಯನ್ ಸಾಮಾಜದ ವಾಸ್ತವವನ್ನು ಅನಾವರಣ ಮಾಡಿದ ಮೊಟ್ಟ ಮೊದಲ ಕೃತಿ ಎಂಬ ಹೆಗ್ಗಳಿಕೆಗೂ ಅದು ಪಾತ್ರವಾಗಿತ್ತು.

ನಾಟಕದ ಎಲ್ಲಾ ಪಾತ್ರಗಳಿಗೂ ಬದುಕಿನ ಸ್ಪಷ್ಟ ಉದ್ದೇಶವಿಲ್ಲ, ಅವುಗಳು ಕೇವಲ ವರ್ತಮಾನದಲ್ಲಿ ಭೂತದ ಜೊತೆಗೆ ಸಂಭಾಷಿಸುತ್ತಾ ಬದುಕುತ್ತವೆ. ತಮ್ಮ ಸ್ಥಿತಿಯ ಬಗ್ಗೆ ಆ ಪಾತ್ರಗಳಿಗೆ ಬೇಸರವಿಲ್ಲ. ಬೇಸರವಾದರೂ ಅದನ್ನು ಮರೆಯಲು ಅದರ ಸುತ್ತ ಸುಳ್ಳಿನ ಕೋಟೆಯೊಂದನ್ನು ಕಟ್ಟಿಕೊಂಡಿದ್ದಾರೆ. ಆ ಕೋಟೆಯೊಳಗೆ ಅವರೇ ರಾಜರು, ಅವರೇ ಸೇವಕರು. ಯಾವ ಪಾತ್ರಗಳೂ ಉದಾತ್ತವಲ್ಲ; ಯಕಃಶ್ಚಿತ್ ವ್ಯಕ್ತಿಗಳು, ಕಳ್ಳರು ಕುಡುಕರು ವಾಸ್ತವದ ಭೀಕರತೆಗೆ ಹೊಂದಿಕೊಂಡವರು. ಕೊಟ್ಟಿಗೆಯಂತಹ ಮುರುಕು ಛತ್ರದಲ್ಲಿ ತಮ್ಮ ಬದುಕು ಕಟ್ಟಿಕೊಂಡವರು. ನೈತಿಕ ಸಮಾಜ ಭಾವಿಸುವ ಹೀನ ವೃತ್ತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅದು ಹೀನ ಎಂದರೆ ಹೀನವಲ್ಲ, ಅವರವರ ದೃಷ್ಟಿಯಲ್ಲಿ ಅದು ದೊಡ್ಡದೇ.

ನಾವು ನಂಬಿಕೊಂಡಿರುವ ಒಳಿತಿನ ಪರಿಭಾಷೆಗೆ ಹೊಂದಿಸಿ ನೋಡಿದರೆ ಅವರಾರೂ ಒಳ್ಳೆಯವರಲ್ಲ. ಆದರೆ ಅವರ ದೃಷ್ಟಿಯಲ್ಲಿ ಇಡೀ ಸಮಾಜವೇ ಹೀನವಾಗಿ ಕಾಣುತ್ತದೆ, ಅವರಿಗೆ ಕಳ್ಳತನದ ಬಗ್ಗೆ, ಹಾದರದ ಬಗ್ಗೆ, ಖೂನಿ, ಸಾವಿನ ಬಗ್ಗೆ ಯೋಚನೆಯಿಲ್ಲ. ಸಾಯುತ್ತಿರುವ ಗೌರಮ್ಮನನ್ನು ಬಿಟ್ಟು ಹೆಂಡದಂಗಡಿಯಲ್ಲಿ ಕುಳಿತ ಆಕೆಯ ಗಂಡ ಅವಳು ಸತ್ತಾಗ, ‘ಅಂತೂ ಅವಳು ಕೆಮ್ಮೋದು ನಿಂತೋಯ್ತು’ ಎನ್ನುವ ಬೊಬ್ಬಣ್ಣ, ಪುಸ್ತಕದ ಲೋಕದೊಳಗೆ ತನ್ನ ಬದುಕನ್ನು ಹೊಂದಿಸಿಕೊಂಡು ಕಲ್ಪನಾ ಲೋಕದಲ್ಲೇ ಸುಖಪಡುವ ಸುಂದರಿ, ಕಳ್ಳವಾಸ್ಯ, ಅವನು ಇಟ್ಟುಕೊಂಡ ಹೆಣ್ಣು, ವಾಸಕ್ಕ, ಅದು ಗೊತ್ತಿದ್ದೂ ಸುಮ್ಮನಿರುವ ಕಿಷ್ಟಪ್ಪ, ಪೊಲೀಸ್ ಮುದ್ದಪ್ಪ, ಬೊಬ್ಬಣ್ಣ... ಹೀಗೆ ಇಷ್ಟೂ ಪಾತ್ರಗಳು ಮುರುಕು ಛತ್ರದ ಕಸದೊಳಗೆ ಕಮರುತ್ತವೆ. ನೋಡುಗರೆದೆಯಲ್ಲಿ ಒಂದು ರೀತಿಯ ನಿಶ್ಶಬ್ದ ಭೀತಿಯಲ್ಲಿ ಅರಳಿಕೊಳ್ಳುತ್ತವೆ.

ಅವರವರ ಬದುಕು, ಯೋಚನೆ, ಹಸಿವು, ಸಂಕಟ, ನೋವು ಹೀಗೆ ಅಲ್ಲವನ್ನೂ ಅವರವರ ಯೋಚನಾ ಪರಿಧಿಯಲ್ಲೇ ನಿಂತು ಯೋಚಿಸುವ ಇವು ಬೇರೆಯವರ ಬಗ್ಗೆ ಯಾವತ್ತೂ ಯೋಚಿಸುವುದಿಲ್ಲ, ಹಾಗೆ ಯೋಚಿಸುವುದು ಅವಧೂತನಂತೆ ಬರುವ ಲಕ್ಕಜ್ಜನೊಬ್ಬನೇ. ಈ ಛತ್ರದ ಕಸವನ್ನೂ, ಮತ್ತು ಎಲ್ಲರ ಮನಸ್ಸನ್ನೂ ತೊಳೆಯಲು ಬಂದವನಂತೆ ಕಾಣುವ ಲಕ್ಕಜ್ಜ, ಒಂದು ದೃಶ್ಯದಲ್ಲಿ ಸಾಂಕೇತಿಕವಾಗಿ ಕಸವನ್ನೂ ಗುಡಿಸುತ್ತಾನೆ. ಕರುಣೆ ಕಕ್ಕುಲತೆಯ ಪರಿಚಯ ಮಾಡಿಸಿಕೊಡುವ ಅವನು ಅವರಿಂದ ಮೂದಲಿಸಿಕೊಳ್ಳುವುದು, ದಿಕ್ಕಿಲ್ಲದ ಬೀಡಾಡಿ ಭಿಕ್ಷು ಎಂದು.

ಮ್ಯಾಕ್ಸಿಂ ಗಾರ್ಕಿ ಇಂಥ ಕಥೆಯೊಂದನ್ನು ಕಟ್ಟುವ, ಚಿತ್ರಿಸುವ, ಮಾತಿಗೆ ಮಾತು ಜೋಡಿಸುವ ಪರಿ ಅನನ್ಯವಾದುದು. ಸಮಾಜದ ದುಃಸ್ವಪ್ನದಂತೆ ಭಾಸವಾಗುವ ಇದು ನೇರವಾಗಿ ಮಾನವನ ಅಂತರಾಳಕ್ಕೆ ಘಾಸಿ ಮಾಡುವಂಥದ್ದು. ಸ್ವತಃ ಇಂಥ ಸಮಾಜವನ್ನು ನೋಡಿ ಬೆಳೆದ ಗಾರ್ಕಿ ಅನಾಥ. ಚಿಕ್ಕ ವಯಸ್ಸಿನಲ್ಲೇ ಓಡಿ ಹೋಗಿ, ಅಲೆದಾಡಿ, ನೌಕರಿಗಳನ್ನು ಬದಲಿಸುತ್ತಾ ಹೋದವನು. ಚಪ್ಪಲಿ ಹೊಲಿದು, ಬಣ್ಣ ಬಳಿದು, ಹಸಿವಿನಿಂದ ಬಳಲಿ, ಆತ್ಮಹತ್ಯೆಗೂ ಯತ್ನಿಸಿ ವಿಫಲನಾದವನು, ತಾನು ಕಂಡುಂಡ ಬವಣೆಗಳನ್ನು, ಸಮಾಜವನ್ನು ಅವನು ತನ್ನ ಕೃತಿಗಳಲ್ಲಿ ಚಿತ್ರಿಸಿದ.

ಆದರೆ ಒಂದು ವ್ಯಕ್ತಿಗತ ಬವಣೆ, ನೋವು, ಸಾಹಿತ್ಯವಾಗುವಾಗ ಸಾಹಿತಿ ಅದೆಲ್ಲವನ್ನು ನೇರವಾಗಿ ಕಾರಿಕೊಳ್ಳುವ, ಅತಿಭಾವುಕತೆ, ಬಂಡಾಯ ಇವೆಲ್ಲವನ್ನು ಉದ್ಘೋಷ ಮಾಡದೆ, ಉತ್ತಮ ಕೃತಿಯ ಕಡೆಯುವ ರೀತಿ ಇವುಗಳನ್ನೆಲ್ಲ ಪಾತ್ರಗಳ ಅಂತರ್ಗತದೊಳಗೆ ತಣ್ಣಗೆ ಪ್ರವಹಿಸುವಂತೆ ಮಾಡುತ್ತಾನೆ, ಇದು ಒಂದು ಉತ್ತಮ ಕೃತಿಯ ಲಕ್ಷಣ.

ಹೀಗಾಗಿ ಅವನ ಕೃತಿ ಒಂದು ವ್ಯಕ್ತಿಗತ ಅನುಭವದ ಮಾಮೂಲಿ ಅಭಿವ್ಯಕ್ತಿಯಾಗದೆ, ಸಾರ್ವತ್ರಿಕ ಅನುಭವ ಕಥಾನಕವಾಗಿದೆ. ಇದನ್ನು ವಿವರಿಸಲು ನಾವು ಕನ್ನಡ ಸಾಹಿತ್ಯದ ಎರಡು ಉದಾಹರಣೆಗಳನ್ನು ಕೊಡಬಹುದು. ಅಸ್ಪೃಶ್ಯತೆಯ ಬಗ್ಗೆ ಪ್ರತಿಭಟಿಸುವ ರೀತಿ, ದಲಿತ ಕವಿಯೆಂದೇ ಗುರುತಿಸಿಕೊಂಡ ಸಿದ್ದಲಿಂಗಯ್ಯನವರ ಉದ್ಘೋಷದ ಮಾದರಿ. ಆದರೆ ಒಂದು ಸಾಹಿತ್ಯವು ಉದ್ಘೋಷದಿಂದ ಬಹಳ ದಿನ ಬದುಕುವುದಿಲ್ಲ. ಮತ್ತೊಂದು ಉದಾಹರಣೆ ದೇವನೂರು ಮಹದೇವ ಅವರ ಬರವಣಿಗೆ. ಅದು ಮೆಲು ಮಾತಿನಂತಹ ಸಾಹಿತ್ಯ, ಗಾರ್ಕಿಯದು ಈ ಮಾದರಿಯ ಬರವಣಿಗೆ.

ಅನುವಾದಕ ಬಿ.ಟಿ ದೇಸಾಯಿ ಅವರದು ಇಲ್ಲಿ ಗಮನಾರ್ಹ ಕಸುಬುದಾರಿಕೆ. ಯಾಕೆಂದರೆ, ರಷ್ಯಾದ ಪಾದೇಶಿಕತೆಯಿಂದ ಕನ್ನಡದ ಜಾಯಮಾನಕ್ಕೆ ವರ್ಗವಾಗಿರುವ ‘ಈ ಕೆಳಗಿನವರು’ ಮೂಲವನ್ನು ಮೀರಿ ಕನ್ನಡದ್ದೇ ಆಗಿಬಿಟ್ಟಿದೆ.
ಧಾರವಾಡದ ಖಡಕ್ ಕನ್ನಡ ಇಡೀ ನಾಟಕಕ್ಕೆ ಬಿಗಿ ತಂದುಕೊಟ್ಟಿದೆ. ಈ ಮಟ್ಟಿಗೆ ಬಿ.ಟಿ ದೇಸಾಯಿಯವರ ರೂಪಾಂತರದಲ್ಲಿ ಲವಲವಿಕೆ ಇದೆ.

ನಿರ್ದೇಶಕರಾದ ಚಿದಂಬರರಾವ್ ಜಂಬೆ ತಮ್ಮ ಎಂದಿನ ಸಹಜ ವಾಸ್ತವದ ಶೈಲಿಯಲ್ಲಿ ನಾಟಕ ಕಟ್ಟಿಕೊಟ್ಟಿದ್ದಾರೆ. ಅವರು ನಾಟಕವನ್ನು ವ್ಯಾಖ್ಯಾನಿಸುವ ಜಿದ್ದಿಗೆ ಬಿದ್ದಿಲ್ಲದಿರುವುದು ಖುಷಿಯ ವಿಚಾರ. ಒಂದು ನಾಟಕ ತನ್ನನ್ನು ತಾನು ಸಹಜವಾಗಿ ವ್ಯಾಖ್ಯಾನಿಸಿಕೊಳ್ಳುವ ಶಕ್ತಿಯನ್ನು ಪಡೆದಿರುತ್ತದೆ, ಅದಕ್ಕೆ ನಿರ್ದೇಶಕನ ವ್ಯಾಖ್ಯಾನ ಕೆಲವೊಮ್ಮೆ ನಾಟಕದ ವಿಸ್ತಾರಕ್ಕೆ ತಡೆ ಒಡ್ಡುತ್ತದೆ. ಕೆಲವೊಮ್ಮೆ ನಿರ್ದೇಶಕನ ವ್ಯಾಖ್ಯಾನ  ಮೂಲಕೃತಿಯನ್ನು ಬೇರೊಂದು ಎತ್ತರಕ್ಕೆ ಕೊಂಡೊಯ್ಯಲೂಬಹುದು.

ಪ್ರಯೋಗದಲ್ಲಿ ಎದ್ದು ಕಾಣುವುದು ಲಕ್ಕಜ್ಜನ ಪಾತ್ರ ಮಾಡಿದ ಉಮೇಶ್ ಪಾಟೀಲ್. ಬಹುಶಃ ಇಡೀ ನಾಟಕದ ಆವರಣಕ್ಕೆ ಭಿನ್ನವಾದ ಭಾವ ವ್ಯಕ್ತಿತ್ವದಿಂದ ಕಂಗೊಳಿಸುವ, ಹರಡಿಕೊಂಡ ಕೊಳೆಯನ್ನು ತೊಳೆಯುವಂತೆ ಬರುವ ಲಕ್ಕಜ್ಜನ ಪಾತ್ರದ ಅಂತಃಕರಣ, ತತ್ವ, ಎಲ್ಲವನ್ನು ಸಮರ್ಥವಾಗಿ ಮೈತುಂಬಿಕೊಂಡಂತೆ ಕಂಡರು ಉಮೇಶ್.

ವಾಸ್ಯ (ಗಿರೀಶ್) ಬೊಬ್ಬಣ್ಣ(ಮಾರಣ್ಣ), ವಾಸಕ್ಕ (ಶಾಹಿರಾ), ಕಿಷ್ಟಪ್ಪ (ನವೀನ್) ಈ ಪಾತ್ರಗಳೂ ಎದ್ದು ಕಾಣುತ್ತವೆ. ಒಂದು ರಿಯಲಿಸ್ಟಿಕ್ ಆವರಣವಿರುವುದರಿಂದ ಮಾತಿನ ಅರ್ಥ ಹೊರಡಿಸುವುದರಿಂದಲೇ ಅಭಿನಯ ಹುಟ್ಟುತ್ತದೆ. ಇದಕ್ಕೆ ಮುಖ ಅರಳಿಸಿ, ಕಣ್ಣು ದೊಡ್ಡದು ಮಾಡುವ ಶೈಲಿಯ ಅಗತ್ಯವಿಲ್ಲ.

ಯಾವುದೇ ಅಡೆ ತಡೆಯಿಲ್ಲದಂತೆ ಅಭಿನಯಿಸುವ ಎಲ್ಲ ನಟರು ಪಾತ್ರಗಳಾಗಿ ಕಂಡರೂ, ಪಾತ್ರಗಳ ವ್ಯಕ್ತಿತ್ವದಲ್ಲಿ ಆ ಮಟ್ಟಿನ ವೈವಿಧ್ಯ ಕಾಣುವುದಿಲ್ಲ. ಕೆಲವರಲ್ಲಿ ಕಂಡರೆ, ಕೆಲವರು ತಮಗೇ ಪಾತ್ರವನ್ನು ಹೊಂದಿಸಿಕೊಂಡಿದ್ದಾರೆ. ಈ ಬಗೆಯ ನಾಟಕಕ್ಕೆ ಪ್ರತಿ ಪಾತ್ರವೂ ಭಿನ್ನವಾದ ಮ್ಯಾನರಿಸಂ ಕಟ್ಟಿಕೊಳ್ಳುವುದು ಅವಶ್ಯಕ.

ಉತ್ತರ ಕರ್ನಾಟಕದ ಖಡಕ್ ಕನ್ನಡದ ಶ್ರುತಿ ಹಿಡಿದು ನುಡಿಸುವುದು ಮುಖ್ಯ, ಈ ದೃಷ್ಟಿಯಲ್ಲಿ ಒಟ್ಟೂ ನಾಟಕದಲ್ಲಿ ಅಪದ್ಧಗಳು ಕಾಣುವುದಿಲ್ಲ. ಆದರೂ ಆ ಭಾಷೆಯ ಕಾಕು ಮತ್ತು ಮಾತಿನ ಶ್ರುತಿ ಹಿಡಿಯಲು ಕಷ್ಟಪಡಬೇಕು.

ಸಂಗೀತವಿಲ್ಲದಿದ್ದರೂ ದೃಶ್ಯ ಬದಲಾವಣೆಯ ಹೊತ್ತಿಗೆ ಕೆಲವು ಹಾಡಿನ ಸಾಲುಗಳನ್ನು ಹಾಡುತ್ತಾರೆ, ಅದರ ಅವಶ್ಯಕತೆ ಅಷ್ಟಾಗಿ ಕಾಣುವುದಿಲ್ಲ. ನಾಟಕದ ಪರಿಸ್ಥಿತಿಗೆ ಪೂರಕವಾದ ರಂಗಸಜ್ಜಿಕೆ ಇದೆ. ಲಕ್ಕಜ್ಜನ ನಿರ್ಗಮನದ ನಂತರ ಸ್ವಲ್ಪ ಎಳೆದಂತೆನ್ನಿಸುವ ನಾಟಕದ ಪರಿಣಾಮವನ್ನಂತೂ ಮೆಚ್ಚಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT