ಬೆಂಗಳೂರು: ಕಿರುತೆರೆ ನಟ ಕಿರಣ್ ರಾಜ್ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಗೊಂಡಿದ್ದು, ಗಾಯಗೊಂಡಿರುವ ಅವರನ್ನು ಕೆಂಗೇರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಪಘಾತದಲ್ಲಿ ಎದೆಯ ಭಾಗಕ್ಕೆ ಹೆಚ್ಚು ಪೆಟ್ಟಾಗಿದ್ದ ಕಾರಣ ಪ್ರಜ್ಞೆ ಕಳೆದುಕೊಂಡಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು. ಸದ್ಯ ಚೇತರಿಸಿ ಕೊಂಡಿದ್ದಾರೆ. ಕಾರಿನಲ್ಲಿ ‘ರಾನಿ’ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಗಿರೀಶ್ ಸಹ ಇದ್ದರು. ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಟ್ಟಯ್ಯನ ಪಾಳ್ಯದ ಸಿದ್ದೇಶ್ವರ ನಿರಾಶ್ರಿತರ ಕೇಂದ್ರಕ್ಕೆ ಕಿರಣ್ ರಾಜ್ ತೆರಳುತ್ತಿದ್ದರು. ಈ ಕೇಂದ್ರಕ್ಕೆ ಪ್ರತಿವಾರ ಭೇಟಿ ನೀಡಿ ಅನಾಥ ಮಕ್ಕಳಿಗೆ ಊಟ ನೀಡುತ್ತಿದ್ದರು. ಕಿರಣ್ ರಾಜ್ ಅಭಿನಯದ ರಾನಿ ಸಿನಿಮಾ
ಬಿಡುಗಡೆ ಗುರುವಾರ ಇರುವ ಕಾರಣದಿಂದ ಎರಡು ದಿನಗಳ ಮುಂಚೆಯೇ ಆಹಾರ ನೀಡಲು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಗಿರೀಶ್ ಅವರು ಕಾರು ಚಾಲನೆ ಮಾಡುತ್ತಿದ್ದ ವೇಳೆ ರಸ್ತೆಗೆ ಅಡ್ಡಲಾಗಿ ಬಂದ ಮುಂಗುಸಿಯನ್ನು ತಪ್ಪಿಸಲು ಹೋಗಿ, ನಿಯಂತ್ರಣ ಕಳೆದುಕೊಂಡು ರಸ್ತೆಬದಿ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ರಭಸಕ್ಕೆ ಕಾರಿನ ಚಕ್ರಗಳು ಕಿತ್ತು ಬಂದಿವೆ. ಕಾರು ಸಂಪೂರ್ಣ ಜಖಂಗೊಂಡಿದೆ.
‘ಅಪಘಾತದಲ್ಲಿ ಸ್ವಲ್ಪ ಪೆಟ್ಟಾಗಿತ್ತು. ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದು, ಯಾರೂ ಭಯ ಪಡಬೇಡಿ. ನಾನು ಚೇತರಿಸಿಕೊಂಡಿದ್ದೇನೆ ’ ಎಂದು ಕಿರಣ್ ರಾಜ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.