ಬೆಂಗಳೂರು: ‘ಪುಟ್ಟ ಗೌರಿ ಮದುವೆ’ ಧಾರವಾಹಿ ಮೂಲಕ ಮನೆಮಾತಾಗಿರುವ ನಟಿ ರಂಜನಿ ರಾಘವನ್ ಅವರು ತಮ್ಮ ಜೀವನ ಸಂಗಾತಿಯನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.
ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಅವರು, ಸಾಗರ್ ಭಾರದ್ವಾಜ್ ಎಂಬುವವರನ್ನು ಮದುವೆಯಾಗುವುದಾಗಿ ತಿಳಿಸಿದ್ದಾರೆ. ಆದರೆ, ಮದುವೆ ಯಾವಾಗ ಎಂಬ ಬಗ್ಗೆ ಅವರು ಮಾಹಿತಿ ನೀಡಿಲ್ಲ.
ಸಾಗರ್ ಭಾರದ್ವಾಜ್ ಅವರೊಂದಿಗೆ ಕನ್ನಡಿ ಮುಂದೆ ನಿಂತಿರುವ ಫೋಟೊವನ್ನು ಪೋಸ್ಟ್ ಮಾಡಿರುವ ಅವರು, ‘ಕನ್ನಡಿ ಮುಂದಿರುವ ವಸ್ತುಗಳು ಅವು ಗೋಚರಿಸುವುದಕ್ಕಿಂತ ಹತ್ತಿರದಲ್ಲಿವೆ #lifepartner #nanhudga #bff’ ಎಂದು ಬರೆದುಕೊಂಡಿದ್ದಾರೆ.
ಪೌರಾಣಿಕ ಧಾರವಾಹಿ ‘ಕೆಳದಿ ಚೆನ್ನಮ್ಮ’ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದ್ದ ರಂಜನಿ ರಾಘವನ್, ನಂತರ ‘ಆಕಾಶ ದೀಪ’ ಧಾರವಾಹಿಯಲ್ಲಿ ನಾಯಕನ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಮುಖ ಪಾತ್ರದಲ್ಲಿ ನಟಿಸಿದ್ದ ‘ಪುಟ್ಟ ಗೌರಿ ಮದುವೆ’ ಕಿರುತೆರೆಯಲ್ಲಿ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ‘ಕನ್ನಡತಿ’ ಧಾರವಾಹಿಯ ಮೂಲಕ ಕಿರುತೆರೆಯಲ್ಲಿ ಯಶಸ್ಸಿ ನಟಿ ಎನಿಸಿಕೊಂಡರು.
‘ರಾಜಹಂಸ’, ‘ಕಾಂಗರೂ’ ಸೇರಿದಂತೆ ಹಲವು ಸಿನೆಮಾಗಳಲ್ಲಿಯೂ ಅವರು ನಟಿಸಿದ್ದಾರೆ.