ಮಂಗಳವಾರ, ಸೆಪ್ಟೆಂಬರ್ 21, 2021
22 °C

ಈ ವರ್ಷ ಕನ್ನಡದಲ್ಲಿ ‘ಬಿಗ್‌ಬಾಸ್’‌ ಅನುಮಾನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನ್ನಡ ಕಿರುತೆರೆ ಲೋಕದ ಬಹುಜನಪ್ರಿಯ ರಿಯಾಲಿಟಿ ಶೋ ‘ಬಿಗ್‍ ಬಾಸ್’ ಈ ವರ್ಷ ಅಂದರೆ, 2020ಯಲ್ಲಿ ಪ್ರಸಾರವಾಗುವುದು ಅನುಮಾನ ಎಂಬ ಮಾಹಿತಿ ಹೊರಬಿದ್ದಿದೆ.

ಕೋವಿಡ್‌ 19 ಕಾರಣಕ್ಕೆ ಈಗಾಗಲೇ ಹಲವು ಧಾರಾವಾಹಿಗಳು ಮತ್ತು ಸಿನಿಮಾಗಳ ಚಿತ್ರೀಕರಣಕ್ಕೆ ಅಡಚಣೆಯಾಗಿದೆ. ಲಾಕ್‌ಡೌನ್‌ ನಿಯಮ ಸಡಿಲಗೊಳಿಸಿರುವ ಸರ್ಕಾರ, ಸಿನಿಮಾ ಶೂಟಿಂಗ್, ಧಾರಾವಾಹಿ ಚಿತ್ರೀಕರಣ, ರಿಯಾಲಿಟಿ ಶೋ ಕಾರ್ಯಕ್ರಮ ನಡೆಸಲು ಸರ್ಕಾರ ಅನುಮತಿ ನೀಡಿದೆ. ಹಾಗಾಗಿ ಬಿಗ್‍ಬಾಸ್ ಸಹ ಆರಂಭವಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಈ ವರ್ಷ ‘ಬಿಗ್‍ಬಾಸ್’ ಪ್ರಸಾರವಾಗುವುದು ಅನುಮಾನ. ಇನ್ನು ಆರು ತಿಂಗಳು ತಡವಾಗಿ, ಅಂದರೆ 2021ರಲ್ಲಿ ಕನ್ನಡದ ಬಿಗ್‌ಬಾಸ್‌ ಸೀಸನ್‌ 8 ಶುರುವಾಗಬಹುದು ಎನ್ನುವ ಮಾಹಿತಿ ಹೊರಬಿದ್ದಿದೆ.

ಕನ್ನಡದ ‘ಬಿಗ್ ಬಾಸ್’ ಶೋ ನಡೆಸಿಕೊಡುತ್ತಿದ್ದ ನಟ ಕಿಚ್ಚ ಸುದೀಪ್ ಸಹ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಅವರು ಹೈದರಾಬಾದ್‍ನಲ್ಲಿ ‘ಫ್ಯಾಂಟಮ್’ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಇನ್ನು ಸುದೀಪ್‌ ನಟನೆ ಮತ್ತು ಸೂರಪ್ಪ ಬಾಬು ನಿರ್ಮಾಣದ ‘ಕೋಟಿಗೊಬ್ಬ 3’ ಸಿನಿಮಾ ಕೂಡ ಬಿಡುಗಡೆಯ ಹೊಸ್ತಿಲಿನಲ್ಲಿದ್ದು, ಆ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಸುದೀಪ್‌ ತೊಡಗಿಕೊಳ್ಳಬೇಕಿದೆ. ಅಲ್ಲದೆ, ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಡಿ ‘ಅಶ್ವತ್ಥಾಮ’ ಚಿತ್ರವನ್ನು ಸುದೀಪ್‌ ಇದೇ ವರ್ಷ ನಿರ್ದೇಶಕ ಅನೂಪ್‌ ಭಂಡಾರಿ ನಿರ್ದೇಶನದಲ್ಲಿ ನಿರ್ಮಾಣ ಮಾಡುವ ಯೋಜನೆ ಪ್ರಕಟಿಸಿದ್ದಾರೆ. 

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ವರ್ಷ ಸೆಪ್ಟೆಂಬರ್‌ನಿಂದ ಬಿಗ್‍ಬಾಸ್ ಸೀಸನ್‌ ಆರಂಭವಾಗುತ್ತಿತ್ತು. ಕೊರೊನಾ ಹರಡದಿದ್ದರೆ ಈ ತಿಂಗಳಲ್ಲಿ ಬಿಗ್‍ಬಾಸ್ ಸೀಸನ್ 8 ಆರಂಭವಾಗಬೇಕಿತ್ತು. ಆದರೆ ಕೊರೊನಾ ಕನ್ನಡದ ಬಿಗ್‌ಬಾಸ್‌ಗೆ ಕಂಟಕವಾಗಿ ಪರಿಣಮಿಸಿದೆ. 

ತೆಲುಗಿನಲ್ಲಿ ನಟ ನಾಗಾರ್ಜುನ ನಡೆಸಿಕೊಡುವ ‘ಬಿಗ್‍ಬಾಸ್ ಸೀಸನ್ 4’ ಈಗಾಗಲೇ ಆರಂಭವಾಗಿದೆ. ಹಿಂದಿಯಲ್ಲಿ ಬಿಗ್‌ಬಾಸ್‌ ಹೊಸ ಆವೃತ್ತಿಯ ಆರಂಭಕ್ಕೆ ಎಲ್ಲ ಸಿದ್ಧತೆಗಳು ನಡೆಯುತ್ತಿದ್ದು, ಅಕ್ಟೋಬರ್‌ನಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ ಎನ್ನುವ ಸುದ್ದಿ ಇದೆ. ‘ಬಿಗ್‍ಬಾಸ್ ಸೀಸನ್ 7’ರಲ್ಲಿ ನಟ ಶೈನ್ ಶೆಟ್ಟಿ ‘ಬಿಗ್‍ಬಾಸ್’ ಕಿರೀಟ‌ ಮುಡಿಗೇರಿಸಿಕೊಂಡಿದ್ದರು. ಹಾಸ್ಯ ನಟ ಕುರಿ ಪ್ರತಾಪ್‌ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು.

ಮುಂದೂಡಿಕೆ ದೊಡ್ಡ ಸಂಗತಿ ಅಲ್ಲ:

‘ಕರ್ನಾಟಕದಲ್ಲಿ ಕೋವಿಡ್‌ 19 ಪ್ರಕರಣಗಳು ಹೆಚ್ಚುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಬಿಗ್‌ಬಾಸ್‌ ಕಾರ್ಯಕ್ರಮ ನಿರ್ವಹಿಸುವವರು ರಿಸ್ಕ್‌ ತೆಗೆದುಕೊಂಡು ಶುರು ಮಾಡುತ್ತಿರಬಹುದು. ಆದರೆ, ನಾವು ಇಲ್ಲಿನ ಮಾರುಕಟ್ಟೆ ಸ್ಥಿತಿ ಮತ್ತು ಕೋವಿಡ್‌ 19 ಪ್ರಕರಣಗಳ ಏರಿಕೆಯನ್ನೂ ಗಮನದಲ್ಲಿಟ್ಟುಕೊಂಡು ಈ ಕಾರ್ಯಕ್ರಮ ಶುರುಮಾಡಬೇಕಲ್ಲವೇ? ‌ಟಿ.ವಿ ಕಾರ್ಯಕ್ರಮ ಮತ್ತು ಜಾಹೀರಾತು ಮಾರುಕಟ್ಟೆ ನಾಳೆಯೇ ಚೇತರಿಸಿಕೊಳ್ಳುತ್ತದೆ ಎಂದು ಹೇಳುವ ಪರಿಸ್ಥಿತಿ ಇಲ್ಲ. ಕೋಟಿಗಟ್ಟಲೇ ಹಣ ಹೂಡಿ ನಿರ್ಮಿಸಬೇಕಿರುವ ಕಾರ್ಯಕ್ರಮವಿದು. ಸದ್ಯದ ಸ್ಥಿತಿ ನೋಡಿದರೆ ಮೂರು ತಿಂಗಳು ಅಥವಾ ಆರು ತಿಂಗಳು ಬಿಗ್‌ಬಾಸ್‌ ಕಾರ್ಯಕ್ರಮ ಮುಂದಕ್ಕೆ ಹೋಗುವುದು ಖಚಿತ. ಇದೇನು ದೊಡ್ಡ ಸಂಗತಿ ಅಲ್ಲ.‌ ಈಗಾಗಲೇ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಒಂದೊಂದೆ ಧಾರಾವಾಹಿಗಳು, ಮಜಾ ಟಾಕೀಸ್‌ ಕಾರ್ಯಕ್ರಮ ಶುರುವಾಗಿವೆ. ಹಾಗೆಯೇ ಕೆಲ ತಿಂಗಳು ಕಳೆದ ಮೇಲೆ ಬಿಗ್‌ಬಾಸ್‌ ಕೂಡ ಶುರುವಾಗುತ್ತದೆ’ ಎನ್ನುತ್ತಾರೆ ಕಲರ್ಸ್‌ ಕನ್ನಡ ವಾಹಿನಿಯ ಪ್ರಮುಖರೊಬ್ಬರು.

ಡಿಸೆಂಬರ್‌ಗೆ ಸುದೀಪ್‌ ಡೇಟ್‌:

‘ಬಿಗ್ ‌ಬಾಸ್’ ಚಿತ್ರೀಕರಣಕ್ಕಾಗಿ ಸುದೀಪ್‌ ಅವರ ಡೇಟ್‌ ಅನ್ನು ಡಿಸೆಂಬರ್‌ನಿಂದ ಪಡೆದುಕೊಂಡಿದ್ದಾರೆ. ಆದರೆ, ಈ ವರ್ಷ ಬಿಗ್‌ಬಾಸ್‌ ಕಾರ್ಯಕ್ರಮ ಇರುವುದಿಲ್ಲ ಎನ್ನುವುದು ನಮಗೆ ಹೊಸ ಮಾಹಿತಿ. ಕಲರ್ಸ್‌ ಕನ್ನಡ ವಾಹಿನಿ ಕಡೆಯಿಂದ ಅಥವಾ ಕಾರ್ಯಕ್ರಮ ನಿರ್ದೇಶಕರಿಂದ ದಿನಾಂಕ ಬದಲಾಗಿರುವ ಬಗ್ಗೆ ಯಾವುದೇ ಮಾಹಿತಿಯೂ ಬಂದಿಲ್ಲ’ ಎಂದು ಸುದೀಪ್‌ ಅವರ ಆಪ್ತ ಜಾಕ್‌ ಮಂಜು ತಿಳಿಸಿದ್ದಾರೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು