ಹಾಸ್ಯದ ಮೂಲಕವೇ ಜನಪ್ರಿಯತೆ ಪಡೆದಿದ್ದ ತುಕಾಲಿ ಸಂತೋಷ್ ಅವರಿಗೆ ಬಿಗ್ ಬಾಸ್ ಮನೆಯಲ್ಲಿ ತಮ್ಮ ಹಾಸ್ಯವೇ ಮುಳುವಾಗಿತ್ತು. ಬೇರೆಯವರನ್ನು ನೋಯಿಸಿ ತಮಾಷೆ ನೋಡುತ್ತಿದ್ದ ತುಕಾಲಿ ಅವರ ಸ್ವಭಾವಕ್ಕೆ ಸ್ವತಃ ಕಿಚ್ಚ ಸುದೀಪ್ ಅವರೇ ಕಿಡಿಕಾರಿದ್ದರು. ಈ ಘಟನೆಗಳ ಬಳಿಕ ತುಕಾಲಿ ಗಂಭೀರವಾಗಿ ಬಿಟ್ಟಿದ್ದರು.
ಇಂದು ಬಿಡುಗಡೆ ಮಾಡಿದ ಪ್ರೋಮೊದಲ್ಲಿ ತುಕಾಲಿ ಅವರು ಮತ್ತೆ ತಮ್ಮ ಹಾಸ್ಯದ ಮೂಲಕ ಮನರಂಜನೆ ನೀಡಿದ್ದಾರೆ. ಮನೆ ಮಂದಿಯವರನ್ನೆಲ್ಲ ತಮ್ಮ ಆರೋಗ್ಯ ಪೂರ್ಣವಾದ ಹಾಸ್ಯದ ಮೂಲಕ ನಗೆಗಡಲಿನಲ್ಲಿ ತೇಲಾಡಿಸಿದ್ದಾರೆ. ಹೆಣ್ಣಿನ ವೇಷದಲ್ಲಿ ಬಂದ ತುಕಾಲಿ ಅವರನ್ನು ಕಂಡು ಸ್ಪರ್ಧಿಗಳು ಪರಸ್ಪರ ಭಿನ್ನಾಭಿಪ್ರಾಯಗಳನ್ನು ಮರೆತು ನಕ್ಕಿದ್ದಾರೆ.
ವೇಷ ಬದಲಿಸಿ ಬಂದ ತುಕಾಲಿ ಸಂತೋಷ್ ಅವರನ್ನು ಕಂಡು ‘ಬಾರೇ ರಾಜಕುಮಾರಿ’ ಎಂದು ಕಾರ್ತಿಕ್ ಕರೆದುಕೊಂಡು ಹೋಗಿದ್ದಾರೆ. ತುಸು ಅಂತರ ಕಾಯ್ದುಕೊಂಡಿದ್ದ ಕಾರ್ತಿಕ್–ತುಕಾಲಿ ಹೆಗಲ ಮೇಲೆ ಕೈಹಾಕಿಕೊಂಡು ಒಟ್ಟಿಗೆ ಬರುವುದನ್ನು ಕಂಡು ಮನೆಯವರೆಲ್ಲ ಒಂದು ನಿಮಿಷ ದಂಗಾಗಿದ್ದರು.
ವರ್ತೂರ್ ಸಂತೋಷ್ ಅವರ ತೊಡೆ ಮೇಲೆ ಕೂತುಕೊಂಡ ತುಕಾಲಿ, ‘ವರ್ತೂ… ಯಾಕೆ ನನ್ನನ್ನ ಬಿಟ್ಟು ಒಬ್ಬನೆ ಟೊಮೆಟೊ ಮಾರೋಕೆ ಹೋಗಿದ್ದೆ’ ಎಂದು ಪರೋಕ್ಷವಾಗಿ ತನಿಷಾ ಅವರ ಕಾಲೆಳೆದಿದ್ದಾರೆ.
‘ಇನ್ನೊಂದು ವಿಷಯ ಗೊತ್ತಾ? ಯಾವಾಗ ನನ್ನ ತಂಗಿ ಸಿಕ್ಕಿದ್ರೂ ನಾನು ಜೋರಾಗಿ ತಬ್ಕೋತೀನಿ’ ಎಂದು ನಮ್ರತಾ ಅವರನ್ನು ತಬ್ಬಿಕೊಳ್ಳಲು ಹೋದಾಗ ನಮ್ರತಾ ಕಿರುಚಾಡುತ್ತಾ ಹೋಗಿದ್ದಾರೆ.
ಅಷ್ಟೇ ಅಲ್ಲ ಹೊಸ ಹುಡುಗಿಗೆ ಮುತ್ತು ಕೊಡಲು ಮನೆಯ ಹುಡುಗರೆಲ್ಲ ಪೈಪೋಟಿಯಲ್ಲಿ ಬಿದ್ದಿದ್ದರು.
ಒಟ್ಟಿನಲ್ಲಿ ಕಳೆದ ಎರಡು ವಾರದಿಂದ ಮನಸ್ಸುಗಳ ನಡುವಿದ್ದ ಒಂದು ಅಂತರ ಇಂದು ತನ್ನಿಂತಾನೇ ಮರೆಯಾಗಿದೆ ಎಂದು ಹೇಳಬಹುದು. ಈ ಮನಸ್ಥಿತಿ ಎಷ್ಟು ಸಮಯ ಇರುತ್ತದೆ ಎಂದು ಕಾದು ನೋಡಬೇಕಿದೆ..