ಚಂದನ್ ಪಯಣ

ಭಾನುವಾರ, ಜೂನ್ 16, 2019
22 °C

ಚಂದನ್ ಪಯಣ

Published:
Updated:

ನಟನೆ ಎಂದರೆ ನನ್ನೊಳಗಿನ ಕನಸು, ನಟನಾಗಬೇಕು ಎಂಬ ಕಾರಣಕ್ಕೆ ಬಾಲ್ಯದಿಂದಲೇ ತಯಾರಿ ನಡೆಸುತ್ತಿದ್ದೆ ಎನ್ನುವ ನಟರ ಮಧ್ಯೆ ಇವರು ಕೊಂಚ ಭಿನ್ನವಾಗಿ ನಿಲ್ಲುತ್ತಾರೆ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರಿಗೆ ಕೆಲಸದ ಮೇಲೆ ಬೇಸರ ಮೂಡಿತ್ತು. ಆ ಕಾರಣಕ್ಕೆ ನಟನೆಯತ್ತ ಮುಖ ಮಾಡಿದ್ದರು. ಹೀಗೆ ಆರಂಭವಾದ ನಟನೆಯ ಪಯಣ ರಿಯಾಲಿಟಿ ಷೋ, ಧಾರಾವಾಹಿ, ಸಿನಿಮಾ ಎಂದೆಲ್ಲಾ ಸಾಗುತ್ತಿದೆ. ಅವರೇ ‘ಪ್ರೇಮ ಬರಹ’ದ ನಾಯಕ ಚಂದನ್ ಕುಮಾರ್.

ಮಂಡ್ಯದ ಇವರು ಬೆಳೆದಿದ್ದೆಲ್ಲಾ ಮೈಸೂರಿನಲ್ಲಿ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ಎಂಬ ರಿಯಾಲಿಟಿ ಷೋ ಮೂಲಕ ಟಿವಿ ಪರದೆಯ ಮೇಲೆ ಕಾಣಿಸಿಕೊಂಡರು. ಆ ರಿಯಾಲಿಟಿ ಷೋ ಅವರ ನಟನೆಯ ಬದುಕಿಗೆ ಅಡಿಪಾಯ ಹಾಕಿ ಕೊಟ್ಟಿತ್ತು. ಜೀ ಕನ್ನಡದ ರಾಧಾ ಕಲ್ಯಾಣ ಧಾರಾವಾಹಿಯ ವಿಶಾಲ್ ಭಾರದ್ವಜ್ ಪಾತ್ರದ ಮೂಲಕ ಕಿರುತೆರೆ ಪ್ರವೇಶಿಸಿದ ಇವರು, ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಚಂದು ಪಾತ್ರದಲ್ಲಿ ನಟಿಸಿದ್ದರು.

ಬಿಗ್‌ಬಾಸ್ ರಿಯಾಲಿಟಿ ಷೋದಲ್ಲಿ ರನ್ನರ್ ಅಪ್ ಆದ ಇವರು ಹಿರಿತೆರೆಯಲ್ಲೂ ತಮ್ಮ ನಟನೆಯ ಕಂಪನ್ನು ಹರಡಿದ್ದಾರೆ. ‘ಲೈಪು ಇಷ್ಟೇನೆ’ ಸಿನಿಮಾದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಇವರು ಪರಿಣಯ, ಕಟ್ಟೆ, ಎರಡೊಂದ್ಲಾ ಮೂರು, ಲವ್‌ ಯು ಅಲಿಯಾ, ಬೆಂಗಳೂರು 560023 ಹಾಗೂ ತಮಿಳಿನ ಸೊಲ್ಲಿ ವಿಡವಾ ಸಿನಿಮಾಗಳಲ್ಲಿ ಮುಂದುವರಿದಿದೆ.

ಚಿತ್ರ ಜಗತ್ತಿನಲ್ಲಿ ಇವರಿಗೆ ಹೆಚ್ಚು ಹೆಸರು ತಂದುಕೊಟ್ಟಿದ್ದು ಅರ್ಜುನ್ ಸರ್ಜಾ ನಿರ್ದೇಶನದ ‘ಪ್ರೇಮ ಬರಹ‘ ಸಿನಿಮಾ. ಬಿಡುಗಡೆಗೆ ಸಿದ್ಧವಾಗಿರುವ ಕುರುಕ್ಷೇತ್ರ ಸಿನಿಮಾದಲ್ಲಿ ಸಹದೇವ ಪಾತ್ರದಲ್ಲಿ ನಟಿಸಿದ್ದಾರೆ ಚಂದನ್.

ತೆಲುಗಿನ ಸಾವಿತ್ರಮ್ಮ ಗಾರಿ ಅಬ್ಬಾಯಿ ಧಾರಾವಾಹಿಯ ಬಾಲರಾಜು ಪಾತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಇವರು ನಟನೆಯಲ್ಲೇ ಭವಿಷ್ಯ ಕಟ್ಟಿಕೊಳ್ಳುವ ಯೋಚನೆಯಲ್ಲಿದ್ದಾರೆ.

ನಟನಾ ಹಿನ್ನೆಲೆ ಇಲ್ಲದೇ ಬಣ್ಣ ಹಚ್ಚಿದ ಚಂದನ್‌ ಅವರಿಗೆ ಮೊದಲ ಬಾರಿ ನಟಿಸಿದ ಅನುಭವಗಳನ್ನು ಕೇಳಿದರೆ ‘ಎಂಜಿನಿಯರಿಂಗ್ ಮುಗಿಸಿದ್ದೇವೆ ಎಂದ ಮೇಲೆ ಎಲ್ಲವನ್ನೂ ಕಲಿಯಬಹುದು’ ಎಂದು ಅನುಭವಿಯಂತೆ ನಗುತ್ತಾರೆ. ‘ನನಗೆ ಮೊದಲು ನಟನೆಯ ಬಗ್ಗೆ ಏನೂ ಗೊತ್ತಿರಲಿಲ್ಲ. ಆದರೆ ನಮ್ಮ ಧಾರಾವಾಹಿಯಲ್ಲಿನ ಹಿರಿಯ ನಟರು ಹಾಗೂ ಸಹ ನಟರನ್ನು ನೋಡಿ ನಟನೆ ಕಲಿತೆ’ ಎಂದು ಅಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಸದ್ಯ ಸ್ಟಾರ್ ಸುವರ್ಣ ವಾಹಿನಿಯ ಸರ್ವಮಂಗಳ ಮಾಂಗಲ್ಯೇ ಧಾರಾವಾಹಿಯಲ್ಲಿ ನಟಿಸುತ್ತಿರುವ ಚಂದನ್ ಅವರದ್ದು ಆ ಧಾರಾವಾಹಿಯಲ್ಲಿ ಶಿವಭಕ್ತನ ಪಾತ್ರ. ನಾಟಿ ವೈದ್ಯನಾಗಿರುವ ಶಿವಭಕ್ತ ಮಹಾಶಂಕರ ಆಧುನಿಕ ತಂತ್ರಜ್ಞಾನಗಳಿಂದ ದೂರ. ಆ ಪಾತ್ರಕ್ಕೂ ಚಂದನ್ ನಿಜಜೀವನಕ್ಕೂ ಹೋಲಿಕೆ ಮಾಡಲಾಗದಷ್ಟು ವ್ಯತ್ಯಾಸವಿದೆಯಂತೆ. ಚಂದನ್ ದೇವಸ್ಥಾನಗಳಿಗೆ ಹೋಗುವುದು ಕಡಿಮೆ, ದೇವರ ಪೂಜೆ ಮಾಡುವುದು ಕಡಿಮೆ. ಆದರೆ ಮಹಾಶಂಕರ ದಿನವಿಡೀ ಪೂಜೆಯಲ್ಲೇ ಮುಳುಗಿರುವಾತ. ನಟನೆ ಎಂದು ಬಂದರೆ ನಾವು ಆ ಪಾತ್ರದೊಳಗೆ ಇಳಿಯಬೇಕು. ಆ ಪಾತ್ರದಲ್ಲಿ ನಾವು ಲೀನರಾಗಬೇಕು ಎನ್ನುತ್ತಾರೆ.

ತಿನ್ನುವುದು ನಿಯಂತ್ರಣ ಮಾಡಿದರೆ ದೇಹ ಚೆನ್ನಾಗಿರುತ್ತದೆ. ಮಾತು ನಿಯಂತ್ರಣ ಮಾಡಿದರೆ ಮನಸ್ಸು ಚೆನ್ನಾಗಿರುತ್ತದೆ ಎಂಬುದನ್ನು ನಾನು ನಂಬುತ್ತೇನೆ ಎನ್ನುವ ಇವರು ಬಾಯಿ ನಿಯಂತ್ರಣಕ್ಕೆ ಸಿಗದಿದ್ದಾಗ ಬಿರಿಯಾನಿ, ಕಬಾಬ್, ಗೋಬಿಮಂಚೂರಿ ಎಲ್ಲವನ್ನು ತಿನ್ನುತ್ತಾರೆ. ಆದರೆ ಅಷ್ಟೇ ಪ್ರಯತ್ನ ಮಾಡಿ ಜಿಮ್‌ನಲ್ಲಿ ಬೆವರಿಳಿಸಿ ಬಾಡಿ ಫಿಟ್‌ನೆಸ್ ಕಾಪಾಡಿಕೊಳ್ಳುತ್ತಾರೆ.

ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸಲು ಅವಕಾಶ ಬಂದರೂ ಕಥೆ ಹಾಗೂ ಬಜೆಟ್ ಜೊತೆಗೆ ಇನ್ನು ಕೆಲವು ಅಂಶಗಳನ್ನು ಪರಿಗಣಿಸಿ ಇವರು ನಟಿಸಲು ಒಪ್ಪಿಕೊಂಡಿಲ್ಲ. ಎಲ್ಲವೂ ಕೂಡಿಬಂದರಷ್ಟೇ ಸಿನಿಮಾ ಮಾಡಲು ಸಾಧ್ಯ ಎನ್ನುವ ಇವರು ಸಿನಿಮಾರಂಗದಲ್ಲಿ ಇನ್ನಷ್ಟು ಮುಂದುವರಿಯುವ ಬಗ್ಗೆ ಭರವಸೆಯ ಮಾತನ್ನಾಡುತ್ತಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !