ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡೆಲ್ಲಿ ಕ್ರೈಮ್‌ ಸ್ಟೋರಿ’ ನೆಟ್‌ಫ್ಲಿಕ್ಸ್‌ನಲ್ಲಿ

ಕಿರುತೆರೆ
Last Updated 30 ಜನವರಿ 2019, 19:45 IST
ಅಕ್ಷರ ಗಾತ್ರ

ಜಗತ್ತನ್ನೇ ತಲ್ಲಣಗೊಳಿಸಿದ್ದ ’ನಿರ್ಭಯಾ‘ ಪ್ರಕರಣದ ಕುರಿತ ಟಿ.ವಿ. ಸರಣಿ ’ಡೆಲ್ಲಿ ಕ್ರೈಮ್ ಸ್ಟೋರಿ‘ಯ ಪ್ರಸಾರದ ಹಕ್ಕನ್ನು ನೆಟ್‌ಫ್ಲಿಕ್ಸ್‌ ತನ್ನದಾಗಿಸಿಕೊಂಡಿದೆ. ಕೆನಡಾ ಪ್ರಜೆ, ಭಾರತ ಸಂಜಾತ ರಿಚಿ ಮೆಹ್ತಾ ಈ ಸರಣಿಯನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ.

ಏಳು ಸಂಚಿಕೆಗಳ ಈ ಸರಣಿ ಮುಂದಿನ ಮಾರ್ಚ್‌ 22ರಿಂದ ಪ್ರಸಾರವಾಗಲಿದೆ. ಈಗಾಗಲೇ ಆರಂಭವಾಗಿರುವ ಸಂಡೇನ್ಸ್‌ ಚಿತ್ರೋತ್ಸವದಲ್ಲಿ ‘ಡೆಲ್ಲಿ ಕ್ರೈಮ್‌ ಸ್ಟೋರಿ’ ಜಾಗತಿಕ ಮಟ್ಟದ ಪ್ರದರ್ಶನವನ್ನು ಕಾಣಲಿದೆ.

ಒಬ್ಬ ಅಪ್ರಾಪ್ತ ವಯಸ್ಸಿನ ಬಾಲಕನೂ ಸೇರಿದಂತೆ ಆರು ಮಂದಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಒಂದೇ ವಾರದಲ್ಲಿ ಅಪರಾಧಿಗಳನ್ನು ಬಂಧಿಸಲಾಗಿತ್ತು. ಈ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದವರು ಪೊಲೀಸ್‌ ಅಧಿಕಾರಿ ವರ್ಟಿಕಾ ಚತುರ್ವೇದಿ. ಪ್ರಕರಣವನ್ನು ಪೊಲೀಸರು ನಿಭಾಯಿಸಿದ ರೀತಿ, ತನಿಖೆಯ ಆಳವಿಸ್ತಾರಗಳ ಮೇಲೆ ಬೆಳಕು ಚೆಲ್ಲುವ ರೀತಿಯಲ್ಲಿ ಸರಣಿ ನಿರ್ಮಿಸುವುದು ಮೆಹ್ತಾ ಉದ್ದೇಶವಾಗಿತ್ತು.

ಹಾಗಾಗಿ, ಸರಣಿಯ ಕೇಂದ್ರ ಬಿಂದುವೂ ಅವರೇ. ಪೊಲೀಸ್‌ ಅಧಿಕಾರಿ ವರ್ಟಿಕಾ ಚತುರ್ವೇದಿಯ ಪಾತ್ರವನ್ನು ಶೆಫಾಲಿ ಶಾ ಮಾಡಿದ್ದಾರೆ.ಕಿರುತೆರೆ ಮತ್ತು ಚಿತ್ರರಂಗದ ದಿಗ್ಗಜ ನಟ ಆದಿಲ್‌ ಹುಸೇನ್‌, ರಸಿಕಾ ದುಗಾಲ್‌, ಗೋಪಾಲ್‌ ದತ್ತ್, ವಿನೋದ್ ಶೆರಾವತ್‌ ಮತ್ತು ರಾಜೇಶ್‌ ತೈಲಾಂಗ್‌ ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಪ್ರಕರಣವನ್ನು ರಂಗುರಂಗಾಗಿ ಚಿತ್ರಿಸುವುದಕ್ಕಿಂತ ವಾಸ್ತವದ ನೆಲೆಯಲ್ಲಿಯೇ ಕಟ್ಟಿಕೊಡುವ ಉದ್ದೇಶದಿಂದ ತನಿಖಾ ವರದಿಯನ್ನೂ ಅಧ್ಯಯನ ಮಾಡಿದ್ದರು ಮೆಹ್ತಾ. ದೆಹಲಿ ಪೊಲೀಸ್‌ ಆಯುಕ್ತರಾಗಿದ್ದ ನೀರಜ್‌ ಕುಮಾರ್‌ ಈ ನಿಟ್ಟಿನಲ್ಲಿ ಮೆಹ್ತಾ ಅವರಿಗೆ ನೆರವಾಗಿದ್ದರು. ತನಿಖಾ ತಂಡದೊಂದಿಗೆ ಕೂಡಾ ಚರ್ಚೆ ನಡೆಸಿ 100ಕ್ಕೂ ಅಧಿಕ ಪುಟಗಳ ತನಿಖಾ ವರದಿಯ ಪ್ರತಿಯನ್ನು ಸಂಗ್ರಹಿಸಲು ನೀರಜ್‌ ಕುಮಾರ್‌ ಸಹಕಾರ ನೀಡಿದ್ದರು. ಹಲವು ಆಯಾಮಗಳಲ್ಲಿ ಪ್ರಕರಣದ ಮೇಲೆ ಬೆಳಕು ಚೆಲ್ಲಿ, ಅಧ್ಯಯನ ನಡೆಸಿ ಸರಣಿಯನ್ನು ಪೂರ್ತಿಗೊಳಿಸಲು ಬರೋಬ್ಬರಿ ಆರು ವರ್ಷಗಳೇ ಬೇಕಾದವು ಎನ್ನುತ್ತಾರೆ, ರಿಚಿ ಮೆಹ್ತಾ.

ನಿರ್ಭಯಾ ಪ್ರಕರಣವನ್ನು ವಸ್ತುವಾಗಿಸಿಕೊಂಡ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರಗಳು ನಿರ್ಮಾಣವಾಗಿದ್ದರೂ ‘ಡೆಲ್ಲಿ ಕ್ರೈಮ್‌ ಸ್ಟೋರಿ’ ಅವೆಲ್ಲಕ್ಕಿಂತ ವಿಭಿನ್ನವಾಗಿ ಮೂಡಿಬಂದಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT