ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟನೆಯಲ್ಲಿ ನೇತ್ರಾ ಹೆಜ್ಜೆ

Last Updated 18 ಮೇ 2018, 19:30 IST
ಅಕ್ಷರ ಗಾತ್ರ

‘ನ ಮ್ಮೊಳಗಿನ ನಟನಾ ಕೌಶಲದ ಅಭಿವ್ಯಕ್ತಿಗೆ ಸಾರ್ವಕಾಲಿಕ ವೇದಿಕೆ ರಂಗಭೂಮಿ’ ಎನ್ನುವ ನೇತ್ರಾ ಗೌಡ ರಂಗಭೂಮಿ, ಕಿರುತೆರೆ, ಕಲಾತ್ಮಕ ಚಿತ್ರಗಳ ನಟನೆಯಲ್ಲಿ ಸಕ್ರಿಯವಾಗಿದ್ದಾರೆ. ಕಳೆದ 9 ತಿಂಗಳಿನಿಂದ ‘ಗಂಗಾ’ ಧಾರಾವಾಹಿಯ ಸಕ್ಕುಬಾಯಿ ಪಾತ್ರದಲ್ಲಿ ನಟಿಸುತ್ತಿರುವ ಅವರಿಗೆ ನಟನಾ ಕ್ಷೇತ್ರದ ನಂಟು ಬೆಳೆದಿದ್ದು ಬಾಲ್ಯದಿಂದಲೇ. ‌

ಹಾಸನದವರಾದ ಅವರು ಶೈಕ್ಷಣಿಕ ಚಟುವಟಿಕೆಗಳಿಗಿಂತ ಪಠ್ಯೇತರ ಚಟುವಟಿಕೆಗಳಲ್ಲಿಯೇ ಸಕ್ರಿಯವಾಗಿರುತ್ತಿದ್ದರು ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವಾಗಲೇ ಒಂದು ವರ್ಷ ಕಾಲೇಜಿನಿಂದ ಬ್ರೇಕ್‌ ಪಡೆದು ರಂಗಭೂಮಿ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ‘ಚಾರ್ವಾಕ’ ತಂಡದೊಂದಿಗೆ 13 ಗಂಟೆಗಳ ‘ಆರ್ಯದ್ರಾವಿಡ’ ನಾಟದಲ್ಲಿ ನಟಿಸಿ ರಂಗಭೂಮಿ ನಟನೆಯಲ್ಲಿ ಛಾಪು ಮೂಡಿಸಿದರು.

ಈ ನಾಟಕದಲ್ಲಿ 17 ವರ್ಷದವರಿರುವಾಗಲೇ 70 ವರ್ಷದ ಅಜ್ಜಿಯ ಪಾತ್ರಕ್ಕೆ ಜೀವ ತುಂಬಿದ್ದರು. ನಂತರ ಬುದ್ಧನೆಡೆಗೆ, ವಾಲ್ಮೀಕಿಯ ಭಾಗ್ಯ, ಬಿರುಗಾಳಿ, ಯಯಾತಿ, ಕಾಕನಕೋಟೆ, ಮಾಧ್ಯಮ ವ್ಯಾಯಾಮ ನಾಟಕಗಳಲ್ಲಿ ವಿವಿಧ ಪಾತ್ರ ನಿರ್ವಹಿಸಿದರು.ಮೈಸೂರಿನಲ್ಲಿ ‘ರಂಗಹೆಜ್ಜೆ’ ತಂಡದೊಂದಿಗೆ ಜೊತೆಯಾದ ನೇತ್ರಾ ಪಟ ಕುಣಿತ, ಕಂಸಾಳೆ, ಡೊಳ್ಳು ಕುಣಿತಗಳ, ಪೂಜಾ ಕುಣಿತಗಳಿಗೆ ಹೆಜ್ಜೆಹಾಕಿದರು. ದಸರಾ ಮೆರವಣಿಗೆಯಲ್ಲಿ ಜಾನಪದ ನೃತ್ಯ ಪ್ರಸ್ತುತ ಪಡಿಸಿದರು.

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಕಲಿಯುತ್ತಿರುವಾಗಲೇ ವಿವಿಧ ಖಾಸಗಿ ವಾಹಿನಿಗಳಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡ ನೇತ್ರಾ ಅಲ್ಲಿನ  ‘ಸಹ್ಯಾದ್ರಿ ರಂಗತರಂಗ’ ತಂಡದೊಂದಿಗೆ ಹವ್ಯಾಸಿ ರಂಗತಂಡದಲ್ಲಿ ಕ್ರಿಯಾಶೀಲರಾದರು.

ಕಲರ್ಸ್ ಕನ್ನಡ ವಾಹಿನಿಯ ‘ಶಾಂತಂ ಪಾಪಂ’ ಧಾರವಾಹಿಯ ಮೂಲಕ ಕಿರುತೆರೆ ಪದಾರ್ಪಣೆ ಮಾಡಿದ ನೇತ್ರಾ ಅವರ ನಟನಾ ಕೌಶಲಕ್ಕೆ ಸಂಪೂರ್ಣ ವೇದಿಕೆ ಒದಗಿಸಿದ್ದು ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ‘ಹರಹರ ಮಹಾದೇವ’ ಧಾರವಾಹಿ. ಇದರಲ್ಲಿ ಸುವರ್ಚ ಪಾತ್ರದ ಮೂಲಕ ಕನ್ನಡಿಗರ ಮನೆ ಮನ ತಲುಪಿದರು. ಸದ್ಯ ‘ಗಂಗಾ’ ಧಾರವಾಹಿಯ ಸಕ್ಕೂಬಾಯಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

ಪ್ರಯಾಣವನ್ನು ಪ್ರೀತಿಸುವ ನೇತ್ರಾ ತಿಂಗಳಲ್ಲಿ 15 ದಿನಗಳು ಮಾತ್ರ ಗದಗದಲ್ಲಿ ಧಾರಾವಾಹಿ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುತ್ತಾರೆ. ಉಳಿದಂತೆ ರಂಗಭೂಮಿ ಹಾಗೂ ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಜಾನಪದ ನೃತ್ಯ ತರಬೇತಿ ನೀಡುತ್ತಿದ್ದಾರೆ.

‘ಪಿಯುಸಿಯಲ್ಲಿರುವಾಗಲೇ  ರಾಷ್ಟ್ರೀಯ ನಾಟಕ ಶಾಲೆಯಲ್ಲಿ (ಎನ್‌ಎಸ್‌ಡಿ) ಕಲಿಯಬೇಕೆಂಬ ಆಸಕ್ತಿ ಮೂಡಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ಆ ವಿದ್ಯೆಗೆ ಸಮನಾದ ನಟನೆಯನ್ನು ರಂಗಭೂಮಿ ಕಲಿಸಿದೆ. ಆತ್ಮವಿಶ್ವಾಸವನ್ನು ಕಲಿಸಿದ್ದು, ಬದುಕಿಗೆ ಆಸರೆಯಾಗಿದ್ದು ರಂಗಭೂಮಿ’ ಎಂದು ಹೆಮ್ಮೆಯಿಂದ ನುಡಿಯುತ್ತಾರೆ ನೇತ್ರಾ.

‘ರಂಗಭೂಮಿಯ ಸಾಂಗತ್ಯವನ್ನೂ ಎಂದಿಗೂ ತೊರೆಯುವುದಿಲ್ಲ’ ಎಂದು ಭಾವುಕರಾಗಿ ನುಡಿಯುವ ನೇತ್ರಾಗೆ ಈಗಾಗಲೇ ಅನೇಕ ಬೆಳ್ಳಿತೆರೆಯ ನಟನೆಯ ಅವಕಾಶಗಳು ಬಂದಿವೆಯಂತೆ. ಕಲಾತ್ಮಕ ಚಿತ್ರಗಳ ನಟನೆಯನ್ನು ಬಯಸುವ ನೇತ್ರಾ ಸದ್ಯ ತೆಲುಗಿನ ‘ಮಹಾನಟಿ’ ಚಿತ್ರದಲ್ಲಿ ಕೀರ್ತಿ ಸುರೇಶ್‌ ನಿರ್ವಹಿಸಿದ ಪಾತ್ರದಲ್ಲಿ ನಟಿಸುವ ಇಂಗಿತ ವ್ಯಕ್ತಪಡಿಸುತ್ತಾರೆ.

‘ನಟಿಸಿದರೆ ನನ್ನ ಪಾತ್ರ ಜನರ ಮನಸ್ಸಿನಲ್ಲಿ ಸದಾ ಕಾಡುವಂತಿರಬೇಕು. ರಂಗಭೂಮಿಯ ಜನಪ್ರಿಯತೆಗೆ ಸದಾ ಶ್ರಮಿಸಬೇಕು’ ಎನ್ನುವುದು ಅವರ ಮನದಾಳದ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT