ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಕಾಳಿ: ಒಳಿತು, ಕೆಡುಕಿನ ಮಹಾಸಂಗ್ರಾಮ

ಧಾರಾವಾಹಿ
Last Updated 21 ಜೂನ್ 2018, 20:13 IST
ಅಕ್ಷರ ಗಾತ್ರ

ಬಹಳ ಸೌಮ್ಯ, ಕೋಮಲ ಹಾಗೂ ಹಿಂಸೆಯಿಂದ ದೂರವಿರುವ ನಿರ್ಮಲೆಯೆಂದು ಪಾರ್ವತಿ ದೇವಿಯನ್ನು ಪರಿಗಣಿಸಲಾಗುತ್ತದೆ. ಆದರೆ ಕೈಲಾಸ ಪರ್ವತದ ರಕ್ಷಣೆ ಅಗತ್ಯವಾದಾಗ ಆಕೆ ಮಹಾಕಾಳಿ ಆಗಿ ರೂಪಾಂತರಗೊಳ್ಳುವ ಕಥಾಹಂದರ ಹೊಂದಿರುವ ಧಾರಾವಾಹಿ ‘ಮಹಾಕಾಳಿ’.

ಅತ್ತೆ –ಸೊಸೆ ಜಗಳ, ಗಂಡ–ಹೆಂಡತಿ ವೈಮನಸ್ಸು, ವಿವಾಹೇತರ ಸಂಬಂಧಗಳು ಇಂಥ ವಿಷಯಗಳ ಸುತ್ತಲೇ ಸುತ್ತುವ ಧಾರಾವಾಹಿ ಕಥೆಗಳ ನಡುವೆ ಪ್ರೇಕ್ಷಕರೂ ಹೊಸತನ್ನು ಬಯಸುವುದು ಸಹಜ. ಈ ಕಾರಣಕ್ಕೆ ಸಾಲು ಸಾಲು ಕೌಟುಂಬಿಕ ಧಾರಾವಾಹಿಗಳ ನಡುವೆಯೂಪೌರಾಣಿಕ ಧಾರಾವಾಹಿ ಜನರ ಮೆಚ್ಚುಗೆ ಗಳಿಸುತ್ತಿದೆ. ಇದೇ ಗೆಲುವಿನ ಸೂತ್ರವನ್ನು ಅರಿತು ಮಹಾಕಾಳಿ ನಿರ್ಮಾಣ ಮಾಡಲಾಗಿದೆ.

‘ಮಹಾಕಾಳಿ’ ಮೂಲಕ ವಾರಾಂತ್ಯದಲ್ಲಿ ಮನರಂಜನೆ ನೀಡಲು ಸಿದ್ಧವಾಗಿರುವ ಈ ಧಾರಾವಾಹಿ ನಿರ್ದೇಶನದ ಹೊಣೆ ಹೊತ್ತವರುರಾಘವೇಂದ್ರ ಹೆಗ್ಗಡೆ. ‘ಶನಿ’ ಧಾರಾವಾಹಿಗೂ ಇವರೇ ನಿರ್ದೇಶಕರು.

ಪೌರಾಣಿಕ ವಸ್ತುವಿಷಯದ ಧಾರಾವಾಹಿಗಳು ಉತ್ತರ ಭಾರತದ ಕಿರುತೆರೆಯಲ್ಲಿ ಯಶಸ್ವಿಯಾಗಿದ್ದೂ, ಕನ್ನಡದಲ್ಲೂ ಟ್ರೆಂಡ್‌ ಹುಟ್ಟಿಕೊಳ್ಳಲು ಕಾರಣವಾಗಿದೆ. ಈಗಾಗಲೇ ಹಿಂದಿಯಲ್ಲಿ ಸಾಕಷ್ಟು ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ‘ಮಹಾಕಾಳಿ’ ಧಾರಾವಾಹಿಯ ರಿಮೇಕ್‌ ಈ ಕನ್ನಡದ ಮಹಾಕಾಳಿ.

ಧರ್ಮ, ದೇವರುಗಳ ವಸ್ತುವಿಷಯವನ್ನು ಮುಖ್ಯವಾಗಿ ಇಟ್ಟುಕೊಂಡ ಕಥಾಹಂದರಎಂದಿಗೂ ಕುತೂಹಲ ಮೂಡಿಸುತ್ತದೆ.ಒಂದೇ ರೀತಿಯ ಕಥೆಗಳಿರುವ ಧಾರಾವಾಹಿಗಳನ್ನು ನೋಡಿ ಬೇಸರವಾದ ಜನರಿಗೆ, ಗ್ರಾಫಿಕ್‌, ವಸ್ತ್ರವಿನ್ಯಾಸ, ಬೆಳಕು, ಛಾಯಾಗ್ರಹಣ, ಸಂಭಾಷಣೆ, ಅಭಿನಯ ಹೀಗೆ ಪ್ರತಿಯೊಂದು ವಿಭಾಗದಲ್ಲಿಯೂ ಹೊಸತನದ ಮೂಲಕ ರಸದೌತಣ ನೀಡಲು ಈ ಧಾರಾವಾಹಿ ತಂಡ ತಯಾರಾಗಿದೆ.

ಶಾಂತ ಸ್ವರೂಪಿಣಿಯಾಗಿ ಪಾರ್ವತಿ ದೇವಿಯನ್ನು ಆರಾಧಿಸಲಾಗುತ್ತದೆ. ಆದರೆ ಕೈಲಾಸ ಪರ್ವತದ ರಕ್ಷಣೆ ಅನಿವಾರ್ಯವಾದಾಗ ಆಕೆ ಮಹಾಕಾಳಿ ಆಗಿ ರೂಪಾಂತರಗೊಳ್ಳುತ್ತಾಳೆ. ತನ್ನ ಅಸ್ತಿತ್ವವನ್ನು ಸಾಧಿಸುತ್ತಾಳೆ. ಶಿವನ ಅರ್ಧಾಂಗಿಯಾಗಿ ಗುರುತಿಸಿಕೊಳ್ಳುವ ಪಾರ್ವತಿದೇವಿಯು ತಾನು ಶಿವನ ಭಾಗವಷ್ಟೇ ಅಲ್ಲ. ಸ್ವಯಂ ಶಕ್ತಿರೂಪಿಯೂ ಹೌದು ಎಂದು ಅರಿಯುವ ಅವಳ ಮಾರ್ಗದ ಮೇಲೆ ಆಧಾರಿತವಾಗಿದೆ. ಸೌಮ್ಯತೆ ಸರಿದಾಗ, ಅವಮಾನಕ್ಕೊಳಗಾದಾಗ ಆಕೆ ಮಹಾಕಾಳಿಯ ರೂಪ ತಾಳುತ್ತಾಳೆ. ದುಷ್ಟಸಂಹಾರ, ಶಿಷ್ಟರ ರಕ್ಷಣೆಗೆ ಮುಂದಾಗುತ್ತಾಳೆ. ತನ್ನೊಳಗಿರುವ ಮಹಾಕಾಳಿಯ ಸ್ವರೂಪವನ್ನರಿಯದ ಪಾರ್ವತಿಯ ಜೀವನವನ್ನು ಈ ಧಾರಾವಾಹಿ ಹೇಳುತ್ತದೆ ಎನ್ನುತ್ತಾರೆ ನಿರ್ದೇಶಕರು.

ಹೆಣ್ಣು ತನ್ನ ನಿಜವಾದ ಶಕ್ತಿಯನ್ನು ಅರಿಯಲೇಬೇಕಾದ ಅನಿವಾರ್ಯತೆ ಎದುರಾಗಿರುವ ಇಂದಿನ ಪರಿಸ್ಥಿತಿಯಲ್ಲಿ, ಮಹಾಕಾಳಿ ಅವರಿಗೆಲ್ಲಾ ಶಕ್ತಿಸ್ವರೂಪಿಣಿಯಾಗಿ ನಿಲ್ಲುತ್ತಾಳೆ ಎಂಬುದು ಅವರ ಅಂಬೋಣ.

ಶಿವನ ಪಾತ್ರ ನಿರ್ವಹಿಸುತ್ತಿರುವ ಅರ್ಜುನ್‌ ಈಗಾಗಲೇ ಶನಿ ಧಾರಾವಾಹಿಯಲ್ಲಿ ಶಿವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಂದ್ರ ಮತ್ತು ಬ್ರಹ್ಮ ಪಾತ್ರಧಾರಿ ಕೂಡ ಶನಿ ಧಾರಾವಾಹಿಯಲ್ಲಿ ನಟಿಸಿದ್ದಾರೆ.

ಎರಡೆರಡು ಬಾರಿ ಶಿವನ ಪಾತ್ರ ನಿರ್ವಹಿಸುತ್ತಿರುವುದಕ್ಕೆ ಖುಷಿಯಿಂದಲೇ ಮಾತು ಆರಂಭಿಸಿದ ಅರ್ಜುನ್‌, ‘ರಿಯಾಲಿಟಿ ಶೋ ಮೂಲಕ ಬಣ್ಣದ ಲೋಕ ಪ್ರವೇಶಿಸಿದವನು ನಾನು. ಇದು ನನ್ನ ಮೂರನೇ ಧಾರಾವಾಹಿ. ವೃತ್ತಿ ಜೀವನದ ಪ್ರಾರಂಭದಲ್ಲಿಯೇ ಒಳ್ಳೆಯ ಪಾತ್ರ ಸಿಕ್ಕಿರುವುದಕ್ಕೆ ಹೆಮ್ಮೆ ಇದೆ. ಶನಿಯಲ್ಲಿ ಮಾಡುತ್ತಿರುವ ಶಿವನಿಗೂ ಇದರಲ್ಲಿನ ಶಿವನ ಪಾತ್ರಕ್ಕೂ ಸಾಕಷ್ಟು ಬದಲಾವಣೆ ಇದೆ. ಸದಾ ಪಾರ್ವತಿಗೆ ಉತ್ತೇಜನ ನೀಡುವ ಶಾಂತ ಸ್ವಭಾವದಲ್ಲಿ ಕಾಣಿಸಿಕೊಂಡಿದ್ದೇನೆ’ ಎನ್ನುತ್ತಾರೆ.

‘ಪೌರಾಣಿಕ ಧಾರಾವಾಹಿಗಳಲ್ಲಿ ನಟಿಸುವುದು ಕಷ್ಟ. ನಟನೆಯ ಜೊತೆಗೆ ಮೈಮೇಲಿರುವ ಹಲವು ವಸ್ತ್ರಾಭರಣಗಳನ್ನು ನಿಭಾಯಿಸಬೇಕು.ನಮ್ಮದಲ್ಲದ ಭಾರವನ್ನು ಹೊತ್ತು ಹದಿಮೂರು ಗಂಟೆ ನಟಿಸುವುದು ಸವಾಲು. ಒಮ್ಮೆ ಕಿರೀಟ ಅಂಟಿಸಿದರೆ ಚಿತ್ರೀಕರಣ ಮುಗಿಯುವವರೆಗೂ ತೆಗೆಯುವಂತಿಲ್ಲ. ಇಷ್ಟೆಲ್ಲ ಕಷ್ಟಗಳ ನಡುವೆಯೂ ಖುಷಿ ಇರುತ್ತದೆ’ ಎಂದು ಪಾತ್ರ ನಿರ್ವಹಣೆಯ ಖುಷಿ ಹಂಚಿಕೊಳ್ಳುತ್ತಾರೆ.

ಪಾರ್ವತಿ ಪಾತ್ರದ ಮೂಲಕ ಸೌಮ್ಯ ಮತ್ತು ಕಾಳಿ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ ಕಾವ್ಯ. ಮೂಲತಃ ತುಮಕೂರಿನವರಾದ ಇವರಿಗೆ ಈ ಪಾತ್ರ ವೃತ್ತಿ ಜೀವನದಲ್ಲಿ ಹೆಚ್ಚಿನ ನಿರೀಕ್ಷೆಯನ್ನೇ ಮೂಡಿಸಿದೆ.

‘ಈಮೊದಲು ನೀಲಿ ಧಾರಾವಾಹಿಯಲ್ಲಿ ಚಿಕ್ಕ ಪಾತ್ರ ನಟಿಸಿದ್ದೆ. ಚೆನ್ನಾಗಿ ನೃತ್ಯ ಮಾಡುತ್ತಿದ್ದ ಕಾರಣಕ್ಕೆ ಅಮ್ಮ ನಟನೆಯ ಹುಚ್ಚು ಹಿಡಿಸಿದರು. ಸಾಕಷ್ಟು ಆಡಿಷನ್‌ಗಳನ್ನು ನೀಡಿದ್ದೆ. ಮಹಾಕಾಳಿ ಧಾರವಾಹಿಯ ಮುಖ್ಯ ಪಾತ್ರಕ್ಕೆ ಆಯ್ಕೆಯಾದೆ.ಅದ್ದೂರಿ ಸೆಟ್‌, ಹೆಚ್ಚು ಜನರು ಇರುವುದರಿಂದ ಸಿನಿಮಾ ಮಾಡಿದ ಅನುಭವ ಆಗುತ್ತಿದೆ. ಚಿತ್ರೀಕರಣದ ವೇಳೆ ಆಡಂಭರದ ಆಭರಣ, ಮೇಕಪ್‌ ಮಾಡುವುದರಿಂದ ಪಾತ್ರದ ಪರಕಾಯ ಪ್ರವೇಶ ಸುಲಭವಾಗುತ್ತದೆ’ ಎನ್ನುತ್ತಾರೆ.

ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಮಹಾಕಾಳಿ ಪ್ರಸಾರವಾಗಲಿದೆ.ಮಹಾಕಾಳಿ ಧಾರಾವಾಹಿ ಚಿತ್ರೀಕರಣ ಗುಜರಾತಿನ ಉಂಬರ್ಗಾವ್‌ನಲ್ಲಿ ನಡೆಯುತ್ತಿದೆ. ಕಲಾವಿದರೆಲ್ಲರೂ ಸದ್ಯ ಅಲ್ಲಿಯೇ ತಂಗಿದ್ದಾರೆ. ಈ ಧಾರಾವಾಹಿಯ ಚಿತ್ರೀಕರಣಕ್ಕೆ ಎ‌ಷ್ಟು ಸಮಯ ಬೇಕಾಗುತ್ತದೆಯೋ, ಅದರಷ್ಟೇ ಸಮಯ ಗ್ರಾಫಿಕ್ಸ್‌ ಮತ್ತು ವಿಎಫ್‌ ಎಕ್ಸ್‌ ಕೆಲಸಕ್ಕೆ ಮೀಸಲಿಡಲಾಗಿದೆ.

ಧಾರಾವಾಹಿಯ ಕೆಲವು ಸಂಚಿಕೆಗಳು ಈಗಾಗಲೇ ಪ್ರಸಾರವಾಗಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ಮತ್ತು ವಿಮರ್ಶೆ ವ್ಯಕ್ತವಾಗಿದೆ. ಕಿರುತೆರೆಯಲ್ಲಿಯೇ ನವೀನ ಪ್ರಯೋಗ, ದುಬಾರಿ ಸೆಟ್‌, ಭಕ್ತಿ ಭಾವ ಮೂಡಿಸುತ್ತದೆ ಎಂದು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು, ಪೌರಾಣಿಕ ಕಥಾ ಹಂದರದ ಧಾರಾವಾಹಿಯಲ್ಲಿ ಶಿವ, ಪಾರ್ವತಿಯರ ನಡುವೆ ಆಧುನಿಕ ರೊಮ್ಯಾಂಟಿಕ್‌ ಗೀತೆಗಳನ್ನು ಹಾಕಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT