ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ ಹೆಂಡ್ತಿ ಗೀತಾರ ಮಾತು

ನನ್ ಹೆಂಡ್ತಿ ಎಂಬಿಬಿಎಸ್‌
Last Updated 14 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಜೀವನ ಅಂದ್ರೆ ಎಂಜಾಯ್‌ಮೆಂಟ್. ಸುತ್ತಾಡಲು ಒಂದು ಬೈಕ್, ಹಿಂದೆ ಕೂರಲು ಒಬ್ಬಳು ವೈಫ್... ಇಷ್ಟಿದ್ದರೆ ಸಾಕು ಎನ್ನುವ 9ನೇ ತರಗತಿ ಓದಿರುವ ನಾಯಕ ಸಂಜು, ಲಂಡನ್‌ನಲ್ಲಿ ಎಂಬಿಬಿಎಸ್ ಓದಿ ತಮ್ಮ ಊರಿನ ಜನರ ಸೇವೆ ಮಾಡಬೇಕು ಎಂದು ಕನಸು ಕಾಣುವ ನಾಯಕಿ ಗೀತಾ… ಹೀಗೆ ವಿಭಿನ್ನ ಕನಸುಗಳನ್ನು ಹೊಂದಿರುವ ನಾಯಕ ನಾಯಕಿಯರು ಮದುವೆ ಎಂಬ ಬಂಧನದಲ್ಲಿ ಬಂದಿಗಳಾಗುವ ಕತೆಯೇ ‘ನನ್ ಹೆಂಡ್ತಿ ಎಂಬಿಬಿಎಸ್’.

ಕಿರುತೆರೆಯಲ್ಲಿ ಹೆಸರು ಮಾಡಿರುವ ರವಿ ಗರಣಿ ‘ನನ್‌ ಹೆಂಡ್ತಿ ಎಂಬಿಬಿಎಸ್‌’ ಧಾರಾವಾಹಿಯ ನಿರ್ಮಾಪಕರು. ನಾಗರಾಜ್ ಉಪ್ಪುಂದ ನಿರ್ದೇಶಿಸುತ್ತಿರುವ ಈ ಧಾರಾವಾಹಿ ಫೆ.11 ರಿಂದ ರಾತ್ರಿ 9 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

ಎಂಬಿಬಿಎಸ್‌ ಓದಿರುವ, ಆಧುನಿಕ ಮನೋಭಾವದ ಯುವತಿ ಗೀತಾ, ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಬೇಕು ಎಂಬ ಕನಸು ಕಾಣುತ್ತಿರುವಾಗ ‘ಮದುವೆ’ ಎಂಬ ಮೂರಕ್ಷರದ ನಂಟು ಆಕೆಯನ್ನು ಬೆಸೆಯುತ್ತದೆ. ತಾಳಿಯ ಗಂಟು ಆಕೆಯ ಬಾಳಿನಲ್ಲಿ ಕೆಲವು ತಿರುವುಗಳನ್ನು ತರುತ್ತದೆ. ಮಧ್ಯಮ ವರ್ಗದ ಯುವತಿಯ ಕನಸುಗಳು, ಅಕಾಂಕ್ಷೆಗಳ ಪ್ರತಿನಿಧಿಯಾಗಿದೆ ಗೀತಾ ಎಂಬ ಪಾತ್ರ.ಈ ಪಾತ್ರಕ್ಕೆ ಬಣ್ಣ ಹಚ್ಚಿದ್ದು ದಿವ್ಯಾ ರಾವ್‌.

ಬೆಂಗಳೂರು ಮೂಲದ ದಿವ್ಯಾ ಶಾಲಾದಿನಗಳಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಮುಂದು. ಬಾಲ್ಯದಿಂದಲೂ ನಟನೆಯ ಕಡೆಗೆ ಒಲವು ಹೊಂದಿದ್ದ ಇವರು ಮಾಡೆಲಿಂಗ್ ಕ್ಷೇತ್ರದಲ್ಲೂ ಮಿಂಚಿದವರು. ‘ಮಿಸ್ ಇಂಡಿಯಾ ಸೌತ್– 2017’ ಆಗಿರುವ ಇವರು, ಎರಡು ವರ್ಷಗಳ ಕಾಲ ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕಿದವರು.

ಕಿರುತೆರೆ ಪ್ರವೇಶಿಸುವುದಕ್ಕೂ ಮೊದಲು ದಿವ್ಯಾ ಸಿನಿಮಾಗಳಲ್ಲಿ ತಮ್ಮ ಅಭಿನಯದ ಛಾಪು ಮೂಡಿಸಿದ್ದರು. ಈಕೆ ಮೊದಲು ಬಣ್ಣ ಹಚ್ಚಿದ್ದು ಕನ್ನಡದ ‘#9 ಹಿಲ್ಟ್‌ನ್‌ ಹೌಸ್’ ಎಂಬ ಸಿನಿಮಾಕ್ಕೆ. ನಂತರ ತೆಲುಗಿನ ‘ಡಿಗ್ರಿ ಕಾಲೇಜ್‘ ಸಿನಿಮಾದಲ್ಲಿ ಅಭಿನಯಿಸಿದರು. ಈ ಸಿನಿಮಾ ತೆರೆ ಕಾಣಲು ಸಿದ್ಧವಾಗಿದೆ.ಸದ್ಯ ಕನ್ನಡದ ‘ಥರ್ಡ್ ಕ್ಲಾಸ್’ ಸಿನಿಮಾಕ್ಕೂ ಬಣ್ಣ ಹಚ್ಚಿದ್ದಾರೆ.

ಸಿನಿಮಾ ಹಾಗೂ ಧಾರಾವಾಹಿಗಳ ಅನುಭವವನ್ನು ಹೋಲಿಸಿ ನೋಡಿದರೆ ‘ಸಿನಿಮಾನೇ ಚೆನ್ನಾಗಿತ್ತು’ ಎನ್ನುವ ಇವರಿಗೆ ಕಿರುತೆರೆಯ ಮೇಲೂ ಒಲವಿದೆ. ‘ಕಿರುತೆರೆ ಎನ್ನುವುದು ಶಾಲೆಯಿದ್ದಂತೆ’ ಎನ್ನುವ ಇವರು, ಇಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ಇದ್ದರೂ ಎಂಜಾಯ್ ಮಾಡುತ್ತೇನೆ. ಧಾರಾವಾಹಿಯ ತಂಡ ನಮಗೊಂದು ಕುಟುಂಬವನ್ನು ನೀಡುತ್ತದೆ’ ಎನ್ನುತ್ತಾರೆ.

ಧಾರಾವಾಹಿ ನಿರ್ದೇಶಕರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುವ ಈ ನಟಿ, ‘ನಿರ್ದೇಶಕರು ನಮಗೆ ತುಂಬಾ ಸಹಕಾರ ನೀಡುತ್ತಾರೆ. ದೊಡ್ಡ ದೊಡ್ಡ ಡೈಲಾಗ್‌ಗಳನ್ನು ಹೇಳಲು ತಡವರಿಸಿದಾಗ ಎಷ್ಟು ಟೇಕ್‌ಗಳನ್ನು ತೆಗೆದುಕೊಂಡರೂ ಬೈಯುವುದಿಲ್ಲ. ನಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕಲು ಅವರೂ ಶ್ರಮ ಹಾಕುತ್ತಾರೆ’ ಎಂದು ಖುಷಿ ವ್ಯಕ್ತಪಡಿಸುತ್ತಾರೆ. ‘ನಟನಾ ಕ್ಷೇತ್ರಕ್ಕೆ ಬಾರದಿದ್ದಲ್ಲಿ ನಾನು ಪೈಲೆಟ್ ಆಗಿರುತ್ತಿದ್ದೆ’ ಎನ್ನುತ್ತಾರೆ ದಿವ್ಯಾ. ಆದರೆ ಅವರ ತಂದೆಗೆ, ಮಗಳು ಐಎಎಸ್ ಮಾಡಬೇಕು ಅಥವಾ ಪೊಲೀಸ್ ಅಧಿಕಾರಿ ಆಗಬೇಕೆನ್ನುವ ಕನಸಿತ್ತಂತೆ.

ಡಯಟ್, ಫಿಟ್‌ನೆಸ್‌ ಮುಂತಾದ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಇವರು, ಮೊದಲು ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿದ್ದರು. ಆದರೆ ಈಗ ಶೂಟಿಂಗ್‌ನ ಕಾರಣಕ್ಕೆ ಹೆಚ್ಚು ವರ್ಕೌಟ್ ಮಾಡುತ್ತಿಲ್ಲವಂತೆ. ‘ನಾನು ತಿಂಡಿಪೋತಿ. ತಿನ್ನುವುದನ್ನು ಕಂಟ್ರೋಲ್ ಮಾಡುವುದಿಲ್ಲ. ಬಾಯಿಗೆ ರುಚಿಸಿದ್ದನ್ನು ತಿನ್ನುತ್ತೇನೆ. ನಾನು ಎಷ್ಟೇ ತಿಂದರೂ ನನ್ನ ದೇಹಸಿರಿ ಹೀಗೇ ಇರುತ್ತದೆ. ಅದು ನನಗೆ ದೇವರು ನೀಡಿದ ವರ’ ಎಂದು ಖುಷಿಯಿಂದ ಹೇಳುತ್ತಾರೆ. ಧಾರಾವಾಹಿಗಳಿಗಿಂತ ಹೆಚ್ಚಾಗಿ ಸಿನಿಮಾಗಳಲ್ಲೇ ಕಾಣಿಸಿಕೊಳ್ಳಬೇಕು ಎಂಬುದು ದಿವ್ಯಾ ಅವರ ಇಚ್ಛೆ. ಎಲ್ಲಾ ರೀತಿಯ ಪಾತ್ರಗಳಿಗೂ ತಮ್ಮನ್ನು ಒಗ್ಗಿಸಿಕೊಳ್ಳಬೇಕು ಎನ್ನುವ ಬಯಕೆಯೂ ಇವರಿಗಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT