ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀನ್ಸ್‌, ಜಾಕೆಟ್‌ ತೊಟ್ಟ ‘ಕುಂಬಾರಕಿ’

ಗೆಳತಿಯರಿಬ್ಬರ ಹೊಸ ಸಾಹಸ... ‘ಪ್ರಾಜೆಕ್ಟ್‌ ಷರೀಫಾ’
Last Updated 16 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಷರೀಫರ ತತ್ವ ಪದಗಳು ಹಿರಿಯ ಗಾಯಕ ಸಿ. ಅಶ್ವತ್ಥ್‌ ಕಂಠಸಿರಿಯಲ್ಲಿ ಪ್ರಸಿದ್ಧಿ ಪಡೆದುಕೊಂಡಿವೆ. ಜನಪದ ಶೈಲಿಯ ಈ ಹಾಡುಗಳಿಗೆ ಅಶ್ವತ್ಥ್‌ ಜೀವ ತುಂಬಿದ್ದರು. ಆ ತತ್ವ ಪದಗಳನ್ನು ಪಾಪ್‌, ಜಾಸ್‌, ಸೂಫಿ ಶೈಲಿಯಲ್ಲಿ ಹಾಡಿ ದೃಶ್ಯಕ್ಕೆ ಅಳವಡಿಸಿದರೆ ಯುವ ಮನಸ್ಸುಗಳೂ ಅದರತ್ತ ಸೆಳೆಯುತ್ತವೆ. ಅಷ್ಟೇ ಅಲ್ಲ ಷರೀಫಜ್ಜರ ತತ್ವಗಳು ಇಂದಿನ ಪೀಳಿಗೆಗೆ ಹೀಗೆ ಪರಿಚಯಿಸಿದರೆ ಅವುಗಳ ಮೌಲ್ಯ ಅವರಿಗೂ ತಲುಪುತ್ತದೆ...

ಸುಮಧುರ, ಮೆಲುದನಿಯ ಸುಶ್ರಾವ್ಯ ಗಾಯನಕ್ಕೆಹೆಸರುವಾಸಿಯಾದ ಅರ್ಚನಾ ಉಡುಪ ಇಂತಹ ‘ಪ್ರಾಜೆಕ್ಟ್‌ ಷರೀಫಾ’ಗೆ ಕೈ ಹಾಕಿದ್ದಾರೆ. ಷರೀಫರ ತತ್ವಪದಗಳನ್ನು ವಿಡಿಯೊ ಮೂಲಕ ಜನರಿಗೆ ಮುಟ್ಟಿಸುವ ಪ್ರಯತ್ನ ಇದು.

ಇಲ್ಲಿ ಎಂದಿನಂತೆ ಅರ್ಚನಾ ಚೂಡಿ, ಸೀರೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಧ್ವನಿ ಮತ್ತು ವೇಷಭೂಷಣಎಲ್ಲವೂ ಬದಲಾಗಿದೆ. ಜೀನ್ಸ್‌, ಜಾಕೆಟ್, ಗಾಗಲ್ಸ್‌ನೊಂದಿಗೆ ಜೀಪ್‌ ಡ್ರೈವ್‌ ಮಾಡಿಕೊಂಡು ‘ಕುಂಬಾರಕಿ...’ಯ ಬಗ್ಗೆ ಹಾಡುತ್ತಾರೆ. ಇದು ಜಾನಪದದ ಜೊತೆಗೆ ಸೂಫಿ ಶೈಲಿಯಲ್ಲಿದೆ. ಅರ್ಚನಾ ಅವರನ್ನು ಈವರೆಗೆ ನೋಡದ ಪೋಷಾಕು ಹಾಗೂ ಕೇಳದ ಧ್ವನಿಯಲ್ಲಿ ಅವರನ್ನು ಇಲ್ಲಿ ಕಾಣಬಹುದು, ಆಲಿಸಬಹುದು.

ಷರೀಫರ ತತ್ವಪದಗಳನ್ನು ಯುವ ಜನಾಂಗಕ್ಕೆ ಅದರಲ್ಲೂ ಪಾಪ್‌, ವೆಸ್ಟರ್ನ್‌ ಎಂದು ಸೆಳೆತ ಹೊಂದಿರುವ ಮನಸ್ಸುಗಳಿಗೆ ಆಧುನಿಕ ಶೈಲಿಯಲ್ಲೇ ಅದನ್ನು ನೀಡುವ ಪ್ರಯತ್ನವೇ ‘ಪ್ರಾಜೆಕ್ಟ್‌ ಷರೀಫಾ’.

ಅಶ್ವತ್ಥ್‌, ರಘು ದೀಕ್ಷಿತ್‌ ಕಂಠದಲ್ಲಿ ಷರೀಫರ ತತ್ವಪದಗಳನ್ನು ಕೇಳಿರುವ ಸಂಗೀತಾಭಿಮಾನಿಗಳಿಗೆ ಅರ್ಚನಾ ಅವರ ಧ್ವನಿಯಲ್ಲಿ ಕೇಳುವ ಜೊತೆಗೆ ದೃಶ್ಯವನ್ನೂ ಅದಕ್ಕೆ ಕಟ್ಟಿಕೊಡುವ ಪ್ರಯತ್ನ ಇದು.

ಗೆಳತಿಯಿಂದ ಕನಸು ನನಸಾಯ್ತು
ಅಂದಹಾಗೆ ‘ಪ್ರಾಜೆಕ್ಟ್‌ ಷರೀಫಾ’ 2012ರಿಂದ ಅರ್ಚನಾರ ಮನಸ್ಸಿನಲ್ಲಿ ಪರಿಕಲ್ಪನೆಯಲ್ಲಿರುವ ಕೂಸು. ಆಗ ಷರೀಫರ 12 ತತ್ವಪದಗಳನ್ನು ಪಾಪ್‌, ಜಾಜ್‌, ಸೂಫಿ ಶೈಲಿಯ ನೇರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಅಂದಿನ ಮಟ್ಟಿಗೆ ಅದು ಹೊಸತನದ್ದು. ನಂತರ, ‘ಇದೇ ಬ್ರಹ್ಮಜ್ಞಾನ..’ ಹಾಡನ್ನು ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಹಾಡಿದರು. ಒಟ್ಟು7 ಹಾಡುಗಳನ್ನು ರೆಕಾರ್ಡಿಂಗ್‌ ಮಾಡಿ ಸಿ.ಡಿ ಆಲ್ಬಂ ಮಾಡಿ ಬಿಡುಗಡೆ ಮಾಡುವ ಮನಸ್ಸೂ ಇತ್ತು. ಆದರೆ ಅದು ಕೈಗೂಡಲಿಲ್ಲ. ಸಿ.ಡಿಗೆ ಮಾರುಕಟ್ಟೆಇಲ್ಲದಂತಾಯಿತು. ಅದೆಲ್ಲ ಹಾಗೇ ಉಳಿದಿತ್ತು.

ವರ್ಷಗಳ ನಂತರ ಒಂದು ಪಯಣದಲ್ಲಿ ಈ ಹಾಡುಗಳನ್ನು ಸ್ನೇಹಿತೆ ರೆಮೊಗೆ ಕೇಳಿಸಿದಾಗ, ಆಕೆ ಹೊಸದೊಂದು ಯೋಜನೆಗೆ ನಾಂದಿ ಹಾಕಿದರು. ‘ಇದನ್ನೇಕೆ ವಿಡಿಯೊ ಮಾಡಿ, ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಮಾಡಬಾರದು’ ಎಂದು ರೆಮೊ ಹೇಳಿದರು. ‘ಹಾಗಾದರೆ ನೀನೇ ಅದನ್ನು ಮಾಡು’ ಎಂದರು ಅರ್ಚನಾ. ಈ ಇಬ್ಬರು ಗೆಳತಿಯರ ಸಾಹಸವೇ ‘ಪ್ರಾಜೆಕ್ಟ್‌ ಷರೀಫಾ’. ಗಾಯನ, ಸಂಗೀತ ಸಂಯೋಜನೆ, ನಿರ್ಮಾಣ ಅರ್ಚನಾ ಅವರದ್ದು. ದೃಶ್ಯ ನಿರ್ದೇಶನ ರೆಮೊ ಅವರದ್ದು.ಹೀಗೆ ಕುಂಬಾರಕಿ... ಈಗ ಸಿದ್ಧಗೊಂಡಿದ್ದಾಳೆ.

ಅರ್ಚನಾ ಅವರ ಯೂಟ್ಯೂಬ್‌ ಚಾನೆಲ್‌ನಲ್ಲಿ ಈವರೆಗೆ ಅಲ್ಲಿ ಸ್ನೇಹಿತರು, ಇತರರು ತೆಗೆದ ವಿಡಿಯೊಗಳು ಅಪ್‌ಲೋಡ್‌ ಆಗಿವೆ. ಆದರೆ,ಪ್ರಥಮ ಬಾರಿಗೆ ಅವರದ್ದೇ ವಿಡಿಯೊ ‘ಪ್ರಾಜೆಕ್ಟ್‌ ಷರೀಫಾ’ ಬಿಡುಗಡೆ ಆಗುತ್ತಿದೆ. ಪ್ರಾರಂಭದಲ್ಲಿ ಒಂದು ಹಾಡು ಮಾತ್ರ ಇದೆ. ಇನ್ನು ಕೆಲವು ಹಾಡುಗಳನ್ನು ಚಿತ್ರೀಕರಿಸಿ ಬಿಡುಗಡೆ ಮಾಡುವ ಉದ್ದೇಶವೂ ಇದೆ. ಅಷ್ಟೇ ಅಲ್ಲ, ಪ್ರತಿ ಆರು ತಿಂಗಳಿಗೊಂಡು ವಿಡಿಯೊ ಆಲ್ಬಂ ಬಿಡುಗಡೆ ಮಾಡುವ ಆಲೋಚನೆಯೂ ಅರ್ಚನಾರಿಗಿದೆ. ಜನರ ಪ್ರತಿಕ್ರಿಯೆ ನೋಡಿ ನಂತರದ ಯೋಜನೆಗಳು ಕಾರ್ಯಗತವಾಗಲಿವೆ. ಇನ್ನು ‘ಪ್ರಾಜೆಕ್ಟ್‌ ಷರೀಫಾ’ ಆಡಿಯೊವೂ ಈ ಚಾನೆಲ್‌ನಲ್ಲೇ ಲಭ್ಯವಾಗುವಂತೆ ಮಾಡುವ ಹಾಗೂ ವಿಡಿಯೊ, ಆಡಿಯೊವನ್ನು ಎಲ್ಲ ಪ್ರಮುಖ ತಾಣಗಳಲ್ಲಿ ಗುವಂತೆ ಮಾಡುವ ಯೋಜನೆಯೂ ಇದೆ.

ಷರೀಫರೇ ಏಕೆ?
‘ಅಶ್ವತ್ಥ್‌ ಅವರು ಹಾಡಿದ್ದ ಷರೀಫರ ಪದಗಳು ನನ್ನ ಗಾಯನದ ಆರಂಭದಿಂದಲೇ ಸಾಕಷ್ಟು ಪರಿಣಾಮ ಬೀರಿದ್ದವು. ಅವುಗಳನ್ನು ಹಾಡಿಕೊಂಡೇ ಬೆಳೆದಿದ್ದೆ. ಬದುಕಿನ ಗಾಢವಾದ ಸತ್ಯವನ್ನು, ತತ್ವವನ್ನು ಸಾಮಾನ್ಯ ಪದಗಳನ್ನು ವಿವರಿಸುವ ಗೀತೆಗಳು ಇಂದಿನ ಜನಾಂಗಕ್ಕೆ ತಲುಪಿಸುವುದು ಅತ್ಯಗತ್ಯ. ಹೀಗಾಗಿ ಷರೀಫರನ್ನು ಗೀತೆಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ’ ಎನ್ನುತ್ತಾರೆ ಅರ್ಚನಾ.

‘ಮಹಿಳೆಯರು, ಸ್ನೇಹಿತೆಯರು ಒಂದಾಗಿ ಯಾವುದೇ ಕೆಲಸ ಮಾಡುವುದಿಲ್ಲ. ಅವರಲ್ಲಿ ಯಾವಾಗಲೂ ಒಮ್ಮತ ಇರುವುದಿಲ್ಲ ಎಂಬ ಮಾತಿದೆ. ಅದರಲ್ಲೂ ಒಂದೇ ವೃತ್ತಿಯಲ್ಲಿರುವವರು ಜೊತೆಗೂಡಲು ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ, ನಾನು ಮತ್ತು ರೆಮೊ ಈ ಯೋಜನೆ ಮೂಲಕ ಇದನ್ನು ಸುಳ್ಳು ಮಾಡಲು ಹೊರಟಿದ್ದೇವೆ. ಮಹಿಳೆಯರು ಒಂದಾದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದನ್ನು ತೋರಿಸಿದ್ದೇವೆ’ ಎಂಬುದು ಅರ್ಚನಾರ ವಿಶ್ವಾಸ ಮಾತು.

ಹೊಸ ಕನಸು
‘ಅರ್ಚನಾ ಹಾಡುಗಳನ್ನು ಕೇಳಿಸಿದಾಗ ಅದನ್ನು ವಿಡಿಯೊ ಮಾಡೋಣ ಎನಿಸಿತು. ಮಾತಿಗಾಗಿ ಹೇಳಿದೆ. ಆದರೆ ಅರ್ಚನಾ ಬಿಡಲಿಲ್ಲ. ನೀನೇ ಮಾಡು ಎಂದಳು. ಹೀಗಾಗಿ ಪ್ರಥಮ ಬಾರಿಗೆ ಕ್ಯಾಮೆರಾ ಹಿಂದೆ ನಿಂತು ನಿರ್ದೇಶನ ಮಾಡಿದ್ದೇನೆ. ವಿಷುವಲ್‌ ಡೈರಕ್ಟರ್‌ ಆಗಿದ್ದೇನೆ. ಬಾಲ್ಯದ ಗೆಳತಿಯೊಂದಿಗೆ ಹೊಸ ಸಾಹಸ ಮಾಡುತ್ತಿರುವುದಕ್ಕೆ ಅತ್ಯಂತ ಖುಷಿಯಾಗಿದೆ. ಕಮರ್ಷಿಯಲ್‌ ಉದ್ದೇಶದಿಂದ ಇದನ್ನು ಮಾಡಿಲ್ಲ. ಯುವ ಜನಾಂಗದ ಅಭಿರುಚಿಗೆ ತಕ್ಕಂತೆ ಈ ವಿಡಿಯೊ ರೂಪಿಸಿ, ಆ ತತ್ವಪದಗಳನ್ನು ಅವರಿಗೆ ತಲುಪಿಸುವ ಕೆಲಸ ಇದಾಗಿದೆ’ ಎಂಬುದು ರೆಮೊ ನೀಡುವ ವಿವರಣೆ.

‘ಪ್ರಾಜೆಕ್ಟ್‌ ಷರೀಫಾ’ದಲ್ಲಿರುವ ಹಾಡುಗಳು:ಕುಂಬಾರಕಿ ಈಕಿ ಕುಂಬಾರಕಿ,ಇದೇ ಬ್ರಹ್ಮಜ್ಞಾನ ನೋಡಿಕೋ,ಹೋಗುತಿಹುದು ಕಾಯ ವ್ಯರ್ಥ, ಗುಡುಗುಡಿಯ ಸೇದಿ ನೋಡೋ,ಬೀಳಬಾರದೋ ಕೆಸರೊಳು ಜಾರಿ,ತೂಗುತಿದೆ ನಿಜ.

ಯೋಧರಿಗಾಗಿ ಏನಾದ್ರೂ ಮಾಡಬೇಕಿದೆ..
‘ಕೆಲವರ್ಷಗಳ ಹಿಂದೆ ಕಾರ್ಗಿಲ್‌ ಯೋಧರ ಸ್ಮರಣೆಗಾಗಿ ಒಂದು ಕಾರ್ಯಕ್ರಮದಲ್ಲಿ ಹಾಡು ಹೇಳಲು ಹೋಗಿದ್ದೆ. ಹೇ ಮೇರೆ ವತನ್‌ ಕೆ ಲೊಗೊ... ಹಾಡನ್ನು ಪೂರ್ಣಗೊಳಿಸಲು ಸಾಧ್ಯವಾಗಲೇ ಇಲ್ಲ. ಅರ್ಧಕ್ಕೆ ಗಂಟಲು ಕಟ್ಟಿತು, ಕಣ್ಣೀರು ಸುರಿಯಿತು. ಯೋಧರ ಮಕ್ಕಳು, ಪತ್ನಿಯರು, ತಂದೆ–ತಾಯಿಗಳನ್ನು ಕಂಡು ಮನಸ್ಸು ಭಾರಗೊಂಡಿತು. ಅಂದಿನಿಂದ ಇಂದಿನವರೆಗೂ ಯೋಧರಿಗಾಗಿ ಏನಾದರೂ ಮಾಡಬೇಕು ಎಂಬ ಅಭಿಲಾಷೆ ನನ್ನಲ್ಲಿ ಇದೆ. ಆದರೆ ಸೂಕ್ತ ವೇದಿಕೆ ಕೂಡಿಬಂದಿಲ್ಲ’ ಎನ್ನುತ್ತಾರೆ ಅರ್ಚನಾ.

‘ನನ್ನದೇ ಆದ ‘ಗಾಂಧಾರ’ ಎಂಬ ಸಂಸ್ಥೆ ಇದೆ. ಈ ಮೂಲಕ ಸಮಾಜಕ್ಕಾಗಿ ಕಾರ್ಯಕ್ರಮಗಳನ್ನು ನೀಡುತ್ತಿದ್ದೇನೆ. ಯೋಧರಿಗಾಗಿಯೂ ಆಗಾಗ್ಗೆ ನಿಧಿ ಸಂಗ್ರಹಿಸುವ ಸಂಗೀತ ಕಾರ್ಯಕ್ರಮ ಮಾಡಿ, ಯೋಧರ ಕುಟುಂಬಕ್ಕೇ ನೇರವಾಗಿ ನೆರವನ್ನು ನೀಡಬೇಕೆಂಬ ಆಸೆ ಇದೆ. ಅದಕ್ಕಾಗಿ ನನ್ನೊಂದಿಗೆ ಕೈಜೋಡಿಸುವವರಿಗಾಗಿ ನಾನು ಕಾಯುತ್ತಿದ್ದೇನೆ’ ಎಂದುಅವರು ವಿವರಿಸುತ್ತಾರೆ.

ಡಿಸೆಂಬರ್‌ 17ರಿಂದ ಯೂಟ್ಯೂಬ್‌ ಚಾನೆಲ್‌ನಲ್ಲಿ ವಿಡಿಯೊ ಲಭ್ಯ.

ರೆಮೊ ಮತ್ತು ಅರ್ಚನಾ ಉಡುಪ
ರೆಮೊ ಮತ್ತು ಅರ್ಚನಾ ಉಡುಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT