ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾ ಎರಡನೇ ಇನ್ನಿಂಗ್ಸ್ - ಗಟ್ಟಿಮೇಳ

Last Updated 7 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ನಟನೆ ಎಂದರೆ ಸದಾ ಹರಿಯುವ ನೀರಿನಂತೆ. ಅದು ನಿರಂತರವಾದುದು. ನಟನೆ ನಮ್ಮೊಳಗಿನಿಂದ ಬರುವಂಥದ್ದು. ಕಲಾವಿದರು ಮೈಯೆಲ್ಲಾ ಕಣ್ಣು, ಕಿವಿಯಾಗಿರಬೇಕು. ಇಲ್ಲವಾದರೆ ಭಿನ್ನ ಪಾತ್ರಗಳಿಗೆ ಜೀವ ತುಂಬಿಸುವುದು ಕಷ್ಟ. ಒಂದೇ ರೀತಿಯ ಪಾತ್ರಗಳಿಗೆ ಅಂಟಿಕೊಂಡು ಕೂರುವುದು ನನ್ನಿಂದ ಸಾಧ್ಯವಿಲ್ಲ. ಎಲ್ಲಾ ರೀತಿಯ ಪಾತ್ರಗಳಲ್ಲೂ ನಮ್ಮನ್ನು ತೊಡಗಿಸಿಕೊಂಡರೆ ನಟರ ಜೀವನ ಸಾರ್ಥಕ ಎನ್ನುವುದು ಹಿರಿಯ ನಟ ನರಸಿಂಹರಾಜು ಮಗಳು ಸುಧಾ ನರಸಿಂಹರಾಜು ಅವರ ಅನುಭವದ ಮಾತು.

ಸುಮಾರು 10 ವರ್ಷಗಳ ಅಂತರದ ನಂತರ ಅವರು ಮತ್ತೆ ಕಿರುತೆರೆಗೆ ಬಂದಿದ್ದಾರೆ. ಅವರು ಈಗ ‘ಜೀ ಕನ್ನಡ’ ವಾಹಿನಿಯ ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ಮಾರ್ಚ್ 11ರಿಂದ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

‘ಹತ್ತು ವರ್ಷಗಳ ನಂತರ ಮತ್ತೆ ನಟನೆಗೆ ಮರಳಿರುವ ನನಗೆ ಆರಂಭದಲ್ಲಿ ಭಯವಿತ್ತು. ಕಾರಣ: ಅಂದಿನ ಟ್ರೆಂಡ್ ಬೇರೆ, ಇಂದಿನ ಟ್ರೆಂಡ್ ಬೇರೆ. ಆಗೆಲ್ಲಾ ಕೊಂಚ ನಿಧಾನಗತಿ ಇತ್ತು. ಆದರೆ ಈಗ ಹಾಗಿಲ್ಲ. ಆದರೂ ನಮ್ಮ ಧಾರಾವಾಹಿ ತಂಡ ನನ್ನನ್ನು 10 ವರ್ಷಗಳ ನಂತರ ನಟನೆಗೆ ಬಂದವಳು ಎಂಬ ಭಾವನೆಯೂ ಬಾರದಂತೆ ನೋಡಿಕೊಂಡಿದೆ. ನಮ್ಮ ತಂಡದ ಪ್ರತಿಯೊಬ್ಬರೂ ನನಗೆ ತುಂಬ ಸಹಕಾರ ನೀಡಿದ್ದಾರೆ. ನಾನು ಅವರಿಗೆ ಋಣಿಯಾಗಿದ್ದೇನೆ’ ಎಂದು ತುಂಬು ಮನಸ್ಸಿನಿಂದ ಹೇಳುತ್ತಾರೆ ಸುಧಾ.

ಸುಧಾ ಅವರು ಅಕ್ಕ–ತಂಗಿಯರ ಜೊತೆ ತುಂಬು ಕುಟುಂಬದಲ್ಲಿ ಬೆಳೆದ ಕಾರಣಕ್ಕೆ ಈ ಧಾರಾವಾಹಿ ಅವರಿಗೆ ತುಂಬಾ ಆಪ್ತ ಅನ್ನಿಸಿತಂತೆ. ‘ಭಾವಜೀವಿ ಆಗಿರುವ ನನಗೆ ಗಟ್ಟಿಮೇಳದಲ್ಲಿ ನಾಲ್ಕು ಹೆಣ್ಣು ಮಕ್ಕಳ ತಾಯಿಯ ಪಾತ್ರ ಹೇಳಿ ಮಾಡಿಸಿದಂತಿದೆ’ ಎಂದು ಹೇಳುತ್ತಾರೆ.

ಧಾರಾವಾಹಿಯಲ್ಲಿನ ತಮ್ಮ ಪಾತ್ರದ ಬಗ್ಗೆ ವಿವರಿಸುವ ಸುಧಾ ‘ನನ್ನದು ಪಕ್ಕಾ ಮಧ್ಯಮ ವರ್ಗದ ಕುಟುಂಬದ ಗೃಹಿಣಿಯ ಪಾತ್ರ. ನಾಲ್ಕು ಜನ ಹೆಣ್ಣುಮಕ್ಕಳು, ಗಂಡ ಕಂಡಕ್ಟರ್. ಬದುಕಿನ ನಿರ್ವಹಣೆಗೆ ಪುಟ್ಟದೊಂದು ಕೇಟರಿಂಗ್ ಕೆಲಸ ಮಾಡುವ ಅವಳಿಗೆ ತನ್ನ ಮಕ್ಕಳೇ ಸರ್ವಸ್ವ. ತನ್ನ ಕೇಟರಿಂಗ್ ಕಂಪನಿಗೆ ತಾನೇ ಎಂ.ಡಿ. ಎನ್ನುವ ಹೆಮ್ಮೆ ಅವಳದ್ದು. ತಾನು ಮಾಡುತ್ತಿರುವುದೆಲ್ಲಾ ತನ್ನ ಮಕ್ಕಳಿಗಾಗಿ ಎನ್ನುವ ಮುಗ್ಧ ಮನಸ್ಸಿನ ಹೆಂಗಸಿನ ಪಾತ್ರವಿದು’ ಎನ್ನುತ್ತಾರೆ.

‘ಇದು ನನ್ನ ನಟನಾ ಬದುಕಿನ ಎರಡನೇ ಇನ್ನಿಂಗ್ಸ್. ಒಂದು ಒಳ್ಳೆಯ ಕಥೆಯೊಂದಿಗೆ ಮರಳಬೇಕು ಎಂದುಕೊಂಡಿದ್ದ ನನಗೆ ನಾನು ನಿರೀಕ್ಷಿಸಿದ್ದಕ್ಕಿಂತ ಉತ್ತಮ ಪಾತ್ರ ಸಿಕ್ಕಿದೆ’ ಎಂದು ಖುಷಿಯಿಂದ ಹೇಳುವ ಇವರು ಧಾರಾವಾಹಿಯ ಡೈಲಾಗ್‌ಗಳು, ಚಿತ್ರಕಥೆ ಎಲ್ಲವೂ ಚೆನ್ನಾಗಿದೆ ಎಂದು ಮೆಚ್ಚುಗೆಯ ಮಾತನಾಡುತ್ತಾರೆ.

ಈವರೆಗೆ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಸುಧಾ ಬಿಡುಗಡೆಗೆ ಸಿದ್ಧವಿರುವ ‘ಸಿದ್ದಿ ಸೀರೆ’ ಹಾಗೂ ‘ಗಂಡುಹುಲಿ’ ಸಿನಿಮಾದಲ್ಲೂ ತಮ್ಮ ಅಭಿನಯದ ಛಾಪು ತೋರಿದ್ದಾರೆ. ದೂರದರ್ಶನದಲ್ಲಿ ಪ್ರಸಾರವಾಗುವ ಅಡುಗೆ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿಯೂ ಆಗಾಗ ಕಾಣಿಸಿಕೊಳ್ಳುತ್ತಿದ್ದಾರೆ.

17ನೇ ವಯಸ್ಸಿನಲ್ಲೇ ಬಣ್ಣ ಹಚ್ಚಲು ಆರಂಭಿಸಿದ ಸುಧಾ ಅವರು ಮೊದಲು ನಟಿಸಿದ್ದು ಕೆ. ವಿ. ಜಯರಾಂ ನಿರ್ದೇಶನದ ‘ಅರುಣರಾಗ’ ಸಿನಿಮಾದಲ್ಲಿ. ಆ ಸಿನಿಮಾದಲ್ಲಿ ಅವರದ್ದು ಸಣ್ಣ ಪಾತ್ರವಾದರೂ ಜನ ಅವರ ನಟನೆಯನ್ನು ಮೆಚ್ಚಿದ್ದರು. ಅಲ್ಲಿಂದ ಕಿರುತೆರೆ ಪ್ರವೇಶಿಸಿದ ಸುಧಾ, ಕಿರುತೆರೆ ಅಂಗಳದಲ್ಲಿ ಅಭಿನಯಿಸದ ಪಾತ್ರಗಳಿಲ್ಲ ಅಂತಲೇ ಹೇಳಬಹುದು.

ನಾನು ಈವರೆಗೆ ನಟಿಸಿದ ಪಾತ್ರಗಳಲ್ಲಿ ಬಿ. ಸುರೇಶ ನಿರ್ದೇಶನದ ‘ಸಾಧನೆ’ ಧಾರಾವಾಹಿಯ ‘ವಸಂತ’ ಪಾತ್ರ ಹಾಗೂ ನನ್ನ ಮೊದಲ ಧಾರಾವಾಹಿ ‘ಅಲೆಗಳು’ ಇದರ ‘ಕಾವ್ಯಾ’ ಪಾತ್ರ ಇಂದಿಗೂ ನನ್ನ ಮನಸ್ಸಿನಲ್ಲಿ ಖುಷಿ ಮೂಡಿಸುತ್ತದೆ ಎನ್ನುತ್ತಾರೆ. ಈಗಲೂ ಜನ ಇವರನ್ನು ಆ ಪಾತ್ರಗಳಿಂದಲೇ ಗುರುತಿಸುತ್ತಾರಂತೆ.

ನಟನಾ ಜೀವನದ ಆರಂಭದ ದಿನಗಳನ್ನು ನೆನೆಯುವ ಸುಧಾ, ‘ನಾನು ಸಿನಿಮಾದಲ್ಲಿ ನಟಿಸುತ್ತೇನೆ ಎಂದಾಗ ಮನೆಯಲ್ಲಿ ಕೊಂಚ ಮಡಿವಂತಿಕೆಯ ಭಾವವಿತ್ತು. ಹೆಣ್ಣುಮಗಳು ನೀನು. ನೀನು ಆ್ಯಕ್ಟ್ ಮಾಡಬೇಕಾ? ಎಂದು ಕೇಳಿದ್ದರು. ಆದರೆ ಬೇಡ ಎಂದು ಹೇಳಿರಲಿಲ್ಲ. ಹೆಣ್ಣುಮಕ್ಕಳು ಮದುವೆಯಾಗಿ ಸೆಟಲ್ ಆಗಿ ಗಂಡನ ಮನೆಯಲ್ಲಿ ಸಂತೋಷದಿಂದ ಇದ್ದರೆ ಅದೇ ನಮಗೆ ಸಂತೋಷ ಎಂಬ ಭಾವ ಆಗ ಮನೆಯವರಲ್ಲಿ ಇತ್ತು. ನನಗೂ ನಟನೆಗೆ ಬರಲೇಬೇಕು ಎಂಬ ಹಂಬಲ ಇರಲಿಲ್ಲ. ಆಕಸ್ಮಿಕವಾಗಿ ನಟನೆಗೆ ಬಂದೆ. ಅಲ್ಲಿಂದ ಇಲ್ಲಿಯವರೆಗೆ ನನ್ನ ನಟನಾಯಾನ ಮುಂದುವರಿದೆ’ ಎನ್ನುವಾಗ ಸಾರ್ಥಕಭಾವ ಅವರ ಮಾತಿನಲ್ಲಿ ಕಾಣಿಸುತ್ತಿತ್ತು.

ಆತ್ಮಸೈರ್ಯವೇ ಬದುಕಿಗೆ ದಾರಿ
ಹೆಣ್ಣಿಗೆ ಮೊದಲು ಆತ್ಮಸೈರ್ಯವಿರಬೇಕು. ಯಾವುದೇ ಸಂದರ್ಭದಲ್ಲೂ ಎದೆಗುಂದಬಾರದು. ಈ ಕೆಲಸ ನನ್ನಿಂದ ಮಾಡಲು ಸಾಧ್ಯವಿಲ್ಲ ಎನ್ನುವ ಒಂದು ಸಾಲು ಮನಸ್ಸಿನಲ್ಲಿ ಕೂತು ಬಿಟ್ಟರೆ ಜೀವನ ಪರ್ಯಂತ ಸಾಧನೆ ಸಾಧ್ಯವಿಲ್ಲ. ನನ್ನಿಂದ ಮಾಡಲು ಸಾಧ್ಯ ಎಂದುಕೊಂಡು ಆತ್ಮವಿಶ್ವಾಸದಿಂದ ಮುಂದೆ ಸಾಗಬೇಕು. ಪ್ರತಿ ಬಾರಿಯೂ ಯಾರೋ ನಮಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ ಎಂದು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ನಮ್ಮೊಂದಿಗೆ ಯಾರೂ ಇಲ್ಲದಿದ್ದರು ನಮ್ಮಿಂದ ಸಾಧ್ಯ ಎಂದುಕೊಂಡರೆ ಖಂಡಿತ ಸಾಧನೆ ನಮ್ಮದಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT