ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶ್ವಿನ್‌ ಅಂತರಂಗ...

Last Updated 3 ಅಕ್ಟೋಬರ್ 2018, 15:00 IST
ಅಕ್ಷರ ಗಾತ್ರ

ಧಾರಾವಾಹಿ ಹಾಗೂ ಸಿನಿಮಾಗಳಲ್ಲಿಸಿಕ್ಕ ಸಣ್ಣಪುಟ್ಟ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಅಭಿನಯದ ಮೂಲಕವೇ ಜನರ ಮನ ಗೆದ್ದವರು ಅಶ್ವಿನ್ ಹಾಸನ. ಇಂತಹ ಪಾತ್ರವೇ ಬೇಕೆಂದು ಮಿತಿ ಹಾಕಿಕೊಳ್ಳದ ಅವರು ಎಂತಹದ್ದೇ ಪಾತ್ರಕ್ಕೂ ಜೀವ ತುಂಬಬಲ್ಲೆ ಎನ್ನುವ ಉತ್ಸಾಹಿ ನಟ.

ಅದಕ್ಕೆ ಸಾಕ್ಷಿಯೆಂಬಂತೆ, ‘ವರ್ಜಿನ್’ ಸಾಕ್ಷ್ಯಚಿತ್ರದ ಅಭಿನಯಕ್ಕೆ ‘ಉತ್ತಮ ನಟ’ ಪ್ರಶಸ್ತಿಯನ್ನು ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವದಲ್ಲಿ ಅವರು ಪಡೆದುಕೊಂಡಿದ್ದಾರೆ.

ಅಶ್ವಿನ್ ಊರು ಹಾಸನ. ಓದಿದ್ದೂ ಅಲ್ಲೇ. ‘ಮಲೆನಾಡು ಕಾಲೇಜ್ ಆಫ್ ಎಂಜಿನಿಯರಿಂಗ್’ನಲ್ಲಿ ಪದವಿ ಮುಗಿಸಿದ ಅಶ್ವಿನ್ ಉದ್ಯೋಗ ಅರಸಿ ಬೆಂಗಳೂರಿಗೆ ಬಂದವರು. ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡಿರುವ ಅವರು, ನಟನಾ ಲೋಕ ಪ್ರವೇಶಿಸಿದ್ದು ಅನಿರೀಕ್ಷಿತವಾಗಿ. ಪರಿಚಯಸ್ಥರ ಸಲಹೆ ಮೇರೆಗೆ ಬಿ.ವಿ.ರಾಜಾರಾಮ್ ಅವರ ಕಲಾಗಂಗೋತ್ರಿ ತಂಡವನ್ನು ಸೇರಿಕೊಂಡ ಅವರು, ವಾರಾಂತ್ಯದಲ್ಲಿ ರಂಗಭೂಮಿಯಲ್ಲೂ ತೊಡಗಿಸಿಕೊಂಡಿದ್ದರು. ಅವರ ಪ್ರತಿಭೆ ಗುರುತಿಸಿ, ತನ್ನ ನಿರ್ದೇಶನದ ಧಾರಾವಾಹಿಯಲ್ಲಿ ನಿರ್ದೇಶಕ ವಿನು ಬಳಂಜ ಅವಕಾಶ ಕೊಟ್ಟಿದ್ದರು. ಅದನ್ನೇ, ಮೆಟ್ಟಿಲಾಗಿಸಿಕೊಂಡ ಅಶ್ವಿನ್, ಜನ ಮೆಚ್ಚುವಂತೆಯೇ ಅಭಿನಯಿಸಿದ್ದರು. 2014ರಲ್ಲಿ ಎಂಜಿನಿಯರ್ ವೃತ್ತಿ ತೊರೆದು ನಟನೆಯನ್ನೇ ಈಗ ವೃತ್ತಿಯಾಗಿಸಿಕೊಂಡಿದ್ದಾರೆ.

‘ನಟನೆಯ ಬಗ್ಗೆ ಅಷ್ಟೇನೂ ಆಸಕ್ತಿ ಇರಲಿಲ್ಲ. ಶಾಲಾ– ಕಾಲೇಜುಗಳಲ್ಲಿ ಆಯೋಜಿಸುತ್ತಿದ್ದ ನಾಟಕಗಳಲ್ಲಿ ನಟಿಸುತ್ತಿದ್ದೆ. ಆದರೆ, ಅದೇ ಮುಂದೊಂದು ದಿನ ಬದುಕಿನ ಅಂಗವಾಗುತ್ತದೆ ಎಂದು ಭಾವಿಸಿರಲಿಲ್ಲ’ ಎನ್ನುವ ಅಶ್ವಿನ್‌ ಸಾಗಿ ಬಂದ ದಾರಿಯನ್ನು ಖುಷಿಯಿಂದ ಮೆಲುಕು ಹಾಕುತ್ತಾರೆ.

‘2007ರಲ್ಲಿ ಎರಡು ಸಿನಿಮಾಗಳಲ್ಲಿ ನಾಯಕನಟ ಆಗಿ ನಟಿಸಿದ್ದೆ. ಅವು ಹೇಳಿಕೊಳ್ಳುವಂತಹ ಹೆಸರು ತಂದು ಕೊಡಲಿಲ್ಲ. ಆ ಬಳಿಕ ನನ್ನ ಪ್ರತಿಭೆಯನ್ನು ಒರೆಗೆ ಹಚ್ಚಿದ್ದು ‘ಪಲ್ಲವಿ ಅನುಪಲ್ಲವಿ’ ಧಾರಾವಾಹಿಯ ವಿಲನ್ ಪಾತ್ರ. ಅದಕ್ಕೆ ಅತ್ಯುತ್ತಮ ಖಳನಾಯಕ ಪ್ರಶಸ್ತಿಯೂ ಸಿಕ್ಕಿತು. ‘ಚಿಟ್ಟೆಹೆಜ್ಜೆ’, ‘ಲವಲವಿಕೆ’ ಧಾರಾವಾಹಿಯಲ್ಲಿ ನಟಿಸಿದ ಬಳಿಕ ಹೆಚ್ಚು ಸಿನಿಮಾ ಅವಕಾಶಗಳು ಬಂದವು. ದರ್ಶನ್ ಅಭಿನಯದ ‘ಜಗ್ಗುದಾದಾ’ದಲ್ಲೂ ಅಭಿನಯಿಸಿದ್ದೇನೆ’ ಎನ್ನುತ್ತಾರೆ ಅವರು.

ಇದಾದ ಬಳಿಕ ‘ಹೆಬ್ಬುಲಿ’, ‘ರಾಜಕುಮಾರ’, ‘ದಯವಿಟ್ಟು ಗಮನಿಸಿ’, ‘ಕನ್ನಡಕ್ಕಾಗಿ ಒಂದನ್ನು ಒತ್ತಿ’, ‘ಚಕ್ರವ್ಯೂಹ’ ಸಿನಿಮಾಗಳಲ್ಲಿ ಅಶ್ವಿನ್ ನಟಿಸಿದ್ದಾರೆ. ಇನ್ನಷ್ಟೇ ಬಿಡುಗಡೆಯಾಗಲಿರುವ‘ಅನಂತ್ v/s ನುಸ್ರತ್’, ‘ಕವಲುದಾರಿ’, ‘ಆ ಒಂದು ನೋಟು’ , ‘ಪಯಣಿಗರು’ ಸಿನಿಮಾಗಳ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಅವರು,'ಅವನೇ ಶ್ರೀಮನ್ನಾರಾಯಣ' ಚಿತ್ರದ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ.

‘ಪರಿಪಕ್ವತೆ ಹೊಂದಿದ ಪರಿಪೂರ್ಣ ನಟನಾಗಬೇಕು ಎಂಬುದೊಂದೆ ನನ್ನ ಕನಸು. ಅದಕ್ಕೆ ನಾಯಕ ಪಾತ್ರಗಳೇ ಬೇಕೆಂದೇನಿಲ್ಲ. ಜನರ ಮನದಲ್ಲಿ ಅಚ್ಚಳಿಯದೇ ಕೂರುವಂತಹ ಪಾತ್ರಗಳಲ್ಲಿ ಅಭಿನಯಿಸುವ ಆಸೆಯಿದೆ. ಅಂತಹ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದೇನೆ’ ಎನ್ನುತ್ತಾರೆ. ‘ಚಂದನವನದಲ್ಲಿಯೇ ನೆಲೆಯೂರಬೇಕು ಎಂದು ಪ್ರಾಮಾಣಿಕವಾಗಿ ಪ್ರಯತ್ನಿಸುವವರಿಗೆ ಇಲ್ಲಿ ಸಾಕಷ್ಟು ಅವಕಾಶಗಳಿವೆ. ಅದಕ್ಕೆ ತಾಳ್ಮೆ ಬೇಕಷ್ಟೇ’ ಎನ್ನುವ ಅಶ್ವಿನ್ ಅವರಿಗೆ ತಾಳ್ಮೆಯ ಪಾಠವನ್ನು ಕಲಿಸಿದ್ದು ಇದೇ ಚಿತ್ರರಂಗವಂತೆ.

‘ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವ ಮುನ್ನ ಸ್ವಲ್ಪವೂ ತಾಳ್ಮೆ ಇರಲಿಲ್ಲ. ವಿಪರೀತ ಸಿಟ್ಟು. ಆದರೆ, ಇಲ್ಲಿಗೆ ಕಾಲಿಟ್ಟ ಮೇಲೆ
ವೃತ್ತಿಯೇ ತಾಳ್ಮೆಯ ಪಾಠವನ್ನು ನನಗರಿವಿಲ್ಲದೆಯೇ ಕಲಿಸಿತು. ಉತ್ತಮ ಅವಕಾಶಇಂದಲ್ಲ ನಾಳೆ ಸಿಕ್ಕೆ ಸಿಗುತ್ತದೆ’ ಎಂಬ ವಿಶ್ವಾಸ ಅವರದು.

‘ನಟರಾದ ಅನಂತ್‌ನಾಗ್ ಹಾಗೂ ಪ್ರಕಾಶ್ ರೈ ಅವರೆಂದರೆ ತುಂಬಾ ಇಷ್ಟ. ಅವರ ಸಿನಿಮಾಗಳನ್ನು ನೋಡಿಯೇ ನನ್ನ ನಟನೆಯನ್ನು ತಿದ್ದಿಕೊಂಡಿದ್ದೇನೆ’ ಎಂದು ನುಡಿಯುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT