ಭಾನುವಾರ, ಮಾರ್ಚ್ 29, 2020
19 °C

ಬೆಸ್ಟ್‌ ನಿರ್ದೇಶಕ, ನಿರೂಪಕ, ನಟ ಆಗುವಾಸೆ...

ರಾಘವೇಂದ್ರ ಕೆ. Updated:

ಅಕ್ಷರ ಗಾತ್ರ : | |

Prajavani

ಕಲರ್ಸ್‌ ಸೂಪರ್‌ ‘ಪಾಪ ಪಾಂಡು’ನ ಶ್ರೀಹರಿ ಪಾಂಡುರಂಗ ಪಾತ್ರ ನಿರ್ವಹಿಸುತ್ತಿರುವ ಸೌರಭ್‌ ಕುಲಕರ್ಣಿ ಅವರು ಈ ಕುರಿತು ‘ಸುಧಾ’ ಜತೆಗೆ ಮಾತನಾಡಿದ್ದಾರೆ.  

* ನಿಮಗೆ ನಾಚಿಕೆ ಆಗಲ್ವಾ?

ಯಾವ ದೃಷ್ಟಿಯಿಂದ ಕೇಳ್ತಿದ್ದೀರಿ? ನಾಚಿಕೆ– ಮಾನ– ಮರ್ಯಾದೆ ಇಲ್ವಾ ಅಂತಾನಾ? ಅಥವಾ... ಏನು ಕೇಳಿದ್ದೀರೋ ಗೊತ್ತಿಲ್ಲ... (ನಗು...) ಖಂಡಿತ ನಾಚಿಕೆ ಅನ್ನಿಸಲ್ಲ. ಆರಂಭದಲ್ಲಿ ಸ್ವಲ್ಪ ಹೆದರಿದ್ದೆ. ಸಂಪೂರ್ಣ ಕಾಮಿಡಿಯಲ್ಲಿ ತೊಡಗಿದ್ದು ಇದೇ ಮೊದಲು. ಇದು ನನ್ನ ವೃತ್ತಿ ಜೀವನಕ್ಕೆ ಒಂದು ಬ್ರೇಕ್‌ ಕೊಟ್ಟಿದೆ. 8ನೇ ತರಗತಿಯಲ್ಲಿದ್ದಾಗ ‘ಗುರು ರಾಘವೇಂದ್ರ ವೈಭವ’ದಲ್ಲಿ ಬಾಲರಾಯರ ಪಾತ್ರ ನಿರ್ವಹಿಸಿದ್ದೆ. ‘ರಾಮಾಯಣ’ ‘ಗುರುಕುಲ’ ಹೀಗೆ ಅಧ್ಯಾತ್ಮ– ಪೌರಾಣಿಕ ಕಥೆಗಳನ್ನು ನಿರ್ವಹಿಸುತ್ತಿದ್ದೆ. ಒಂದೆರಡು ಬಾರಿ ‘ರೋಬೊ ಫ್ಯಾಮಿಲಿ’ಯಲ್ಲಿ ಕಾಣಿಸಿಕೊಂಡಿದ್ದೆ. ಓದಿನತ್ತ ಒತ್ತು ಕೊಟ್ಟಿದ್ದೆ. ಒಂದೆರಡು ಹಾಸ್ಯ ನಾಟಕ ಮಾಡಿದ್ದೆ. ಬೇರೆ ಎಲ್ಲೂ ಹಾಸ್ಯ ಪ್ರಧಾನ ಕಥೆಯನ್ನು ನಿರ್ವಹಿಸಿರಲಿಲ್ಲ. ಶಾಲಿನಿ ಮೇಡಂ– ಚಿದಾನಂದ ಸರ್‌ ಧೈತ್ಯ ಪ್ರತಿಭೆಗಳು. ಅವರ ಮಗನಾಗಿ ಅವರ ಜೊತೆ ಪಾತ್ರವನ್ನು ನಿರ್ವಹಿಸಬೇಕು ಎನ್ನುವುದು ತಮಾಷೆಯ ಮಾತಲ್ಲ.

‘ಪಾಪಪಾಂಡು’ ಬ್ರಾಂಡ್‌ಗೆ ಹೊಸ ಕಲಾವಿದ. ಹಾಸ್ಯ ಪ್ರಧಾನ ಕಥೆಗೂ ಹೊಸಬ. ಹಾಸ್ಯ ತುಂಬ ಕಷ್ಟದ ಕಲೆ. ದಿನವೂ ಕಲಿಯುತ್ತಿದ್ದೇನೆ. ಇದರಲ್ಲಿ ಸಿಹಿಕಹಿ ಚಂದ್ರು ಸರ್‌ ಅವರ ಸಹಕಾರ ಬಹಳ ಮುಖ್ಯ. ನಮ್ಮ ಸೆಟ್‌ನಲ್ಲಿ ಹಿರಿಯರು– ಚಿಕ್ಕವರು ಎನ್ನುವ ತಾರತಮ್ಯ ಇಲ್ಲ. ನಮ್ಮ ಸಲಹೆಯನ್ನೂ ದೊಡ್ಡವರೂ ತೆಗೆದುಕೊಳ್ಳುತ್ತಾರೆ. ಹೀಗಿದ್ದ ಮೇಲೆ ಸಂಕೋಚ– ನಾಚಿಕೆ ಎನ್ನುವ ಮಾತು ಎಲ್ಲಿಂದ ಬರಬೇಕು?

* ನಿಮಗೆ ಹಾದಿ ಬೀದಿಯಲ್ಲೆಲ್ಲ ‘ಪೂರಿ’ ಎಂದು ಕೂಗುತ್ತಾರಂತೆ ಹೌದಾ?

ನೋಡಲು ಕೂಡ ನಾನು ಸ್ವಲ್ಪ ಪೂರಿಯಂತೆ ಕಾಣುತ್ತೇನೆ. ಅಂದರೆ, ಸಾಗು ಪೂರಿಯ ಆಕಾರ ಅನ್ವಯ ಆಗುತ್ತದೆ. ಅದಕ್ಕೆ ಒಮ್ಮೊಮ್ಮೆ ಹಾಗೆ ಕರೆಯುತ್ತಾರೆ. ಕೆಲ ಮಕ್ಕಳು ‘ಪಾನೀಪುರಿ ತಿನ್ತೀರಾ’ ಅಂತ ಕೇಳ್ತಾರೆ. ಇನ್ನೂ ಕೆಲವರು ಮನೆಯಲ್ಲಿ ಪಾನಿಪುರಿ ತಿನ್ನಲು ಕೇಳಿದರೆ ಕೊಡಿಸುವುದಿಲ್ಲ ಎಂದು ದೂರುತ್ತಾರೆ. ನೀವಾದರೆ ಪ್ರತಿ ಎಪಿಸೋಡಿನಲ್ಲೂ ತಿನ್ನುತ್ತೀರಿ ಎನ್ನುತ್ತಾರೆ. ಆಗ ನಾನು ನಮಗೆ 500 ರೂಪಾಯಿಯನ್ನೂ ಕೊಟ್ಟಿಲ್ಲ. ಪಾನೀಪೂರಿನೂ ಕೊಡಿಸಿಲ್ಲ. ಅದೆಲ್ಲ ಸುಮ್ಮನೆ ನಟನೆ. ನಾವು ಒಂದೇ ಒಂದು ಸಲ ತಿಂದಿದ್ವಿ. ಅದು ಸೀನ್‌ನಲ್ಲಿ ಬಂದಿತ್ತು ಅಂತ. ನಾನೂ ಜಾಸ್ತಿ ತಿನ್ನಲ್ಲ. ನೀವೂ ಜಾಸ್ತಿ ತಿನ್ನಬೇಡಿ ಎಂದು ತಮಾಷೆಯಾಗಿಯೇ ಹೇಳುತ್ತೇನೆ.

* ನಿತ್ಯವೂ ಬದಲಾಗುವ ಕಥೆಯ ಸವಾಲುಗಳು ಹೇಗಿರುತ್ತವೆ?

ವರವೂ ಹೌದು, ಶಾಪವೂ ಹೌದು. ನಾನು ಶಾಪಕ್ಕಿಂತ ವರವೇ ಹೆಚ್ಚು ಎನ್ನುತ್ತೇನೆ. ಪ್ರತಿ ದಿನ ಹೊಸ ರೀತಿಯಲ್ಲಿ ಪಾತ್ರವನ್ನು ಆವಿಷ್ಕರಿಸುವ ಅವಕಾಶ ನಮಗೆ ಸಿಗುತ್ತದೆ. ಅಮ್ಮನ ಪರವಾಗಿದ್ದ ಶ್ರೀಹರಿ 500 ಕೊಟ್ಟರೆ ತಕ್ಷಣ ಇನ್ನೊಬ್ಬರ ಪರವಾಗುತ್ತಾನೆ. ಒಂದು ದಿನ ಗಂಭೀರ ಮತ್ತೊಂದು ದಿನ ನೆಗೆಟಿವ್‌ ಶೇಡ್‌ ಇರುತ್ತದೆ. ಜೋಕರ್‌ನಿಂದ ಹಿಡಿದು ಹುಡುಗಿ, ಪೊಲೀಸ್‌, ಡ್ರೈವರ್, ಏಜೆಂಟ್‌ ಹೀಗೆ ಹಲವು ಗೆಟಪ್‌ ಹಾಕುತ್ತೇನೆ. ಅದಕ್ಕೆ ಬೇಕಾಗುವ ಬಾಡಿ ಲಾಗ್ವೇಜ್‌ ಅಳವಡಿಸಿಕೊಳ್ಳಬೇಕು. ಬೆಳಿಗ್ಗೆ ಹೋದ ತಕ್ಷಣ ಸ್ಕ್ರಿಪ್ಟ್‌ ಓದಿ ಮಾನಸಿಕವಾಗಿ ಸಿದ್ಧನಾಗುತ್ತೇನೆ. ಅದಕ್ಕೆ ಸಂಚಿಕೆ ನಿರ್ದೇಶಕ ಕಲ್ಯಾಣ್‌ ರಾಜ್‌ ಗಬ್ಬರ್‌ಕರ್‌ ಕೂಡ ತುಂಬ ಸಹಾಯ ಮಾಡುತ್ತಾರೆ. ನನ್ನ ಪಾತ್ರಕ್ಕೆ ಮೋಸ ಮಾಡಬಾರದು ಎನ್ನುವ ಆತಂಕ ಮಾತ್ರ ಇರುತ್ತೆ. ಬಿಟ್ಟರೆ ಬೇರೆ ಯಾವ ಆತಂಕವೂ ಬರಲು ಟೀಮ್‌ ಬಿಡಲ್ಲ.

* ನಟನೆ ಮೋಹ ಹುಟ್ಟಿದ್ದು ಹೇಗೆ?

ನನ್ನ ತಂದೆ ಸಂಜೀವ್‌ ಕುಲಕರ್ಣಿ (ಅಮ್ಮ ಭಾಗ್ಯ ಕುಲಕರ್ಣಿ) ಕಾರಣ. ‘ಸಂಭ್ರಮ– ಸೌರಭ’ ಎಂಬ ಸಂಸ್ಥೆಯ ಅಡಿ ಪ್ರತಿ ತಿಂಗಳು ಕಾರ್ಯಕ್ರಮ ಮಾಡುತ್ತಿದ್ದರು. ಅದೇ ನಾನು ಮೊದಲು ಏರಿದ ವೇದಿಕೆ. ಅಪ್ಪ ದೊಡ್ಡ ದೊಡ್ಡ ಕಾರ್ಯಕ್ರಮ ನಿರೂಪಿಸುತ್ತಿದ್ದರು. ಸ್ವತಃ ಅವರೇ ನಟಿಸುತ್ತಿದ್ದರು ಅವರ ಪ್ರಭಾವ ನನ್ನ ಮೇಲೆ ದಟ್ಟವಾಗಿದೆ. ಅದಕ್ಕೆ ಪೂರಕವಾಗಿ ‘ಪ್ರಭಾತ್‌ ಕಲಾವಿದರು’ ಎಂಬ ಸಂಸ್ಥೆ ಹರಿಕಥೆ ಮಾಡ್ತಾ ಇತ್ತು. ಅದರಲ್ಲಿ ದೀರ್ಘಕಾಲ ಕಲಾವಿದನಾಗಿದ್ದೆ. ಅದರ ನೃತ್ಯ ರೂಪಕವನ್ನು ಈಗಲೂ ಮಾಡುತ್ತೇನೆ. ಆ ಸಂಸ್ಥೆಯ ಅಡಿ ವಿದೇಶದಲ್ಲೂ ಕಾರ್ಯಕ್ರಮ ನೀಡಿದ್ದೇವೆ. ಮಂಡ್ಯ ರಮೇಶ್‌ ‘ಸಂಜನಾ’ ರಂಗ ತಂಡಕ್ಕೆ ಒಂದು ಕಾರ್ಯಾಗಾರ ಮಾಡಿದ್ದರು. ಅವರ ಜೊತೆ ಆರು ತಿಂಗಳು ಕಲಿಯುವ ಅವಕಾಶ ಸಿಕ್ಕಿತು. ಅವರೇ ನನಗೆ ದೊಡ್ಡ ಗುರುಗಳು ಎಂದರೆ ತಪ್ಪಾಗಲಾರದು. ರಂಗಭೂಮಿ ಗೀಳು ಹೆಚ್ಚಾಯಿತು ಬೇರೆ ಬೇರೆ ತಂಡಗಳಲ್ಲಿ ನಟಿಸಿದೆ. ರಾಘವೇಂದ್ರ ವೈಭವದಲ್ಲಿ ಒಳ್ಳೆಯ ಅವಕಾಶ ಸಿಕ್ಕಿತ್ತು. ಅದನ್ನು ನಾನು ಜೀವನದಲ್ಲಿ ಮರೆಯುವಂತೆಯೇ ಇಲ್ಲ.

* ಬೆಳ್ಳಿತೆರೆಯಲ್ಲಿ ಹಿರೊ ಆಗಿ ಮೆರೆಯೋದು ಯಾವಾಗ?

ಹೀರೊ ಆಗ್ತೀನೋ ಇಲ್ಲವೋ ಗೊತ್ತಿಲ್ಲ. ನಟನಾಗಿ ಇರುತ್ತೇನೆ. ನಿರ್ದೇಶನದಲ್ಲಿ ಆಸಕ್ತಿ ಇದೆ. ‘ನಮ್ಮ ಮನೆ ಪ್ರೊಡೆಕ್ಷನ್‌’ ಅಡಿ ನಾಲ್ಕು ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದೇವೆ. ನಿರೂಪಣೆಯನ್ನೂ ಮಾಡುತ್ತೇನೆ. ಸುಮಾರು 250ಕ್ಕೂ ಅಧಿಕ ದೊಡ್ಡ ದೊಡ್ಡ ಕಾರ್ಯಕ್ರಮ ನಿರೂಪಿಸಿದ್ದೇನೆ. ಈ ಮೂರು ಪಾತ್ರಗಳು ನನ್ನ ಜೀವದ ಭಾಗಗಳು. ಅವೆಲ್ಲವೂ ಆಗಬೇಕು ಎನ್ನುವುದಷ್ಟೇ ಅಲ್ಲ. ಒದೊಂದರಲ್ಲೂ ಬೆಸ್ಟ್‌ ಆಗುವಾಸೆ.

* ನಿಮಗೆ ತುಂಬಾ ಹುಡುಗಿಯರು ಲೈನ್‌ ಹಾಕ್ತಾರಂತೆ ನಿಜವಾ?

ಅಯ್ಯೋ ಇಲ್ಲ ಸರ್‌, ನಮಗೆ ಯಾರು ಬೀಳುತ್ತಾರೆ. ನನ್ನ ಅಣ್ಣ ಪುಂಡನ ಪಾತ್ರ ಮಾಡುವ ಅಂಜನ್‌ಗೆ ತುಂಬಾ ಬೀಳ್ತಾರೆ. ಅವರು ಇನ್‌ಸ್ಟಾಗ್ರಾಮ್‌– ಫೇಸ್‌ಬುಕ್ಕಿನಲ್ಲಿ ಇಲ್ಲ. ಅವರನ್ನೇ ಎಲ್ಲಾ ಕೇಳ್ತಾರೆ. ರಾಜ್ಯದಾದ್ಯಂತ ಸಾವಿರ ಸಾವಿರ ಹುಡುಗಿಯ ಪುಂಡನನ್ನೇ ಮೆಚ್ಚುತ್ತಾರೆ. ನನ‌ಗೆ ಆ ಭಾಗ್ಯ ಇಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)